Tuesday, May 17, 2022
HomeKannada Articleಸವದತ್ತಿ ಎಲ್ಲಮ್ಮನ  ಪಾದಕ ಉದೋ...ಉದೋ... : Heggadde Samachar

ಸವದತ್ತಿ ಎಲ್ಲಮ್ಮನ  ಪಾದಕ ಉದೋ…ಉದೋ… : Heggadde Samachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ     

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಿಂದ ಸುಮಾರು 7 ಕಿ.ಮಿ ಸಾಗಿದರೆ ಸಿಗುವ  ಸಪ್ತಕೊಳ, ಸಪ್ತಗುಡ್ಡಗಳ  ನಡುವೆ‌‌ ನೆಲೆ‌ ನಿಂತ ಎಲ್ಲಮ್ಮನ  ಸಾನಿಧ್ಯದಲ್ಲಿ  ಒಂದು ವರ್ಷದಲ್ಲಿ ಏಳು ಜಾತ್ರೆ ನಡೆಯುವುದು  ಇಲ್ಲಿನ ವಿಶೇಷ. ದವನ ಹುಣ್ಣುಮೆ ‌ಮಹಾನವಮಿ‌ಹುಣ್ಣಿಮೆ, ಶೀಗೆ, ಗೌರಿ ,ಹೊಸ್ತಿಲ, ಬನದ‌ ಹಾಗೂ ಭರತ ಹುಣ್ಣುಮೆಗಳಲ್ಲಿ ಇಲ್ಲಿ ಜಾತ್ರೆ ನಡೆವ  ಸವದತ್ತಿ ರೇಣುಕಾ ಎಲ್ಲಮ್ಮ ‌ಕ್ಷೇತ್ರಕ್ಕೆ ತನ್ನದ್ದೆ ಆದ ಇತಿಹಾಸವಿದೆ.  ಪುರಾಣಗಳಲ್ಲಿ ಉಲ್ಲೇಖವಿರುವಂತೆ  ಏಳು‌ಬೆಟ್ಟಗಳಿವೆ‌  ಅವುಗಳ ಪೈಕಿ ಯಲ್ಲಮ್ಮ ‌ಗುಡ್ಡ ಬಹಳ ಮುಖ್ಯವಾದದ್ದು. ಏಳು‌ಬೆಟ್ಟಗಳ ಎಲ್ಲಮ್ಮ  ಎಂದೆ‌ ಕರೆಯುವುದು‌ ರೂಢಿ. 


       ಈ ಸ್ಥಳವನ್ನು  ಸುಗಂಧವಾರ್ತಿ ‌ಮತ್ತು‌ ಸೌಂದರ್ಯ ವಾರ್ತಿ‌ಎಂದೂ‌  ಕರೆಯುತ್ತಿದ್ದಾರೆಂಬುದು  ಪುರಾಣ‌ ಕಥಾ‌ಪ್ರಕಾರಗಳಲ್ಲಿ  ಕಂಡು ‌ಬರುತ್ತದೆ. ಇಷ್ಟಾರ್ಥ ಈಡೇರಿಸಿದ  ದೇವಿಗೆ  ತಮ್ಮ ಶಕ್ತಿಯನುಸಾರ‌ ವಿಶೇಷ ‌ಪೂಜೆಸಲ್ಲಿಸಿ‌  ಭಕ್ತರು  ಪುನೀತರಾಗುತ್ತಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಹಾಗೂ  ಕೇರಳ ರಾಜ್ಯಗಳಿಂದ‌ಲೂ‌ ಭಕ್ತರು ಬರುತ್ತಾರೆ.  ರೇಣುಕಾಯಲ್ಲಮ್ಮನ  ಸನ್ನಿಧಿಯಲ್ಲಿ‌    ಭಯ – ಭಕ್ತಿಯಿಂದ  ಉದೋ.‌….ಉದೋ ಸವದತ್ತಿಯಲ್ಲಮ್ಮ ಎಂದು  ಸರ್ವಧರ್ಮಿಯರು  ಈ ಪವಿತ್ರ ಧಾರ್ಮಿಕ ‌ಕ್ಷೇತ್ರಕ್ಕೆ  ಆಗಮಿಸಿ ಪೂಜೆ ಸಲ್ಲಿಸುವುದು‌ ಭಾವೈಕ್ಯತೆಗೆ  ಸಾಕ್ಷಿ.

       ಯಲ್ಲಮ್ಮ ದೇವಾಲಯವನ್ನು  ಪುರಾತನ ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದ್ದು  ಮುಖ ಮಂಟಪ, ನವರಂಗ, ಸುಖನಾಸಿ, ಗರ್ಭಗುಡಿ  ಮತ್ತು ಪ್ರದಕ್ಷಿಣ ಪಥಗಳನ್ನು ಹೊಂದಿದೆ. ದೇವಸ್ಥಾನಕ್ಕೆ  ಮೂರು ಮುಖ್ಯ ದ್ವಾರಗಳಿದ್ದು  ಎತ್ತರದ ಗೊಡೆ ಇದೆ.  ಹೊರಭಾಗದಲ್ಲಿ ಪರಶುರಾಮ ಮತ್ತು ಜಮದಗ್ನಿ ಪ್ರತ್ಯೇಕ ದೇವಾಲಯಗಳಿವೆ . ಎಲ್ಲಮ್ಮ ದೇವಸ್ಥಾನದ ಭಾಗಿಲಿನ ಮೇಲೆ ಪದ್ಮಾವತಿ ದೇವಿಯ ಚಿತ್ರವಿದ್ದ  ಈ ಕಾರಣದಿಂದ  ಎಲ್ಲಮ್ಮ ದೇವಸ್ಥಾನ ಹಿಂದೆ ಜೈನ ಬಸದಿಯಾಗಿತ್ತು ಎಂಬ ತೀರ್ಮಾನ ಇತ್ತು. ಆದರೆ ನೈಜ ಕಾರಣ ನೀಡಲಾಗದೆ  ಆ ವಿಷಯವನ್ನು  ಅಲ್ಲಿಗೆ  ಕೈ‌ಬಿಡಲಾಗಿದೆ. ಸಾಮಾನ್ಯವಾಗಿ   ಜೈನರು ಎಲ್ಲಮ್ಮನನ್ನು  ಪೂಜಿಸುವುದಿಲ್ಲ. ಆದರೆ ಕೆಲವು ಜೈನ ಮನೆತನದವರು ಇಲ್ಲಿ ಪೂಜೆ ಸಲ್ಲಿಸುತ್ತಾರೆ. 

    ‌     ಈ  ಗುಡ್ಡವು  ಋಗ್ವೇದ ‌ಕಾಲದ  ಪರಶುರಾಮ, ಆತನ  ತಂದೆ ಜಮದಗ್ನಿ ‌ಮುನಿ ಹಾಗೂ ‌ತಾಯಿ‌ ರೇಣುಕೆಯ ತಪೋಭೂಮಿ‌. ಜಮದಗ್ನಿ, ಪರಶುರಾಮ  , ಮಲ್ಲಿಕಾರ್ಜುನ, ದತ್ತಾತ್ರೇಯ  ಮಾತಂಗಿ, ಅನ್ನಪೂರ್ಣೇಶ್ವರಿ,  ಆಂಜನೇಯ ‌ದೇವಸ್ಥಾನಗಳು  ಇಲ್ಲಿದೆ.‌ ವಿಜಯನಗರದ  ಅರಸ ಶ್ರೀ ಕೃಷ್ಣ ದೇವರಾಯರ ದಂಡನಾಯಕ  ಬೊಮ್ಮಪ್ಪ‌ನಾಯಕ  ದೇವಸ್ಥಾನ  ಮಂಟಪ ಪೂರ್ಣ ಗೊಳಿಸಿರುವ  ಉಲ್ಲೇಖವಿದೆ.   ಪ್ರವೇಶ ದ್ವಾರದ ಕಂಬದಲ್ಲಿ ಕೊರೆಯಲಾದ  ಕನ್ನಡ ಶಿಲಾಶಾಸನ ವಿದ್ದು ಅದರಲ್ಲಿ ಯಲ್ಲಮ್ಮನ ಜತ್ತಕ ಎಂದು ‌ಕೆತ್ತಲಾಗಿದೆ. ಮಕ್ಕಳಿಲ್ಲದವರು ಪರಶುರಾಮನ  ತೊಟ್ಟಿಲು ತೂಗಿದರೆ ಸಂತಾನ ಭಾಗ್ಯಪ್ರಾಪ್ತಿಯಾಗುತ್ತದೆ‌ ಎಂಬ ‌ನಂಬಿಕೆ ಇದೆ. ನವರಾತ್ರಿಯಲ್ಲಿ  ವಿವಿಧ ಬಣ್ಣದ  ಸೀರೆಗಳಲ್ಲಿ ದೇವಿಗೆ  ಅಲಂಕಾರ ಮಾಡಲಾಗುತ್ತದೆ. ಗರ್ಭಗುಡಿಯ ಎದುರು  ಅಳವಡಿಸಿದ  ದೀಪಕ್ಕೆ  ಎಣ್ಣೆ  ಹಾಕಿ  ಪ್ರಾರ್ಥಿಸುತ್ತಾರೆ.ಎಲ್ಲಮ್ಮ ಜನ ಪದ‌ದೇವತೆಯು ‌ಹೌದು .ಇದು ಸುಪ್ರಸಿದ್ಧ ಶಕ್ತಿ ಪೀಠವೂ‌ ಹೌದು.

         ಎಲ್ಲಮ್ಮ ದೇಗುಲ ಒಂಬತ್ತನೇ ಶತಮಾನದ  ರಾಷ್ಟ್ರಕೂಟರ ಆಳ್ವಿಕೆಗೆ  ಸೇರಿದೆ. ಗರ್ಭಗುಡಿಯಲ್ಲಿ ಎಲ್ಲಮ್ಮನ 4 ಅಡಿ  ಸುಂದರ ಮೂರ್ತಿಯಿದ್ದು . ದೇವಿಗೆ ಇಲ್ಲಿ  ಉಧೋ…ಉಧೋ.. ಜಯಘೋಷ‌ಹಾಕುತ್ತಾರೆ‌. ಚಾಲುಕ್ಯ ಮತ್ತು ರಾಷ್ಟ್ರಕೂಟ‌ ಶ್ಯೆಲಿಯಲ್ಲಿದ್ದ‌ ಸುಂದರ ‌ಕೆತ್ತನೆಗಳಿಂದ  ಕೂಡಿದೆ.‌ ಈ ದೇಗುಲವನ್ನು  ರಾಯಭಾಗದ ಬೊಮಪ್ಪ  ನಾಯಕ ‌ನಿರ್ಮಾಣ‌ಮಾಡಿದ‌ ದಾಖಲೆಗಳಿವೆ.  ಪರಶುರಾಮನ  ತಾಯಿ ರೇಣುಕಾ ದೇಗುಲದ  ಬಲಭಾಗಕ್ಕೆ  ಚಿಕ್ಕದ್ವಾರವಿದ್ದು. ಅಲ್ಲಿಂದ  6- 7 ನಿಮಿಷಸಾಗಿದರೆ  ವಿಶಾಲವಾದ  ನೀರಿನ ‌ಹೊಂಡಗಳಿವೆ.ಅದರ ಪಕ್ಕದಲ್ಲೇ ಚಿಕ್ಕ ಹೊಂಡವಿದೆ.  ಅದೇ  ಎಣ್ಣೆಹೊಂಡ  .7 ಕೊಳ‌ ಹಾಗೂ  7 ಪರ್ವತ ಗಳಿಗೆ ಖ್ಯಾತವಾದ ಸ್ಥಳವಿದು ಎಲ್ಲಮ್ಮನ ಗುಡ್ಡದಲ್ಲಿ ಸಿದ್ದರ ಕೊಪ್ಪ, ಪರಸಗಡಕೊಳ, ಗೊರವನ ಕೊಳ, ತಮ್ಮನಕೊಳ , ಮಾವಿನಕೊಳ, ಸಂಗಪ್ಪನ ಕೊಳ, ಬೋತೆಸಾಬನಕೊಳ ಎಂಬ 7 ಕೊಳಗಳಿವೆ. ಗುಡ್ಡಗಳಲ್ಲಿ ಮುರಗೋಡ, ಸಿಗಕ, ನವಿಲು ತೀರ್ಥ, ಪರಸಗಡ, ಸವದತ್ತಿ, ಮುನವಳ್ಳಿ‌ ಹಾಗೂ ಎಲ್ಲಮ್ಮನ ಗುಡ್ಡ.

       ರೇಣುಕಾ ದೇವಸ್ಥಾನ ಎಂದೂ‌ ಕರೆಯಲಾಗುವ  ಯಲ್ಲಮ್ಮ ದೇವಸ್ಥಾನದಲ್ಲಿ‌   ಕೆಲ ವರ್ಷಗಳ ಹಿಂದೆ ಹೆಣ್ಣು‌ಮಕ್ಕಳನ್ನು  ಅರ್ಪಿಸುವ ಪ್ರಾಚೀನ ದೇವದಾಸಿ ಪದ್ದತಿಯೊಂದಿಗೆ ಈ ದೇವಾಲಯದ ಹೆಸರು  ಜೋಡಿಸಿಕೊಂಡಿದೆ.  ದೇವಾಲಯದ ಹಿಂಬಾಗದಲ್ಲಿ ಕುಂಕುನ ಕುಂಡನಿ, ಯೋನಿಕುಂಡನಿ ‌ಮತ್ತು ಅರಶಿನ ಕುಂಡನಿ ಎಂದು ಕರೆಯಲ್ಪಡುವ  ಮೂರು ಕೊಳಗಳಿಗೆ ಪವಿತ್ರ ಕೊಳ ಎಂದು  ಭಕ್ತರ ‌ನಂಬಿಕೆ . ಇನ್ನೊಂದು ಜೋಗುಳ ಭಾವಿ ಎಂಬ ಪವಿತ್ರ ಬಾವಿಯು  ಇದೆ. ದೇವಳದ ಆವರಣದಲ್ಲಿ ಗಣೇಶ, ಮಲ್ಲಿಕಾರ್ಜುನ, ಪರಶುರಾಮ, ಏಕನಾಥ  ಮತ್ತು ಸಿದ್ದೇಶ್ವರಿಗೆ ಅರ್ಪಿತ ದೇವಾಲಯಗಳಿಗೆ. ಪರಶುರಾಮನ ತೊಟ್ಟಿಲು ತೂಗುವ  ಹರಕೆಯವರು ಇಲ್ಲಿ ತೊಟ್ಟಿಲು ತೂಗಿ. ಸಾನಿಧ್ಯದಲ್ಲಿ ಅರಶಿಣ ‌ಮತ್ತು ಭಂಡಾರವನ್ನು ಎಲ್ಲಮ್ಮನಿಗೆ  ಅರ್ಪಿಸುತ್ತಾರೆ. ದೇವಿಗೆ ಹಣ್ಣುಕಾಯಿಯ  ಉಡಿಯ  ಸಾಮಾನುಗಳನ್ನು ಸಮರ್ಪಿಸಲಾಗುತ್ತದೆ.


  
      ಸ್ಥಳ ಪುರಾಣ = ಕಾಶೀರದ ದೊರೆಯಾದ ರೇಣುಕಾ ರಾಜನು ಸಂತಾನ ಭ್ಯಾಗವಿಲ್ಲದೆ ಅತ್ತ ಕಡೆಯಿಂದ ಅಶರೀರವಾಣಿಯೊಂದು  ಪುತ್ರ ಕಾಮೇಷ್ಟಿಯಾಗ  ಮಾಡುವಂತೆ‌ಹೇಳಿತು ಇದರಿಂದ ಪ್ರಭಾವಿತನಾದ ದೊರೆಯು ಪುತ್ರಕಾಮೇಷ್ಟಿಯಾಗವನ್ನು ಮಾಡುತ್ತಾನೆ. ರಾಜನಿಗೆ  ಅಗ್ನಿಕುಂಡದಿಂದ   ಹೆಣ್ಣುಮಗುವನ್ನು  ದೇವರು ವರವಾಗಿ ಕರುಣಿಸುತ್ತಾನೆ.   ಹೀಗೆ ವರಪ್ರಸಾದ ವಾಗಿ ಹುಟ್ಟಿದ  ಹೆಣ್ಣುಮಗುವೇ  ರೇಣುಕಾ ಎಲ್ಲಮ್ಮ ದೇವಿ‌ .ರೇಣುಕಾ ದೇವಿ ಎಂದಿನಂತೆ ನದಿ ದಂಡೆಯ ಬಳಿ ವಿಹಾರಕ್ಕೆ  ಹೋದಾಗ ಋಷಿ ಜಮದಗ್ನಿ ಸಂದ್ಯಾ ವಂದನೆ ಮಾಡುವುದನ್ನು  ನೋಡುತ್ತಾಳೆ. ಹಾಗೆ  ಗುರು ಹಿರಿಯರ  ಒಪ್ಪಿಗೆ  ಪಡೆದು  ಜಮದಗ್ನಿ ಹಾಗೂ ರೇಣುಕಾರ  ವಿವಾಹ  ವಾಗುತ್ತದೆ. ಕೆಲವು ವರ್ಷಗಳ ನಂತರ  ನೀರು ತರಲೆಂದು ನದಿ ತೀರಕ್ಕೆ ಹೋದವಳು  ತಡವಾಗಿ ಬರುತ್ತಾಳೆ . ಇದರಿಂದ ಕೋಪಗೊಂಡ ಜಮದಗ್ನಿ ಆಕೆಗೆ  ತೊನ್ನು ರೋಗ ಬರುವಂತೆ  ಶಪಿಸುತ್ತಾನೆ. ಶಾಪ ವಿಮೋಚನೆಗಾಗಿ ರೇಣುಕಾ ಸವದತ್ತಿಗೆ  ಬರುತ್ತಾಳೆ. ಅಲ್ಲಿ  ಎಕ್ಕಯ್ಯ ಮತ್ತು ಸಿದ್ದಯ್ಯ ಎಂಬ ಸಿದ್ದಯೋಗಿಗಳು ಜೋಗುಳ  ಬಾವಿಯ  ನೀರಿನಲ್ಲಿ ಅರಶಿಣ ತೇಯ್ದು  ಆಕೆಗೆ  ಲೇಪಿಸುವುದರೊಂ ದಿಗೆ  ಶಾಪ  ವಿಮೋಚನೆಯಾಗುತ್ತದೆ. ಹೀಗೆ ಈ ಸ್ಥಳದಲ್ಲಿ  ರೇಣುಕಾ ಎಲ್ಲಮ್ಮ ನಾಗಿ ‌ನೆಲೆಸಿದ್ದಾಳೆ. ಮಲಪ್ರಭಾ ನದಿಯ ರಾಮಗಿರಿಬೆಟ್ಟ ಶ್ರೇಣಿಯ ಒಂದು ಭಾಗವೇ ಯಲ್ಲಮ್ಮ ಗುಡ್ಡ.
      
         ಋಷಿ ಜಮದಗ್ನಿಯ  ಸಿಟ್ಟಿಗೆ ಗುರಿಯಾಗಿದ್ದ ರೇಣುಕಾಳನ್ನು ಮುಗಿಸ‌ಬೇಕೆಂದು ತನ್ನೆಲ್ಲಾ ಮಕ್ಕಳಿಗೆ  ಜಮದಗ್ನಿ ‌ಕೇಳಿಕೊಂಡರು ತಂದೆಯ ಮಾತಿನಂತೆ ಪರಶುರಾಮ. ತಾಯಿ ರೇಣುಕಾಳ  ತಲೆಯನ್ನು ತನ್ನ ಕೊಡಲಿಯಿಂದ  ಎರಡು  ಭಾಗಗಳಾಗಿಸಿದನು. ತನ್ನ ಮಾತನ್ನು ನಡೆಸಿ ಕೊಟ್ಟ ಮಗನಿಗೆ ವರ ಕೇಳುವಂತೆ‌ ಹೇಳಿದಾಗ  ಅದೇ ಅವಕಾಶವನ್ನು   ಬಳಸಿಕೊಂಡು  ಪರಶುರಾಮ ತಾಯಿಯನ್ನು  ಮರು ಹುಟ್ಟಿಸ ಬೇಕು  ಮತ್ತು ಸಹೋದರರನ್ನು ಬದುಕಿಸಬೇಕು ಜಮದಗ್ನಿ ಮುನಿಗಳು  ತಮ್ಮ ಕೋಪವನ್ನು  ಬಿಟ್ಟು ಬಿಡಬೇಕು ಎಂದು‌ಕೇಳಿಕೊಳ್ಳುತ್ತಾನೆ.
         
      ಪುರಾಣಗಳಲ್ಲಿ  ಉಲ್ಲೇಖ ವಿರುವ ಜಮದಗ್ನಿ ‌ಮುನಿಯ ಪತ್ನಿ ರೇಣುಕಾಳೇ  ಯಲ್ಲಮ್ಮ. ಮಗನಿಗೆ ನೀಡಿದ ‌ಮಾತಿನಂತೆ  ತಾಯಿ ರೇಣುಕಾಯಲ್ಲಮ್ಮ ನಾಗಿ ಏಳುಕೊಳದ ಸವದತ್ತಿಗೆ  ಬಂದು ಪ್ರತಿಷ್ಠಾಪನೆ ಗೊಂಡಳು ಎಂಬ ಐತಿಹ್ಯವಿದೆ‌.
      


    ಭರತ ಹುಣ್ಣುಮೆ 
        ರೇಣುಕಾಯಲ್ಲಮ್ಮ ದೇವಳದಲ್ಲಿ ನಡೆಯುವ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ   ಭರತ ಹುಣ್ಣುಮೆಯು ಒಂದು. ಲಕ್ಷಾಂತರ ಭಕ್ತರು ಪಾಲ್ಗೊಂಡು ದೇವಿದರ್ಶನ  ಪಡೆಯುತ್ತಾರೆ.  ಸವದತ್ತಿ ಎಲ್ಲಮ್ಮ ಜಾತ್ರೆಯಲ್ಲಿ  ಪಾಲ್ಗೊಳ್ಳಲು ಹಳ್ಳಿಯ ಜನ ಚಕ್ಕಡಿಯನ್ನು  ಕಟ್ಟಿಕೊಂಡು ಹೆದ್ದಾರಿಯಲ್ಲಿ ಸಾಗುವ ದೃಶ್ಯ ಮೋಹಕವಾಗಿರುತ್ತದೆ. ಬನದ ಹುಣ್ಣುಮೆಯಿಂದ ಭರತಹುಣ್ಣುಮೆ ತನಕ ನಡೆಯುವ ರೇಣುಕಾ ದೇವಿಜಾತ್ರೆಯಲ್ಲಿ  ಲಕ್ಷಾಂತರ ಭಕ್ತರು ‌ವಿವಿಧೆಡೆಯಿಂದ ಆಗಮಿಸಿ ದೇವಿಯ  ದರ್ಶನ ಪಡೆದು  ತಮ್ಮ ಅಭಿಷ್ಟೇಗಳನ್ನು ಈಡೇರಿಸಿ ಕೊಳ್ಳುತ್ತಾರೆ. ಈ ಉತ್ಸವದ ಸಮಯದಲ್ಲಿ ಯಲ್ಲಮ್ಮ ಗುಡ್ಡದಲ್ಲಿ ಭಕ್ತ ಸಾಗರ  ತರತರದ ಹರಕೆ ಪೂರೈಸುತ್ತಾರೆ. ಎಲ್ಲೆಡೆ ಹೂವಿನ ಅಲಂಕಾರ, ಸಂಗೀತ, ಜೋಗತಿ ನೃತ್ಯ ದೇವಿಯ ಹೆಸರಿನಲ್ಲಿ ಚುಮ್ಮುವ ಅರಷಿನ- ಕುಂಕುಮವನ್ನು ನಭೊಮಂಡಲಕ್ಕೆ ಓಕುಳಿ  ಚಲ್ಲಿದಂತಿರುತ್ತದೆ. 
ಸವದತ್ತಿ ಯಲ್ಲಮ್ಮ ದೇವಸ್ಥಾನ ಉತ್ತರ ಕರ್ನಾಟಕದ  ಪ್ರಸಿದ್ಧ ಪವಿತ್ರ ಕ್ಷೇತ್ರ ಸವದತ್ತಿಯಲ್ಲಿ ದೇವಿಯ ದರ್ಶನ ‌ಪಡೆದು  ಹೊರ ಬಂದು  ಆವರಣದಲ್ಲಿ ಸ್ವಲ್ಪ ತಿರುಗಾಡಿದರು  ಅಥವಾ ಕಣ್ಣಾಡಿಸಿದಿರೋ   ಬೆಚ್ಚಿ ಬೀಳುತ್ತಿರಿ. ಇದು ಅಷ್ಟು  ಕಾರಣಿಕ ಪವಿತ್ರ ದೇವಳ ಆವರಣ ಎಂದು  ನಂಬಲಾಗದಷ್ಟು  ಕೊಳಕು  ಗಬ್ಬುನಾಥ , ವಾಕರಿಕೆ‌ ಬಂದರು‌ ಹೆಚ್ವಿಲ್ಲಾ ಎಲ್ಲಿ ನೋಡಿದರಲ್ಲಿ  ಪ್ಲಾಸ್ಟಿಕ್, ಕಸ, ಹೂವಿನ ಹಾರ ಪೂಜೆಗೆ  ಉಪಯೋಗಿಸಿದ  ವಸ್ತುಗಳು  ನೈವೇದ್ಯಕ್ಕೆ  ತಂದ ವಸ್ತುಗಳ ಬುಟ್ಟಿ, ಕರವಸ್ತ್ರ, ಕುಂಕುಮ ಡಬ್ಬಿ.ಅಲ್ಲಲ್ಲಿ  ಮುಖ ಕೈ ಕಾಲು ತೊಳೆದು  ನೀರು ಹರಿ ಬಿಟ್ಟು ಗಲಿಜು ಮಾಡಲಾಗಿದೆ. 
        ರೇಣುಕಾ ದೇವಿ ದೇವಸ್ಥಾನಕ್ಕೆ  ಹೋಗಿ ಬರುವ ದಾರಿಯಲ್ಲಿ  ಕೇಳುವುದೇ ಬೇಡ  ನೋಡುವಂತಿಲ್ಲಾ ಅಲ್ಲಲ್ಲಿ  ಅಡುಗೆ ಮಾಡಿ‌ಬಿಡಾರ ಬಿಟ್ಟು ಅಲ್ಲೇ ಸ್ನಾನ ,ಊಟ ಹಾಗೂ ಉಂಡು ತಿಂದಿದ್ದನ್ನು  ದೇಹದಿಂದ ಹೊರ ಹಾಕುವುದು  ಅಲ್ಲೆಮರೆಯಲ್ಲಿ.  ಗುಟ್ಕ, ಪಾನ್ ಪರಾಗ್  ತಿಂದು ಇಲ್ಲಿನ ಜನ ಉಗುಳುವುದರಲ್ಲಿ ಪಂಡಿತರು ಇಲ್ಲಿನ ವಾತಾವರಣದಲ್ಲಿ ಹೊಲಸು ಎಷ್ಟೆಂದರೆ  ಅಲ್ಲಿನ ವಾತವರಣದಿಂದ ಹೊರ ಬಂದ ಮೇಲು ಮರೆಯಲಾಗದ ಕಣ್ಣ ಮುಂದೆ ಬರುವ ಕೊಳಕು ವಿಪರೀತ. 

        ಸವದತ್ತಿ ಎಲ್ಲಮ್ಮ ದೇವಸ್ಥಾನ ಬೆಳಗಾವಿಯಿಂದ 90ಕೀ.ಮಿದೂರದಲ್ಲಿದೆ.ಧಾರವಾಡದಿಂದ  50ಕಿ.ಮಿ ಹತ್ತಿರದ ರೈಲು ನಿಲ್ದಾಣ ಧಾರವಾಡ. ರಾಜ್ಯದ ಹೆಚ್ಚಿನೆಲ್ಲಾ ಪ್ರದೇಶಗಳಿಗೆ ಬಸ್ಸಿನ ವ್ಯವಸ್ಥೆ ಚೆನ್ನಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments