Saturday, January 28, 2023
HomeKannada Articleಅಮೃತ ಸಿಂಚನಗೈಯುವ ಅಮೃತೇಶ್ವರಿ ಹಲವು ಮಕ್ಕಳ ತಾಯಿ : Heggaddesamachar

ಅಮೃತ ಸಿಂಚನಗೈಯುವ ಅಮೃತೇಶ್ವರಿ ಹಲವು ಮಕ್ಕಳ ತಾಯಿ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

ನಮ್ಮ ನಾಡ ಮಡಿಲಲ್ಲಿ ಅದೆಷ್ಟೋ ಸುಂದರ, ವಿಸ್ಮಯ ಹಾಗೂ ವಿಶಿಷ್ಟ, ಬೆರಗು ಮೂಡಿಸುವ ಅಚ್ಚರಿಯ ತಾಣಗಳಿವೆ. ಈ ಅದ್ಭುತ ಆಗರಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಗ್ರಾಮದ ಶ್ರೀ ಅಮೃತೇಶ್ವರಿ, ಹಲವು ಮಕ್ಕಳ ತಾಯಿ ದೇವಸ್ಥಾನ ಸೃಷ್ಟಿಯ ವಿಚಿತ್ರಗಳೆಲ್ಲವೂ ಪರಮಾತ್ಮನ ಲೀಲಾ ಕಲ್ಪನೆಯ ಸಾಕಾರ ರೂಪಗಳಿದ್ದು, ಮಾನವನ ಬದುಕಿನ ಔನ್ನತ್ಯಕ್ಕೆ ಒಂದೊಂದು ಬಗೆಯಲ್ಲಿ ಕ್ರಿಯಾತ್ಮಕ ಪೋಷಣೆಗಳಾಗಿವೆ ಎಂಬಂತೆ ಇಂದಿಗೂ ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಲಿಂಗಾಕೃತಿಯ ಕಲ್ಲು ಮೂಡಿ ಬರುವುದು ಇಲ್ಲಿನ ವಿಸ್ಮಯ. ಎಣಿಸಲಾರದಷ್ಟು ಲಿಂಗ ರೂಪದ ಮಕ್ಕಳಿಗೆ ಜನ್ಮ ನೀಡಿದ, ನೀಡುತ್ತಿರುವ ಚಿರಯೌವನ ಮಹಾತಾಯಿ ಅಮೃತೇಶ್ವರಿ. ಇದಕ್ಕೆ ಸಾಕ್ಷಿಯಾಗಿ ದೇವಸ್ಥಾನದ ಸುತ್ತಾ ಮೂಡಿಬಂದ ಲಿಂಗ ರೂಪದ ಕಲ್ಲು ಗೋಚರಿಸುತ್ತದೆ. ಯೂನಿಯನ್ ಆಫ್ ಸಾಯಿಲ್‍ಸೈನ್ಸ್ ಸಂಸ್ಥೆಯೊಂದು ಇಲ್ಲಿನ ಮಣ್ಣಿನ ಪರೀಕ್ಷೆ ನಡೆಸಿ ಇಲ್ಲಿ ನಿರಂತರವಾಗಿ ಲಿಂಗರೂಪದ ಕಲ್ಲು ಮೂಡಿ ಬರುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ.
             
ಐತಿಹಾಸಿಕವಾಗಿ ಮಹತ್ವ ಹೊಂದಿರುವ ಈ ದೇಗುಲ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರ. ನಾನಾ ಕಡೆಯ ಭಕ್ತರು ದೇವಿಯ ಪಾದತಲಕ್ಕೆ ನಮಿಸಲೆಂದು ಆಗಮಿಸುತ್ತಾರೆ. ನೊಂದು ಬಂದವರಿಗೆ ಅಮೃತ ಸಿಂಚನಗೈಯುವ ತಾಯಿ ಅಮೃತೇಶ್ವರಿ ವಿದ್ಯಾರ್ಥಿಗಳಿಗೆ ವಿದ್ಯಾ ದೇವತೆಯಾಗಿ, ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯವನ್ನು ಕರುಣಿಸುವ ಮಹಾ ತಾಯಿಯಾಗಿ ಹರಸುವಳು ಎಂಬ ಪ್ರತೀತಿ ಇದೆ.
             
ಅಮೃತೇಶ್ವರಿ ದೇವಿಯ ಪರಿವಾರವಾಗಿ ನಾಗ, ವೀರಭದ್ರ, ಬೊಬ್ಬರ್ಯ, ಉಮ್ಮಲ್ತಿ, ನಂದಿ, ಚಿಕ್ಕು, ಪಂಜುರ್ಲಿ ಮುಂತಾದ ದೈವ ದೇವರುಗಳ ಗುಡಿಗಳು ಇಲ್ಲಿವೆ. ಶ್ರೀ ದೇವಿಯ ನಿತ್ಯ ಪೂಜೆಯು ಅನಾದಿ ಕಾಲದಿಂದಲೂ ನಾಥ ಸಂಪ್ರದಾಯಕ್ಕೆ ಸೇರಿದ ಧರ್ಮನಾಥಿ ಪಂಥದ ಜೋಗಿ ಜನಾಂಗದವರಿಂದ ಸಂಪ್ರದಾಯಬದ್ಧವಾಗಿ ನಡೆದು ಬರುತ್ತಿರುವುದು ಈ ಕ್ಷೇತ್ರದ ಇನ್ನೊಂದು ವೈಶಿಷ್ಟ್ಯವಾಗಿದೆ.


          
ಶ್ರೀ ದೇವಿ ಅಮೃತೇಶ್ವರಿಗೆ ನಿತ್ಯವೂ ತ್ರಿಕಾಲ ಪೂಜೆ ನಡೆಯುವುದರ ಜೊತೆಗೆ ನಂದಾ ದೀಪಗಳೆರಡೂ ಉರಿಯುವ ನಿಯಮವಿದೆ. ಪ್ರತಿ ಶುಕ್ರವಾರ ಭಕ್ತಾಧಿಗಳು ಹೆಚ್ಚಾಗಿ ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದು ದೇವಳದ ಸುತ್ತಲೂ ಮೂಡಿ ಬಂದ ಲಿಂಗ ರೂಪದ ಮಕ್ಕಳನ್ನು ಸ್ಪರ್ಶಿಸಿ, ಎಣ್ಣೆ ಅಭಿಷೇಕ ಮಾಡಿದರೆ ಸಂತಾನ ಭಾಗ್ಯ  ಹಾಗೂ  ಮನಸ್ಸಿನ ಕೋರಿಕೆ ನೆರವೇರುವುದು ಎಂಬ ನಂಬಿಕೆಯಿಂದ ಇಲ್ಲಿನ ಲಿಂಗರೂಪದ ಮಕ್ಕಳಿಗೆ ಎಣ್ಣೆ ಹಚ್ಚಲಾಗುತ್ತದೆ. ಚರ್ಮರೋಗ ನಿವಾರಣೆಗೆ ಹುರುಳಿಯನ್ನು ಲಿಂಗರೂಪದ ಹಲವು ಮಕ್ಕಳ ಸುತ್ತ ಹುರುಳಿ ಚೆಲ್ಲುವ ಹರಕೆ ಸನ್ನಿಧಿಯಲ್ಲಿ ನಡೆಯುತ್ತದೆ.
          
ಸೋಣೆ ತಿಂಗಳಲ್ಲಿ ಸೋಣೆ ಆರತಿ, ಹರಿವಾಣ ನೈವೇದ್ಯ, ಗೆಂಡ ಸೇವೆ, ದಕ್ಕೆ ಬಲಿ, ತುಲಾಭಾರ ಸೇವೆ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಶರನ್ನವರಾತ್ರಿಯ 9 ದಿನವೂ ನವರಾತ್ರಿ ಉತ್ಸವ, ವಿಜಯ ದಶಮಿಯಂದು ದುರ್ಗಾ ಹೋಮ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುವುದು ಇಲ್ಲಿನ ವಿಶೇಷತೆ. ನೃತ್ಯ ಪ್ರಿಯಳಾದ ದೇವಿಯ ಹೆಸರಿನ ಅಮೃತೇಶ್ವರಿ ಮೇಳದ ಯಕ್ಷಗಾನ ಬಯಲಾಟವು ನಡೆಯುತ್ತವೆ. 

ಸ್ಥಳ ಪುರಾಣ:


ಹಿಂದೆ ರಾವಣನ ಬಂಧುವಾದ ಖರನೆಂಬ ಅಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿ ಕುಂಭ ಮುಖಿ, ತಂಗಿ ಶೂರ್ಪನಖಿ ಹಾಗೂ ದೂಷಣ ತ್ರಿಶರಾದಿ ಅನುಚರರನ್ನು ಕೂಡಿಕೊಂಡು ರಾವಣನ ಅಪ್ಪಣೆಯಂತೆ ಲಂಕಾ ನಗರಿಗೆ ಉತ್ತರ ದಿಕ್ಕಿನ ದಂಡಕಾರಣ್ಯವನ್ನು ಪಾಲಿಸುತ್ತಿದ್ದನು. ಖರಾಸುರನು ರಾಕ್ಷಸನಾಗಿದ್ದರೂ, ಧರ್ಮಿಷ್ಟನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕಾಲವು ತನ್ನ ಕುಲ ದೇವನಾದ ಶಂಕರನನ್ನು ಪೂಜಿಸುತ್ತಿದ್ದನು. ಈತನ ಪತ್ನಿ ಕುಂಬಮುಖಿಯೂ ಸಹ ಪತಿವ್ರತಾ ಪಾರಾಯಣಳು. ಸದಾ ಕಾಲ ಪತಿ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿರುತ್ತಿದ್ದಳು. 
    
ಹೀಗಿರಲು ಒಮ್ಮೆ ವಿಹಾರಕ್ಕಾಗಿ ಶೂರ್ಪನಖಿಯನ್ನು ಕೂಡಿಕೊಂಡು ಕುಂಭಮುಖಿಯು ವನದಲ್ಲಿ ಸಂಚಾರ ಮಾಡುತ್ತಿರಲು ಅದೇ ಮಾರ್ಗದಲ್ಲಿ ಏಕಮುಖಿ ಮಹರ್ಷಿಗಳ ಪತ್ನಿ ಅತಿಪ್ರಭೆ ಪ್ರಾಯ ಪ್ರಬುದ್ಧನೂ, ಸುಂದರನೂ ಆದ ಮಗ ಬಹುಶ್ರುತನೊಂದಿಗೆ ತೀರ್ಥಯಾತ್ರೆಗೆ ಹೋಗುತ್ತಿದ್ದಳು.
           
ಹೀಗಿರಲು ಬಾಲ ವಿಧವೆಯೂ ಅತಿ ಕಾಮುಕಳೂ ಆಗಿರುವ ಶೂರ್ಪನಖಿಯು ಅತಿಪ್ರಭೆಯ ಮಗನಾದ ಬಹುಶ್ರುತನನ್ನು ನೋಡಿ ಮೋಹಿತಳಾಗಿ ಪರಿಪರಿಯಾಗಿ ಬೇಡಿದರೂ ಆತನು ಒಪ್ಪದಿರಲು ಶೂರ್ಪನಖಿಯೂ ಆತನನ್ನು ಸಂಹರಿಸಿದಳು. ತನ್ನ ಪುತ್ರನ ಮರಣದಿಂದ ಅತಿ ಪ್ರಭೆಯು ದುಃಖದಿಂದ ರೋಧಿಸುತ್ತಿರುವಾಗ ಈ ಶಬ್ಧ ಕೇಳಿದ ಕುಂಭ ಮುಖಿಯು ಅಲ್ಲಿಗೆ ಬಂದಳು. ಶೋಕಾಂಧಳಾದ ಅತಿ ಪ್ರಭೆಯು ಕುಂಭ ಮುಖಿಯನ್ನೇ ತನ್ನ ಮಗನ ಸಂಹರಿಸಿದ ಶೂರ್ಪನಖಿ ಎಂದು ತಿಳಿದು ನಿನಗೆ ಮಕ್ಕಳು ಹುಟ್ಟದೇ ಹೋಗಲಿ ಎಂದು ಶಾಪಕೊಟ್ಟಳು. ನಂತರ ತನ್ನ ಮಗನ ಮರಣಕ್ಕೆ ಕಾರಣಳಾದವಳು ಕುಂಭಮುಖಿ ಅಲ್ಲವೆಂದು ತಿಳಿದು ನಿಜಕ್ಕೂ ಮಗನನ್ನು ಸಂಹರಿಸಿದ ಶೂರ್ಪನಖಿಗೆ “ಎಲೈ ಶೂರ್ಪನಖಿಯೇ ನೀನು ಪುನಃ ರೂಪವಂತನನ್ನು ಮೋಹಿಸಿ ಮಾನಭಂಗ ಹೊಂದಿದವಳಾಗಿ ನಿನ್ನ ವಂಶಕ್ಕೆ ಮೃತ್ಯು ಸ್ವರೂಪಳಾ”ಗೆಂದು ಶಾಪ ಕೊಟ್ಟು ಸಮೀಪದ ಪ್ರಪಾತಕ್ಕೆ ಹಾರಿ ಪ್ರಾಣ ಕಳೆದುಕೊಂಡಳು.


     
ಈ ರೀತಿ ಋಷಿ ಪತ್ನಿಯ ಶಾಪದಿಂದ ದುಃಖ ತಪ್ತಳಾದ ಕುಂಭ ಮುಖಿಯು ನಡೆದ ವಿಚಾರವನ್ನು ತನ್ನ ಪತಿ ಖರನಿಗೆ ತಿಳಿಸಿದಳು. ಖರಾಸುರನು ಈ ಶಾಪ ನಿವಾರಣೆಯಾಗಿ ಮಕ್ಕಳನ್ನು ಪಡೆಯಲು ಮುಂದೇನು ಮಾಡಬೇಕೆಂದು ಯೋಚಿಸಿ ತನ್ನ ಕುಲ ಪುರೋಹಿತರಾದ ಶುಕ್ರಾಚಾರ್ಯರಲ್ಲಿ ಮೋರೆ ಹೋದನು. ವಿಷಯವನ್ನು ತಿಳಿದ ಶುಕ್ರಾಚಾರ್ಯರು ಖರಾಸುರನೇ ನೀನು ಮಾಯಾಸುರನಿಂದ ನಿರ್ಮಿತವಾದ ಜ್ಯೇಷ್ಠ ಲಿಂಗವನ್ನು ತಂದು ಒಂದು ವರ್ಷ ಪರ್ಯಂತ ದೀಕ್ಷಿತನಾಗಿ ಲಿಂಗವನ್ನು ಪೂಜಿಸಬೇಕೆಂದು ನಿನ್ನ ಪತ್ನಿ ಜಗದಾಂಬಿಕೆಯಾದ ಅಮೃತೇಶ್ವರಿ ದೇವಿಯನ್ನು ಪೂಜಿಸಬೇಕೆಂದು ತಿಳಿಸಿದರು. ಖರಾಸುರನು ಜ್ಯೇಷ್ಠ ಲಿಂಗವನ್ನು ತಂದು ಮನೋಹರವಾದ ಶುಕಪುರ ಎಂಬ ಸ್ಥಳ ಅಂದರೆ ಈಗಿನ ಗಿಳಿಯಾರು ಹರ್ತಟ್ಟು ಎಂಬಲ್ಲಿ ಪ್ರತಿಷ್ಠಾಪಿಸಿ ಕೋಟದಲ್ಲಿ ಅಮೃತೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ದಂಪತಿಗಳೀರ್ವರು ಉಮಾ ಮಹೇಶ್ವರನನ್ನು ಪೂಜಿಸುತ್ತಿದ್ದರು.
         
ನಿದ್ರಾಹಾರವನ್ನು ತ್ಯಜಿಸಿ ಅತ್ಯಂತ ಶ್ರದ್ಧೆಯಿಂದ ತಪಸ್ಸನ್ನಾಚರಿಸುತ್ತಿದ್ದ ಕುಂಭಮುಖಿಯ ತಪಸ್ಸಿಗೆ ಮೆಚ್ಚಿದ ಅಮೃತೇಶ್ವರಿಯು ಮನೋಹರವೂ, ಕಾಂತಿಯುಕ್ತವೂ ಆದ ರೂಪಾತಿಶಯದಿಂದ ಪ್ರತ್ಯಕ್ಷಳಾಗಿ ಕುಂಭ ಮುಖಿಯೇ ಬೇಕಾದ ವರಗಳನ್ನು ಕೇಳು ಎನ್ನಲು ದೇವಿಯ ದಿವ್ಯ ಸ್ವರೂಪ ದರ್ಶನದಿಂದ ಉಂಟಾದ ಸಂತೋಷಾತಿಶಯದಿಂದ ಅತಿಪ್ರಭೆಯ ಶಾಪ ಪ್ರಭಾವದಿಂದಲೂ ಭ್ರಾಂತಳಾಗಿ “ತಾಯೇ ನೀನು ಯೌವನೆಯಾಗಿ   ಶಿವನಂತಹ ಪುತ್ರರನ್ನು ಬಹಳ ಕಾಲದವರೆಗೆ ಪಡೆ ಎಂದು ಬೇಡಿದಳು. ಮಂದಸ್ಮಿತೆಯಾದ ಅಮೃತೇಶ್ವರಿ ದೇವಿಯು ತಥಾಸ್ತು ಎಂದಳು.
           
ಅಲ್ಲದೆ ಎಲೈ ಕುಂಭಮುಖಿ ಶಾಪದಿಂದ ನಿನಗೆ ಮಕ್ಕಳನ್ನು ಪಡೆಯುವ ಭಾಗ್ಯ ಇಲ್ಲ. ಆ ಕಾರಣದಿಂದಲೇ “ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು” ಎಂದು ಕೇಳುವ ಬದಲು “ನೀನು ಮಕ್ಕಳನ್ನು ಪಡೆ” ಎಂದು ಕೇಳಿಕೊಂಡಿರುತ್ತೀ. ಆದರೂ ಚಿಂತಿಸಬೇಡ ಇದೇ ಸ್ಥಳದಲ್ಲಿ ಶಿವಲಿಂಗ ಸದೃಶವಾದ ಲಿಂಗಗಳು ಆಗಾಗ ಉತ್ಪತ್ತಿಯಾಗುತ್ತವೆ. ಇವರೆ ನಿನ್ನ ಮಕ್ಕಳೆಂದು ತಿಳಿ. ಅನಂತರ ನಾನು “ಹಲವು ಮಕ್ಕಳ ತಾಯಿ” ಎಂಬ ಹೆಸರಿನೊಂದಿಗೆ ಪ್ರಸಿದ್ಧಿ ಹೊಂದಿದವಳಾಗಿ ಭಕ್ತರಿಗೆ ಅನುಗ್ರಹವನ್ನುಂಟು ಮಾಡುತ್ತಾ ಇಲ್ಲಿ ನೆಲೆಸಿರುತ್ತೇನೆ ಎಂದು ಅಂತರ್ಧಾನ ಹೊಂದಿದಳು.
         
ಕುಂಭಮುಖಿ ಅಮೃತೇಶ್ವರಿ ದೇವಿಯಲ್ಲಿ ಐಕ್ಯ ಹೊಂದುವಳು. ಅಂದಿನಿಂದಲೂ ಶ್ರೀ ಅಮೃತೇಶ್ವರಿ ದೇವಿಯ ಸನ್ನಿಧಿಯಲ್ಲಿ ಶಿವಲಿಂಗವು ಉದ್ಭವಿಸತೊಡಗಿತು. ಆದ್ದರಿಂದ ಶ್ರೀ ಅಮೃತೇಶ್ವರಿ ದೇವಿಯನ್ನು ಹಲವು ಮಕ್ಕಳ ತಾಯಿ ಎಂದು ಕರೆಯಲಾಗುತ್ತದೆ. ಇಲ್ಲಿ ಸಾತ್ವಿಕರೂಪಿಣಿ ಅಮೃತೇಶ್ವರಿಯಾಗಿಯೂ, ತಾಮಸ ರೂಪಿಣಿಯಾದ ಮಾರಿಯಾಗಿಯೂ  ನೆಲೆಸಿ ಜನರ ಸಕಲ ಸಂಕಷ್ಟ ಪರಿಹರಿಸುತ್ತಾ ಇರುತ್ತೇನೆಂದು ಅಭಯ ಕೊಟ್ಟು ಒಂದಂಶದಿಂದ ಮಾರಿ ದೇವತೆಯಾಗಿಯೂ ಇನ್ನೊಂದಂಶದಿಂದ ಅಮೃತೇಶ್ವರಿಯಾಗಿ ವಿರಾಜಿಸುತ್ತಿದ್ದಾಳೆ. ಲಿಂಗರೂಪದ ಕಲ್ಲು ಇಲ್ಲಿ ಮೂಡಿ ಬರುತ್ತಿರುವುದು ಹೆಚ್ಚಿನ ವಿಶೇಷ.
( 9.1.2022ರಿಂದ 11 .1.2022 ರ ತನಕ  ಅಮೃತೇಶ್ವರಿ ಜಾತ್ರೆ ,ಹಾಲುಹಬ್ಬ, ಗೆಂಡಸೇವೆ. ತನ್ನಿಮಿತ್ತ ಈ ಬರಹ)


           

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments