Tuesday, May 17, 2022
HomeKannada Articleಮಹಾಲಕ್ಷ್ಮಿ ಅಂಬಾಬಾಯಿಗೆ  ಕಿರಣೋತ್ಸವ : Heggaddesamachar

ಮಹಾಲಕ್ಷ್ಮಿ ಅಂಬಾಬಾಯಿಗೆ  ಕಿರಣೋತ್ಸವ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 


           ಭಾರತ ಪುಣ್ಯ ಕ್ಷೇತ್ರಗಳ ಬೀಡು. ಸಂಪತ್ತು, ಐಶ್ವರ್ಯ, ಆರೋಗ್ಯ, ಆಯಸ್ಸು, ಸಂತಾನ ಭಾಗ್ಯಗಳ ಅಧಿದೇವತೆಯೆನಿಸಿದ‌ ಕೊಲ್ಲಾಪುರದ ಮಹಾಲಕ್ಷ್ಮೀ ಮಹಾರಾಷ್ಟ್ರದ ಶಕ್ತಿ ಪೀಠಗಳಲ್ಲಿ ‌ವಿಶೇಷ ಧಾರ್ಮಿಕ ಪ್ರಾಮುಖ್ಯತೆಯನ್ನು‌ ಪಡೆದ ಕರವೀರ‌ಪುರ ನಿವಾಸಿನಿ ಮಹಾಲಕ್ಷ್ಮಿಯ ಕ್ಷೇತ್ರದಲ್ಲಿ ಪ್ರತಿ ವರ್ಷ ಸೂರ್ಯಕಿರಣ ನೇರವಾಗಿ ಮಹಾಲಕ್ಷ್ಮಿಯ ವಿಗ್ರಹವನ್ನು ‌ಸ್ಪರ್ಶಿಸುತ್ತದೆ.
     
         ಕನ್ನಡ-ಮರಾಠಿ ಸಾಮರಸ್ಯ ನೆಲೆಹೊಂದಿದ್ದ ಕೊಲ್ಲಾಪುರ ಮಹಾಲಕ್ಷೀ‌ ದೇವಾಲಯಕ್ಕೆ ಕರ್ನಾಟಕದ ಉದ್ದಗಲಕ್ಕೂ‌ ಭಕ್ತರಿದ್ದಾರೆ. ಮಹಾರಾಷ್ಟ್ರದ ಎಷ್ಟೋ ದೇಗುಲಗಳು ಕನ್ನಡಿಗರ ಕುಲದೈವವು ಹೌದು.ದಟ್ಟಕಲ್ಲು‌ ಬಂಡೆಯಿಂದ ಆವೃತ್ತವಾದ‌ ನಿಸರ್ಗದ  ಸುಂದರ ‌ರಮಣೀಯ  ಕ್ಷೇತ್ರ ಕೊಲ್ಲಾಪುರ. ದಿನವೂ‌ ಸಾವಿರಾರು ಭಕ್ತಾದಿಗಳು‌ ವಿವಿಧ‌ ಭಾಗಗಳಿಂದ ಆಗಮಿಸುತ್ತಾರೆ. ಇಲ್ಲಿನ ಮಹಾಲಕ್ಷ್ಮಿಯ ಮೂರ್ತಿ ಸ್ವಯಂಭೂ ವಿಗ್ರಹ ಕಪ್ಪು ಶಿಲೆಯಲ್ಲಿ‌ ನಿರ್ಮಿತವಾಗಿದ್ದು ಮೂರು‌ ಅಡಿ  ಎತ್ತರದ ಪುರಾತನ ಚತುರ್ಭುಜ ಮೂರ್ತಿ ವಿವಿಧ‌ ಅಲಂಕಾರಗಳಿಂದ ಶೋಭಿಸುತ್ತಿದ್ದು ಗರ್ಭಗುಡಿಗೆ‌  ಚಿನ್ನದ ತೋರಣವಿದೆ.

        ಕೊಲ್ಲಾಪುರದ ಮಹಾಲಕ್ಷ್ಮಿಗೆ ಸೂರ್ಯ ಕಿರಣ್ಯೋತ್ಸವ ‌ನಡೆಯುವಾಗ  ದೂರ ದೂರದಿಂದ ಭಕ್ತರ ದಂಡು  ಕೊಲ್ಲಾಪುರಕ್ಕೆ ಆಗಮಿಸುತ್ತಾರೆ. ಹತ್ತು ಹಲವು ಕಾರಣದಿಂದ  ಕೊಲ್ಲಾಪುರದಲ್ಲಿ ಸಂಭ್ರಮದಿಂದ ನಡೆವ  ಕಿರಣೋತ್ಸವದ ದಿನ ಸೂರ್ಯ ರಶ್ಮಿಯಲ್ಲಿ ದೇದೀಪ್ಯಮಾನವಾಗಿರುವ ದೇವಿಯ ದರ್ಶನದಿಂದ ಸಕಲ ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುತ್ತಾರೆ. ಸೂರ್ಯ ದೇವರು ಕೊಲ್ಲಾಪುರವಾಸಿ‌ ಮಹಾಲಕ್ಷ್ಮಿಯ ಸೂರ್ಯ ರಶ್ಮಿ ಮಹಾದ್ವಾರದ ಕಮಾನಿನ ಮೇಲೆ ಬೀಳುತ್ತಲೇ ನೆರೆದ ಭಕ್ತರ ಹಷೋದ್ದಾರ ಮುಗಿಲು ಮುಟ್ಟುತ್ತದೆ. ಮೆಲ್ಲ ಮೆಲ್ಲನೆ  ಸೂರ್ಯನ ಪ್ರಖರಕಿರಣ ಗರುಡ ಮಂಟಪವನ್ನು  ಪ್ರವೇಶಿಸುತ್ತಲೇ ಗಣಪತಿ ಚೌಕವನ್ನು ತನ್ನ ಹೊಂಗಿರಣಗಳಿಂದ  ಮುತ್ತಿಕ್ಕುತ್ತದೆ. ಹಿತ್ತಾಳೆಯ ಮೆಟ್ಟಿಲು ದಾಟಿ ಗರ್ಭ ಗುಡಿಯ ಬೆಳ್ಳಿಯ ಮೆಟ್ಟಿಲು ಗಳಲ್ಲಿ ನಾಟ್ಯವಾಡಿದಂತೆ  ಗೋಚರಿಸುವ ಸೂರ್ಯ ಬಳಿಕ ದೇವಿಯ ಪಾದವನ್ನು ತಲುಪುತ್ತಾನೆ. ಆಗ ದೇವಾಲಯದ ಎಲ್ಲಾ ದೀಪಗಳನ್ನು ನಂದಿಸಿ ಸಂಜೆಯ ಕತ್ತಲಿನಲ್ಲಿ ದೇವಿಯ ಪಾದಸ್ಪರ್ಶಿಸುವ ಸೂರ್ಯನ ಹೊಂಬೆಳಕನ್ನು ಭಕ್ತರಿಗೆ ನೋಡಿ ಕಣ್ಣು ತುಂಬಿಸಿ‌ಕೊಳ್ಳಲು ಅನುವು‌ಮಾಡಲಾಗುತ್ತದೆ. ದೇವಿಯ ಪಾದ‌ಸ್ಪರ್ಶ ಮಾಡುವ ಸೂರ್ಯ ‌ದೇವರ‌ ಬೆಳಕನ್ನು ನೋಡಿದವರಿಗೆ  ದೂರದ ಪ್ರಯಾಣದ  ಭಾಗ್ಯದೊರೆಯುತ್ತದೆ ಎಂಬ ನಂಬಿಕೆ ಇದೆ.

        ‌ ‌ ‌ಈ ಬೆಳಕಿನಾಟದ ವೈಭವ ಭವ್ಯ ಮೂರ್ತಿಯ ಮೇಲೆ  ಮರುದಿನ ಬೆಳಕು ನಿಧಾನವಾಗಿ ಮೇಲೆ ಮೇಲೆ ಎರುತ್ತಾ ಸೂರ್ಯನ ಕಿರಣ ವಿಗ್ರಹದ ಹೊಟ್ಟೆಯೆರಿ  ತಾಯಿ ಮಹಾಲಕ್ಷೀಯ ಎದೆಯ ಭಾಗದಲ್ಲಿ ಪ್ರಕಾಶಿಸುವುದನ್ನು ನೋಡುವುದೇ  ಸೊಗಸು. ದೇವಿಯ ಎದೆಯ ಮೇಲೆ ಬೀಳುವ‌ ಸೂರ್ಯನ ಬೆಳಕು‌ ನೋಡಿದವರಿಗೆ ಪುತ್ರ ಪ್ರಾಪ್ತಿಯಾಗುತ್ತದೆ ಅನ್ನಲಾಗುತ್ತದೆ. ಅದರ ಮರುದಿನ ಸೂರ್ಯ ರಶ್ಮಿ ಕುತ್ತಿಗೆ ಮತ್ತು ಮುಖವನ್ನು ಪ್ರಜ್ವಲಿಸುತ್ತಾ ದೇವಿಯ ಮುಖ ಸೂರ್ಯ ರಶ್ಮಿಯಿಂದ ಕಂಗೊಳಿಸಿದಾಗ ಭಕ್ತರು ಮಹಾಲಕ್ಷ್ಮಿಗೆ‌ ಜಯ‌ಕಾರ‌ ಹಾಕಿ ಭಕ್ತಿಯಿಂದ ಕೈ ಮುಗಿದು ಪಾವನಗೊಳ್ಳುತ್ತಾರೆ. ಗುಡಿಯೊಳಗೆ ದೀಪ ಹೊತ್ತಿಸಿ ದೇವರಿಗೆ ನೈವೇದ್ಯ ಪೂಜೆ, ‌ಆರತಿ  ಬೆಳಗಲಾಗುತ್ತದೆ‌.

           ಈ ಕಿರಣೋತ್ಸವ‌ ಪ್ರತಿ ವರ್ಷ ನಿರ್ಧಾರಿತ ದಿನದಂದೆ ನಡೆಯುತ್ತದೆ. ‌ಈ ವರ್ಷ ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಸೂರ್ಯ ರಶ್ಮಿ ಮಹಾಲಕ್ಷ್ಮಿ ಅಂಬಾದೇವಿ ವಿಗ್ರಹ ಸ್ಪರ್ಶಿಸಲಿದೆ. ಹಾಗೆ ನವೆಂಬರ್ ತಿಂಗಳಲ್ಲಿ ಕೂಡ ವಿಗ್ರಹದ ಮೇಲೆ ಸೂರ್ಯನ ಬೆಳಕು‌ಬೀಳಲಿದೆ‌. ಮೂರು ದಿನ  ಬೀಳುವ ಸೂರ್ಯ ರಶ್ಮಿಯ ಹಬ್ಬದ ನೋಟವ ಸವಿಯುವ ಭಕ್ತರು ‌ಪುಳಕಗೊಳ್ಳುತ್ತಾರೆ.
 
          ದೇವಿಯ  ಕಿರೀಟದ ‌ಮೇಲೆ ‌ಶಿವಲಿಂಗ‌ ಮತ್ತು  ಹಾವಿನ ಹೆಡೆಗಳನ್ನು ಕಾಣಬಹುದು. ಎತ್ತರದ ‌ಹಾಗೂ‌ ಸುಂದರ ಗೋಪುರಗಳಿಂದ ಅವೃತಗೊಂಡ  ಮಂದಿರದ ಹೊರ ಆವರಣದಲ್ಲಿ, ನವಗೃಹ , ತುಳಜಾ ಭವಾನಿ  ಮಹಾ ಸರಸ್ವತಿ ‌ಹಾಗೂ ಮಹಿಷಾಸುರ ಮರ್ದಿನಿ ದೇವಾಲಯ ವಿರುವುದು ಇಲ್ಲಿನ ‌ವಿಶೇಷ.
          
         ಇದು ನಿತ್ಯೋತ್ಸವ ಕ್ಷೇತ್ರವಾದರು ಶರನ್ನವರಾತ್ರಿ‌ ಹಾಗೂ ಶ್ರಾವಣದಲ್ಲಿ‌ ವಿಶೇಷ ಪೂಜೆ ನಡೆಯುತ್ತದೆ. ‌ಅಂಬಾಬಾಯಿ ಮೂರು ಅಡಿ ಎತ್ತರದ ‌ಕಗ್ಗಲ್ಲಿನ  ವಿಗ್ರಹದ ರೂಪದಲ್ಲಿ ಸಿಂಗಾಸನದ ಮೇಲೆ ವಿರಾಜಮಾನವಾಗಿ ದ್ದಾಳೆ. ಚತುರ್ಭುಜಸಹಿತಳಾದ ದೇವಿಯ ಕೆಳಗಿನ ಬಲಕೈಯಲ್ಲಿ‌ ಲಿಂಬೆ ಹಣ್ಣು ಮೇಲಿನ ‌ಬಲಗೈಯಲ್ಲಿ ಗದೆ ಹಿಡಿದ‌ಬಂಗಿ, ಮೇಲಿನ ಎಡಗೈಯಲ್ಲಿ ಖೇತಕ ಎಂಬ ಗುರಾಣಿ ಮತ್ತು ಕೆಳಗಿನ ಎಡಗೈಯಲ್ಲಿ ಫಲಪಾತ್ರೆ‌ ಹಿಡಿದ್ದಿದ್ದಾಳೆ. ದೇವಿಯು 40 ಕೆ.ಜಿ ತೂಗುವ ರತ್ನ ಖಚಿತ ಬಂಗಾರದ ಕಿರೀಟ ಧರಿಸಿದ್ದು. ಭಾರತದ ಹೆಚ್ಚಿನೆಲ್ಲಾ ದೇವಾಲಯಗಳ ಮೂರ್ತಿ ಉತ್ತರ ಅಥವಾ ಪೂರ್ವಾಭಿಮುಖವಾಗಿ ‌ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಕೊಲ್ಲಾಪುರದ ಮಹಾಲಕ್ಷ್ಮಿ ಪಶ್ಚಿಮಾಭಿಮುಖವಾಗಿ ಕುಳಿತಿದ್ದಾಳೆ.

          ಅನುದಿನವೂ‌ ಮಹಾಲಕ್ಷೀ ನಾನಾ ಅಲಂಕಾರಗಳಿಂದ ಕಂಗೊಳಿಸಿ ರತ್ನಖಚಿತ ಕಿರೀಟ, ವಿವಿಧ ಆಭರಣಗಳಿಂದ ಸರ್ವಾಲಂಕಾರ‌ ಭೂಷಿತೆ, ಶಕ್ತಿ ಸ್ವರೂಪಿಣಿಯನ್ನು‌ ನೋಡುವ ಕಣ್ಣುಗಳಿಗೆ ಹಬ್ಬವೇ ಸರಿ. ಭಕ್ತ ಜನರ ಮನೋರಥ ಈಡೇರಿಸುತ್ತಾ‌ ವಿರಾಜಿಸುತ್ತಿರುವ ಮಹಾಲಕ್ಷ್ಮಿಯ ಈ ಕ್ಷೇತ್ರವೂ ಪೌರಾಣಿಕವಾಗಿಯು, ಐತಿಹಾಸಿಕವಾಗಿಯೂ, ಶ್ರೇಷ್ಠ ಸ್ಥಾನ ಪಡೆದಿದೆ. ಆಧುನಿಕ ‌ಪರಿಷ್ಕಾರಗಳ ಯಾವ ಗಲಭೆಯು ಸೋಂಕದ ಪ್ರಶಾಂತವೂ, ಪ್ರಕೃತಿಯ ರಮಣಿಯ ವಾತಾವರಣದಲ್ಲಿ ಶಕ್ತಿ ಸ್ವರೂಪಿಣಿಯನ್ನು  ಯಾವ ರೂಪದಲ್ಲಿ ಭಜಿಸಿದರೂ  ಇಚ್ಚೆಯು ಕೈಗೂಡುವುದು ಎಂಬ ಅಚಲ‌ ನಂಬಿಕೆ ಭಕ್ತರಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments