ಪ್ರೀತಿ, ಜೀವನ, ಲೈಫು ಇಷ್ಟೇನೆ ವಿಷಯಗಳ ಮೇಲೆ ಸಿನಿಮಾ ಮಾಡುತಿದ್ದ ದಿಗಂತ್ ಪತ್ತೆದಾರಿಯಾಗಿ ಕ್ರೈಂ ಥ್ರಿಲ್ಲರ್ ಸಿನಿಮಾಗೆ ಕೈ ಹಾಕಿ ಕೂಲ್ ಆಂಡ್ ಕಾಮ್ ಆಗಿ ಅಭಿನಯಿಸಿದ್ದಾರೆ ಕಾರಣ ಹುಟ್ಟು ಹಬ್ಬದ ಶುಭಾಶಯಗಳು ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಪತ್ತೆದಾರಿ ಕಥೆಯಾಗಿದೆ…
ಒಟಿಟಿಯಲ್ಲಿ ಇತ್ತೀಚೆಗೆ ಈ ಬಗೆಯ ಚಿತ್ರಗಳ ಹಾವಳಿ ಜಾಸ್ತಿ ಇದ್ದು, ಕನ್ನಡದಲ್ಲೂ ನಿರ್ದೇಶಕನೊಬ್ಬ ಪ್ರೇಕ್ಷಕನನ್ನ ಸಸ್ಪೆನ್ಸ್ನಲ್ಲಿ ತೇಲಿಸಿ, ಗಟ್ಟಿ ಕಥೆಯಲ್ಲಿ ಹಿಡಿದಿಟ್ಟುಕೊಂಡು ಸಿನಿಮಾ ತೋರಿಸುವ ಸಾಹಸ ಮಾಡಿದ್ದಕ್ಕೆ ಮೊದಲಿಗೆ ಶುಭಾಶಯ ಹಾಗೂ ನಿರ್ಮಾಪಕರಿಗೆ ಶಹಬ್ಬಾಸ್ ಹೇಳಲೇಬೇಕು.
ಚಿತ್ರದ ಕಥೆ ಚಿತ್ರರಂಗಕ್ಕೆ ಹೊಸತೇನು ಅಲ್ಲದೇ ಇದ್ರೂ ಅದನ್ನ ಕಟ್ಟಿರುವ ಬಗೆ, ಐ ಮೀನ್ ಸ್ಕ್ರೀನ್ ಪ್ಲೇ ವರ್ಕ್ ನಿಜಕ್ಕೂ ಮೆಚ್ಚುವಂತದ್ದು. ಒಂದು ಕಡೆ, ಒಂದಿಷ್ಟು ಸಮಯವಷ್ಟೇ ನಡೆಯುವ ಕ್ರೈಂ ಕಥೆಯೇ ಹುಟ್ಟುಹಬ್ಬದ ಶುಭಾಶಯ ಎನ್ನಬಹುದು.
ಒಂದು ಪಾರ್ಟಿ, ಒಂದಿಷ್ಟು ಮಂದಿ, ಅದರಲ್ಲಿ ಕಲಾವಿದರಾಗಿ ಅಭಿನಯಿಸಿರುವ ಎಲ್ಲರೂ ಕೂಡ ಪ್ರಬುದ್ಧರಾಗಿಯೇ ತಮ್ಮ ತಮ್ಮ ಪಾತ್ರಗಳಿಗೆ ಸೈ ಅನಿಸಿಕೊಂಡಿದ್ದಾರೆ. ಒಂದು ಕೊಲೆ, ಅದರ ಮಧ್ಯೆ ಮುಚ್ಚಿಡುವ, ಹುಡುಕಾಡುವ ಆಟಗಳು… ಕೊಲೆ ಇಂತಹವನೇ ಮಾಡಿದ್ದಾನೆ ಅನ್ನೋದು ಪ್ರಾರಂಭದಲ್ಲೇ ತಿಳಿದಿದ್ರು ಆ ಕೊಲೆ ಯಾಕೆ ನಡೆಯುತ್ತೆ, ನಿಜವಾಗಿ ಆ ಪಾರ್ಟಿಯಲ್ಲಿ ನಡೆಯುತ್ತಿರೋದೇನು? ಇತ್ಯಾದಿಗಳೆಲ್ಲವುದರ ಹುಳ ತಲೆ ಕೆರೆಸುತ್ತದೆ.
ಚಿತ್ರಕ್ಕೆ ಬೇಕಾದಂತೆ ಹಾಸ್ಯ ಚಟಾಕಿಗಳು ಇವೆ ಕಾಮಿಡಿ ಕಿಲಾಡಿಗಳಲ್ಲಿರುವ ಕೆಲವು ಪಾತ್ರವರ್ಗ ಇಲ್ಲಿ ಮೇಳೈಸಿವೆ. ಮಡೆನೂರು ಮನು ಹೆಚ್ಚು ಗಮನ ಸೆಳೆಯುತ್ತಾರೆ. ಒಮ್ಮೊಮ್ಮೆ ನಗಿಸುವ ಸನ್ನಿವೇಶ ಇದ್ದರೂ ಒತ್ತಡದ ಸನ್ನಿವೇಶಗಳು ಅದನ್ನ ಮುಚ್ಚಿಹಾಕುತ್ತವೆ.
ಚಿತ್ರದಲ್ಲಿ ಡೈಲಾಗ್ಸ್ಗಳು ಒಂಥರಾ ತತ್ವಾದರ್ಶತೆಯ ಮಾದರಿಯನ್ನ ತೋರಿಸುತ್ತವೆ. ಜೀವನದ ಸತ್ಯಾ ಸತ್ಯತೆಯ ಒಳ್ಳೆಯ ಸಾಲುಗಳ ಡೈಲಾಗ್ಸ್ನಲ್ಲಿ ದಿಗಂತ್ ಇಷ್ಟ ಆಗುತ್ತಾರೆ.
ಇಂತಹ ಚಿತ್ರಗಳ ಸರಣಿ ಇತ್ತೀಚೆಗೆ ಹೆಚ್ಚಾಗಿ ಕನ್ನಡ ನೆಲದಲ್ಲಿ ಕಂಡು ಬಂದ್ರು, ಈ ಬಗೆಯ ಚಿತ್ರಗಳಿಗೆ ಗೆಲುವು ಬೇರೆಯ ಭಾಷೆಯಲ್ಲಿಯೇ ಜಾಸ್ತಿ ಸಿಗುತ್ತದೆ ಅನಿಸುತ್ತಿದೆ. ದಿಗಂತ್ ದೂದ್ ಪೇಡಾ ಕ್ಯಾರೆಕ್ಟರ್ ನಿಂದ ಹೊರ ಬಂದು ಪಕ್ಕಾ ಕ್ರಿಮಿನಲ್ ಆಗಿ ಅಭಿನಯಿಸಿದ್ದು ಇಷ್ಟವಾಗುತ್ತೆ.
ನಿಮಗೆನಾದ್ರು ಕ್ರೈಂ ಥ್ರಿಲ್ಲರ್ ಸಿನಿಮಾ ಇಷ್ಟ ಆಗೋದಾದ್ರೆ ಈ ಸಿನಿಮಾವನ್ನ ಕಣ್ಣು ಮುಚ್ಚಿಕೊಂಡು ನೋಡಬಹುದು. ಮಾಸ್ ಪ್ರೇಕ್ಷಕನಾಗಿದ್ರೆ ಅಷ್ಟು ಇಷ್ಟವಾಗದೆ ಇರಬಹುದು. ಒಟ್ಟಿನಲ್ಲಿ ಒಮ್ಮೆ ನೋಡಿ ಮಜ ಅನುಭವಿಸೋಕೆ ಯಾವ ಬೇಸರವೂ ಇಲ್ಲ. ಚಿತ್ರದ ಇಡೀ ತಂಡದ ಎಲ್ಲರೂ ತಮ್ಮ ಪಾಲಿನ ಕೆಲಸವನ್ನ ನೀಟಾಗಿಯೇ ಮಾಡಿದ್ದಾರೆ ಎನ್ನಬಹುದು.