Thursday, September 21, 2023
HomeKannada Articleಕುಂದಾಪುರದ ಕಂಪು : Heggaddesamachar

ಕುಂದಾಪುರದ ಕಂಪು : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

       ಕಡಲತಡಿಯಿಂದ ಗಿರಿಯ ತುದಿಯವರೆಗೆ ಹಬ್ಬಿರುವ ನಮ್ಮ ಕುಂದಾಪುರದ ಕಂಪಿಗೆ, ಇಲ್ಲಿನ ಪ್ರಕೃತಿಯ ವೈಚಿತ್ರ್ಯಕ್ಕೆ ಮನ ಸೋಲಲೆಬೇಕು. ಹಸಿರುಕಾನನ, ಧುಮ್ಮಿಕ್ಕುವ ಜಲಪಾತಗಳು, ವರಾಹಿ, ಸೌಪರ್ಣಿಕಾ, ಚಕ್ರಾ, ಕುಜ್ಜ, ಕೀಟಕಿ ಎಂಬ ಪಂಚನದಿಗಳ ಸಂಗಮದ ಊರು. ಸಪ್ತ‌ಕ್ಷೇತ್ರಗಳಾದ ಕೋಟೇಶ್ವರ, ಕೊಲ್ಲುರು, ಶಂಕರ ನಾರಾಯಣ, ಆನೆಗುಡ್ಡೆ ಗಣಪನ ಅನುಗ್ರಹದ  ಧಾರ್ಮಿಕ ಭಕ್ತಿಯ ಕೇಂದ್ರ. ಪಂಚ ಶಂಕರನಾರಾಯಣ ಕ್ಷೇತ್ರವಿ ಕುಂದಾಪುರ. ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ ತೀರ್ಥ ಕ್ಷೇತ್ರದರ್ಶನವೊ ಚಾರಣವೊ  ಇನ್ನೊಂದೊ ಮತ್ತೊಂದೊ ಒಟ್ಟಿನಲ್ಲಿ  ಎಲ್ಲವೂ ಸಮೃದ್ಧ. ಪ್ರಕೃತಿ  ರಮಣೀಯ ಸೌಂದರ್ಯ ದಿಂದ ಕಂಗೋಳಿಸುವ ‌ನಯನ ‌ಮನೋಹರ  ಮರವಂತೆ,  ಗಂಗೋಳ್ಳಿ‌ ಸಮುದ್ರ ‌ತೀರಗಳು  ಚಾರಣ ‌ಪ್ರೀಯರ  ಸ್ವರ್ಗ  ಎನ್ನಬಹುದಾದ  ಪಶ್ಚಿಮ ಘಟ್ಟದ  ಗಿರಿ ಶಿಖರಗಳು.
      
    ಕುಂದವರ್ಮನೆಂಬ ಅರಸ ಪಂಚಗಂಗಾವಳಿಯ ಹತ್ತಿರ ಕುಂದೇಶ್ವರ ದೇವಾಲಯವನ್ನು ಕಟ್ಟಿಸಿದ್ದು ಅದರಿಂದಾಗಿ ಕುಂದಾಪುರವೆಂದು ಹೆಸರು ಬಂತು ಎನ್ನಲಾಗುವ ಪರಂಪರೆಯನ್ನು ಮೈಗೂಡಿಸಿಕೊಂಡ ದೇವಸ್ಥಾನ, ದೈವಸ್ಥಾನಗಳ ನೆಲೆ ಬೀಡು. ಕಡಲು ನದಿಗಳ ಸುಂದರ ಸಂಗಮ, ಆಕಾಶಕ್ಕೆ ಸಡ್ಡು ಹೊಡೆದು ನಿಂತ ಗುಡ್ಡ ಬೆಟ್ಟಗಳಿಂದ ಆವೃತವಾದ ನಯನ ಮನೋಹರ ಪಶ್ಚಿಮ ಘಟ್ಟಗಳ ದಟ್ಟ ಹಸಿರ ನಿಸರ್ಗದ ಮಡಿಲಲ್ಲಿ ಜಲಧಾರೆಯಾಗಿ ಹರಿವ ನದಿ ತೊರೆಗಳ‌ ಊರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನರ್ಘ ರತ್ನಗಳನ್ನು  ‌ನೀಡಿದ ವಿಶಿಷ್ಟತೆಯ ತವರು ಕುಂದಾಪುರ. ನಾಟಕ, ಯಕ್ಷಗಾನ, ಸಾಹಿತ್ಯ, ಶಿಕ್ಷಣ, ಹೀಗೆ ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಕಂಗೊಳಿಸುವ ಕುಂದಾಪುರದ ಆಡು ಭಾಷೆ ‌ಕುಂದಾಪ್ರ‌ ಕನ್ನಡ.


         
    ಋತುಮಾನದೊಂದಿಗೆ ಬೆಸೆದು ಕೊಂಡಿರುವ ಇಲ್ಲಿನ  ಜನರ  ಬದುಕಿನ  ಚಿತ್ರಣಕ್ಕೆ ಬಣ್ಣ  ಬಳಿದಂತೆ ಪ್ರತಿ ತಿಂಗಳಲ್ಲೂ ವಿಭಿನ್ನ ಶೈಲಿಯಲ್ಲಿ ‌ವಿಶಿಷ್ಟ ಆಚರಣೆಯ ‌ವಿಶೇಷವಿದೆ. ಅದು ಗಿಜಿ ಗಿಜಿ ಗುಡುಗುವ ಮಳೆಗಾಲವಿರಲಿ  ಬಿರು ಬಿಸಿಲಿನ  ಬೇಸಿಗೆ ಇರಲಿ ಹೆಜ್ಜೆ ಹೆಜ್ಜೆ ಯಲ್ಲೂ ಪ್ರತಿ ಆಚರಣೆಯಲ್ಲಿ ಆಸ್ವಾದಿಸುವಂತ  ವಿಶಿಷ್ಟತೆ ಇದೆ. ಸಮರ್ಪಣ ಭಾವದಿಂದ ಆಚರಿಸಲ್ಪಡುವ ಹಗ್ಗಿನ ತಿಂಗಳ ಹೊಸ ವರ್ಷದ ಆಚರಣೆ, ಬ್ಯಾಸಿಯಲ್ಲಿ  ದೈವಗಳಿಗೆ  ಹರಕೆ  ನೀಡುವ  ಜಕಣಿ ಆಚರಣೆಯ  ವೈಶಿಷ್ಟ್ಯ ಗಳಲ್ಲಿ ಕುಂದಾಪುರದ ಜನರು ಸತ್ತ ಕುಟುಂಬಸ್ತರಿಗಾಗಿ ಭೂತದ ಕಲ್ಲು, ಗಡಿಕಲ್ಲು, ನಿರ್ದಿಷ್ಟ ಮರದ ಬುಡದಲ್ಲಿ  ಚರು ಹಾಕಿ, ತೆಂಗಿನಕಾಯಿಯ ಒಡೆದು ಕಾಡು ಹೂಯಿಟ್ಟು ನೆಣೆಕೊಲಿನ ದೀಪ ‌ಇಟ್ಟು ಕೋಳಿ ಕಾಲು‌ತೊಳೆದು ‌ಕೊಳಿಕೋಯ್ಯದು ಪ್ರಾರ್ಥನೆ ಮಾಡಿ ನಂತರ ಕೋಳಿ ಪದಾರ್ಥ, ಹಲಸಿನ ಹಣ್ಣಿನ ಹಿಟ್ಟು ಮಾಡಿ  ವೀಸಲು ಇಟ್ಟು ಮನೆಯವರೆಲ್ಲ ಒಟ್ಟಿಗೆ  ಊಟ ಮಾಡುವ ಒಗ್ಗಟ್ಟಿನ ಪ್ರತಿಕವೊ ಎಂಬಂತ  ಆಚರಣೆ ಜಕಣಿ. 


    
      ಕಾರ್ ತಿಂಗಳಲ್ಲಿ ಗದ್ದೆಗಳಲ್ಲಿ ನೆಟ್ಟಿ ಪ್ರಾರಂಭವಾದ ‌ಮೊದಲ ದಿನದ ನಟ್ಟಿಯನ್ನು ಗಣಪತಿ ನಟ್ಟಿಯಿಂದ  ಪ್ರಾರಂಬಿಸುತ್ತಾರೆ. ಆಷಾಡ ತಿಂಗಳಲ್ಲಿ ಆಸಾಡಿ ಹಬ್ಬ ಈ ಮಾಸದಲ್ಲಿ  ಜಡಿಮಳೆ  ಯಾವುದೇ ಶುಭಕಾರ್ಯಗಳಿಲ್ಲದೆ  ಜನರು ತಿನಿಸುಗಳಿಗೆ  ಹಾರೈಸುತ್ತಿದ್ದ ‌ಕಾಲದಲ್ಲಿ  ದೊಡ್ಡ ಒಡೆಯರು ಸತ್ತಿದ್ದರೆ  ಹಿಟ್ಟನ್ನಾದರೂ  ತಿನ್ನ  ಬಹುದಿತ್ತು ಎಂದು  ಕೆಲಸದವರು ‌ಮಾತಾಡಿಕೊಳ್ಳುತ್ತಿದ್ದನ್ನು   ಕೇಳಿಸಿಕೊಂಡ  ಮನೆಯ  ಯಜಮಾನ  ಆಸಾಡಿ  ತಿಂಗಳಲ್ಲಿ ಗದ್ದೆ ಬೇಸಾಯಕ್ಕೆ  ರಜೆಕೊಟ್ಟು ಆಸಾಡಿ ಹಬ್ಬದ  ಆಚರಣೆಯಲ್ಲಿ ಹಿಟ್ಟು,ತೆಂಗಿನ ‌ಕಾಯಿಹಾಲು ತೊವೆ, ಕೋಳಿ,  ಮೀನು ಊಟವನ್ನು ಮಾಡುವ  ಆಚರಣೆ ನಾಂದಿ ಹಾಕಿದರು ಎನ್ನುವ  ಪ್ರತೀತಿ.

      ಸೋಣೆ ತಿಂಗಳಲ್ಲಿ  ಸೋಣೆ ಆರತಿ , ಹೊಸ್ತಿಲು  ಪೂಜೆ, ಕನ್ನಿ ತಿಂಗಳಲ್ಲಿ ಹೊಸ್ತು  ಅಥವಾ ಕದಿರು  ಕಟ್ಟುವ  ಹಬ್ಬ. ಕೇಲಿಗೆ  ಅಕ್ಕಿ  ಹಾಕುವುದು  ಅಂದರೆ ಮೊದಲ  ಬಾರಿಗೆ ಹೊಸ ಅಕ್ಕಿಯನ್ನು ಪಾತ್ರೆಯಲ್ಲಿ ಹಾಕುವುದು  ತುಲಾ ಸಂಕ್ರಮಣದಂದು. ದಿವಾಳಿಯಲ್ಲಿ  ದೀಪಾವಳಿ ಕೊಡಿತಿಂಗಳಲ್ಲಿ  ಕೊಡಿ ಹಬ್ಬ. ಹಂಚೈಸಿಯಲ್ಲಿ ಷಷ್ಠಿ ಭಾರತ್ ತಿಂಗಳಲ್ಲಿ ದೇವಾಲಯ ವರ್ಷ ವದಿ ಹಬ್ಬ. ಶಿವರಾತ್ರಿಯಲ್ಲಿ ಹಣಬಿನ ಹಬ್ಬ ಕೋಲ ಪಾಣರಾಟ  ಹೀಗೆ  ಕುಂದನಾಡಿನಲ್ಲಿ ಪ್ರತಿ ತಿಂಗಳು ಒಂದೊಂದು ಹಬ್ಬ.

         ಕುಂದ ನಾಡಿನ ‌ಮಣ್ಣಿನಲ್ಲಿ  ವಿಶಿಷ್ಟ ಕಂಪಿದೆ ಇಲ್ಲಿ ‌ಕೆಲವು  ವಿಚಿತ್ರ ವಿಜ್ಞಾನಕ್ಕು ‌ನಿಲುಕದ  ಅಚ್ಚರಿಗಳಿವೆ ಒಂದು ‌ಕಡೆ ಶಾಂತವಾಗಿ ‌ಹರಿವ  ನದಿ ಇನ್ನೊಂದು ‌ಕಡೆ ಸಮುದ್ರ ರಾಜನ  ಆರ್ಭಟ ಮಧ್ಯದಲ್ಲಿ ಕಾಂಕ್ರೀಟ್ ರಸ್ತೆ.  ದ್ವೀಪಗಳ ತೊಟ್ಟಲು  ಹಸಿರಿನ‌ಮಡಿಲಲ್ಲಿ ನೆಲೆಸಿರುವ  ಪ್ರಾಕೃತಿಕ ಸೌಂದರ್ಯ ವರ್ಣಿಸಲಸದಳ ಸಾಂಸ್ಕೃತಿಕ ‌ಕಲೆಯ ತವರು ಈ ಕುಂದನಾಡು.ಕುಂದಾಪ್ರ ಕನ್ನಡ ಭಾಷಿ ಅಲ್ಲ ಬದ್ಕ್ ಎಂಬ ಘೋಷವಾಕ್ಯವೆ ಇಲ್ಲಿನ ಜನರ ಭಾಷಾ ಪ್ರೀತಿಯನ್ನು ತೋರುತ್ತದೆ. ಭಾಷಾ ಕಂಪನ್ನು ಪಸರಿಸುವ‌ ನಿಟ್ಟಿನಲ್ಲಿ ಹೊಸ ತಲೆಮಾರಿಗೂ ಇದರ ಸವಿಯ ಉಳಿಸಲು ಭಾಷೆಗೆ ಕುಂದು ಬರದೆ ಹಬ್ಬಲಿ ಎಂಬ ಮನೋಭಾವದೊಂದಿಗೆ ವಿಶ್ವಕುಂದಾಪ್ರ ಕನ್ನಡ ಆಚರಣೆ ಕುಂದ ಕನ್ನಡಿಗರಿಂದ ಆಯೋಜಿಸಲ್ಪಡುತ್ತಿದೆ. ಪಶ್ಚಿಮಕ್ಕೆ ಕಲ್ಯಾಣಪುರ  ಹೊಳೆ  ದಕ್ಷಿಣಕ್ಕೆ ಹೆಬ್ರಿ , ಉತ್ತರಕ್ಕೆ ಬ್ಯೆಂದೂರು ಶಿರೂರಿನಿಂದ  ಮಾಬುಕಳ ಹೊಳೆಯವರೆಗೆ ಮೂಡಣ ಪರ್ವತ ಹಾಗೂ ಪಡುವಣ ಕಡಲತಡಿಯವರೆಗಿನ ಊರುಗಳಲ್ಲಿ  ಕುಂದಾಪ್ರ ಕನ್ನಡ ,ಕುಂದಗನ್ನಡ ಎಂದೆಲ್ಲಾ ಕರೆವ ಸೊಗಸಿನ ಭಾಷೆ ಮಾತಾಡುತ್ತಾರೆ. ಇದು ಉಪಭಾಷೆಯಾದರು ಭಾಷಾ ಶ್ರೀಮಂತಿಕೆ ಅಗಾಧವಾಗಿದೆ.
         
     ಭಾಷಾ ಸೌಂದರ್ಯ = ಕುಂದಾಪ್ರ ಕನ್ನಡ ಭಾಷಾ ಸೌಂದರ್ಯ ಅಗೆದಷ್ಟು, ಬಗೆದಷ್ಟು ಮೊಳಗುತ್ತದೆ. ಗ್ರಾಮೀಣ ಜನರು ತಮ್ಮ ಜೀವನ ಅನುಭವದಿಂದ ಕಂಡ ವಿಚಾರಗಳಲ್ಲಿ “ಕಡಿಯಕ್ಕಿ ಕೂಳ್ ಚಂದೊ,‌ಕಡದ‌್ ಮಜ್ಜಿಗಿ ಚಂದೊ , ಕಡಲಂಗ್ ಬಪ್ಪ ತೆರೆ ಚಂದೊ ನಮ್ಮ ಮಂದರ್ತಿ ತೇರ್  ಬಪ್ಪುದ್ ‌ಕಾಂಬುದ್   ‌ಚಂದೊ ಇಂತಹ ಅನೇಕ ಹಾಡುಗಳು, ಭತ್ತ ಕುಟ್ಟುವ, ತೊಟ್ಟಿಲು ತೂಗುವ ಹಾಡು,‌ಶೋಭಾನೆ ಹಾಡುಗಳು,ಗಾದೆಗಳು ಎಲ್ಲದರಲ್ಲೂ ಬರುವ ಒಂದೊಂದು ಶಬ್ದಗಳು ತಳಿರು ತೋರಣ ಕಟ್ಟಿ ಶೃಂಗರಿಸಿದಂತೆ. ಬಾಯಿಯಿಂದ ಬಾಯಿಗೆ ಹರಿದಾಡಿ  ಅಳಿಯದ ಮೌಕಿಕ ಭಾಷೆ ಇದು. ಭಾಷೆ ಉಳಿಯ ಬೇಕಾದರೆ  ಅದು ಮೊದಲು ಮನೆ ಮನೆಯಲ್ಲಿ ‌ಮೊಳಗಬೇಕು .
           
        ಭಾಷಾ ಶ್ರೀಮಂತಿಕೆ = ಕುಂದಾಪ್ರ ಕನ್ನಡದ ಶ್ರೀ ಮಂತಿಕೆಯ  ಅಗಾಧತೆ ನೋಡುವಾಗ ಇದು ಉಪಭಾಷೆ,ಪ್ರಾದೇಶಿಕ ಭಾಷೆ ಅಂತ ಅನ್ನಿಸುವುದೆ ಇಲ್ಲ. ಇದರೊಳಗೆ ಏನ್ನುಂಟು ಏನಿಲ್ಲ ಸಮೃಧ್ದವಾಗಿದೆ. ಸರ್ವಕಾಲಿಕ ಸಂದೇಶವನ್ನು ಸಾರುವ ಬದುಕಿಗೆ ಪೂರಕವಾದ ತಮ್ಮ ಜೀವನಾನುಭವದಿಂದ ಕಂಡು ಕೊಂಡ ವಿಚಾರಗಳ ಸಾರ . ಉದಾಹರಣೆಗೆ ಹ್ಯಾಂಗ್ ಇದ್ರಿ ಎಂದು ನಮ್ಮವರನ್ನು ವಿಚಾರಿಸಿ ಕೊಳ್ಳುವ ಭಾಷಾ ಶೈಲಿ. ಹಂಬ್ಲಾಯಿ ಹೇಳಿ ಬಲ್ಯ ಅನ್ನುವುದು  ಹಂಬ್ಲಾಯ್ದೆ ಹೋರ್ ಯಾಪಾರ ಹೆಸ್ಕಿ ಆತಿತ್….ಇಂತಹ ಆಡು ಭಾಷೆ ಎಂದೂ ಅಳಿಯದು ಕಾರಣ ಇಷ್ಟೇ. ಮಾನವ ಸಂಘ ಜೀವಿ ಮಾತು ಮಾನವನ ಅಸ್ತ್ರ ಮಾತಾಡದೆ ಇರಲಾರ ಹಾಗೆಂದ‌  ಮೇಲೆ ಮಾತಿಗೆ ಭಾಷೆ ಬಳಸಲೇ ಬೇಕುತಾನೆ ಭಾಷೆ ಬಳಸಿದಷ್ಟು ಸಮೃದ್ಧವಾಗುವುದು.


           ಒಂದೊಂದು ಶಬ್ದಗಳು ತಳಿರು ತೋರಣ ಕಟ್ಟಿ ಶೃಂಗರಿಸಿದಂತೆ. ಅರ್ಥ ಪೂರ್ಣ  ಗಾದೆ ಮಾತುಗಳಿವೆ. “ಹೊಯ್…..ಬೆಲ್ಲ ಹಾಕರ್ ಅಷ್ಟೇ ಪಾಯಸು ಆತ್ತ್ ಅಂಬುದ್ . ಸುಳ್ಳ್ ಅಲ್ಲಾ ಕಾಣಿ ಅಂಬುದ್ ” ಇಲ್ಲಿ ಬೆಲ್ಲ ಮತ್ತು ಪಾಯಸ ಮುಖ್ಯವಲ್ಲ. ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ ಎಂದರ್ಥ. ಹೇಂಗಾರೂ ಸೈಯ್ಯೆ ನಮ್ಗಂತೂ ಒಂದ್ ನಮನಿ ಹಬ್ಬು ಈ ವಿಶ್ವ ಕುಂದಾಪ್ರ ಕನ್ನಡ ದಿನ. ಭಾಷೆ ಕೊರಗದೆ ಕಂಪು ಪಸರಿಸುತ್ತಿರಬೇಕು. ಕುಂದಾಪ್ರ ಕನ್ನಡದ  ಶ್ರೀಮಂತಿಕೆಗೆ ದ್ಯೋತಕವಾಗಿ ಈ ಊರಿನ ಜನರ  ಭಾಷಾ ‌ಪ್ರೀತಿ ಇದರ ಉಳಿವಿಗೆ ಕಾರಣ. ಇದು ಕೇವಲ ಭಾಷೆ ಅಲ್ಲ ಇಲ್ಲಿನ ಮಣ್ಣಿನ ಸಾಂಸ್ಕೃತಿಕ ತನವನ್ನು ಪ್ರತಿ ನಿಧಿಸುವ ಮಾಧ್ಯಮ. ಹೃದಯದಭಾಷೆಯಾಗಿ, ಭಾವನಾತ್ಮಕವಾ‌ಗಿ ಸ್ಪಂದಿಸಲು ಕುಂದಾಪ್ರ ಕನ್ನಡವೆ ನಮಗೆಲ್ಲ ಸೇತುವೆ.

      ಬಾಯಿಯಿಂದ ಬಾಯಿಗೆ ಹರಿದಾಡುವ ಕುಂದಾಪ್ರ ಕನ್ನಡ ನಮ್ಮೊಳಗೆ ಬಾಂಧವ್ಯ ಬೆಸೆಯುತ್ತದೆ. ನಮ್ಮಭಾಷೆ ನಮ್ಮ ಹೆಮ್ಮೆ.ಮೂಲತಃ ಕುಂದಾಪುರ ಜನತೆ ಹೊರರಾಜ್ಯ ಹಾಗೂ ಹೊರ ದೇಶದಲ್ಲಿ ‌ಬದುಕು ಕಟ್ಟಿಕೊಂಡವರು ಅಲ್ಲಿನ ಭಾಷೆಯೊಂದಿಗೆ ಬೆರೆತರು ಬಾಯಿಚಪ್ಪರಿಸಿ‌ ಮಾತಾಡುವುದು ಕುಂದಾಪ್ರ ‌ಕನ್ನಡದಲ್ಲಿ. ಪ್ರಪಂಚದ ಯಾವುದೆ‌ ಮೂಲೆಯಲ್ಲಿ ಕುಂದಾಪುರದವರು ಇದ್ದರು. ಇದೆ ನಮ್ಮ ಮಾತೃಭಾಷೆ ಎಂಬ ಗೌರವದೊಂದಿಗೆ ಭಾಷೆ ಬಳಸಿದರೆ ಅದೆ ನಾವು ತಾಯಿನುಡಿಗೆ ನೀಡುವ ಗೌರವ. ಹೊಯಿಕ್ ಬರ್ ಕ್ ಕನ್ನಡ ಎಂದು ತಮಾಷೆ ಮಾಡುವವರ ಎದುರು ‌ದ್ವನಿ ಎತ್ತಿ ಮಾತಾಡಲು‌ ಕೀಳರಿಮೆ ಬೇಡಾ. ಆತ್ಮ ವಿಶ್ವಾಸದಿಂದ ಮಾತಾಡೋಣ.

         ಇತ್ತೀಚೆಗೆ ಕುಂದಾಪ್ರ ಕನ್ನಡ  ಆಡುವ ಕೆಲವರು ಭಾಷೆಯ ಮೂಲ ಬೇರನ್ನು ಅಲುಗಾಡಿಸುತ್ತಿದ್ದು.  ಭಾಷೆಯನ್ನು ಅಲ್ಲಲ್ಲಿ ತಿರುಚುತ್ತಾ, ಪರಭಾಷಾ ಶಬ್ದ ವನ್ನು  ಕುಂದಾಪ್ರ ಕನ್ನಡದೊಳಗೆ ತುರುಕಿಸಿ ಭಾಷಾ ಅಂದ ಗೆಡಿಸಿದ್ದು ಅಲ್ಲದೇ  ಆಗಲೆ ಸಿದ್ದವಾಗಿರುವ  ಪ್ರಚಲಿತದಲ್ಲಿರುವ  ಭಾಷೆಯ ಸ್ವರೂಪ ಕೆಡದಂತೆ ಎಚ್ಚರ ವಹಿಸ‌ಬೇಕು  ಕೆಲವೊಂದು ಶಬ್ಬಗಳು ಮಾಯವಾಗುತ್ತಿ‌ದೆ  ಉದಾಹರಣೆಗೆ “ಅಬ್ಬಿ ” ಎಂಬ ಶಬ್ದದ ರಸವೇ ಬತ್ತಿ ಅಬಾ, ಅಬ್ಬಿ ಎಂದು ಕರೆಸಿಕೊಳ್ಳಲು ಇಚ್ಚಿಸುವವರೆ ಇಲ್ಲ.ಕುಂದಾಪ್ರ ಕನ್ನಡ ತನ್ನ ಶೈಲಿಯನ್ನು ಕಳೆದುಕೊಳ್ಳಬಾರದು.ಆಧುನಿಕತೆ ಬೆಳೆದಂತೆ ಕೆಲವು ಕಾಯಕಗಳು ಮರೆಯಾಗಿ   ಬಳಸುವ ವಸ್ತುಗಳ ಅಗತ್ಯ ವಿಲ್ಲದೆ. ಅದರ ಹೆಸರು ಮರೆಯಾಗುತ್ತಿದೆ. ಉದಾಹರಣೆಗೆ  ಕಡಗೋಲ್ , ತಿರಿ, ಗೆರಸಿ, ಸಾರಣಿಗಿ, ಕಡುಕಲ್ , ಚನ್ನೆಮಣಿ, ಒರಲ್, ಒನಕಿ, ಕೊಪ್ಪರಿಗಿ, ಕಡುಕಲ್ಲು ಹೀಗೆ ಅನೇಕ ಶಬ್ದಗಳು ಕೇಳ ಸಿಗದೆ ಭಾಷೆ ಕೊರಗುವ‌ ಸಾಧ್ಯತೆ ಇದೆ.
          ಜುಲೈ 28 ರ ಆಷಾಡ (ಆಸಾಡಿ) ಅಮಾವಾಸ್ಯೆ ಅಂದರೆ ಕರ್ಕಾಟಕ ಅಮಾವಾಸ್ಯೆಯಂದು ವಿಶ್ವದಾದಂತ್ಯ ನೆಲೆಸಿರುವ  ಕುಂದ ಕನ್ನಡಿಗರಲ್ಲಿ  ಸ್ಪೂರ್ತಿ ತುಂಬುವ ” ವಿಶ್ವ ಕುಂದಾಪ್ರ ಕನ್ನಡ ದಿನದ” ಆಚರಣೆ ನಡೆಯುತ್ತಿದೆ. ಕುಂದಾಪ್ರ ಕನ್ನಡದ ಕಂಪುನ್ನು ಪಸರಿಸುವ ನಿಟ್ಟಿನಲ್ಲಿ ಹೊಸ ತಲೆಮಾರಿಗೂ ಭಾಷಾ ಸವಿಯ ಉಣಿಸಿ, ಗ್ರಾಮೀಣ ಸೊಗಡನ್ನು ಹೊಂದಿರುವ ಭಾಷೆಗೆ ಕುಂದು ಬರದೆ ಹಬ್ಬಲಿ ಎಂಬ ಮನೋಭಾವದ  ಭಾಷಾಭಿಮಾನಕ್ಕೆ ತಲೆದೂಗಲೆ ಬೇಕು. ಒಟ್ಟಿನಲ್ಲಿ ಭಾಷೆ ಬೆಳವಣಿಗೆಗೆ ಇಲ್ಲಿ ಆದ್ಯತೆ. ಇದ್ ದೊಡ್ಡ ಸಂಗ್ತಿ ಮಾರಾಯ್ರೆ, ಒಳ್ಳೆ ಕತಿ ಆಯ್ತ ಅಲ್ಲದೆ ಕಣ್- ಬಾಯ್ ಬಿಡ್ಬೇಡಿ…ಹೌದೆ ನಮ್ ವಿಶ್ವ ಕುಂದಾಪ್ರ ಕನ್ನಡ ದಿನ ಅಂಬ್ರ ನಮ್ ಭಾಷಿ ನಮ್ಗ್ ಚಂದು..ಎನ್ನುತ್ತಾ ಆಚರಣೆ ಗೆ ಅಣಿಯಾಗಿದ್ದಾರೆ ಕುಂದಾಪುರದ ಜನರು.

       ಇದು ಚುರುಕಿನ ಭಾಷೆ  ಕೇವಲ ಮಾತಿನ ಯಾಂತ್ರಿಕ ಕ್ರಿಯೆಯಲ್ಲ. ದೊಡ್ಡ ಪದ ಸಮೂಹವನ್ನು ಚಿಕ್ಕದು ಗೊಳಿಸಿ  ಎರಡೆ ಅಕ್ಷರಗಳಲ್ಲಿ ಉದಾಹರಣೆಗೆ ಹೋಗುತ್ತೇನೆ ಅನ್ನುವುದಕ್ಕೆ “ಹ್ವೊತೆ”. ಕುಳಿತು ಕೊಳ್ಳುವುದಕ್ಕೆ “ಕುಕೊ” ಆಗಬಹುದು ಅನ್ನಲು “ಅಕ್” ಎನ್ನುತ್ತಾರೆ. ಅಷ್ಟೇ ಅಲ್ಲದೆ ಧ್ವನಿಯ ಏರಿಳಿತ ಶುತ್ರಿಯೊಂದಿಗೆವ್ಯಾಕರಣದ ಗಟ್ಟಿರೂಪವು ಇದರಲ್ಲಿದೆ. ಆದರೆ ಮಹಾಪ್ರಾಣಗಳು ಅತಿ ವಿರಳವಾಗಿದ್ದು ಮಾತಿನಲ್ಲಿ “ಉ” ಕಾರ ಹೆಚ್ಚಾಗಿ ಉಚ್ಚಾರಣೆಯಾಗುತ್ತದೆ. ಹೊಪುದು, ಬೆಚ್ಚುದು, ‌ಕಾಂಬುದು, ಜಂಬುನಾಥು, ಕೇಂಬುದು, ಕೊಡುದು ,ಉಂಬುದು ಹೀಗೆ. ಕುಂದಾಪ್ರ ಭಾಷೆ ಕೇಂಬುಕೆ ಚಂದ. ಜೋಡಿ ಶಬ್ದ ಬಳಕೆಯು ಅತಿಯಾಗಿ ಕಂಡು ಬರುತ್ತದೆ. ಚ್ಯೊಯ್ – ಚ್ಯೊಯ್ ದೋಸಿ ಹೊಯ್ಯವುದ್. ಸರಪರ ಪಾಯಸ ಸುರುದ್,ಕಯ್ಯ ಇಲ್ಲ ಕುಯ್ಯ ಇಲ್ಲ ತಾನಾಯ್ತ ತನ್ನ ‌ಕೆಲ್ಸಾ ಆಯ್ತ್ .ಪಿಳಿ‌-ಪಿಳಿ ಕಣ್ – ಕಣ್ ಬಿಟ್ಟಕಂಡ್ ಅಂಬ್ ಈ ಭಾಷೆಯೊಳಗೊಂದು ವೈವಿಧ್ಯತೆ ಇದೆ. ಪ್ರಾದೇಶಿಕ ವ್ಯತ್ಯಾಸಗಳು ಕೇಳ ಸಿಗುತ್ತದೆ. ಅಷ್ಟೇ ಅಲ್ಲದೇ ಒಂದೊಂದು ಸಮೂದಾಯದ ಜನರ ಉಚ್ಚಾರಣೆ, ಶಬ್ದ ಬಳಕೆಯಲ್ಲಿ ಭಿನ್ನತೆ ಕಂಡುಬರುತ್ತದೆ. ಕುಂದಾಪ್ರ ಕನ್ನಡಕ್ಕೆ ಅದರದೆ ಆದ ಸೊಗಡಿದೆ. ಇಲ್ಲಿ ಬೇರೆ ಬೇರೆ ಮಾತೃ ಭಾಷೆ ಆಡುವ ಜನರಿದ್ದು  ಅವರವರ ಭಾಷಾ ಓರಣ ಕುಂದಾಪ್ರ ಕನ್ನಡಕ್ಕೆ ಅಲ್ಪ ಸಲ್ಪವಾಗಿ ತಾಗಿದಂತೆ ಕೇಳಿಬರುತ್ತದೆ.

  ‌    ಕುಂದಾಪ್ರ ಕನ್ನಡ ಯಾವ ಶಾಲೆಗೂ ಉದ್ಯೋಗಕ್ಕೂ ಮಾನದಂಡವಲ್ಲ. ಇದು ಮನದಂಗಳದ ಭಾಷೆ, ಮನೆ, ಮನೆಯ ಭಾಷೆ, ಒಡಲಾಳದಲ್ಲಿ ಅಡಗಿರುವ  ನಾಲಿಗೆಯಲ್ಲಿ ನಲಿವ ಸೋಲಿಲ್ಲದ ಭಾಷೆ. ಇದಕ್ಕೆ ಅಳಿವಿಲ್ಲ. ಮೌಖಿಕವಾಗಿ ಮೆರೆದಾಡುವ ಕುಂದ ಕನ್ನಡ, ಕುಂದಾಪ್ರ ಕನ್ನಡ ಎಂದೆಲ್ಲಾ ಕರೆವ ಭಾಷೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments