Home Kannada Article ನೀರೊಳಗೆ ವಿರಾಜಿಪ ಗುಡ್ಡಟ್ಟು ಗಣಪ : Heggaddesamachar

ನೀರೊಳಗೆ ವಿರಾಜಿಪ ಗುಡ್ಡಟ್ಟು ಗಣಪ : Heggaddesamachar

0
47

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ     

   ವಕೃತುಂಡ  ಮಹಾಕಾಯ ಸೂರ್ಯ ಕೋಟಿ ಸಮಪ್ರಭಾ ನಿರ್ವಿಘ್ನಂಕುರುವೇ ದೇವ ಸರ್ವಕಾಯೇಷು ಸರ್ವದಾ ಎಂದು ಪ್ರಾಂಜಲ ಭಕ್ತಿಯಿಂದ ಪ್ರಥಮ ಪೂಜಿಪ ಸಹಸ್ರಾರು ನಾಮಗಳಿಂದ ಕೊಂಡಾಡಲ್ಪಡುವ ವಿನಾಯಕ ವಿಶ್ವ ವ್ಯಾಪಕ. ಭಾರತೀಯರ ಧಾರ್ಮಿಕ ಜೀವನದಲ್ಲಿ ಗಣೇಶನಿಗೆ ವಿಶಿಷ್ಟಸ್ಥಾನ .

   ಜಲವಾಸಿಗಣಪ = ಪ್ರಕೃತಿ ಸಿರಿ ಮೆರೆದಾಡುವ ಭವ್ಯಶರಧಿ ಬೋರ್ಗರೆವ ಉಡುಪಿ ಜಿಲ್ಲೆಯ ಸೊಬಗಿನ ತಾಣ ಕುಂದಾಪುರ ತಾಲೂಕಿನ ಶಿರಿಯಾರದ ಸಮೀಪ ಯಡಾಡಿ ಮತ್ಯಾಡಿಯಲ್ಲಿದೆ ಜಲವಾಸಿ ನೀರೊಳಗೆ ವಿರಾಜಿಪ ಉದ್ಭವ ಗಣಪ  ಶ್ರೀ ವಿನಾಯಕ ದೇವಸ್ಥಾನ ಗುಡ್ಡಟ್ಟು ಎಂಬ ಅಪರೂಪದ ಸಾನಿಧ್ಯ. ಸುತ್ತಲೂ ಹಚ್ಚಹಸಿರು, ನಿಸರ್ಗದ ಮಡಿಲಲ್ಲಿ ಉಡುಪಿ ಬ್ರಹ್ಮಾವರ, ಬಾರಕೂರು- ಸ್ಯಾಬರಕಟ್ಟೆ ಮಾರ್ಗವಾಗಿ ಹೋದರೆ ಸಿಗುವ ವಿಶೇಷ ಕ್ಷೇತ್ರವಿದು. 

    ಕಾಡು – ಮೇಡುಗಳ ಹಸಿರು ಬಯಲಿನ  ಮಧ್ಯದಲ್ಲಿ ರಮಣಿಯವಾದ ಬೃಹತ್‌ ಬಂಡೆಯ ಗುಹೆಯಂತಹ ರಚನೆಯಲ್ಲಿ ಸಾಧಾರಣ 8 ಅಡಿ ಉದ್ದ 7 ಅಡಿ ಅಗಲ ಇರುವ ಕಲ್ಲಿನ ದೋಣಿ ಆಕಾರದ ಜಾಗದಲ್ಲಿ ಕಲ್ಲು ಬಂಡೆಯ ಚಿಕ್ಕ ಗುಹೆಯಲ್ಲಿ ಉದ್ಬವಿಸಿದ ಸುಮಾರು 3 ಅಡಿ ಎತ್ತರದ ಕಪ್ಪುಶಿಲ್ಪದಲ್ಲಿರುವ ದ್ವಿಬಾಹು ಗಣಪತಿಯ ವಿಗ್ರಹ ಪೂರ್ವಾಭಿಮುಖ‌ವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಿಚಿ, ಸೊಂಡಿಲು ತಿರುಚಿ ಕುಳಿತಿರುವನು.  ಸ್ವಯಂಭುವಿನಲ್ಲಿ ಸ್ಪಷ್ಟ ಆಕಾರ ಹೊಂದಿರುವ ಶ್ರೀ ದೇವರ ಮೂಲಬಿಂಬವೂ ಕಂಠಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದೇ ಇಲ್ಲಿನ ಕೌತುಕ.ಲೆಕ್ಕ ಮಾಡಿ ಸಾವಿರ ‌ಕೊಡ ನೀರು‌ ಸುರಿದಾಗ ಗಣಪತಿ ಮೂರ್ತಿ ಪೂರ್ಣ ಮುಳುಗುವ  ಆರ್ಯಕೊಡ ಸೇವೆ ಇಲ್ಲಿನ ವಿಶೇಷ.

    ಆರ್ಯಕೊಡ ಸೇವೆ = ಪ್ರತಿ ದಿನ ಆರ್ಯಕೊಡ ಎಂಬ‌ ವಿಶೇಷ‌ಪೂಜೆ‌ ಇಲ್ಲಿ ನಡೆಯುತ್ತದೆ. ಈ ಪೂಜೆಯ ‌ನಂತರ  ನೀರಿನೊಳಗೆ ವಾಸ ಅಂದರೆ ಜಲವಾಸಿ ಗಣಪನೀತ.ಶುದ್ಧ ವೈದಿಕ ಪ್ರಕ್ರಿಯೆ ಆರ್ಯಕೊಡ ಸೇವೆ ಎಂಬ ವಿಶೇಷ ಪೂಜೆ ಪ್ರಾರಂಭದಲ್ಲಿ  ಮಡುವಿನಲ್ಲಿದ್ದ ನೀರನ್ನು ತಾಮ್ರದ ಕೈಬಟ್ಟಲಿನಿಂದ ಪೂರ್ತಿತೋಡಿ ತೆಗೆಯಲಾಗುತ್ತದೆ ಗಣಪತಿಗೆ ತೈಲಾಭ್ಯಂಜನ ಅಂದರೆ ಕೊಬ್ಬರಿ ಎಣ್ಣೆ ಹಚ್ಚಿ ಅಭಿಷೇಕ ಮಾಡಿ ಪುನಃ ಅಭಿಷೇಕದ ನೀರನ್ನು ಹೊರತೆಗೆದು ದೇವರಿಗೆ ಮಹಾನೈವೇದ್ಯ ನೆರವೇರಿಸಲಾಗುತ್ತದೆ. ತದನಂತರ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ನಡೆಸಿದ  ತೀರ್ಥ ಹೊರ ತೆಗೆಯಲಾಗುತ್ತದೆ. ಗಣಪ ವಿರಾಜಿಪ ಸ್ಥಾನ ಪ್ರಕೃತಿದತ್ತವಾಗಿರುವುದರಿಂದ ಏರು – ತಗ್ಗು ಹೊಂಡಗಳಿಂದ ಕೂಡಿದ್ದು ಮೂಲ ಬಿಂಬಕ್ಕೆ ಪೂಜೆ, ಅಲಂಕಾರ, ಮಂಗಳಾರತಿ, ಮಂತ್ರ, ಪುಷ್ಪ ಇತ್ಯಾದಿಗಳನ್ನು ನೆರವೇರಿಸಿ ಆರ್ಯಕೊಡ ಹರಕೆ ಹೊತ್ತ ಭಕ್ತಾದಿಗಳಿಗೆ ಈ ಮೂಲ ಬಿಂಬದ ದರ್ಶನ ಮಾಡಿಸಲಾಗುತ್ತದೆ.  ತದನಂತರ ದೇವಾಲಯದ ಆವರಣದಲ್ಲಿನ ಬಾವಿಯೊಳಗೆ ಬ್ರಾಹ್ಮಣರು ಇಳಿದು ಕೈಯಿಂದಲೆ  ಕೊಡಪಾನದಿಂದ ನೀರು ಮೇಲೆ ತಂದು (ಹಗ್ಗ ಬಳಸದೆ) ಬಾವಿಯಿಂದ ಉದ್ಬವ‌ ಮೂರ್ತಿಯವರೆಗೆ ಸಾಲಾಗಿ ನಿಂತು ದೋಣಿಯಾಕಾರ ದೊಳಗಿರುವ ಗಣಪನ ವಿಗ್ರಹವಿರುವ ಕಲ್ಲಿನ ಗುಹೆಯೊಳಗೆ ಸಾವಿರ ಕೊಡ ನೀರು ತುಂಬಿಸುತ್ತಾರೆ ಇದುವೆ ಆರ್ಯ ಕೊಡ  ಎಂಬ ಸೇವೆ . ಹರಕೆಯ ರೂಪದಲ್ಲಿ ಭಕ್ತರು ಮಾಡಿಸುತ್ತಾರೆ. ಉರಿ ಶಮನಕ್ಕಾಗಿ ಗುಡ್ಡಟ್ಟುವಿನಲ್ಲಿ ‌ನೆಲೆ‌ನಿಂತ ಗಣಪನನ್ನು ಆರಾಧಿಸುವ ಆರ್ಯಕೊಡ ಸೇವೆ ಅನೇಕ ವರ್ಷಗಳ ವರೆಗೆ  ಬುಕ್ ಆಗಿದೆ. ಮೊದಲು ದಿನ ಒಂದಕ್ಕೆ ಒಂದು ಸೇವೆ ‌ನಡೆಯುತ್ತಿತ್ತು.  2007 ರಿಂದ ದಿನಕ್ಕೆ 2 ಸೇವೆ ಇರಿಸಲಾಗಿದೆ.

   ಐತಿಹ್ಯ = ತ್ರಿಪುರಾಸುರ ಎಂಬ  ರಾಕ್ಷಸನ ಸಂಹಾರ ಕಾಲದಲ್ಲಿ ಶಿವ ಯುದ್ದಕ್ಕೆ ಹೋಗುವಾಗ ಗಣಪತಿಯ ನೆನೆಯದೆ ಹೋದ ಕಾರಣ ಜಯ ದೊರೆಯದೆ ಕಷ್ಟ ಪರಿಸ್ಥಿತಿ ಬಂದಾಗ  ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತ ಶಿವ ಕೋಪಗೊಂಡು ಅಗ್ನೇಯಾಸ್ತ್ರ ಪ್ರಯೋಗಿಸುತ್ತಾನೆ. ಶಿವನ ಅಸ್ತ್ರ  ಗಣಪತಿಯನ್ನು ಹೊತ್ತೊಯ್ಯುದು ಮಧುಸಾಗರದಲ್ಲಿ ಕೆಡವುತ್ತದೆ. ತನಗೆ ಅತಿ ಪ್ರಿಯವಾದ ಜೇನುತುಪ್ಪದ ಮಡುವಲ್ಲಿ ತಂದು ಎಸೆದವರ ಕಾರ್ಯವಾಗಲಿ ಎಂದು ಹರಸಿದ ಫಲವಾಗಿ ಶಿವ ವಿಜಯಿ ಶಾಲಿಯಾಗುತ್ತಾನೆ.

    ಗಣಪತಿ ಹೊಟ್ಟೆ ಬಿರಿಯುವಷ್ಟು ಜೇನು ತಿಂದು ಉರಿ ಹತ್ತಿಕೊಂಡು ಒದ್ದಾಡುವುದನ್ನು ಗಮನಿಸಿದ ಶಿವ ಉರಿ ಶಮನಕ್ಕಾಗಿ  ನರಸಿಂಹ ತೀರ್ಥದ ಪಕ್ಕದಲ್ಲಿ ಜಲಾಧಿವಾಸವಾಗಿರು ಎಂದು ಗುಡ್ಡಟ್ಟು ಎಂಬ ಈ ಸ್ಥಳವನ್ನು ಅನುಗ್ರಹಿಸುತ್ತಾನೆ.ಗಣಪತಿಯ ಊರಿ ಶಮನಕ್ಕಾಗಿ ಇಂದಿಗೂ ಇಲ್ಲಿ ‌ಗಣಪತಿಗೆ ಜಲ ಅಭಿಷೇಕ (ಆರ್ಯ ಕೊಡ) ನಡೆಯುತ್ತದೆ. ಸುಮಾರು 8ನೇ ಶತಮಾನಕ್ಕೆ ಸೇರಿದೆ ಎನ್ನಲಾಗುವ ಗುಹಾಂತರ ದೇಗುಲದ ರಚನೆಗೆ ದಕ್ಕೆಯಾಗದಂತೆ ದೇವಳದ ಜೀಣೋದ್ದಾರ ಮಾಡಲಾಗಿದೆ. ಇಲ್ಲಿನ ಅರ್ಚಕತ್ವ ಗುಡ್ಡಟ್ಟು ಅಡಿಗರ ಮನೆತನ ಅನುವಂಶಿಕವಾಗಿ ನಡೆಸಿಕೊಂಡು ಬರುತ್ತಿದ್ದು ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಗಣಪತಿ ದೇವಾಲಯ ಇದು.

    ಸುತ್ತಲೂ ಹಚ್ಚ ಹಸಿರು, ನಿಸರ್ಗದ ‌ಮಡಿಲಲ್ಲಿ ಉಡುಪಿ- ಬ್ರಹ್ಮಾವರ- ಬಾರಕೂರು- ಸೈಬರಕಟ್ಟೆ ಮಾರ್ಗ ವಾಗಿ ಹೋದರೆ  ಸಿಗುವ ವಿಶೇಷ ಕ್ಷೇತ್ರ ವಿದು. ದೇವಳದ ಹೆಬ್ಬಾಗಿಲು, ಪಾಳಿ, ತೀರ್ಥ ಮಂಟಪ ಬೇರೆ ದೇವಾಲಯದಂತೆ ಇದ್ದರು ಇಲ್ಲಿನ ಆರ್ಯಕೊಡ ಸೇವೆ ಹಾಗೂ ಗಣಪನ ವಿರಾಜಿಪ ಸ್ಥಾನ ವಿಶೇಷತೆಯನ್ನು ಹೊಂದಿದೆ. ಕತ್ತಲೆಯ  ಗುಹೆಯಲ್ಲಿ ಅಡಗಿ ಕುಳಿತ ಗಣಪ‌ ಎಲ್ಲರ‌ ಬಾಳಿಗೆ ಬೆಳಕು ಹರಿಸಲಿ.

NO COMMENTS

LEAVE A REPLY

Please enter your comment!
Please enter your name here