Thursday, September 21, 2023
HomeKannada Articleದೇವಾಲಯಗಳ ತೊಟ್ಟಿಲು ಐಹೊಳೆ | Heggaddesamachar

ದೇವಾಲಯಗಳ ತೊಟ್ಟಿಲು ಐಹೊಳೆ | Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

      ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ ಐಹೊಳೆ 178 ಕಿ. ಮಿ  ಮತ್ತು ಬೆಂಗಳೂರಿನಿಂದ 510 ಕಿ.ಮಿ ದೂರದಲ್ಲಿದೆ ಐಹೊಳೆ. ಇದನ್ನು ದೇವಾಲಯಗಳ ತೊಟ್ಟಿಲು, ವಾಸ್ತು ಶಿಲ್ಪದ ತೊಟ್ಟಿಲು , ವಾಸ್ತು ಶಿಲ್ಪದ ಪ್ರಯೋಗಾಲಯ , ಕ್ರೇಡಲ್ ಆಫ್ ಇಂಡಿಯಾ ಅರ್ಕಿಟೆಕ್ಟರ್ಸ್ ಎಂದು‌ ಕರೆಯಲಾಗುತ್ತದೆ. ಒಂದು ಕಾಲಕ್ಕೆ  ಚಾಲುಕ್ಯ  ರಾಜರ  ಅಧೀನದಲ್ಲಿದ್ದ ಐಹೊಳೆಯು  ಶಾಸನಗಳಲ್ಲಿ ಅಯ್ಯವೊಳ ಹಾಗೂ ಆರ್ಯಪುರ ಎಂದು ಉಲ್ಲೇಖವಿದೆ. ಇಲ್ಲಿನ ದೇವಾಲಯ 22 ಗುಂಪುಗಳಲ್ಲಿದೆ.

   Aihole ಅಂದರೆ ಅಯ್ಯಾಗಳು ಬ್ರಾಹ್ಮಣರು ವಾಸಿಸುತ್ತಿರುವ ಊರು ಇನ್ನೊಂದು ಅರ್ಥದಲ್ಲಿ ಪಂಡಿತರು ಅಥವಾ ‌ವಿದ್ವಾಂಸರಪುರ ಅಥವಾ ಊರು ಎನ್ನಲಾಗುತ್ತದೆ.  ಒಂದು ಪುರಾಣ‌ಕಥೆಯಂತೆ  ಜಮದಗ್ನಿಯ ‌ಮಗನಾದ  ಪರಶುರಾಮನು  ಕಾರ್ತವಿರ್ಯಾಜುರ್ನನನ್ನು‌ ಕೊಂದು ಕೊಡಲಿಯನ್ನು ಮಲಪ್ರಭಾ ‌ನದಿಯಲ್ಲಿ ತೊಳೆದಾಗ ‌ನದಿಯ ನೀರೆಲ್ಲ ಕೆಂಪಾಗಿ‌ ಹರಿದಾಗ ಆರ್ಯಪುರದ ‌ಹೆಣ್ಣು‌ ಮಕ್ಕಳು‌ ಕೆಂಪಾದ ನದಿ ನೀರನ್ನು  ಕಂಡು ಆಶ್ಚರ್ಯದಿಂದ ಆಯಿ…..ಹೊಳೆ ಎಂದು‌ ಉದ್ಗಾರ‌ ತೆಗೆದಾಗ ಈ ಉದ್ಗಾರ‌ ವಾಚಕವೇ ಮುಂದೆ ಐಹೊಳೆಯಾಗಲು ಕಾರಣವಾಯಿತು ಎನ್ನುತ್ತಾರೆ.

        ವಾಸ್ತುಶಿಲ್ಪ ಅಂದ ತಕ್ಷಣ ‌ನೆನಪಾಗುವುದು  ಬಾದಾಮಿಯ ಚಾಲುಕ್ಯರು. ಭಾರತದ ಪಾರಂಪರಿಕ ‌ತಾಣಗಳಲ್ಲಿ‌ ಸಂಸ್ಕೃತಿ ಮತ್ತು ಪ್ರಾಕೃತಿಕ ತಾಣಗಳಿವೆ  ಅವುಗಳಲ್ಲಿ‌ ಮುಖ್ಯವಾಗಿ ಭವ್ಯ ಐತಿಹಾಸಿಕ ‌ಹಿನ್ನಲೆಯ ಸ್ಥಳಗಳಲ್ಲಿ‌ ಐಹೊಳೆಯಲ್ಲಿ ಶಿಲ್ಪ ‌ಕಲೆ ಆಗರವೇ ತುಂಬಿದೆ.  ದೇಶದ ಪಾರಂಪರಿಕ ‌ವೈಭವವನ್ನು ಸಾರುವ ಸ್ಥಳಗಳ ರಕ್ಷಣೆಯ ಹೊಣೆ ಸರಕಾರದೊಂದಿಗೆ ಜನ‌ಸಾಮಾನ್ಯರಿಗೂ ಇರಬೇಕು.

      Aihole Templeಗಳ  ಸಂಕೀರ್ಣದಲ್ಲಿ ಹಲವು ಗಣೇಶ ಮೂರ್ತಿಗಳನ್ನು ಇರಿಸಲಾಗಿದೆ. ದ್ವಿಬಾಹು ಗಣಪ, ಬಂಡೆಯ ಮೇಲೆ  ಉಬ್ಬು ಶಿಲ್ಪದಂತೆ ರೂಪಿಸಿರುವ ಶಿಲ್ಪಗಳು ಸೂಕ್ಷ್ಮ ಕೆತ್ತನೆಗಳಿಂದ ಅಲಂಕೃತ ಕಿರೀಟ , ಚತುರ್ಭುಜಗಳು, ಅಷ್ಟಭುಜಗಳ ನಾಟ್ಯ ಗಣಪ, ವೈವಿಧ್ಯಮಯ ಆಭರಣ, ಗುಹೆಯ ಪಶ್ಚಿಮ ಗೋಡೆ  ಮೇಲೆ 18 ಕೈಗಳನ್ನು  ಹೊಂದಿದ ಶಿವನು ಕಮಲದ ಮೇಲೆ  ನರ್ತಿಸುತ್ತಿದ್ದಾನೆ.‌ ಶಿವನು ಮೇಲಿನೆರಡು ಕೈಗಳಲ್ಲಿ ಸರ್ಪವನ್ನು ಉಳಿದ ಕೈಗಳಲ್ಲಿ ಡಮರು , ಜಪಮಣಿ, ಪಾಶ ತ್ರಿಶೂಲಗಳಿದ್ದು ಶಿವನ ಮೂರ್ತಿಯ ಕೇಶ‌ವಿನ್ಯಾಸ ಸುಂದರವಾಗಿದ್ದು ‌ವೀಣೆ‌ಹಿಡಿದು ನರ್ತನ  ಮಾಡುವ ನಟರಾಜ , ಅಷ್ಟೇ ಅಲ್ಲದೇ ಅರ್ಧಭಾಗ  ಪಾರ್ವತಿ ಉಳಿದ ಅರ್ಧಭಾಗ  ಶಿವನು‌ ಸೇರಿರುವ ಅಪೂರ್ವ ವಿಗ್ರಹವಾಗಿದೆ. ಗುಹೆಯ ಒಳಗೆ ವಿಷ್ಣುವಿನ ಅವತಾರಗಳಾದ‌  ತ್ರಿವಿಕ್ರಮ, ಭೂವರಹ, ಮತ್ಸ್ಯಯಂತ್ರ‌  ಮತ್ತು ಸ್ವಸ್ತಿಕಗಳ‌ ಚಿತ್ರಣಗಳನ್ನು ತುಂಡರಿಸಲಾಗಿದ್ದು ಗರ್ಭಗೃಹದಲ್ಲಿ ಮೂರ್ತಿ ಇಲ್ಲ. ಕಲಾಕೌಶಲ್ಯಕ್ಕೆ ಜೀವಂತ‌ ಸಾಕ್ಷಿಯಾದ ಇಲ್ಲಿನ ‌ಕೆತ್ತನೆಗಳು  ವಿಗ್ರಹಗಳಲ್ಲಿ‌ ಮೂರ್ತಿಗಳ ಜೀವ ಕಳೆ‌ ಎದ್ದು ಕಾಣುತ್ತಿವೆ. ಕೆಲ‌ ಮೂರ್ತಿಗಳಲ್ಲಿ‌ ರಸಿಕತೆ,   ಮೋಹಕತೆ‌ ನೋಡುಗರ ಗಮನ ಸೆಳೆಯುತ್ತದೆ‌. ಆದರೆ  ತುಂಡಾಗಿ  ಉರುಳಿದ  ಮೂರ್ತಿ ಗಳು ಮನಕರಗಿಸುತ್ತವೆ.
      
         ಪ್ರಾಚೀನ ಸ್ಮಾರಕ ಹಾಗೂ ಅವಶೇಷಗಳ ಅಧಿನಿಯಮದ ಪ್ರಕಾರ ಈ‌ ಸ್ಮಾರಕವನ್ನು  ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ. ಯಾರಾದರೂ ಇದನ್ನು ನಾಶ ಮಾಡಿದರೆ ಸ್ಥಳಾಂತರಿಸಿದರೆ‌‌ ಹಾನಿ ಗೊಳಿಸಿದರೆ, ವಿಕೃತಿ ಗೊಳಿಸಿದರೆ. ಜೈಲುವಾಸ  ಮತ್ತು ದಂಡ ವಿಧಿಸ ಲಾಗುತ್ತದೆ. ಇಲ್ಲಿನ ‌ಕಲಾ‌ ವೈಭವವನ್ನು ನೋಡುತ್ತಲೆ  ಸಮಯ‌ ಉರುಳಿದ್ದು‌ ಗೊತ್ತಾಗುವುದಿಲ್ಲ. ಎಲ್ಲಾ ಸ್ಮಾರಕ  ಸಾರ್ವಜನಿಕರಿಗಾಗಿ‌ ಸೂರ್ಯೋದಯದಿಂದ ಸೂರ್ಯಸ್ತದವರೆಗೆ ‌ಬೇಟಿಗೆ ಅವಕಾಶವಿದೆ.

    ಬಂಡೆಗಲ್ಲು‌ ಕಡಿದು  ನಿರ್ಮಿಸಿರುವ  ಗುಹಾಂತರ ದೇವಾಲಯಗಳು  ಐಹೊಳೆಯಲ್ಲಿ ಕಂಡುಬರುತ್ತದೆ.  ಜೈನ, ಬೌದ್ಧ, ವೈದಿಕ ಸಂಪ್ರದಾಯಗಳಿಗೆ  ಸೇರಿದ  ದೇವಳವಿದೆ. ನರ್ತಿಸುವ  ನಟರಾಜ , ಅಪ್ಸರೆಯರು ನಟರಾಜನೊಡನೆ  ನರ್ತಿಸುತ್ತಿರುವುದು, ಸಪ್ತಮಾತೃಕೆಯರಾದ  ಬ್ರಾದ್ಮಿ, ಮಹೇಶ್ವರಿ, ಕುಮಾರಿ, ಇಂದ್ರಾಣಿ, ವೈಷ್ಣವಿ. ಮತ್ತು ಗಣಪ , ಷಣ್ಮುಖನ ಮೂರ್ತಿಗಳು, ಜೈನ ಗುಹೆ, ಚರಂತಿ ಮಠ ಮತ್ತು ಐಹೊಳೆಯ ಊರಿನ ‌ಕೋಟೆಯ‌  ಒಳಗೆ  ಜೈನ ಬಸದಿಗಳ ಒಂದು ಸಮುಚ್ಚಯವಿದ್ದು ಅದನ್ನು ಜೈನ ‌ನಾರಾಯಣ ಅಥವಾ ಯೋಗಿ ನಾರಾಯಣ ಸಮೂಹ ಎನ್ನುತ್ತಾರೆ. ಮಂಟಪದ  ಮೇಲೆ ಮಹಾವೀರ ಕುಳಿತ ಶಿಲ್ಪ ವಿದೆ.  ಮದ್ಯದ ಗರ್ಭಗೃಹದಲ್ಲಿ ಪಾಶ್ವನಾಥನ  ಕುಳಿತ ಪ್ರತಿಮೆ ಇದ್ದು ಎಡ ಬಲಗಳಲ್ಲಿ 5  ಆನೆ ಮತ್ತು  5 ಸಿಂಹ ಗಳಿವೆ. ಜೋರ್ತಿಲಿಂಗ‌  ದೇವಾಲಯಗಳ ಸಂಕೀರ್ಣ ವಿದೆ. ವಚನ ಆದರೆ ಒಡೆದ ಶಿವಲಿಂಗ ವಚನ ಹಸಿರು ಗ್ರಾನೈಟ್ ‌ಕಲ್ಲಿನಲ್ಲಿ‌ ಮಾಡಿದ  ಶಿವಲಿಂಗವಿದೆ.  ಕದಂಬ ನಾಗರ ಶೈಲಿಯ ಶಖರವನ್ನು ಹೊಂದಿದ  ತೃಂಬಕೇಶ್ವರ  ದೇವಾಲಯಗಳ ಸಂಕೀರ್ಣ ‌ಶೈವ ಶೈಲಿಯ ‌ವಿರುಪಾಕ್ಷ ಗುಡಿಯಲ್ಲಿ  ಗೌರಿ ಹುಣ್ಣಿಮೆಯಂದು ಈ‌ ದೇವಾಲಯ ದಲ್ಲಿರುವ ಗೌರಿಯನ್ನು ಸ್ಥಳೀಯರು ಪೂಜಿಸುತ್ತಾರೆ.

         ಐಹೊಳೆಯ ಕೆಲವು ದೇಗುಲಗಳ ಬಳಿ‌ ಚಾಲುಕ್ಯರ ಪೂರ್ವ ಕಾಲದ ಇಟ್ಟಿಗೆಗಳ‌ ತಳಪಾಯಗಳು  ಹಾಗೂ ಮಡಿಕೆ ಕುಡಿಕೆಗಳು ಚಲ್ಲಾ ಪಿಲ್ಲಿಯಾಗಿ  ಬಿದ್ದಿದೆ. ಚಾಲುಕ್ಯರ ರಾಜ‌ಮುದ್ರೆ‌ ವರಹಾ ಶಂಖ, ಚಕ್ರ, ದರ್ಪಣವಾದರೆ ವರಾಹ ಸೂರ್ಯ ಚಂದ್ರ, ಖಡ್ಗ ವಿಜಯ ನಗರದ  ಸಾಮ್ರಾಜ್ಯದ ‌ರಾಜ ಮುದ್ರೆಗಳು  ಇಲ್ಲಿ ಸುರಕ್ಷಿತವಾಗಿವೆ. ಗುಡ್ಡದ  ಮೇಲಿನ ಹರಿವಿನಲ್ಲಿ ಕೆಲವು ಬೃಹತ್ ಶಿಲಾಗೋರಿಗಳು ಇವೆ. ಐಹೊಳೆಯಲ್ಲಿ 123 ದೇವಾಲಯಗಳಿದ್ದು ಅವನ್ನು ಪುರಾತತ್ವ ಇಲಾಖೆಯವರು 22 ವಿಭಾಗವಾಗಿ  ವಿಂಗಡಿಸಿದ್ದಾರೆ‌. ಖ್ಯಾತ ಕಲಾ ವಿಮರ್ಶಕ ಪರ್ಸಿ ಬ್ರಾನ್ ಐಹೊಳೆಯನ್ನು ದೇವಾಲಯಗಳ ತೊಟ್ಟಿಲು ಎಂದು ಬಣ್ಷಿಸಿದ್ದಾರೆ. 

          ದೇವಾಲಯದ ಗರ್ಭಗೃಹ, ಪ್ರದಕ್ಷಿಣಾ ಪಥ, ಸಭಾಮಂಟಪ, ಮುಖಮಂಟಪ ‌ ಹಾಗೂ ಛಾವಣಿಯಲ್ಲಿ ನಟರಾಜ, ತ್ರಿವಿಕ್ರಮ, ವಿಷ್ಣು ಹಾಗೂ ‌ಇತರ ಉಬ್ಬು ಶಿಲ್ಪಗಳನ್ನು ಒಳಗೊಂಡಿದೆ ಅಷ್ಟೇ ಅಲ್ಲದೆ ಕೊಂತಿ ಗುಡಿಯ  ಸಮುಚ್ಚಯ, ಹುಚ್ಚಪ್ಪಯ್ಯ ಮಠ , ಜೈನ ಗುಡಿಗಳ ಗುಂಪು ರಸಬಿಹುಡಿ, ಗಳಗನಾಥ ರಾಮ ಲಿಂಗೇಶ್ವರ ಇನ್ನೂ ಅನೇಕ ಸಮುಚ್ಚಯಗಳಿವೆ. ಬಾದಾಮಿ ಚಾಲುಕ್ಯರ ಕಾಲದ  ಮೂರ್ತಿಗಳಾದ ಮಕರ ತೋರಣ ನಾಗನಾಗಿಣಿ ಶಿಲ್ಪಗಳು , ಗಣೇಶ, ಅಂಬಿಕಾ, ಮಹಿಷಮರ್ದಿನಿ, ಕುಬೇರ ಕಾಳ ಬೈರವ  ಮೂರ್ತಿ ಗಳ ಶಿಲ್ಪ ‌ಬೆರಗು‌  ಮೂಡುಸುತ್ತದೆ. 

         ಚಾಲುಕ್ಯ ರ ಕಾಲದಲ್ಲಿ ಶಿಲ್ಪ ಕಲೆ ಹುಟ್ಟಿದ್ದು ಐಹೊಳೆಯಲ್ಲಿ , ಬೆಳವಣಿಗೆ ‌ಬಾದಾಮಿಯಲ್ಲಿ , ಪರಿಪೂರ್ಣತೆ ಯ ಹಂತ ತಲುಪಿದ್ದು ಪಟ್ಟದ ಕಲ್ಲಿನಲ್ಲಿ ಎಂಬ  ಮಾತೊಂದು  ಜನ ಜನಿತವಾಗಿದೆ.  ಜೀವನವನ್ನು ಲೆಕ್ಕಿಸದೆ ಹೊರಾಡಿದ ‌ವೀರ‌ಮರಣ ಹೊಂದಿದವರ‌ ವೀರಗಲ್ಲು , ಬಾದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿದೆ.

ಐಹೊಳೆಯ ಪ್ರಮುಖ ದೇವಾಲಯಗಳು 
      
 ಸೂರ್ಯ ನಾರಾಯಣ ‌ಗುಡಿ  = ಏಳು ಎಂಟನೆ ಶತಮಾನದಲ್ಲಿ ರಚನೆಯಾದ  ಈ ಗುಡಿಯು ಒಂದು ರೇಖಾ ನಗರ  ಶಿಖರ ವಿದ್ದು ಗರ್ಭ ಗೃಹದ ಜೊತೆಗೆ ನಾಲ್ಕು ಕಂಬಗಳ ಮುಖ ಮಂಟಪವಿದೆ. ರಂಗ‌ಮಂಟಪದಲ್ಲಿ ನಾಲ್ಕು ‌ಎತ್ತರದ  ಕಂಬಗಳು  12 ಅರೆ ಗಂಬಗಳು ಇದ್ದು ‌ಮಂಟಪದ ಗೋಡೆ ಪಕ್ಕದಲ್ಲಿ ಕಕ್ಷಾಸನಗಳಿವೆ. ಗರ್ಭ ಗೃಹದ ದ್ವಾರ ಬಂಧದ ಲಲಾಟದಲ್ಲಿ ಸರ್ಪಗಳನ್ನು ಹಿಡಿದು ಹಾರುತ್ತಿರುವ‌ ಗರುಡ ಶಿಲ್ಪವಿದೆ. 
 
         ಸೂರ್ಯ ‌ನಾರಾಯಣ ಮೂರ್ತಿ ದ್ವಿಬಾಹುಗಳಲ್ಲಿ ಕಮಲದ ಹೂವನ್ನು‌  ಹಿಡಿದ ಮಕರ ಕುಂಡಲ , ಕಾಲ್ಗಡಗ ಇತ್ಯಾದಿ ಆಭರಣ ತೊಟ್ಟ ಕಪ್ಪು ಹಸಿರು ನುಣಿಪಾದ‌ಕಲ್ಲಿನಿಂದ ಮಾಡಿರುವ  ಆಕರ್ಷಕ ಸೂರ್ಯ ನ ಮೂರ್ತಿ ಇದ್ದು ಅದಿ ಬದಿಯಲ್ಲಿ ಚೌರಿ‌ಹಿಡಿದ ಉಷಾ ಮತ್ತು ‌ಪ್ರತ್ಯಷೆಯರಿದ್ದಾರೆ. ಹಿಂಬಾಗದಲ್ಲಿ ಪ್ರಭಾವಳಿಯಿದ್ದು ಮದ್ಯದಲ್ಲಿ‌ ಮಕರ ತೋರಣವಿದೆ. ಪೀಠದಲ್ಲಿ ಸೂರ್ಯ ನ ರಥಗಾಲಿಗಳಿದ್ದು ಮುಂಬಾಗದಲ್ಲಿ ಏಳು ಕುದುರೆಗಳಿವೆ. ಶಿಲಾ ಶಿಲ್ಪಗಳ ಕೈ ಚಳಕ  ಇಲ್ಲಿ ನೋಡುವುದೇ ಒಂದು ಸೊಗಸು.

     ಲಾಡ್ ಖಾನ್ ಗುಡಿ = ಇಲ್ಲಿನ ಕಂಬವೊಂದರ‌ ಮೇಲೆ ಚಾಳುಕ್ಯ ರಾಜ ಚಿಹ್ನೆ ವರಾಹವನ್ನು ಕೆತ್ತಲಾಗಿದೆ. ಲಾಡ್ಖಾನ್ ಎಂಬ ಮುಸ್ಲಿಂ ವ್ಯಕ್ತಿ ಈ ದೇವಾಲಯದಲ್ಲಿ ವಾಸಿಸುತ್ತಿರುವುದರಿಂದ ಈ‌  ಹೆಸರು  ಬಂದಿದೆ. ಶೈವ ದೇವಾಲಯವಾಗಿದ್ದು  ಮುಖ ಮಂಟಪ‌ ಮತ್ತು  ನವರಂಗಗಳು ಎದ್ದು ಕಾಣಿಸುತ್ತದೆ. ಚಿಕ್ಕ ಗರ್ಭ ಗೃಹದ ಒಳಗಡೆ ಶಿವಲಿಂಗವಿದೆ. ಜಲದೇವತೆ, ದೇವಾಲಯದ ಸ್ತಂಭಗಳ ಮೇಲೆ ಕೆತ್ತಲಾಗಿದೆ. ಈ ಗುಡಿಯ ನವರಂಗದ ಹೊರಭಾಗದಲ್ಲಿ ಗೋಡೆಯಲ್ಲಿ 2 ಶಾಸನಗಳನ್ನು ಕೆತ್ತಲಾಗಿದೆ. ಈ ದೇವಾಲಯದ ಇನ್ನೊಂದು ವಿಶೇಷತೆ ಎಂದರೆ ಜೈನ ಮತ್ತು ಬೌದ್ಧ ಧರ್ಮದಲ್ಲಿ ಕಂಡು ಬರುವಂತೆ ಗರ್ಭಗೃಹದ ಮೇಲೊಂದು ಗರ್ಭಗೃಹ ವಿರುವುದು ವಿಶೇಷ.

      ಬಡಿಗೇರಿ ಗುಡಿ = ರೇಖಾ ನಗರದ ಶಿಖರದ ಎದುರಿನ  ಸೂರ್ಯ ನ ಮೂರ್ತಿ ಗರ್ಭಗೃಹ, ರಂಗಮಂಟಪ , ಮುಖ ಮಂಟಪವಿರುವ  ದೇವಾಲಯದಲ್ಲಿ ದಕ್ಷ ಬ್ರಹ್ಮ ನ ಪ್ರತಿಮೆ ಬಾದಾಮಿ ಚಾಳುಕ್ಯರ ಕಾಲದ ‌ಮಂದಿರವಿದೆ. ಬಡಗ  ಮನೆತನದವರು ಈ ದೇವಾಲಯದಲ್ಲಿ ವಾಸಿಸುತ್ತಿದ್ದರು ‌ಆದ್ದರಿಂದ  ಈ ಹೆಸರು ಬಂದಿದೆ .ಮುಖ ಮಂಟಪದ ಬಲ ಭಾಗದಲ್ಲಿರುವ ಸ್ತಂಭದ  ಮೇಲೆ ದಕ್ಷ‌ ಬ್ರಹ್ಮನ ಮೂರ್ತಿಯನ್ನು ಕೆತ್ತಲಾಗಿದೆ.

        ಚಕ್ರ ಗುಡಿ = 20 ಮಿಥುನ ಶಿಲ್ಪ ಗಳಿವೆ. ಪ್ರಸಿದ್ದವಾದ ಗರ್ಭ ಗೃಹದ ದ್ವಾರ ಬಂಧದಲ್ಲಿದ್ದು ಲಲಾಟದಲ್ಲಿ ಕೈಯಲ್ಲಿ ಸರ್ಪಗಳನ್ನು ಹಿಡಿದ ಗರುಡನ ಶಿಲ್ಪವಿದೆ. 

      ಅಂಬಿಗೇರಿ  ಗುಡಿ = ಈ  ಸಂಕೀರ್ಣದಲ್ಲಿ 3 ದೇವಾಲಯಗಳ ಈ ಸಂಕೀರ್ಣ ದಲ್ಲಿ ಅತೀ ದೊಡ್ಡ  ದೇವಾಲಯಕ್ಕೆ ನಾಗರ ಶಿಖರ , ರಂಗಮಂಟಪ ಎಡ‌ ಮತ್ತು ಬಲದಿಂದ 2 ಬದಿಯಲ್ಲಿ ‌ಪ್ರವೇಶದ್ವಾರಗಳಿವೆ. ಮಂಟಪದ ಒಳ ಛಾವಣಿಯಲ್ಲಿ ಅರಳಿದ ಕಮಲವನ್ನು ಕೆತ್ತಿದೆ. ಗರ್ಭ ಗೃಹದದ್ವಾರ ಹಾಗೂ ಸೂರ್ಯ ವಿಷ್ಣುವಿನ ಒಡೆದ‌ಮೂರ್ತಿಗಳು  ಇಲ್ಲಿ ಅಂಬಿಗರು ವಾಸಿಸುತ್ತಿದ್ದ ಕಾರಣ ಈ ಗುಡಿಗೆ ಅಂಬಿಗರ‌ಗುಡು ಎನ್ನುತ್ತಾರೆ. ಅನೇಕ ಅಪೂರ್ವ ಶಿಲ್ಪಗಳಿದ್ದು ಹಾಳು ಗೆಡವಿದ ಶಿಲಾ‌ ಮೂರ್ತಿಗಳಲ್ಲೂ ಇಷ್ಟೊಂದು ಜೀವಕಳೆ ಇದೆ. ಅಂದರೆ ಅದು ಸರಿಯಾಗಿರುವಾಗ ಎಷ್ಟು ಸುಂದರ ವಾಗಿತ್ತು ಊಹಿಸುವುದು ಅಸಾದ್ಯ.


   ಸೂರ್ಯ ನಾರಾಯಣ  ದೇವಾಲಯ = ಇಲ್ಲಿ ‌ಕಪ್ಪು ಹಸಿರು ನುಣುಪಾದ ಕಲ್ಲಿನಿಂದ  ಮಾಡಿರುವ  ಸೂರ್ಯ ನ ಆಕರ್ಷಕ ‌ಮೂರ್ತಿ ಇದ್ದು ಮಕರ ಕುಂಡಲ, ಕಾಲ್ಗಿಡಗ,ಪ್ರಭಾವಳಿಯಿದ್ದು  ಮಕರ ತೋರಣ ತೊಟ್ಟ ದ್ವಿಬಾಹು ಮೂರ್ತಿಯ  ಎರಡು ಬಾಹುಗಳಲ್ಲಿ ಕಮಲದ ಹೂ ಇದೆ.‌ ಮೂರ್ತಿ ಯ ಕಾಲಿನ ಹತ್ತಿರ  ಚೌರಿ‌ಹಿಡಿದ ಉಷಾ ಮತ್ತು ಪ್ರತ್ಯುಷೆಯರಿದ್ದಾರೆ.


      ದುರ್ಗದ ದೇವಾಲಯ = ದುರ್ಗ ಅಂದರೆ ದೇವರ ಅಲ್ಲ ಕೋಟೆ ಎಂದರ್ಥ. ಈ ದೇವಾಲಯವು ರಚನೆಯಲ್ಲಿ  ಕಾರ್ಲೆ ,ಭಾಜಾ‌  ಮೊದಲಾದ ಸ್ಥಳ ಗಳಲ್ಲಿರುವ  ಬೌದ್ದ‌‌  ಚೈತ್ಯಾಲಯಗಳನ್ನು ಹೋಲುತ್ತದೆ. ಗರ್ಭಗೃಹ ಗಜಪುಪ್ಪಾಕಾರ ಅಥವಾ ‌ಅರ್ಧವೃತ್ತಾಕಾರ ವಾಗಿದ್ದು. ಗರ್ಭ ಗೃಹದ ಮೇಲೆ ರೇಖಾ ನಾಗರ ಪ್ರಸಾದ ಪದ್ಧತಿಯ ಶಿಖರವಿದ್ದು ಅದರ‌ ಮೇಲ್ಬಾಗದಲ್ಲಿ  ಅಮಲದ ಮತ್ತು ಕಲಶಗಳಿಲ್ಲಿ ಆದರೆ ಚೈತನ್ಯದ ಚಿಹ್ನೆಗಳಿವೆ. ಮಹಾದ್ವಾರದ ಗೋಡೆಯ ಮೇಲೆ ‌ಎರಡು ಶಾಸನವು ಚಾಲುಕ್ಯ ಇಮ್ಮುಡಿ‌ ವಿಕ್ರಮಾದಿತ್ಯನ  ಕಾಲದಾದಗಿದೆ. ಈ ದೇವಾಲಯ ಹಿಂದೆ ಜೈನ ಬಸದಿಯಾಗಿತ್ತು ಎನ್ನುತ್ತಾರೆ ಆದರೆ  ಒಳ‌ಮಂಟಪದಲ್ಲಿ  ಶಿವ,‌ವಿಷ್ಣು ವರಹ , ಮಹಿಪಾಸುರ‌ಮರ್ದಿನಿ, ಹರಿಹರ‌ ಮೂರ್ತಿಗಳಿವೆ.ಇನ್ನೂ ‌ಇಲ್ಲಿ ನಾಯಿದರ ದೇವಾಲಯ, ಚಪ್ಪರ ದೇವಾಲಯ, ಅಂಬಿಗೇರ, ಚಿಕ್ಕಿಗುಡಿ, ಹುಚ್ಚಿಮಲ್ಲಿ ದೇವಾಲಯ ಗಳಿವೆ.

          ಬ್ರಿಟಿಷ್ ಅಧಿಕಾರಿಗಳು ಇಲ್ಲಿನ ದೇವಾಲಯದ ಸರ್ವೇಕ್ಷಣಾ ಕಾರ್ಯವನ್ನು ಮಾಡುವ  ಸಮಯದಲ್ಲಿ ಸ್ಥಳಿಯರು ಇಲ್ಲಿ ವಾಸವಾಗಿದ್ದರು ಆದ್ದರಿಂದ ಈ ಎಲ್ಲಾ‌ ಸಂಕೀರ್ಣ ‌ಸ್ಥಳಿಯರ  ಹೆಸರು ಬರಲು ಕಾರಣವಾಯಿತು. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments