Thursday, September 21, 2023
HomeKannada Articleಭೂಲೋಕದ ವೈಕುಂಠ ಪಂಡರಪುರ : Heggaddesamachar

ಭೂಲೋಕದ ವೈಕುಂಠ ಪಂಡರಪುರ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

       ಪಂಡರಪುರ  ಸೋಲಾಪುರದಿಂದ ಸುಮಾರು 56 ಮೈಲಿ ದೂರದ ಬೀಮಾ ನದಿಯ ತೀರದಲ್ಲಿರುವ ಒಂದು  ಪುಣ್ಯಕ್ಷೇತ್ರ. ಪುರಾತನ ‌ನಗರಿ ಪಂಡರಿ‌ಪುರವನ್ನು  ಮೊದಲು ಪಂಡರಿ, ಪಾಂಡುರಂಗಪುರ, ಪಾಂಡುರಂಗವಲ್ಲಿ ಎಂಬ ಹೆಸರುಗಳಿಂದ ಕರೆಯುತ್ತಿದ್ದರಂತೆ. ಮಹಾರಾಷ್ಟ್ರದ ಪಂಢರಪುರಕ್ಕೆ ಆಷಾಡ‌ ಮಾಸದಲ್ಲಿ ದೇಶದ ಮೂಲೆ‌ಮೂಲೆಗಳಿಂದ  ಭಕ್ತಸಾಗರವೇ ಹರಿದು  ಬರುತ್ತದೆ. ಆಷಾಢ ಏಕಾದಶಿಯ  ದಿನ ವಿಠಲ ದರ್ಶನ ‌ಪಡೆಯುವುದೇ ಭಾಗ್ಯ ಎಂಬುದು ಭಕ್ತರ ನಂಬಿಕೆ ಇದ್ದು  ಲಕ್ಷಾಂತರ ಜನ ಭಕ್ತರು ಪಂಡರಪುರ ದತ್ತಪಾದಯಾತ್ರೆ ಹೊರಟು ವಿಠಲನ ದರ್ಶನ ‌ಪಡೆದು ಅಲ್ಲಿ‌  ನಡೆಯುವ‌  ವಿಶೇಷ ಉತ್ಸವದಲ್ಲಿ  ಪಾಲ್ಗೊಳ್ಳತ್ತಾರೆ. ವೈಕುಂಠದ  ಬಾಗಿಲು  ತೆರೆಯುವ ಈ ದಿನ ಓರ್ವ ವಾರಕರಿ ದಂಪತಿ ಹಾಗೂ ‌ಮಹಾರಾಷ್ಟ್ರದ  ಮುಖ್ಯ ಮಂತ್ರಿ ಸಪತ್ನಿಕರಾಗಿ ಪಾಂಡುರಂಗ ರುಕ್ಮಿಣಿಗೆ  ವಿಶೇಷ ಪೂಜೆಸಲ್ಲಿಸುವುದು ‌ವಾಡಿಕೆ.

     ಆಷಾಢ ಏಕಾದಶಿಯಾ ಇಂದು  ಭಕ್ತರು ‌ಕಾಲ್ನಡಿಗೆಯ ಯಾತ್ರೆಯಲ್ಲಿ  ಶ್ರೀ ಕ್ಷೇತ್ರ ಪಂಡರಪುರ ತಲುಪುತ್ತಾರೆ.  ಆಷಾಢ ಏಕಾದಶಿಯಿಂದ  ಚಾತುರ್ಮಾಸ್ಯ  ವೃತ ಆರಂಭಗೊಳ್ಳುವುದನ್ನು  ಭಕ್ತರು ಕಾತರದಿ  ಕಾಯುತ್ತಾ ಪಾಂಡುರಂಗ ನೀನೇ ನಮ್ಮ ತಂದೆ- ತಾಯಿ ಬಂಧು ಬಳಗ ಎಂದು ಮೊರೆ ಇಡುತ್ತ  ತಮ್ಮ ನೋವು ನಲಿವುಗಳನ್ನು ‌ಕೇಳಿಸಿಕೊಂಡು ಸಂಕಷ್ಟಗಳನ್ನು ಪರಿಹರಿಸುವನೆಂಬ  ನಂಬಿಕೆಯಿಂದ ದೇಶದ ಮೂಲೆ  ಮೂಲೆಗಳಿಂದ ಹೊರಟ ಪಲ್ಲಕ್ಕಿಗಳು  ವಾರಕರಿಗಳ ಸಮೇತ ತಾಳ, ತಂಬೂರಿ, ನಾಮ ಸಂಕೀರ್ತನೆಯೊಂದಿಗೆ ಸಮೂಹಗೂಡಿ ಪಂಡರಪುರ ತಲುಪುತ್ತಾರೆ.  ನಾದ ಮೂರ್ತಿ ಪಂಡರಪುರದ  ವಿಠಲ ದೇಶದ  ಲಕ್ಷಾಂತರ ಭಕ್ತರ ಆರಾಧ್ಯ ದೈವ. ನಾದೋಪಾಸಕರಿಂದ  ತುಂಬಿರುವ  ಈ ಕ್ಷೇತ್ರಕ್ಕೆ  ನಾವು ದಂಪತಿಗಳು ನಮ್ಮ  ಮದುವೆಯ ರಜತ ಮಹೋತ್ಸವದಂದು  ತೆರಳಿದ್ದು  ದೇಶದ  ನಾನಾ ಭಾಗಗಳಿಂದ ಭಕ್ತ ಸಾಗರ ಹರಿದು ಬಂದು ವಿಠಲನ ಪಾದಕ್ಕೆ ನೆಸಲು ಹೆಚ್ಚಿ ಭಕ್ತಿಯಿಂದ ಭಜಿಸುವುದನ್ನು ಕಂಡೆ.

      ಭಕ್ತಾದಿಗಳು ಪಾಂಡುರಂಗನ ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಬೀಮಾ ನದಿ ತೀರದಲ್ಲಿರುವ ಪುಂಡಲೀಕ ಮಂದಿರದ ದರ್ಶನ ಪಡೆಯುವುದು  ವಾಡಿಕೆ‌ ಇಲ್ಲಿ  ಬೀಮಾ ನದಿ ಅರ್ಧಾ ಚಂದ್ರಾಕಾರದಲ್ಲಿರುವುದ ರಿಂದ ಈ ನದಿಯನ್ನು  ಪಂಡರಪುರದಲ್ಲಿ ಚಂದ್ರಭಾಗ ಎಂದು  ಕರೆಯಲಾಗುತ್ತದೆ. ಈ ನದಿಯಲ್ಲಿ  ಮಿಂದೆದ್ದ ಭಕ್ತರು ತಮ್ಮ ಬಟ್ಟೆ ಬರೆಗಳನ್ನು ಅಲ್ಲೆ ಎಸೆದು ಇಡಿ  ವಾತಾವರಣದಲ್ಲಿ  ಕೊಳಕು ಹರಡಿದ್ದು ಖೇದಕರ ಧಾರ್ಮಿಕತೆಯ  ಹೆಸರಿನಲ್ಲಿ ಪರಿಸರ ಅಶುದ್ಧ ಗೊಳಿಸಿ ಅದಾವ  ರೀತಿಯಲ್ಲಿ ಭಕ್ತಿ ಮೆರೆಸುತ್ತಾರೊ  ಗೊತ್ತಾಗಲಿಲ್ಲ. ಆಷಾಢ , ಶ್ರಾವಣ, ಕಾರ್ತಿಕ ಹಾಗೂ ‌ಮಾಘ ಮಾಸದಲ್ಲಿ  ಕಾಲ್ನಡಿಗೆಯಿಂದ  ಭಕ್ತರು ಪಾಂಡರಪುರಕ್ಕೆ  ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರತಿ ಸಂಕ್ರಾಂತಿಯಂದು  ಮಹಿಳೆಯರು ರುಕ್ಮಿಣಿಯ  ದರ್ಶನಕ್ಕೆ  ಹೆಚ್ಚಿನ ಸಂಖ್ಯೆಯಲ್ಲಿ ‌ಬರುತ್ತಾರೆ. ಪಂಡರ ಪುರದ ದೇವಸ್ಥಾನದ  ಮೊದಲ ‌ಮೆಟ್ಟಿಲ ಬಗ್ಗೆ ಒಂದು ಐತಿಹ್ಯವಿದೆ.

      ಈ ಮೆಟ್ಟಿಲನ್ನು  ನಾಮದೇವನ ಮೆಟ್ಟಿಲು ಅಥವಾ ಮರಾಠಿಯಲ್ಲಿ ‘ನಾಮ್ ದೇವ್ಚಿ‌ಪಯರಿ’ ಎಂದು‌ ಕರೆಯಲಾಗುತ್ತದೆ. ನಾಮ ದೇವವಿಠಲನ ಪರಮ ಭಕ್ತ. ಇಂದಿಗೂ ‌ಪಂಡರಪುರ ದೇವಸ್ಥಾನದ  ಮೊದಲ‌ ಮೆಟ್ಟಿಲನ್ನು ನಾನದೇವನ ಸ್ವರೂಪವಾಗಿ ಭಕ್ತಿ ಗೌರವ ಗಳಿಂದ ‌ಪೂಜಿಸಲಾಗುತ್ತದೆ. ಇಲ್ಲಿನ ಪ್ರಮುಖ ದೇವಾಲಯಗಳಾದ ವಿಠಲಮಂದಿರ, ರುಕ್ಮಿಣಿ ಮಂದಿರ ಅಲ್ಲದೆ ಗೋಪಾಲಪುರ, ಪದ್ಮಾತೀರ್ಥ, ದಂಢೀರವನ, ವ್ಯಾಸಾನಾರಾಯಣ ಮಂದಿರ, ಕುಂಡಲ ತೀರ್ಥಗಳು ಅಲ್ಲದೆ ‌ಪುಂಡಲೀಕ ಮಂದಿರದಿಂದ  ಒಂದು ಮೈಲಿ ದೂರದಲ್ಲಿ  ಶ್ರೀ ಕೃಷ್ಣನು  ಪುಂಡಲಿಕನ ಜೊತೆ‌ ಊಟ ಮಾಡಿದ ವಿಷ್ಣುಪದವಿದೆ.

       ಪಂಡರಪುರದ ವಿಠಲ ಹಂಪಿಯಿಂದ ಹೋಗಿ ದ್ದಾನೆಂದು  ಇತಿಹಾಸ ಕಾರರು ಸಿದ್ಧ ಪಡಿಸಿದ್ದಾರಂತೆ .”ಕಾನ್ಹಾಡಾ ಹೋ ವಿಠಲ ‌ಕರ್ನಾಟಕಿ” ಎಂದೂ ವಿಠಲನ ಮೂಲವನ್ನು ಸ್ವತಃ ಜ್ಞಾನನೇಶ್ವರರು  ತಮ್ಮ ಅಭಂಗದಲ್ಲಿ ಭಕ್ತಿ ಭರಿತವಾಗಿ ಹಾಡಿದ್ದರು ಮರಾಠಿಗರು  ಹೆಚ್ಚೆಚ್ಚು ಭೇಟಿ ನೀಡುವ ಧಾರ್ಮಿಕ ಸ್ಥಳ ವಾದರೂ ಮೂಲತಃ ಕರ್ನಾಟಕ ‌ಜನಪದ ದೇವರು. ಎನ್ನುತ್ತಾರೆ.
          
  ‌‌    ಕರ್ನಾಟಕದ ದಾಸ ಸಾಹಿತ್ಯ ‌ಮತ್ತುಮಹಾರಾಷ್ಟ್ರದ ಸಂತ ಸಾಹಿತ್ಯಗಳೆರಡೂ  ಏಕಕಾಲಕ್ಕೆ  ಉಭಯ ರಾಜ್ಯ ಗಳಲ್ಲಿ  ವ್ಯಾಪಿಸಿದ್ದವು. ಕನ್ನಡದ ಪುರಂದರ ದಾಸರು ಹಾಗೂ ಮರಾಠಿಯರ ಏಕನಾಥ ಇಬ್ಬರು ಸಮಕಾಲೀನ ವರಷ್ಟೆ ಅಲ್ಲದೆ ಇಬ್ಬರೂ ವಿಠ್ಠಲನ ಭಕ್ತರು. ಏಕನಾಥರು  ತಮ್ಮ ಅಭಂಗವೊಂದರಲ್ಲಿ ನಮೋನಮೋಕಾನಡಿ ಭಾಷಾ ಎನ್ನುವ ‌ಮೂಲಕ ಕನ್ನಡಕ್ಕೆ ಕೃತಜ್ಞತೆ ತೋರಿದ್ದಾರೆ.


ಐತಿಹ್ಯ
      ಒಮ್ಮೆ ಯಾವುದೋ ಕಾರಣಕ್ಕೆ ಕೃಷ್ಣ ಮತ್ತು ರುಕ್ಮಿಣಿ ಯರೊಳಗೆ ಒಂದು ಚರ್ಚೆ ನಡೆಯಿತಂತೆ.‌ ತನ್ನದೇ ಮೇಲು ಎನ್ನುವ ಕೃಷ್ಣನ ಹಟದ ಸ್ವಭಾವಕ್ಕೆ ಬೇಸತ್ತು  ರುಕ್ಮಿಣಿ ಮಥುರೆಯನ್ನು  ಬಿಟ್ಟು ಪಂಡರಪುರಿ ತಲುಪಿದಳು . ಗೋವಳರ ವೇಷದಲ್ಲಿ  ಅವಳನ್ನು  ಹಿಂಬಾಲಿಸಿದ  ಕೃಷ್ಣ ಈ ಊರಿನಲ್ಲಿ  ಪುಂಡರೀಕನೆಂಬೊಬ್ಬ ಭಕ್ತನು  ತಂದೆ ತಾಯಿ‌ಸೇವೆ  ಮಾಡುತ್ತಿದ್ದುದನ್ನು  ತಿಳಿದಿದ್ದು  .ಕೃಷ್ಣ ಅವನನ್ನು  ಅನುಗ್ರಹಿಸಲು  ಅವನ ಮನೆಗೆ ಹೋದಾಗ ತಂದೆ ತಾಯಿ ಸೇವೆಯಲ್ಲಿದ್ದ‌  ಪುಂಡಲೀಕ ಈ ಅಪರೂಪದ ಅತಿಥಿ ಯನ್ನು ಅಂಗಳದಲ್ಲಿದ್ದ ಇಟ್ಟಿಗೆಯ ಮೇಲೆ ಕಾದಿರು ಅಂತ  ಹೇಳಿದನಂತೆ‌. 

  ‌  ‌   ಹೆತ್ತವರ ಸೇವೆಯಲ್ಲಿ‌  ಮಗ್ನನಾದವನಿಗೆ  ದೇವರನ್ನು  ಕಾದಿರಲು ಹೇಳಿದ  ಸಂಗತಿ ಮರೇತೆ ಹೋಯಿತು.ಇತ್ತ  ದೇವರು ತನ್ನ ಭಕ್ತನಿಗಾಗಿ  ಇಟ್ಟಿಗೆಯ ಮೇಲೆ  ಸೊಂಟಕ್ಕೆ ಕೈ ಇಟ್ಟು ನುಂತು ಪ್ರತೀಕ್ಷೆ‌  ಮಾಡುತ್ತಾ ನಿಂತ ಕೃಷ್ಣನನ್ನು  ಕಂಡಾಗ ಭಕ್ತಿ ಭರಿತನಾಗಿ  ಪುಂಡಲೀಕ  ಕೃಷ್ಣನನ್ನು ಇಲ್ಲೇ‌ನೆಲೆ  ನಿಲ್ಲುವಂತೆ ಬೇಡಿಕೊಂಡ ಎನ್ನುವ  ಕಥೆ ಇದೆ.

     ‌  ಪಂಡರಪುರದಲ್ಲಿ  ವಿಠಲ ತನ್ನ ಎರಡೂ ಕೈಗಳನ್ನು ತನ್ನ ಸೊಂಟಕ್ಕಿರಿಸಿಕೊಂಡು ಗಂಭೀರವಾಗಿ  ಅಚಲವಾಗಿ  ನಿಂತಿರುವುದನ್ನು ನೋಡುವುದೇ ಒಂದು ಸೊಗಸು. ವಿಠೋಬ ಸಮ ಭಂಗಿಯಲ್ಲಿ ನಿಂತದ್ದು ಕಿವಿ ಮತ್ತು ಕಿವಿಯ ಆಭರಣ ದೇಹಗಾತ್ರಕ್ಕೆ  ತಕ್ಕುದಾಗಿರದೆ. ದೊಡ್ಡ ದಾಗಿದೆ. ಪಂಡರ ಪುರದಲ್ಲಿ  ಸ್ಥಾಪಿಸಲ್ಪಟ್ಟ ದೇವಸ್ಥಾನಕ್ಕೆ ಪುಂಡಲೀಕನೇ  ಮೊದಲ ಅರ್ಚಕನಾಗಿದ್ದ ಎನ್ನಲಾಗುತ್ತದೆ. ವಿಠಲ ಘೋಷಣೆ ಕೂಗುವಾಗ ಪುಂಡಲೀಕವರದ ಪಾಂಡುರಂಗ ಎನ್ನುವುದು ಸರ್ವೇ ಸಾಮಾನ್ಯ.

           ವಾರಕರಿ ಸಂಪ್ರದಾಯ = 22 ದಿನಗಳ ಕಾಲ‌ನಡೆಯುವ ವಾರಿ ಸಂತ ಜೌನೇಶ್ವರ  ಸಮಾಧಿ ಆಳಂದಿ ಹಾಗೂ ಸಂತ ತುಕಾರಾಮ ಸಮಾಧಿ ಸ್ಥಳ ದೇಹುವಿನಿಂದ  ಏಕ ಕಾಲದಲ್ಲಿ ‌ಪ್ರಾರಂಭ ಗೊಂಡು‌ ಪಂಡರಪುರದಲ್ಲಿ  ಕೊನೆಗೊಳ್ಳುತ್ತದೆ. ಪುಣೆ, ಸತಾರ, ಸೋಲಾಪುರ ಜಿಲ್ಲೆಗಳ ‌ಮುಖೇನ ಯಾತ್ರೆ ಸಾಗುತ್ತದೆ. ಪ್ರತಿ ಹಳ್ಳಿಗೂ ಪಲ್ಲಕ್ಕಿಗಳು  ಆಗಮಿಸಿದಾಗ  ವಾರಕರಿಗಳನ್ನು  ದೇವರ  ಪ್ರತಿನಿಧಿಯೆಂದು  ಸ್ವಾಗತಿಸುತ್ತಾರೆ. ವರ್ಷವೊಂದರಲ್ಲಿ  4 ವಾರಿಗಳು ನಡೆಯುತ್ತದೆ. ಆದರೂ ಆಷಾಢ ಮತ್ತು ಕಾರ್ತಿಕ ‌ಮಾಸದ ವಾರಿಗೆ  ವಿಶೇಷ ಮಹತ್ವವಿದೆ. 

            ಜಯ್ ಶ್ರೀ ಪುಂಡರೀಕವರದೇ…. ಪಾಂಡುರಂಗ  ಎಂದು  ಭಕ್ತಿ ಪೂರಕವಾಗಿ ವಿಠಲನ  ಭಜನೆ  ಹಾಡುತ್ತಾ ಕುಣಿಯುತ್ತಾ ಪಾಂಡುರಂಗನ  ದರ್ಶನಕ್ಕಾಗಿ ನೂರಾರು ‌ಮೈಲಿ ದೂರದಿಂದ  ನಡೆದು  ಬರುವ ವಿಶಿಷ್ಟ ಸಂಪ್ರದಾಯವೇ ವಾರಕರಿ. ವಾರಕರಿ ಎಂದರೆ ಪುನಃ ‌ಪುನಃ ಯಾತ್ರೆ ಹೋಗುವುದು ಎಂಬ ಅರ್ಥವನ್ನು ನೀಡುತ್ತದೆ. ವಾರಿ ಎಂದರೆ  ಜಾತಿ, ಮತ ಧರ್ಮ ಭೇದವನ್ನು  ಮೀರಿ ಗಡಿ‌ಮೀರಿದ  ಧಾರ್ಮಿಕ ಸಾಮರಸ್ಯ ದೊಂದಿಗೆ ಕೇವಲ ಭಕ್ತಿಯ ಹೆಸರಿನಲ್ಲಿ  ವಿಠೋಬನ  ದರ್ಶನದ  ಶುಭಯೋಗ.ಸಂತರ  ಸಾಂಗತ್ಯ ದಲ್ಲಿ  ಪಾಂಡುರಂಗನ ದರ್ಶನಕ್ಕೆ ಸಾಗುವುದೇ ವಾರಿ. ಲೌಕಿಕ ಪ್ರಪಂಚದಲ್ಲಿದ್ದು  ಕೊಂಡೆ ಪರಮಾರ್ಥ ನೆಡೆಗೆ ಸಾಗುವ ವಿಶಷ್ಟ ಹಾದಿ  ಎಂದು  ಶ್ರೀ ಜ್ಞಾನೇಶ್ವರ ಮಹಾರಾಜರು  ವಾರಿಯನ್ನು  ಕರೆದಿದ್ದರು.  ಪಾಂಡುರಂಗನ ಸ್ಮರಣೆ ಯೊಂದಿಗೆ  ಲಕ್ಷಾಂತರ  ಜನರು  ಶಿಸ್ತು ಬದ್ದವಾಗಿ ಕಾಲ್ನಡಿಗೆಯಲ್ಲಿ ಪಂಡರಪುರಕ್ಕೆ ಸಾಗುವ ಈ ಯಾತ್ರೆ ಯಲ್ಲಿ  ಪಾಲ್ಗೋಳುವ  ಪ್ರತಿಯೊಬ್ಬ  ಭಕ್ತರು ವಾರಕರಿ ಎಂದು  ಕರೆಯುತ್ತಾರೆ.

        ‌ವಾರಿಕರಿ ಸಂಪ್ರದಾಯದ  ಕೆಲವು  ನಿಯಮಗಳ ಪ್ರಕಾರ ಜಾತಿ‌ಜನಾಂಗ  ನಡುವಿನ ಭೇದವನ್ನು ಮರೆತು ಸೌಹಾರ್ದದಿಂದ ಬಾಳಿ ಬದುಕುವುದಕ್ಕೂ  ತ್ಯಾಗ, ಅನುಕಂಪ, ಶಾಂತಿ, ಅಹಿಂಸೆ, ಪ್ರೀತಿ, ಮಾನವೀಯತೆಯ  ಗುಣಗಳನ್ನು ಬೆಳಸಿಕೊಂಡು ಸರಳ‌ ಜೀವನ ನಡೆಸುತ್ತಾ ಏಕಾದಶಿ ಉಪವಾಸ ವೃತಗಳನ್ನು ಆಚರಿಸುತ್ತಾ ಹರಿಪಥ ಓದಿ, ಭಜನೆ, ಕೀರ್ತನೆಗಳಲ್ಲಿ ಭಗವಂತನನ್ನು  ಕಾಣುವುದು  ವಾಡಿಕೆ.

        ಶತಮಾನಗಳಿಂದ  ಸಾಗಿಕೊಂಡು‌ ಬಂದಿರುವ ವಾರಕರಿಯ ಜನಪ್ರಿಯತೆ ಇಂದಿಗೂ ಕುಗ್ಗಿಲ್ಲ. ಭಕ್ತರು ತನ್ನ ಉತ್ಸಾಹ ಭಕ್ತಿಯನ್ನು  ಉಳಿಸಿಕೊಂಡು ಬಂದ  ಕಾರಣಕ್ಕಾಗಿ  ಇಂದಿಗೂ ಒಮ್ಮೆಯಾದರೂ  ವಾರಕರಿ ಅನುಭವಿಸಲೇ  ಬೇಕು ಅನ್ನುತ್ತಾರೆ. ವಾರಕರಿಯಲ್ಲಿ ವಿಠಲನಾದ  ಸೇವೆಯಲ್ಲಿ  ತೊಡಗಿದ  ಭಕ್ತರು ಮದ್ಯ, ಮಾಂಸಹಾರ  ತ್ಯಜಿಸಿ ತುಳಸಿ ಮಾಲೇ ಧರಿಸಿ, ನಿತ್ಯಪಾರಾಯಣ ಮಾಡುತ್ತಾರೆ.  ಕಾಲಿಗೆ ಚಪ್ಪಲಿಯನ್ನು  ಹಾಕದೆ  ನೂರಾರು ಮೈಲು ನಡೆದು ಪಂಡರಪುರವನ್ನು  ಸೇರುವ  ವಾರಕರಿ  ಪದ್ಧತಿಯನ್ನು ಬಹು ಭಕ್ತಿಯಿಂದ ಜನ ಅನುಸರಿಸುತ್ತಾರೆ. 

        ಜೈ ಜೈ ವಿಠಲ…ಜೈ ಹರಿ ವಿಠಲ ಎಂಬ ನಾಮ ಘೋಷಣೆಯೊಂದಿಗೆ ಸಂತರು ದೇಹತ್ಯಾಗ ಮಾಡಿದ  ಸ್ಥಳದಿಂದ  ವಾರಕರಿಯವರು  ತಮ್ಮ ಜೊತೆ ಪಲ್ಲಕ್ಕಿ ಯನ್ನು ಹೊತ್ತು ತರುತ್ತಾರೆ. ಈ‌ ಪಲ್ಲಕ್ಕಿಯಲ್ಲಿ ಆಯಾ ಸ್ಥಳದ  ಸಂತರ  ಪಾದುಕೆಗಳನ್ನು  ಇಡಲಾಗಿದೆ. ಕೈಯಲ್ಲಿ ತುಳಸಿ  ಮಾಲೆ  ಹಣೆಯಲ್ಲಿ ನಾಮಧಾರಿ ಗಂಡಸರು ಹಾಗೂ ಹೆಂಗಸರು ಸಣ್ಣ ತುಳಸಿ ಕಟ್ಟೆ ಹಿಡಿದು  ವಿಠಲನ  ಮೇಲಿನ ಭಕ್ತಿಯ  ತೀವ್ರತೆಯಲ್ಲಿ  ಸಾಗುತ್ತಾರೆ. ಎಲ್ಲರೂ  ಬರಿಗಾಲಲ್ಲಿ  ದಿನವೊಂದಕ್ಕೆ ಎಷ್ಟು ‌ಮೈಲಿ‌ನಡೆಯುವುದು  ಎಂದು ಮೊದಲೇ ನಿರ್ಧರಿಸಿ  ಊರಿಂದ  ಭಕ್ತಗಣ ಪಾದಯಾತ್ರೆ  ಮೂಲಕ ತೆರಳುವ  ರೂಢಿ. 

           ಪಂಡರಪುರ ವಿಠೋಬ  ದೇವಸ್ಥಾನದ  ಕಚೇರಿಯ  ಹಿರಿಯ ಸದಸ್ಯರೊಬ್ಬರು  ವಾರಿಕರಿಯ  ಹಿರಿಮೆಯನ್ನು  ಹೀಗೆ ಬಣ್ಣಿಸುತ್ತಾರೆ.  ಮೇಲು- ಕೀಳು, ಬಡವ– ಬಲ್ಲಿದ  ಹಾಗೂ ಜಾತಿ ಭೇದವಿಲ್ಲದೆ ಇಡಿ ಸಮಾಜವನ್ನು  ಒಟ್ಟಿಗೆ  ತರುವ ಕೆಲಸ ಸಂತರು ವಾರಿಕರಿಯ  ಮಾಧ್ಯಮದಿಂದ  ಮಾಡಿದ್ದಾರೆ. ವಾರಿಪರಂಪರೆಯ ಪ್ರಮುಖ ಸಂತರಾದ  ಸಂತ ಜ್ಞಾನೇಶ್ವರ ,ಸಂತ ತುಕಾರಾಮ , ನಾಮದೇವ ಏಕನಾಥ  ಇನ್ನೂ ಅನಂತರ ಸಂತರು ಮಾನವೀಯತೆಯ  ಧರ್ಮ ಎನ್ನುವುದು ಮನದಟ್ಟು ಮಾಡಿದ್ದಾರೆ.  ಇವರ  ಹೆಸರಿನ ವಾರಿಕರಿಗಳು  ಇಂದಿಗೂ ಪಂಢರಪುರಕ್ಕೆ  ಪಲ್ಲಕ್ಕಿಗಳನ್ನು ಹೊತ್ತು ಸಾಗುತ್ತಾರೆ. 
           
           ರಿಂಗಣ  = ಆಷಾಢ ಮಾಸದಲ್ಲಿ  ಪಂಡರಪುರಕ್ಕೆ  ಆಗಮಿಸುವ  ವಾರಕರಿ ಸಂಪ್ರದಾಯದಲ್ಲಿ ರಿಂಗಣ ‌ಮತ್ತು ಧಾಮ ಎಂಬ ಎರಡು‌ ಪ್ರಮುಖ ಆಚರಣೆಗಳು ಕಂಡುಬರುತ್ತವೆ. ಪಂಡರಪುರದಿಂದ  ಹದಿನಾಲ್ಕು ಕಿ ಮೀ ದೂರದಲ್ಲಿರುವ  ಬಂಡಿ ಸೆಂಗಾಂಮ್  ಗ್ರಾಮದಲ್ಲಿ  ಭಕ್ತರು ಒಂದು ವೃತ್ತ ನಿರ್ಮಿಸಿ ‌ಮಧ್ಯೆ  ಒಂದು ಕುದುರೆ ‌ಮೇಲೆ ಸಂತರ‌ ಪಾದುಕೆಗಳನ್ನಿಟ್ಟು  ವೃತ್ತಾಕಾರದಲ್ಲಿ  ಓಡುತ್ತಾ  ಕುದುರೆಯ  ಹಿಂದೆ ಸಾಗುತ್ತಾರೆ. ಕುದುರೆ ಓಡುವಾಗ ಅದರ‌ಕಾಲಿನಿಂದ  ಬರುವ  ದೂಳನ್ನು ಸಂತರ ಪಾದದ ದೂಳು ಎಂಬ ನಂಬಿಕೆಯಿಂದ  ಹಣೆಗೆ ಹಚ್ಚಿಕೊಳ್ಳುತ್ತಾರೆ. ಇದನ್ನೆ  ರಿಂಗಣ ಎನ್ನುತ್ತಾರೆ.


           
     ಪಾದುಕೆ ಹೊತ್ತು  ಪಾದಯಾತ್ರೆ= ಸಂಪ್ರದಾಯದಂತೆ  ಆಷಾಢಶುದ್ದ  ಏಕಾದಶಿಯಂದು  ವಿಠಲನ ದರ್ಶನ ಪಡೆಯಲು  ಪಂಡರಪುರಕ್ಕೆ  ಜನ ಸಾಗರಹರಿದು ಬರುತ್ತದೆ. 13ನೇ  ಶತಮಾನದಿಂದ ಪಂಢರಪುರ  ಪಾದಯಾತ್ರೆ ನಡೆದುಕೊಂಡು ಬಂದಿದೆ.  ಪಲ್ಲಕ್ಕಿಯಲ್ಲಿ  ಸಂತರ ಪಾದುಕೆ  ಹೊತ್ತು ಪಾದಯಾತ್ರೆ  ನಡೆಸುವ  ವಾರಕರಿ ಸಂಪ್ರದಾಯಕ್ಕೆ  ಚಾಲನೆ  ನೀಡಿದವರು  ತುಕಾರಾಮ ಮಹಾರಾಜರ ಮಗ  ನಾರಾಯಣ ಮಹಾರಾಜರು ‌ಇಂದಿಗೂ  ಆಷಾಢದಲ್ಲಿ  ನಾನಾ ಭಾಗಗಳಿಂದ 40 ಕ್ಕೂ ಹೆಚ್ಚು ಪಲ್ಲಕ್ಕಿಗಳನ್ನು ಹೊತ್ತು ಭಕ್ತರು  ಪಂಢರಕ್ಕೆ  ತೆರಳುತ್ತಾರೆ.  ಅದರಲ್ಲೂ  ಆಳಂದಿ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿ, ದೇಹುವಿನ ತುಕಾರಾಮ ಪಲ್ಲಕ್ಕಿ, ವೈಠಣದ ಏಕನಾಥ ಪಲ್ಲಕ್ಕಿ, ತ್ರಯಂಬಕೇಶ್ವರದ ನಿವೃತ್ತಿ ನಾಥ, ಮುಕ್ತಿ ನಗರದ ಮುಕ್ತಬಾಯಿ‌ಪಲ್ಲಕ್ಕಿ, ಶೇಂಗಾವದ ಗಜಾನನ ಮಹಾರಾಜ ಪಲ್ಲಕ್ಕಿ, ಸಾಸವಾಡದ ಸೋನಾ ಮಹಾರಾಜ ಪಲ್ಲಕ್ಕಿಪ್ರಧಾನ ವಾದುದು. ಈ ಪಲ್ಲಕ್ಕಿಗಳೊಂದಿಗೆ ಯಾತ್ರೆಯಲ್ಲಿ  ಪಾಲ್ಗೊಳ್ಳುವ ಭಕ್ತರು ತುಳಸಿ ಮಾಲೆಧರಿಸಿ, ತ್ಯಾಗ ದಯೆ, ಸೌಹಾರ್ದ, ಅಹಿಂಸೆ, ಪ್ರೀತಿ ಮಾನವಿಯತೆ ಕ್ಷಮಾಗುಣಗಳೊಂದಿಗೆ  ಸರಳ ಜೀವನ ನಡೆಸುತ್ತಾರೆ.ಹರುಪ ಗ್ರಂಥ ಓದುವುದು, ಭಜನೆ, ಕೀರ್ತನೆಗಳಲ್ಲಿ  ಕಾಲಕಳೆದು ಅಂತರಂಗದಲ್ಲಿ ಭಗವಂತನನ್ನು ಕಾಣುತ್ತಾರೆ. 
     
    ಮಹಾರಾಷ್ಟ್ರದಲ್ಲಿ ವಿಠಲ ಭಕ್ತ ಪರಂಪರೆ ತನ್ನದೆ ಆದ ಇತಿಹಾಸ ಮತ್ತು ವೈಶಿಷ್ಟ್ಯವನ್ನು ಹೊಂದಿದೆ. ಆದರೆ ಪಾಂಡುರಂಗ ವಿಠಲನ ಭಕ್ತಿ ‌ಪರಂಪರೆಯ ಸಾಲಿನಲ್ಲಿ‌ ಮುಂಚೂಣಿಯಲ್ಲಿ ಕಂಡು‌ಬರುವವರು ಅನೇಕ ಮಹಾಸಂತರು ಅದಕ್ಕಾಗಿಯೇ ಇಂದಿಗೂ ಪಂಡರ ಪುರಕ್ಕೆ  ಪ್ರತಿ ವರ್ಷ ಹೊರಡುವ ವಾರಿಯಲ್ಲಿ ಮಹಿಳೆಯರ‌ ಸಂಖ್ಯೆಯು ಹೆಚ್ಚಿರುತ್ತದೆ.‌ ಸದಾ‌ವಿಠಲನ  ಆರಾಧನೆಯಲ್ಲಿ  ಇರುತ್ತಿದ್ದ ಮುಕ್ತಬಾಯಿ 40 ಅಭಾಂಗಗಳನ್ನು  ರಚಿಸಿದ್ದಳು.  ಅಷ್ಟೇ ಅಲ್ಲದೇ  ಮಹಾರಾಷ್ಟ್ರದ  ಮೊದಲ ಕವಯತ್ರಿ ಎಂಬ ಹೆಗ್ಗಳಿಕೆ ಯು  ಮುಕ್ತಬಾಯಿಗೆ  ಇದೆ.‌ ಜೌನೇಶ್ವರರು  ಸಮಾಧಿ ಪಡೆದ ಕೆಲ ದಿನಗಳಲ್ಲಿ ತಾನು ಜೀವಂತ ಸಮಾಧಿಯಾದಳು  ಆಗ ಅವರ ವಯಸ್ಸು ಕೇವಲ 18 ಆಗಿತ್ತು.
      
   ಭಗವಂತನ ಕ್ಷೇತ್ರದಲ್ಲೂ ಲಾಭಕ್ಕಾಗಿ ಇರುವ ಕೆಲ ಪಂಡಿತರು ಇದ್ದಾರೆ. ಆಪೂಜೆ, ಈ ಪೂಜೆ ಎಂದು ಹಣ ವಸೂಲು ಮಾಡುವವರಿಂದ ಎಚ್ಚರ ವಹಿಸ‌ಬೇಕಾಗುತ್ತದೆ.‌ಅತೀಯಾದ  ಜನದಟ್ಟಣೆ  ಇರುವ ಕಾರಣ ಇಲ್ಲಿನ ಪರಿಸರದಲ್ಲಿ ಸ್ವಚ್ಚತೆಯಲ್ಲಿ  ಕೊರತೆ ಇದೆ. ಆದರೆ ಶ್ರೀ ಕ್ಷೇತ್ರ ಪಂಢಪುರದಲ್ಲಿ ಆಷಾಢ ಏಕಾದಶಿಯ ಭಕ್ತಿಯ ಉತ್ಸವಕ್ಕೆ  ದೇಶದ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದು  ಬರುತ್ತದೆ. ಇಲ್ಲಿ  ವಿಠಲ ತನ್ನ ಎರಡೂ ಕೈಗಳನ್ನು ತನ್ನ ಸೊಂಟಕ್ಕಿರಿಸಿಕೊಂಡು ಗಂಭೀರನಾಗಿ  ಅಚಲವಾಗಿ  ನಿಂತಿರುವುದೇ ಒಂದು  ಸೊಗಸು.
           
        ಇಲ್ಲಿನ ಇನ್ನೊಂದು ಕೂತುಹಲದ ವಿಚಾರವೆಂದರೆ  ಭಕ್ತರಿಗೆ ವಿಠ್ಠಲನ ದರ್ಶನ ಸಿಗಲಿ ಎಂದು ವಿಠಲ ಹಾಗೂ ರುಕ್ಮಿಣಿಗೆ  ರಾಜೋಪಚಾರ ‌ಸೇವೆಗಳನ್ನು ಈ ಜಾತ್ರೆ ಸಮಯದಲ್ಲಿ  ನಿಲ್ಲಿಸುತ್ತಾರೆ.  ಗೃಭಗೃಹ  ಪಕ್ಕದ  ಶೇಷಘರ್  ನಲ್ಲಿ  ದೇವರಿಗಾಗಿ ‌ಮಿಸಲ್ಪಟ್ಟ  ಹಾಸಿಗೆಯನ್ನು ತೆಗೆದು  ವಿಠಲ  ಹಾಗೂ ‌ರುಕ್ಮಣಿ ಹಿಂದೆ  ದಿಂಬು  ಇಡಲಾಗುತ್ತದೆ.  ಪಂಡರಪುರದ  ಜಾತ್ರೆ ಆಗುವ ತನಕ ದೇವರು  ಮಲಗುವುದಿಲ್ಲ 24  ಗಂಟೆ  ದೇವಸ್ಥಾನ  ತೆರೆದಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments