ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ಅದೊಂದು ಸೂಜಿಗಲ್ಲಿನಂತೆ ಸೆಳೆವ ಸುಂದರ ಮೂರ್ತಿಗಳ ಲೋಕ. ವಿವಿಧ ಕ್ಷೇತ್ರದ ಗಣ್ಯಾದಿಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು , ರಾಜಕೀಯ ನಿಪುಣರು, ಖ್ಯಾತ ವಿಖ್ಯಾತರ ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ನೋಡುವುದಾದರೆ ಅಂದರೆ ಮೇಣದ ಮೂರ್ತಿಗಳಲ್ಲಿ ನೋಡಸಿಗುವ ಪ್ರತಿಮೆಗಳ ಮಾಯಾಲೋಕಗಳ ನೋಡ ಬಯಸುವುದಾದರೆ ಭಾರತದ ಮೊತ್ತ ಮೊದಲ ಮೇಣದ ಪ್ರತಿಮೆಗಳ ಸಂಗ್ರಹಾಲಯವಿರುವ ಲೋನಾವಾಲಕ್ಕೆ ಹೋಗಿ ಬನ್ನಿ. 2010 ರಲ್ಲಿ ಆರಂಭವಾದ ಈ ಸಭಾಗೃಹದೊಳಗೆ ಕಾಲಿಡುತ್ತಲೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಹೆಸರಾಂತ ವ್ಯಕ್ತಿಗಳ ಮೇಣದ ಪ್ರತಿಮೆಯ ಸಾಲು ಸಾಲು ಕಾಣಿಸುತ್ತದೆ. ಮೂರ್ತಿಗಳ ಗಾಂಭೀರ್ಯ, ರಚನಾ ವಿನ್ಯಾಸ ನಿರ್ಮಾಣ ವಿಧಾನ ಇವುಗಳನ್ನೆಲ್ಲಾ ಗಮನಿಸುವಾಗ ಇವುಗಳ ರಕ್ಷಣೆಗೂ ಹೆಚ್ಚಿನ ಮಹತ್ವ ಕೊಡಬೇಕಾಗುತ್ತದೆ. ಲೋನಾವಾಲ ಖಂಡಾಲಕ್ಕೆ ಹೋದಾಗ ಒಂದಿಷ್ಟು ಸಮಯ ಬಿಡುವು ಮಾಡಿಕೊಂಡು ಇಲ್ಲಿನ ಮೇಣದ ಮೂರ್ತಿಯೊಂದಿಗೆ ಕಾಲ ಕಳೆಯಬಹುದು. ಲೋನಾವಾಲ ಕೇವಲ ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಗಿರಿಧಾಮ ಮಾತ್ರವಲ್ಲ ಇಲ್ಲಿನ ಇನ್ನೊಂದು ಆಕರ್ಷಕ ಕೇಂದ್ರ ವ್ಯಾಕ್ಸ್ ಮ್ಯೂಸಿಯಂ.
ಇಲ್ಲಿನ ಒಂದೊಂದು ಪ್ರತಿಮೆ ತಯಾರಿಕೆಯ ವೆಚ್ಚ 5 ಲಕ್ಷಕ್ಕೂ ವೀರಿದ್ದು. ಉತ್ತಮ ಗುಣಮಟ್ಟದ ಮೇಣವನ್ನು ವಿದೇಶದಿಂದ ತರಿಸಿ ಪ್ಯಾರಫಿನ್ ಕ್ಯಾಂಡಲ್ ಮೇಣಕ್ಕೆ ಗಟ್ಟಿಯಾಗಲು ಫೌಡರ್ ಬೆರಸಿ ಅದನ್ನು ಕರಗಿಸಿ ಅಚ್ಚಿನಲ್ಲಿ ಹೊಯಿದು ಮೇಣ ಒಣಗುವ ಮೊದಲು ಗಡ್ಡ ಹಾಗೂ ತಲೆಯ ಕೂದಲನ್ನು ಅಂಟಿಸುತ್ತಾರೆ. ಹುಬ್ಬು ಕಣ್ಣು ಹಾಗೂ ಒಟ್ಟು ಮುಖ ಲಕ್ಷಣ ಸ್ವಲ್ಪವೂ ವ್ಯತ್ಯಾಸವಾಗದಂತೆ ಆಸಕ್ತಿ ಹಾಗೂ ನಾಜುಕಿನಿಂದ ಕೆಲಸ ನಿರ್ವಹಿಸಿದ್ದು ಎದ್ದು ಕಾಣುತ್ತದೆ.ಶರೀರದ ವಿವಿಧ ಅಂಗಗಳನ್ನು ಸೂಕ್ಷ್ಮ ವಾಗಿ ಗಮನಿಸಿದರೆ ಅಷ್ಟೆ ಮೇಣದ ಮೂರ್ತಿ ಎಂಬ ಅರಿವುಬರುತ್ತದೆ.ತದ್ರೂಪದಂತಿರುವ ಮೂರ್ತಿಗಳನ್ನು ಕುತೂಹಲದಿಂದ ಪ್ರವಾಸಿಗರು ವೀಕ್ಷಿಸುತ್ತಾರೆ.
ಮಕ್ಕಳಿಂದ ಹಿರಿಯರವರೆಗೂ ಎಲ್ಲಾ ವಯೋಮಾನದವರಿಗೂ ಕುತೂಹಲ ಮೂಡಿಸುವ ವಿವಿಧ ಭಂಗಿಯ ಮೇಣದ ಮೂರ್ತಿಯು ಆಕರ್ಷಕವಾಗಿದೆ. ನೈಜವಾಗಿ ಕಾಣುವ ಶರೀರದ ಕಣ್ಣು ಬಾಯಿ, ಮೂಗು ಒಟ್ಟಿನಲ್ಲಿ ಒಂದೊಂದು ಮೂರ್ತಿ ಎದುರು ನಿಂತವರು ಮುಂದೆ ಸರಿಯುವುದಿಲ್ಲ ಅಷ್ಟು ತಲ್ಲಿನರಾಗಿ ನೋಡ ಬಯಸುತ್ತಾರೆ. ನೋಡುತ್ತಿದಂತೆ ಅವರೆಲ್ಲ ಜೀವಂತ ವ್ಯಕ್ತಿಗಳೊ ಎನೊ ಎಂಬ ಭ್ರಮೆ ಹುಟ್ಟಿಸುವಷ್ಟು ಸಹಜತೆಯ ಮುಖದ ಮೇಲಿನ ಸಣ್ಣ ಸಣ್ಣ ಸುಕ್ಕು, ತಲೆ ಕೂದಲಿನ ಜೋಡಣೆಯಂತು ಕೂದಲಿನ ಬಣ್ಣ ಮತ್ತು ಶೈಲಿಯನ್ನೆ ಅನುಸರಿಸಿದ ಕಾರಣ ಆಯಾಯ ವ್ಯಕ್ತಿಧರಿಸುವ ಉಡುಗೆ ತೊಡುಗೆ ಅವರವರ ಕುಟುಂಬದವರಿಂದಲೇ ಸಂಗ್ರಹಿಸಿ ಅಂದರೆ ಆ ವ್ಯಕ್ತಿಗಳು ಧರಿಸಿದ ಉಡುಪು ಮತ್ತು ಬೂಟುಗಳು ಜೋಡಿಸಿರುವುದರಿಂದ ಮೇಣದ ಮೂರ್ತಿಗಳಿಗೆ ಇನ್ನೂ ಹೆಚ್ಚಿನ ಸಹಜತೆ ಬಂದಿದೆ. ನಿಜವಾಗಿಯು ಕಲೆ ಹಲವು ರೂಪಗಳಲ್ಲಿ ಅಭಿವ್ಯಕ್ತವಾಗಿರುತ್ತದೆ. ಅವುಗಳನ್ನು ತೆರೆ ಮರೆಯಿಂದ ಹೊರ ತರಲು ಬಳಸುವ ಪರಿಕರಗಳು ಒಬ್ಬ ಕಲಾವಿದರಿಂದ ಮತ್ತೊಬ್ಬರ ಕೈಚಳಕದಲ್ಲಿ ಬದಲಾಗಿರುತ್ತದೆ.
ಕಲಾವಿದ = ಈ ಮೇಣದ ಶಿಲ್ಪವನ್ನು ಕಲಾವಿದ ಸುನಿಲ್ ಕಾಂಡಲ್ಲೂರ್ ಕೇರಳದ ಅಲಪ್ಪುಳದ ನಿವಾಸಿ ತಮ್ಮ ಸಹೋದರರೊಂದಿಗೆ ಮೇಣದ ಪ್ರತಿಮೆಗಳ ಸಂಗ್ರಹಾಲಯವನ್ನು ಸ್ಥಾಪಿಸಿದರು. ಸತತ ಎಂಟು ವರ್ಷಗಳ ಸಾಧನೆಯ ಕಲಿಕೆಯ ನಂತರ ಪ್ರಪ್ರಥಮವಾಗಿ ಗುರುವಾಯನೂರಿನ ಶ್ರೀ ಕೃಷ್ಣನ ಪ್ರತಿಮೆ ಮಾಡಿದರಂತೆ. ಪೂರ್ಣ ಪ್ರಮಾಣದ ಮೂರ್ತಿ ಸುನಿಲ್ ಮಾಡಿದ್ದು ಕೇರಳದ ಮುಖ್ಯಮಂತ್ರಿ ಕರುಣಾ ಕರನ್ ಅವರದ್ದು. 10 ತಿಂಗಳ ಪ್ರಯತ್ನದ ಫಲವಾಗಿ ಒಂದು ಮೂರ್ತಿ ತಯಾರಿಸಿದ್ದರು. ಆದರೆ ಇಂದು ಈ ಕಲೆಯಲ್ಲಿ ಎಷ್ಟು ಪಳಗಿದ್ದಾರೆ ಎಂದರೆ ಒಂದು ತಿಂಗಳಿಗೆ ಒಂದು ಮೂರ್ತಿ ಮಾಡುತ್ತಾರೆ. ಅತ್ಯಂತ ಸೂಕ್ಷ್ಮ ಕುಸುರಿ ಕೆಲಸದ ಇಲ್ಲಿನ ಮೂರ್ತಿಗಳ ಹತ್ತಿರ ನಿಂತು ನಮಗೆ ಬೇಕಾದ ಭಂಗಿಯಲ್ಲಿ ನಿಂತು photo ತೆಗೆಯಬಹುದು.
ವರ್ಷದ ಎಲ್ಲಾ ದಿನವೂ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಕೇಂದ್ರವಿದು. ಹಿರಿಯ ಕಿರಿಯರೆಲ್ಲರಿಗೂ ಇಷ್ಟವಾಗುವ ಮೇಣದ ಮೂರ್ತಿ ಗಳ ಸಂಗ್ರಹ ಕೇಂದ್ರವಿದು. ಶಾಲಾ ಕಾಲೇಜು ಮಕ್ಕಳು ಶೈಕ್ಷಣಿಕ ಪ್ರವಾಸದಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸಂಗ್ರಹಾಲಯದ ಪ್ರತಿಮೆಗಳ ವೀಕ್ಷಣೆಗೆ ಶುಲ್ಕವಿದೆ. ನಮ್ಮ ಪ್ರವಾಸದ ವೇಳೆಯ ಲೆಕ್ಕಾಚಾರದಂತೆ ಒಂದು ಗಂಟೆಯಲ್ಲಿ ನೋಡಿಮುಗಿಸ ಬೇಕೆಂದುಕೊಂಡ ಇಲ್ಲಿನ ಮೇಣದ ಮೂರ್ತಿಗಳ ನೋಡುತ್ತಾ ಮೂರು ಗಂಟೆ ಕಳೆದದ್ದೆ ಗೊತ್ತಾಗಲಿಲ್ಲ.
ಇಲ್ಲಿನ ಒಂದೊಂದು ಕಲಾಕೃತಿಯು ವ್ಯಕ್ತಿಗಳು ನಿಜವಾಗಿ ನಿಂತಿದ್ದಾರೆ ಎಂಬಷ್ಟು ಆಕರ್ಷಕವೆನಿಸಿದೆ. lonavala wax museumನಲ್ಲಿ ನಮ್ಮ ದೇಶದ ಇಂದಿನ ಪ್ರದಾನಿ Narendra Modi, ರವೀಂದ್ರನಾಥ ಠಾಗೋರ್, ನೆಹರು, ಸಚ್ಚಿನ್ ತೆಂಡುಲ್ಕರ್ , ನಲ್ಸನ್ ಮಂಡೆಲಾ, ಮಹಾತ್ಮ ಗಾಂಧಿ, ಮೈಕೆಲ್ ಜಾಕ್ಸನ್, ಪ್ರಭುದೇವಾ, ಅಮಿತಾಭ್ ಬಚ್ಚನ್, ಎ ಆರ್ ರೆಹಮಾನ್, ಚಲನ ಚಿತ್ರ ನಟರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇನ್ನೂ ಅನೇಕಾನೇಕ ವಿಖ್ಯಾತ ವ್ಯಕ್ತಿಗಳ ಯಥಾವತ್ತಾದ ಮೇಣದಗೊಂಬೆಗಳು ಬೆರಗು ಹುಟ್ಟಿಸುತ್ತದೆ. ಇವುಗಳನ್ನು ಸೂಕ್ಷ್ಮವಾಗಿ ವೀಕ್ಷಿಸಲು ನಿಜವಾಗಿ ಗಂಟೆಗಟ್ಟಲೆ ಕಾಲಾವಧಿ ಬೇಕು. ಮೇಣದ ಮೂರ್ತಿ ಎಷ್ಟು ನೈಜವಾಗಿದೆ ಎಂದರೆ ಅವರೆ ಎದುರು ಬಂದಂತೆ ಆಗುತ್ತದೆ.
ಮಹಾರಾಷ್ಟ್ರದ ಪೂನಾ ಜಿಲ್ಲೆಯ ಒಂದುಹಳ್ಳಿ ಲೋನಾವಾಲ ಮೇಣದ ಮೂರ್ತಿ ಹಾಗೂ ಚಿಕ್ಕಿ ಮತ್ತು ಪ್ರಕೃತಿ ಸೌಂದರ್ಯಕ್ಕೆ ದೇಶ ವಿದೇಶದಲ್ಲಿ ಹೆಸರುವಾಸಿಯಾಗಿದೆ.