Monday, May 16, 2022
HomeKannada Articleಕೊಡಗಿನಲ್ಲಿದೆ ಪ್ರಕೃತಿ‌ಮಾತೆಯ ಲಾಸ್ಯಮಯ ನರ್ತನ : heggaddesamachar

ಕೊಡಗಿನಲ್ಲಿದೆ ಪ್ರಕೃತಿ‌ಮಾತೆಯ ಲಾಸ್ಯಮಯ ನರ್ತನ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

    ಕಾವೇರಿಯ ಮಡಿಲಿದು  ದಟ್ಟಹಸಿರಿನ ಗಿರಿಕಂದರಗಳ ನಡುವೆ ನಿಸರ್ಗ ದೇವತೆ ಧರೆಗಿಳಿದಂತೆ‌ ಕಂಗೊಳಿಸುವ  ಪ್ರಾಕೃತಿಕ ‌ನೈಸರ್ಗಿಕ  ತಾಣ ಕರ್ನಾಟಕದ ಒಂದು ‌ಸುಂದರ  ಜಿಲ್ಲೆ ಕೊಡಗು.ನಿತ್ಯಹರಿದ್ವರ್ಣದ ದಟ್ಟ ಕಾಡುಗಳ‌ ಮುಗಿಲೆತ್ತರಕ್ಕೆ ಬೆಳೆದು ನಿಂತ  ಬಗೆ ಬಗೆಯ ಮರಗಳು, ಕಣ್ಣ  ತವಕ ತಣಿಸುವ  ಹಸಿರ ಮುಗಿಲು, ಬೆಟ್ಟಗುಡ್ಡಗಳ‌ ಸೊಬಗು, ತುಂಬಿ ತುಳುಕುವ ಸಸ್ಯ ‌ಸಂಪತ್ತು ವನರಾಶಿಗಳು, ಕಾಫಿ‌ತೋಟದ ಕಂಪು, ಕಿತ್ತಳೆ, ಏಲಕ್ಕಿ ತೋಟಗಳ‌ ನಡುವೆ ಹರಿವ ಹಳ್ಳ, ಕೊಳ್ಳ, ಧುಮುಕ್ಕಿ‌ಹರಿಯುವ ಜಲಪಾತಗಳು, ಝಳು ಝಳು ಹರಿವ ನದಿತೊರೆಗಳು ಹಾಗೂ ಪಚ್ಚೆ ಪೈರಿನಿಂದ ಆವೃತವಾದ‌ ಕೊಡಗಿನ ಮೂಲೆ‌ಮೂಲೆಯಲ್ಲಿಯು ನೈಸರ್ಗಿಕವಾದ ಸೊಬಗಿದೆ. ನಿಸರ್ಗದ ಪ್ರಶಾಂತತೆ, ಬಿಸುವ ತಂಗಾಳಿಯ  ಹಿತಸ್ಪರ್ಶ, ಸದ್ದಿಲ್ಲದೆ ಅಪ್ಪುವ ಮಂಜಿನ ಸಿಂಚನ, ತಂಪಾದ ಹವೆ ಗಿರಿಕಂದರಗಳೆಡೆಯಿಂದ ತಟ ಪಟ ಸುರಿವ ಮಳೆಯ ಚುಮ್ಮುಕ್ಕುವ ತುಂತುರು ಹನಿಗಳು, ಪ್ರಕೃತಿಯಲಾಲಿತ್ಯದ  ಅಚ್ಚರಿಯ‌ ತಾಣವಿದು. ಹನಿಜೇನಿನು ಏಲಕ್ಕಿ ಕಂಪಿನ ,ಕಿತ್ತಳೆ ಸವಿಯ‌ನಾಡು. ಜೀವನದಿ ಕಾವೇರಿಯ ಉಗಮ ತಾಣ .

        ಕೊಡಗು  ಸುತ್ತಾಡುತ್ತಿದ್ದರೆ  ಕೆಲವು ಅನುಭವಗಳನ್ನು  ವರ್ಣಿಸಲು ಶಬ್ದಗಳೇ ಸಿಗದು ‌.ಹಸಿರುಡಿಗೆ ಪಸೆದುಟ್ಟ  ಕೊಡಗಿನ  ಚಲುವ ಬಣ್ಣಿಸಲಸದಳ. ಕೊಡಗು ಬೆಡಗಿಗೆ ಅಚ್ಚ‌ಹಸಿರಿಗೆ, ಮಂಜಿಗೆ, ನೀರವತೆಗೆ ಇನ್ನೊಂದು ಹೆಸರು. ಅಲ್ಲಲ್ಲಿ ಕಾಣಸಿಗುವ  ಭತ್ತದ  ಗದ್ದೆಗಳ, ಸೃಷ್ಟಿ ‌ಸೌಂದರ್ಯದ ತವರು. ಎಷ್ಟು ‌ನೋಡಿದರು ಮನಸ್ಸು ದಣಿಯದು ಭೂದೇವಿ ಪಚ್ಚೆ ಸೀರೆ ಉಟ್ಟಂತೆ ಎಲ್ಲಾ ‌ಕಡೆಗೂ ಹಸಿರೇ‌ ಹಸಿರು. ಕನ್ನಡ‌ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ‌ಮಡಿಕೇರಿಯ ಭಾಗ‌ಮಂಡಲದ  ಬ್ರಹ್ಮಗಿರಿಯ ಪವಿತ್ರ ತಾಣವನ್ನು ‌ನೋಡುವುದೇ‌ ಕಣ್ಣಿಗೆ ಹಬ್ಬ.

    ಪ್ರಕೃತಿ ಸೌಂದರ್ಯದ ಸ್ವರ್ಗ ಕೊಡಗು. ನಾಡನ್ನು  ತಂಪಾಗಿರಿಸಿ ಬೆಳೆಗಳಿಗೆ ನೀರುಣಿಸುವ ಝಳು‌ ಝಳು‌ ಹರಿವ ಕಾವೇರಿ ದೃಶ್ಯ ‌ಮೈಮನಗಳಿಗೆ ತಂಪಿನ ‌ಸಿಂಚನ. ಕೊಡಗಿಗೆ  ರಾಜ್ ಸೀಟ್ ನೈಸರ್ಗಿಕ ಸೊಬಗು. ಅಬ್ಬರಿಸುವ ಜಲಪಾತಗಳು  ಅಲ್ಲದೆ ‌ಮಡಿಕೇರಿ ಕೋಟೆ ಒಳಗೆ ‌ಪ್ರಾಚ್ಯವಸ್ತು ಸಂಗ್ರಹಾಲಯವಿದ್ದು ಅದರಲ್ಲಿ ಫಿಲ್ಡ್ ಮಾರ್ಷಲ್ ಕಾರ್ಯಪ್ಪನವರಿಗೆ  ದೊರೆತ ಫಲಕಗಳನ್ನು ‌ಇಡಲಾಗಿದೆ.‌ ಇವೆಲ್ಲವನ್ನು ಪ್ರತ್ಯಕ್ಷ ‌ಕಾಣಲೋಸುಗ ‌ಕೊಡವರ‌ ನಾಡನ್ನು ಕೊಡವರ ಬೀಡನ್ನೊಮ್ಮೆ ನೋಡ‌ಬನ್ನಿ.

    ಕೊಡಗು ಭಾರತದ ಸ್ಕಟ್ಲಾಂಡ್ ಎಂದು ಕರೆಯಲಾಗುತ್ತದೆ. ಜನಪ್ರಿಯ ಪ್ರವಾಸಿತಾಣ. ಐತಿಹಾಸಿಕ ಸ್ಮಾರಕಗಳು ಅರಮನೆ, ಕೋಟೆಗಳು, ಪುರಾತನ ದೇವಸ್ಥಾನಗಳು, ಪಾರ್ಕ್, ಜಲಪಾತ ಅಭಯಾರಣ್ಯಗಳಂತಹ ಆಕರ್ಷಕ ಸ್ಥಳಗಳು ಕೊಡಗಿನ ಸೊಬಗು ಹೆಚ್ಚಿಸಿವೆ ಅದರಲ್ಲು  ಅಭಿ ಹಾಗೂ ಇರ್ಪ್ಪು ಜಲಪಾತ, ಮಡಿಕೇರಿ ಕೋಟೆ, ರಾಜಸೀಟ್  ನಾಲ್ನಡ್ ಅರಮನೆ , ಕಾವೇರಿ ನಿಸರ್ಗಧಾಮ, ದುಬಾರೆ ಆನೆಕ್ಯಾಂಪ್ , ಹೊನ್ನಮ್ಮ ಕೆರೆ, ಮಂಡಲ ಪಟ್ಟು ಪ್ರದೇಶಗಳಂತ  ನಿಸರ್ಗ ತಾಣಗಳು  ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತದೆ. ಕರ್ನಾಟಕದ ಕಾಶ್ಮೀರ, ಪ್ರವಾಸಿ ಗರಸ್ವರ್ಗ ಎಂದು ‌ಕರೆಸಿಕೊಳ್ಳುವ ಕೊಡಗು ಪ್ರಾಕೃತಿಕ ವಿಕೋಪದಿಂದ  ತತ್ತರಿಸಿಹೋಗಿತ್ತು.  ಕಳೆದ ಮೂರು ವರ್ಷಗಳಿಂದ ನಿರಂತರವಾಗಿ  ಅತಿವೃಷ್ಟಿ, ಅನಾವೃಷ್ಟಿ ಪ್ರವಾವ ಭೂಕುಸಿತ, ಮಾರುಕಟ್ಟೆ ಕುಸಿತ  ,‌ಹವಾಮಾನ‌ ವೈಪರೀತ್ಯದಿಂದ ಕೊಡಗು ಪುನಃ ‌ತನ್ನ ಸಹಜ ಸೌಂದರ್ಯದ ಮೂಲಕ ‌ಮತ್ತೆ ಎದ್ದು ನಿಂತಿದೆ  ಆದರೂ ಪ್ರವಾಸಿಗರಿಗೆ   ಕೊಡಗು ಅಷ್ಟೆನು ಸುರಕ್ಷಿತವಲ್ಲ ಎಂಬ ಭಾವ ಮೂಡಿದ್ದು ಇದೆ. ಆದರೆ ತನ್ನ‌ ನಾಡನ್ನು ತಾವೇ ಸರಿ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಪ್ರವಾಸಿಗರನ್ನು ಪ್ರೀತಿಯಿಂದ ತನ್ನ ಸಹಜ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರ ಆಗಮನಕ್ಕೆ ಕೊಡಗು ಸಜ್ಜಾಗುತ್ತಿದೆ.

        ‌ಒಟ್ಟಿನಲ್ಲಿ  ಮುಂಬಯಿಯ‌ ಸೆಖೆಗೆ  ಬೇಸತ್ತು ಬಸವಳಿದು‌ಹೋದ  ಮನಸ್ಸುಗಳಿಗೆ ಹಸಿರು ಸಿರಿಯ ತಪ್ಪಲಿನಲ್ಲಿ ನಿಂತು ಕಂಗೊಳಿಸುವ ಕೊಡಗಿನ  ಪ್ರಕೃತಿಯ ರಮ್ಯ ತಾಣ‌ ಮೈಮಸ್ಸಿಗೆ‌ ಮುದ ನೀಡಲಿದೆ. ಭೂಮಿಯನ್ನು ತಬ್ಬಿದಂತಿರುವ  ಮೋಡಗಳು  ಸಹಜ  ನಿಸರ್ಗದ ಚೆಲುವಿನ ಕೊಡಗಿನ  ಚಿತ್ರಣ ಕಣ್ಣಂಚಿನಲ್ಲಿ ಸೆರೆ ಹಿಡುಯುತ್ತಾ  ಮತ್ತೆ ಮತ್ತೆ  ನೋಡಬೇಕೆನಿಸುವ ನೋಡಿದಷ್ಟು  ತನ್ನತ್ತ‌ ಸೆಳೆದು  ಕೊಳ್ಳುವ ಬೆಟ್ಟದ ಸಾಲು, ಸೂರ್ಯನ ಹೊನ್ನಕಿರಣ ಹಾಗೂ ‌ಮೆತ್ತನೆಯ ಹಚ್ಚ ಹಸಿರಿನ  ಹಾಸಿಗೆ ಹಾಸಿದ ಪ್ರಕೃತಿಯ ನಯನ ಮನೋಹರ ರಮಣೀಯ ದೃಶ್ಯಗಳನ್ನು ಒಳಗೊಂಡಿರುವ  ಕೊಡಗು ಎಂಬುದು‌ ಕಡಿದಾದ ಬೆಟ್ಟ ಗುಡ್ಡದ್ದು  ಎಂಬ ಶಬ್ದದಿಂದ ಬಂತೆಂದೂ ‌ಉಗುರುಗಳಿಂದ  ಹಂದಿಗಳಂತೆ  ಗುಡ್ಡ ಬೆಟ್ಟಗಳನ್ನು ಕಡಿದು  ಬಯಲು ಮಾಡಿದ್ದರಿಂದ ಬಂತೆಂದೂ ಹೇಳಲಾಗುತ್ತದೆ. ಕೊಡಗಿನ ಹಾಲೇರಿ  ಮನೆ ತನದ‌ ಮುದ್ದುರಾಜ ಈಗಿನ ಮಡಿಕೇರಿಯನ್ನು ನಿರ್ಮಿಸಿದ ಕಾರಣಕ್ಕೆ ಮುದ್ದು ರಾಜಕೇರಿಯೆಂದು ಹೆಸರು ‌ಬಂದಿದ್ದು ಇದೆ ಮುಂದೆ ಮಡಿಕೇರಿ ಆಯಿತೆಂದು‌ ಇತಿಹಾಸ ಹೇಳುತ್ತದೆ. ಕುಡುಮಲೆಯರ ಪ್ರದೇಶ ವಾದ್ದರಿಂದ‌‌  ಕೊಡಗು‌ ಎಂಬ  ಹೆಸರು ‌ಬಂದಿರುವ ಸಾಧ್ಯತೆಗಳಿವೆ.‌ ಕೊಡಿ ಎಂದರೆ ಪಶ್ಚಿಮಕ್ಕಿರುವ‌ ನಾಡು ಎಂಬ ಅಭಿಪ್ರಾಯವಿದೆ.   

      ‌  ಮುಂಬಯಿನಲ್ಲಿ ‌ಕರ್ನಾಟಕ ‌ಕೊಡವ ಸಾಹಿತ್ಯ ಅಕಾಡೆಮಿ ‌ಮಡಿಕೇರಿ‌ ಮತ್ತು  ತುಳುನಾಡ ಸೇವಾ ಸಮಾಜ‌  ಮಿರಾ ಭಾಯಂದರ್ ‌ಹಾಗೂ‌  ಕೊಡವ ಮತ್ತು ತುಳು ಸಂಸ್ಕೃತಿಕ  ವೈಭವನಡೆದಿತ್ತು. ಈ ಕಾರ್ಯ ಕ್ರಮದಲ್ಲಿ  ಭಾಗಿಯಾದ  ನನಗೆ ಕೊಡವರ ನಾಡನ್ನು  ಕೊಡವರ  ಬೀಡನ್ನು  ನೊಡಬೇಕೆಂಬ ಆಸೆ ಮೂಡಿತ್ತು. ಮುಂಬಯಿಯ ‌ನೆತ್ತಿ ಸುಡುವ  ಬಿರು‌ಬಿಸಿಲು, ಸೆಕೆಯಿಂದ ತಪ್ಪಿಸಿಕೊಳ್ಳಲು ಕೊಡಗಿಗೆ  ಪ್ರವಾಸ  ಹೋಗುವ ಯೋಜನೆ ಸಿದ್ದ‌ಮಾಡಿದೆ. ಗಂಡ  ಮತ್ತು ಮಗನೊಂದಿಗೆ ಉಡುಪಿಯಿಂದ ಮಂಗಳೂರು, ಸುಳ್ಯ, ಸಂಪಾಜೆ ಮಾರ್ಗವಾಗಿ ಹೊರಟು ನಾವು ಮಧ್ಯಾನ ಮಡಿಕೇರಿಯ ತಿಮ್ಮಯ್ಯ ಸರ್ಕಲ್ ನಲ್ಲಿ ಇಳಿದಾಗ ಮೊದಲು ನಮ್ಮನ್ನು  ಸ್ವಾಗತಿಸಿದ್ದು ಇಲ್ಲಿನ ತಂಗಾಳಿ . ನಮ್ಮೊಂದಿಗಿದ್ದ‌ ಮಗ‌ ಮೆಲ್ಲನೆ  ಕೈಗಡಿಯಾರ ನೋಡಿಕೊಂಡು ಮಧ್ಯಾಹ್ನ 2:00 ಗಂಟೆ ಹೊತ್ತಿಗೂ ಇಷ್ಟು ತಂಪಾದ ಗಾಳಿಯೆ ಎಂಬ ಬರೆಗಿನೊಂದಿಗೆ  ಕೊಡಗಿನಲ್ಲಿ ಇಟ್ಟ ಮೊದಲಹೆಜ್ಜೆಯಲ್ಲೇ‌  ಸಂತಸ‌ಗೊಂಡಿದ್ದ.
      
     ಕೊಡವರಿಗೆ ‌ಪ್ರತೇಕ ಭಾಷೆ ಇದೆ. ಅದಕ್ಕೆ ‌ಲಿಪಿ ಇಲ್ಲ. ಕನ್ನಡ ಲಿಪಿಯ  ಬಳಕೆ ಇದೆ. ತಮಿಳು ‌ಹಾಗೂ ಕನ್ನಡ ಹಾಗೂ ‌ಕುಂದಾಪುರ ಕನ್ನಡವನ್ನು ಹೊಲುತ್ತದೆ. ಕೊಡವರು ಆರ್ಯರೆಂದು, ಇನ್ನೂ ಕೆಲವರು  ದ್ರಾವಿಡ ರೆಂದು ‌ಮತ್ತೆ ಕೆಲವರು ಕದಂಬರೆಂದು ವಾದಿಸುತ್ತಾರೆ. ಒಟ್ಟಿನಲ್ಲಿ ಈ ವಿಚಾರದಲ್ಲಿ  ಸಂಶೋದಕರಲ್ಲಿ ಜಿಜ್ಞಾಸೆ ಇದೆ.

     ಕೊಡವರ ಉಡುಪಿನಲ್ಲಿ ಒಂದು ವೈಶಿಷ್ಟ್ಯ ವಿದೆ. ಗಂಡಸರು ನೀಳವಾದ ಅರ್ಧತೋಳಿನ ‌ನಿಲುವಂಗಿಯನ್ನು ತೊಡುತ್ತಾರೆ. ಇದಕ್ಕೆ ಕೊಪ್ಪೇಚಾಲು (ಕುಪ್ಪಸ) ಎಂದು  ಕರೆಯುತ್ತಾರೆ. ಸಾಮಾನ್ಯವಾಗಿ ಇದು ಕರಿಯ ಉಣ್ಣೆಯ ಬಟ್ಟೆಯಿಂದ ಮಾಡಲ್ಪಟ್ಟಿರುತ್ತದೆ‌ ಆದರೆ ‌ಮದುಮಗ ಉದ್ದಕ್ಕೆ ಬಿಳಿಯ ಕುಪ್ಪಸವನ್ನೆ ತೊಡುತ್ತಾರೆ. ಸೊಂಟಕ್ಕೆ ಅಂಗಿಯನ್ನು ಬಿಗಿಯಾಗಿ ಕಟ್ಟಲು ಕೆಂಪು ರೇಷ್ಮೆಯ ಪಟ್ಟಿ ಇರುತ್ತದೆ. ಅದು ದಟ್ಟಿ. ಅದಕ್ಕೆ ಅಲಂಕಾರದ  ಕವಚ ವಿರುವ ಪೀಚೆಕತ್ತಿ ಮತ್ತು ಜೋಡು ಬೆಳ್ಳಿ ಚೈನ್ ಸಿಕ್ಕಿಸುತ್ತಾರೆ. ತಲೆಗೆ  ಮಂಡೆ ತುಣಿಯನ್ನು ಕಟ್ಟುತ್ತಾರೆ. 

     ಎಲ್ಲಕ್ಕಿಂತ ಮಿಗಿಲಾಗಿ  ಕೊಡಗಿನ  ಪುರುಷರು ವೀರತ್ವ, ಶೌರ್ಯವಂತರು ಹಾಗೂ ಸಾಹಸಿಗರು , ದೇಶದ ಸೇನಾ ಪಡೆಗೆ ಹೆಚ್ಚಿನ  ಸಂಖ್ಯೆಯಲ್ಲಿ ‌ಯೋಧರನ್ನು  ಭಾರತದ ‌ಸೇನೆಗೆ  ಕೊಡುಗೆಯಾಗಿ  ಕೊಟ್ಟ ಕೀರ್ತಿ ಕೊಡಗಿಗಿದೆ. ವೀರ ಭೂಮಿ ಭೂರಮೆ‌  ದೇವ‌ ಸನ್ನಿದಿ‌ ಬಯಸಿ‌ಬಂದ ಬೀಡು.  ವಿಶಿಷ್ಟ ಸಂಸ್ಕೃತಿಯ‌ ಕೊಡವರ ನೆಲೆ‌ಬೀಡನ್ನೊಮ್ಮೆ ಸುತ್ತಾಡೊಣ ‌ಬನ್ನಿ.      ಜನರಲ್ ತಿಮ್ಮಯ್ಯ ಮ್ಯೂಸಿಯಂ

         ಕೊಡಂದೇರಿ  ಸುಬ್ಬಯ್ಯ  ತಿಮ್ಮಯ್ಯ ನವರು 1806 ರ  ಮಾರ್ಚ್ 30 ರಂದು ‌ಕೊಡಗಿನ  ಮಡಿಕೇರಿ ಯಲ್ಲಿ  ಜನಿಸಿದರು. ಕೊಡಂದೇರಿ‌ ಎನ್ನುವುದು ಮನೆತನದ ಹೆಸರು. 1926ರಲ್ಲಿ‌  ಬ್ರಿಟಿಷ್ ಇಂಡಿಯನ್  ಆರ್ಮಿಯಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದರು ಭಾರತದ ವಿಭಜನೆಯ ಸಂಧರ್ಭ ಪಾಕಿಸ್ಥಾನದೊಂದಿಗೆ ಸೈನ್ಯದ  ಮತ್ತು ಆಯುಧಗಳ  ವಿಲೇವಾರಿಯ ಕುರಿತು  ರಚಿಸಿದ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದು  ಎರಡನೇ  ಮಹಾಯುದ್ಧದಲ್ಲಿ‌  ಭಾಗಿಯಾಗಿದ್ದರು ಕೆ.ಎಸ್.ತಿಮ್ಮ ಯ್ಯ. 

            ಕೆಚ್ಚೆದೆಯ ಕಲಿಗಳ  ನಾಡು ಎಂದು‌ ಕರೆಸಿ‌ ಕೊಳ್ಳುವ ಕೊಡಗಿನಲ್ಲಿ  ಭಾರತೀಯ ಸೇನೆಯ ಶಕ್ತಿ, ಶೌರ್ಯ, ತ್ಯಾಗವನ್ನು ಸಾರುವ ಸಂಗ್ರಹಾಲಯವಾಗಿ ಅಭಿವೃದ್ಧಿಗೊಂಡಿದೆ. ಮಡಿಕೇರಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ  ಜನರಲ್  ಕೆ ಎಸ್. ತಿಮ್ಮಯ್ಯ ಮ್ಯೂಸಿಯಂ 2. 40 ಎಕರೆ‌  ವಿಸ್ತೀರ್ಣದ  ಪ್ರದೇಶದಲ್ಲಿ  ಸ್ಥಾಪನೆಗೊಂಡಿದೆ.  ಮುಸಿಯ್ಯಂ‌ ಒಂದು ಕೋಣೆ ನೀನಾ ಎಂದು ಹೆಸರಿಸಿ  ತಿಮ್ಮಯ್ಯ ಅವರ ಪತ್ನಿಯ ಹೆಸರಿಗೆ  ಮಿಸಲಾಗಿದೆ.  ನೀನಾ ಅವರ ನೃತ್ಯದ ಭಂಗಿಯೊಂದಿಗೆ  ಕೆಲ ಮಾಹಿತಿಯನ್ನು  ನೀಡಲಾಗಿದೆ.

      ಮಹಾದ್ವಾರ  ಪ್ರವೇಶಿಸುತ್ತಿದ್ದಂತೆ ಯೋಧರ ಸ್ಮಾರಕ ಎದ್ದು ಕಾಣುತ್ತದೆ. ಹುತ್ಮಾತ ಯೋಧರನ್ನು  ಗೌರವಿಸಿ ಸ್ಮರಿಸುವ ಸಲುವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದರಲ್ಲಿ ಯುದ್ಧ ಟ್ಯಾಂಕ್ ರ್, ಯುದ್ಧ ವಿಮಾನಗಳು, ದೇಶದ ಸೇನಾ ಸಂಪತ್ತನ್ನು ಎಳೆ ಎಳೆಯಾಗಿ ತೆರೆದಿಡುತ್ತದೆ. ಸೇನಾ ನಾಯಕ ಹಾಗೂ ಕೊಡವ ಸಂಪ್ರದಾಯ ಉಡುಗೆ ಧರಿಸಿ ತಿಮ್ಮಯ್ಯ ಅವರು ಮದುವೆಗೆ ಹೊರಟ ಅಪರೂಪದ ಚಿತ್ರವಿದೆ.

          ತಿಮ್ಮಯ್ಯ ಸರ್ಕಲ್

       ‌ಅಪ್ರತಿಮ ಯೋಧರಾದ  ಫೀಲ್ಡ್ ಮಾರ್ಷಲ್ ಕಾರ್ಯ ಪ್ಪ‌   ಹಾಗೂ ಭಾರತೀಯ ‌ಸೇನೆಯಲ್ಲಿ‌ ಜನರಲ್ ಹುದ್ದೆ ಏರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ  ಪಾತ್ರರಾದ  ಕೆ. ಎಸ್. ತಿಮ್ಮಯ್ಯ ಹಾಗೂ ಇಂದಿಗೂ ಭಾರತದ ಸೇನೆಯಲ್ಲಿ‌ ಕೊಡಗಿನ  ಶೂರರು,  ಯೋಧ ವೀರರು ಸಾಕಷ್ಟಿದ್ದಾರೆ. ಮಡಿಕೇರಿಯಲ್ಲಿ ತಿಮ್ಮಯ್ಯ ಸರ್ಕಲ್  ಇದ್ದು ಈ ಸರ್ಕಲ್ ಮಧ್ಯಭಾಗದಲ್ಲಿ ಸೇನಾ ಸಮವಸ್ತ್ರ ಧರಿಸಿದ್ದ  ತಿಮ್ಮಯ್ಯ ಅವರ ಪ್ರತಿಮೆ ಇದೆ. ಇದುವೇ ಕೊಡಗಿನ ಸುಪ್ರಸಿದ್ಧ ತಿಮ್ಮಯ್ಯ ಸರ್ಕಲ್.


   ‌    ಈ ತಿಮ್ಮಯ್ಯ ಸರ್ಕಲ್ ನಿಂದ ಸ್ವಲ್ಪ ‌ಮುಂದಕ್ಕೆ ಹೋದರೆ ಕಾಣುವ ಚಲುವಿನ‌  ತಾಣವೇ “ರಾಜ್ ಸೀಟ್ ” ಕೊಡಗಿಗೆ‌ಬಂದ ಪ್ರವಾಸಿಗರು ಇದನ್ನು ವೀಕ್ಷಿಸದೆ ಹೋದರೆ ‌ಪ್ರವಾಸ ಅಪೂರ್ಣ ಎನಿಸ‌ ಬಹುದು.‌ ಕೊಡಗಿನ‌ ಹಾಲೇರಿ‌ ಮನೆತನದ ಅರಸರಲ್ಲಿ ಪ್ರಖ್ಯಾತ ನಾಗಿದ್ದ‌ವೀರ  ರಾಜೇಂದ್ರ ಒಡೆಯರು  ಕಟ್ಟಿಸುರುವ ‌ಮಂಟಪವಿದು.  ಕೊಡವ ರಾಜರು ತಮ್ಮ ರಾಣಿಯ ರೊಂದಿಗೆ ಸಂಜೆ ವಾಯುವಿಹಾರಕ್ಕೆ‌ ತೆರಳಿ‌  ಸೂರ್ಯಾಸ್ತ‌  ವೀಕ್ಷಿಸುತ್ತಿದ್ದ ತಂಗಾಳಿ ಬೀಸುವ , ಸುಂದರ ಪ್ರಕೃತಿಯ  ಮಡಿಲು  ಈ ಸ್ಥಳ. ‌ಗುಡ್ಡ, ಬೆಟ್ಟ, ಪ್ರಕೃತಿಯ ನೈಜ ಸೊಬಗನ್ನು ಕಾಣಲು ಅನುಭವಿಸಲು‌  ಎರಡು  ಕಣ್ಣು ಸಾಲದು  ಎನ್ನಬಹುದಾದ ನಯನ ಮನೋಹರ ‌ಚಿತ್ತಾರಗಳು ಮನಸೂರೆಗಳ್ಳುತ್ತವೆ. ರಾಜ ಸೀಟ್ ಗೆ  ಹತ್ತಿರದಲ್ಲೆ  ಗಾಂಧಿ‌ ಮಂಟಪವಿದೆ . ಮಹಾತ್ಮ ಗಾಂಧಿಜೀ ಮಡಿಕೇರಿಗೆ  ಬೇಟಿ‌ ನೀಡಿದಾಗ ಜನರನ್ನು ಉದ್ದೇಶಿಸಿ‌ ಮಾತನಾಡಿದ‌  ನೆನಪಿಗಾಗಿ ಅದೇ ಸ್ಥಳದಲ್ಲಿ  ಈ ಮಂಟಪ ‌ನಿರ್ಮಿಸಲಾಗಿದೆ.

         ಉಡುಪಿ ಹಾಗೂ ‌ಮಂಗಳೂರಿನಿಂದ  ಕೊಡಗಿಗೆ  ಸಾಕಷ್ಟು ಬಸ್ಸುಗಳಿವೆ  ಮತ್ತು ಖಾಸಗಿ ಟ್ರಾವೆಲ್ಸ ನವರ ಕೊಡಗು‌  ಸ್ಪೆಷಲ್ ಟೂರ್ ಪೋಗ್ರಾಂ  ವ್ಯವಸ್ಥೆಯು  ಇರುತ್ತದೆ.  ಮಡಿಕೇರಿಯ ಒಂದೊಂದು ಸ್ಣಳವೂ  ನೋಡಿ ವಿಜೃಂಭಿಸುವಂತಹದ್ದು.  ಇಲ್ಲಿನ ಆಡಳಿತ ಭಾಷೆ ಹಾಲೇರಿ ರಾಜ ಕಾಲದಿಂದಲೂ  ಕನ್ನಡವಂತೆ.  ಕೊಡಗಿಗೆ ಬಂದವರು  ಸಂದರ್ಶಿಸ ಬೇಕಾದ  ಇನ್ನೊಂದು ತಾಣ‌ ಮಡಿಕೇರಿಯ‌ ಕೋಟೆ  ಎತ್ತರದ ಬೆಟ್ಟದ ‌ಮೇಲೆ ರಚಿಸಲ್ಪಟ್ಟಿರುವ  ಕೋಟೆ ಕೊಡಗಿನ ರಾಜ ಮಹಾರಾಜ ರ ಕಾಲದ ಗತ ವೈಭವವನ್ನು ಸಾರುತ್ತಿದೆ. ಕೋಟೆಯ  ಆವರಣದೊಳಗೆ  ಪ್ರಾಚ್ಯವಸ್ತು ಸಂಗ್ರಹಾಲಯವಿದ್ದು ಈ  ಕಟ್ಟಡದ ಕೆಲಭಾಗ ಈಗ ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತದೆ. ಕೋಟೆಯ ಒಳಗೆ ಎರಡು ಆನೆಗಳ ದೊಡ್ಡ ‌ಮೂರ್ತಿ ಇದೆ.

       ತಲಕಾವೇರಿ


         ಮಡಿಕೇರಿಯಿಂದ 46 ಕಿ.ಮೀ‌ ದೂರದಲ್ಲಿರುವ  ತಲಕಾವೇರಿಯು  ಕರ್ನಾಟಕದ ಪ್ರಾಚೀನ ತೀರ್ಥ ‌ಕ್ಷೇತ್ರಗಳಲ್ಲೊಂದು .ತಲಕಾವೇರಿಯಲ್ಲಿ ‌ತೀರ್ಥೋದ್ಬವ  ಕೊಡವರ ಪವಿತ್ರ ‌ಹಬ್ಬ 

     ಭಾಗಮಂಡಲ


      ಮಡಿಕೇರಿಯಿಂದ 29 ಕಿ.ಮಿ ದೂರದಲ್ಲಿರುವ  ಭಗ ಮಂಡಲ ಕಾವೇರಿ ನದಿಯ ದಂಡೆಯ ಮೇಲಿದೆ. ಇಲ್ಲಿನ ಕಾವೇರಿ ನದಿ ಜೊತೆಗೆ ಕನ್ನಿಕೆ ತೊರೆ ಹಾಗೂ ಸುಜ್ಯೋತಿ ಎಂಬ  ಗುಪ್ತಗಾಮಿನಿ‌  ನದಿಯು ಸೇರುತ್ತದೆ. ಇದನ್ನು ತ್ರಿವೇಣಿ ಸಂಗಮ ಎನ್ನುತ್ತಾರೆ. ಇಲ್ಲಿ ಇತಿಹಾಸ ಪ್ರಸಿದ್ಧ ಭಗಂಡೇಶ್ವರ ದೇವಾಲಯವಿದೆ.

     ಓಂಕಾರೇಶ್ವರ        

    
        ‌ಕೊಡಗಿನ ಬಹು ಪುರಾತನ ಐತಿಹಾಸಿಕ  ಪುಣ್ಯ ಕೇತ್ರಗಳಾದ  ಓಂಕಾರೇಶ್ವರ ದೇವಸ್ಥಾನವೂ ಒಂದು .  ಮಡಿಕೇರಿ ಪೇಟೆಯ ಕೇಂದ್ರ ಭಾಗದಲ್ಲಿರುವ  ಮಹಾರಾಜ ಲಿಂಗರಾಜರು  ಕಟ್ಟಿಸಿದ  ಸುತ್ತಲೂ ಆವರಣ ಹೊಂದಿದ  ವಿಶಷ್ಟ ಆಧ್ಯಾತ್ಮ ತಾಣ.    ಇಂಡೊ ಇಸ್ಲಾಮಿಕ್ ವಾಸ್ತು ಶೈಲಿಯನ್ನು ಹೊಂದಿದೆ.  ದೇವಳದ  ಮಧ್ಯದಲ್ಲಿ ವಿಶಾಲವಾದ  ಪುಷ್ಕರಣಿ ಇದ್ದು ಸುತ್ತಲೂ ದೇವಸ್ಥಾನಗಳಿವೆ.  
         ಈ ದೇವಳದಲ್ಲಿ ಚೌಕಾಕಾರದ ನಿರ್ಮಿತಿಯ‌ ಕೇಂದ್ರ ಭಾಗದಲ್ಲಿ‌ ಚಿನ್ನ ಲೇಪಿತ ಹೊಂದಿರುವ  ಗುಮ್ಮಟವಿದ್ದು ನಾಲ್ಕು ಮೂಲೆಗಳಲ್ಲಿ ಮಿನಾರ್ ಗಳನ್ನು  ಹೋಲುವ ರಚನೆಯ  ಗೋಲಾಕಾರದ  ಗುಮ್ಮಟವಿದ್ದು ಆಕರ್ಷಕ ಮುಕುಟದಂತೆ ಶೋಭಿಸುತ್ತಿದೆ.  ಅನನ್ಯ ಶೈಲಿಯ ವಾಸ್ತು  ಹೊಂದಿ ಮುಸ್ಲಿ‌ ಜನಾಂಗದ ದರ್ಗಾ ದಂತೆ‌  ವಿನ್ಯಾಸ  ಹೊಂದಿದೆ. 
  
        ಈ ದೇವಳದ  ಇತಿಹಾಸಿಕ  ಹಿನ್ನೆಲೆಯಂತೆ  ದೇವಸ್ಥಾನದ  ನಿರ್ಮಾಣದ  ಹಿಂದಿನ ‌ಕಥಾರೂಪದಲ್ಲಿ‌  ಲಿಂಗ ರಾಜರ ಆಳ್ವಕೆಯ ಕಾಲದಲ್ಲಿ‌ ನಡೆಯುತ್ತಿದ್ದ ಅನಾಹುತ, ತಪ್ಪುಗಳನ್ನು ಎತ್ತಿ ತೋರಿಸಿದ ಪ್ರಾಮಾಣಿಕ  ಬ್ರಾಹ್ಮಣರ  ಹತ್ಯೆಗೆ  ಕಾರಣನಾದ  . ಬ್ರಾಹ್ಮಣ ಸಾವಿನ ನಂತರ ರಾಜನನ್ನು ಬ್ರಹ್ಮ ರಾಕ್ಷಸನಾಗಿ‌ ಈತನ ಕನಸಿನಲ್ಲಿ  ಕಾಣಲಾರಂಭಿಸಿದ ನಿದ್ರಿಸಲು ಅಸಮರ್ಥನಾದ ರಾಜ ಆರೋಗ್ಯ ಹದಗೆಟ್ಟಿತ್ತು. ಬ್ರಹ್ಮ ಹತ್ಯೆ ದೋಷದ ಪರಿಹಾರಕ್ಕಾಗಿ  ರಾಜ ಜ್ಯೋತಿಷಿಯೊಬ್ಬರ  ಸಲಹೆಯಂತೆ ಕಾಶಿಯಿಂದ ಶಿವಲಿಂಗ ತರಿಸಿ ಆ ಬ್ರಹ್ಮಣನ ಮನೆ ಇದ್ದ ಜಾಗದಲ್ಲಿ ದೇವಸ್ಥಾನ ಕಟ್ಟಿಸಿದ ರಾಜ . ಈ ದೇವಾಲಯ ವೇ ಕೊಡಗಿನ ಕೇಂದ್ರ ಪಟ್ಟಣ ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಸ್ಥಾನ.
        
         ದೇವಸ್ಥಾನದ ಮುಖ್ಯ ದ್ವಾರದ ಹತ್ತಿರವೇ  ಶಿವಲಿಂಗ ಸ್ಥಾಪನೆ ಗೊಂಡಿದೆ‌ ಶಿವಲಿಂಗದ ಇಕ್ಕೆಲಗಳಲ್ಲಿ ಗಣೇಶ ‌ಹಾಗೂ ಕಾರ್ತಿಕೇಯ  ಮೂರ್ತಿ ಗಳಿವೆ. ದೇವರ ಗರ್ಭಗುಡಿಯಲ್ಲಿ  ಮಧ್ಯಭಾಗದಲ್ಲಿ ಶ್ರೀ ಓಂಕಾರೇಶ್ವರ ದೇವರ‌ಬಿಂಬ ಎಡಭಾಗದಲ್ಲಿ‌ ಸುಬ್ರಹ್ಮಣ್ಯ ಹಾಗೂ ‌ಬಲ ಭಾಗದಲ್ಲಿ  ಗಣಪತಿ ‌ವಿಗ್ರಹವಿದೆ. 

    ಬೈಲುಕುಪ್ಪೆ ಸ್ವರ್ಣ‌ಮಂದಿರ

      ಮೈಸೂರು  – ಮಡಿಕೇರಿ ರಸ್ತೆಯಲ್ಲಿ  ಕುಶಲ ನಗರದ ‌ಸಮಿಪ ಕೊಪ್ಪ ಎಂಬ ಊರಿದೆ.  ಕುಶಲನಗರದ ಬಳಿಯಿಂದ ಒಳದಾರಿ ಹಿಡಿದು ಬೆಟ್ಟಗುಡ್ಡಗಳ ಅಂಕು ಡೊಂಕು ಉಬ್ಬು ತಗ್ಗಿನ ಕಿರುದಾರಿಯಲ್ಲಿ ಕೆಲವು ಕೀಲೋಮಿಟರ್ ಕ್ರಮಿಸಿದರೆ ಕಾತರದಿಂದ  ನಿರೀಕ್ಷಿತ   ಬೈಲು ಕುಪ್ಪೆಯಲ್ಲಿರುವ ನಾಮ್ ಡ್ರೂಲಿಂಗ್ ನಿಂಗ್ಮವ ಬೌದ್ಧ ವಿಹಾರ ಅಥವಾ   ಟಿಬೇಟಿಯನ್ನ್  ಗೋಲ್ಡನ್  ಟೆಂಪಲ್ ‌ಸ್ವರ್ಣ ಮಂದಿರ‌ವಿದೆ. 

 ‌   ‌‌    ವರ್ಣ ರಂಜಿತ‌ಮಹಾದ್ವಾರ ಪ್ರವೇಶಿಸುತ್ತಿದ್ದಂತೆ ಪದ್ಮ ಪುಷ್ಪಗಳ ರಂಗೋಲಿಗಳು  ಭವ್ಯ ‌ಮಂದಿರಕ್ಕೆ  ಸ್ವಾಗತಿಸುತ್ತವೆ. ಭಗವಾನ್ ಬುದ್ದನ ಬೃಹತ್ ಚಿನ್ನದ ವಿಗ್ರಹ ಮತ್ತು ಬುದ್ದನ ಬೇರೆ ಬೇರೆ ರೂಪದ ಚಿನ್ನದ ವಿಗ್ರಹಗಳು ಇದ್ದು . ಗೋಪುರದಲ್ಲಿದ್ದ ದೊಡ್ಡ ಭಾವ ಚಿತ್ರ ಸಂಸ್ಥಾಪಕರನ್ನು ಕಣ್ಮಂದೆ ನಿಲ್ಲಿಸಿರುವ  ಈ ಮಂದಿರದ ಎಡ ಪಾರ್ಶದಲ್ಲಿರುವ ಬೃಹತ್ ಘಂಟೆಗಮನ ಸೆಳೆಯುತ್ತದೆ. ತುಸು ಹಿಂಬದಿಗಿರುವ ತಾರಾ ಮಂದಿರ ಗೋಪುರದಲ್ಲಿನ ಕನಕ ವರ್ಣದ ಕುಸುರಿ ಕೆಲಸದ ಅಂಚುಗಳು , ಜಿಂಕೆಗಳು , ಘಂಟಾಕೃತಿಯ  ವಿಶೇಷ ಸೌಂದರ್ಯದಿಂದ ಚಿತ್ತಾಕರ್ಷಿಸುವು.

       ವಿಶಾಲ ಸ್ವರ್ಣ ಮಂದಿರ ಪದ್ಮ ಸಂಭ್ತದ ವಿಹಸರ ಗೋಪುರದಲ್ಲಿಯೂ ಚಿನ್ನದ ಬಣ್ಣದ ಜಿಂಕೆಗಳು, ಘಂಟಾಕೃತಿಗಳಿವೆ. ಪ್ರಶಾಂತ ಹಾಗೂ ಆಧ್ಯಾತ್ಮಿಕ ಪರಿಸರದ ಈ ಪ್ರಾರ್ಥನಾ ಮಂದಿರದ ಮುಖ್ಯ ಆಕರ್ಷಣೆ ಪದ್ಮಸಂಭವ, ಸುಖಯಾಮಿ, ಅಮಿತಾಯುಸ್ ಸಂತರ‌ ಕನಕಲೇಪಿತ ಮೂರ್ತಿ ಗಳು. ಅದೂ ಅಲ್ಲದೆ. ಅನೇಕ ವಿಗ್ರಹಗಳು ಇಲ್ಲಿದೆ.
        
       ಮೂರು ಮಂದಿರಗಳಲ್ಲಿರುವ ಟಿಬೇಟ್ ಸಂಪ್ರದಾಯಿಕ ವರ್ಣ ಚಿತ್ರಗಳು ಮತ್ತು ಬೌದ್ಧ ಧರ್ಮದ ಪುರಾಣ ಕಥೆಗಳ ಪಾತ್ರಗಳು ಅರುವಿಗೆ ನೆರವಾಗುವಂತಿ ದ್ದವು ಬೈಲು ಕುಪ್ಪೆಯ ಟಿಬೇಟಿಯನ್ ರ  ನೆಲೆಯ ಪಕ್ಷಿ ನೋಟ ನೀಡುವ ಮಾದರಿಯು ಇಲ್ಲಿದೆ.  ಬೆಳಗ್ಗೆ 9 ಗಂಟೆ ಯಿಂದ ಸಂಜೆ 6 ವರೆಗೆ‌  ವೀಕ್ಷಣೆಗೆ ತೆರೆದಿರುತ್ತದೆ. 

            ಸುಂದರ ಉದ್ಯಾನವನ , ಕಾರಂಜಿಗಳು, ಮಂಟಪ, ಬೌದ್ಧ ಧರ್ಮದ ಸಂಕೇತವಾದ ಕೈಯಿಂದ ತಿರುಗಿಸ ಬಹುದಾದ  ಬೃಹತ್ ‌ಮರದ  ಚಕ್ರಗಳು ಇಲ್ಲಿವೆ. 
 ಅಷ್ಟೇ ಅಲ್ಲದೇ, ಕೊಡಗಿನ ಐತಿಹಾಸಿಕ ಸ್ಥಳಗಳಲ್ಲಿ ಹೊನ್ನಮ್ಮನ ಕೆರೆ, ನಾಲ್ನಾಡ್ ಅರಮನೆ, ಕೊಡವರ‌ ಕುಲದೈವ  ಇಗ್ಗು ತಪ್ಪ‌ ದೇವಸ್ಥಾನಗಳನ್ನು ಸಂದರ್ಶಿಸ ಬಹುದು. 

       ನಿಸರ್ಗ ಪ್ರಿಯರಿಗೆ ತಕ್ಕುದಾದ ಕಾವೇರಿ ನಿಸರ್ಗಧಾಮವಿದೆ. ಜಿಂಕೆವನ, ಮೊಲಗಳು, ಆನೆ ಸವಾರಿ ಹಾಗೂ ದಟ್ಟವಾಗಿ‌ ಬೆಳೆದ ಕಾಡು ಗಮನ ಸೆಳೆಯುತ್ತದೆ. ಆದರೆ ಈ ಕಾವೇರಿ ನಿಸರ್ಗ ಧಾಮ ಸರಿಯಾದ ‌ನಿರ್ವಹಣೆ ಇಲ್ಲದೆ  ನಶುಸುತ್ತಿದೆ. ಇದನ್ನು ಇನ್ನೂ ಸಮೃದ್ದಗೊಳಿಸ ಬಹುದು.‌

ನಾಲ್ಕು ನಾಡು ಅರಮನೆ


     ಕೊಡಗು ಅರಸರ ಕೊನೆಯ ಅಡಗು ತಾಣವೆನ್ನುವ ‌ಮಹಾಮನೆ ನಾಲ್ಕು ನಾಡು ಅರಮನೆ  ಬೆಟ್ಟ‌ ಮತ್ತು ಕಾಡುಗಳ ನಡುವೆ ಇರುವ ಅರಮನೆ.ಕೊಡಗಿನ  ಪರ್ವತ ಗಳು ಹಾಗೂ ‌ಕಾಫಿ‌ತೋಟಗಳ  ನಡುವೆ  ಇರುವ ‌ನಾಲ್ಕು ನಾಡು ಅರಮನೆಯನ್ನು ‌ನೋಡಲು ಹೋಗುವುದೆಂದರೆ  ಶ್ರಮ ಪಡಬೇಕು.ಕೊಡಗಿನ ಅತಿ ಎತ್ತರದ ಶಿಖರದ‌ ದಾರಿಯಲ್ಲಿ‌ ಸಾಗುವ ‌ನಾಲ್ಕು‌ನಾಡು ಪ್ರದೇಶದಲ್ಲಿ  ಹೋಗಲು ಈಗ ಸ್ವಲ್ಪ ಸಾಹಸ ‌ಮಾಡ‌ಬೇಕಾಗುತ್ತದೆ.‌ 
  
       ಕರ್ನಾಟಕ ಸರಕಾರದ ಪುರತತ್ವ‌ ಇಲಾಖೆಯ ವಶದಲ್ಲಿದ್ದು‌ ಮಾರ್ಗದರ್ಶಿ  ಹಾಗೂ ಕಾವಲು ಸಿಬ್ಬಂದಿ ಇರುವುದರಿಂದ ಸೂಕ್ತ ರಕ್ಷಣೆ ದೊರತಿದೆ‌. ಅರಮನೆಗೆ  ಪ್ರವೇಶಿಸುವ ಮುನ್ನ ಒಂದು ಹೆಬ್ಬಾಗಿಲು ಅದರಲ್ಲಿರುವ  ಪುಟ್ಟ ಕಾವಲುಮನೆ, ಅಲ್ಲಿಂದಾಚೆ, ವಿಶಾಲವಾದ ಅಂಗಳದಂತಹ‌  ರಚನೆ ,  ಅರಮನೆಯ ಎದುರು ಎಡಭಾಗದಲ್ಲಿ ಪುಟ್ಟದಾದ ಮಂಟಪ ಕೊಡಗಿನ ರಾಜ ತನ್ನ ‌ಮದುವೆಯ ಸಂದರ್ಭದಲ್ಲಿ ಕಟ್ಟಿಸಿದ ಮದುವೆ ‌ಮಂಟಪ ಅದು. ಮೆಟ್ಟಿಲು ಹತ್ತಿ ಅರಮನೆಯನ್ನು ಪ್ರವೇಶಿಸಿದರೆ  ಮರದ ಕಂಬಗಳು ಸಾಲಾಗಿ ನಿಂತಿದ್ದು ಗಮನ ಸೆಳೆಯುತ್ತದೆ.  ಗೋಡೆ ತುಂಬಾ ಭಿತ್ತಿ ಚಿತ್ರಗಳು. ಅರಮನೆಯ ಕೆಲವು ಭಾಗಗಳ ಛಾವಣಿಗೂ‌ ವರ್ಣ ವಿನ್ಯಾಸ ವಿದೆ. ಮಳೆಗಾಲದ  ತೇವಾಂಶ ದಿಂದಾಗಿ ಕೆಲವು  ಚಿತ್ರಗಳು‌ ಮಾಸಿಹೋಗಿದೆ.‌ನಾಲ್ಕು ಅರಮನೆಯಲ್ಲಿ 14 ಕೊಠಡಿಗಳಿದ್ದು ಭೂಗರ್ಭ ದಲ್ಲಿ ಮೂರು ಕತ್ತಲ ಕೋಣೆಗಳು ಇದೆ. ಈ ತುಸು ಅಪಾಯಕಾರಿ ಸ್ಥಿತಿ ಯಲ್ಲಿರುವ ಈ ಕೋಣೆಗೆ ಪ್ರವೇಶಿಸಲು ನಿರ್ಬಂಧವಿದೆ.

      ತ್ರೀವ್ರ ಕಡಿದಾದ ಮೆಟ್ಟಿಲುಗಳನ್ನು  ಇಳಿದು ಆ ಕೋಣೆಯನ್ನು  ಪ್ರವೇಶಿಸಿದರೆ  ಕಗ್ಗತ್ತಲು  ಕೋಣೆಗೆ  ಕಿಂಡಿಗಳೇ ಇಲ್ಲ .ಗಾಳಿ ಬೆಳಕು ಆಡಲು ಸಹ ಅವಕಾಶವಿಲ್ಲ.

      ಕೊಡಗಿನ ಕೊನೆಯ ಅರಸ ಚಿಕ್ಕ ವೀರರಾಜೇಂದ್ರನ ಮೇಲೆ ಕ್ರೂರ‌  ಆಡಳಿತದ  ಆರೋಪ‌ ಹೋರಿಸಿ‌  ಬ್ರಿಟಿಷರು.ಅದೇ‌ ನೆಪದಲ್ಲಿ‌‌  ಕೊಡಗಿನ ‌ಮೇಲೆ  ಅಕ್ರಮಣ ಮಾಡುತ್ತಾರೆ. ‌ಮಡಿಕೇರಿಯ  ಕೋಟೆಯನ್ನು ಅವರು‌‌ ವಶಪಡಿಸಿ  ಕೊಂಡಾಗ ಚಿಕ್ಕ ವೀರರಾಜೇಂದ್ರನು ತನ್ನ ಕೆಲವರೊಂದಿಗೆ ನಾಲ್ಕು ನಾಡು ಅರಮನೆಯಲ್ಲಿ‌ ಕೆಲವು ದಿನಗಳ ಕಾಲ ಅಡಗಿದ್ದು ಅಲ್ಲಿಂದಲೇ ಹೋರಾಟ‌  ನಡೆಸಲು  ಹವಣಿಸುತ್ತಿದ್ದನು. ಆದರೆ ಬ್ರಿಟಿಷ್ ಸೈನ್ಯದ ಬಲವನ್ನು ಎದುರಿಸಲಾಗದೆ  ನಂತರ ಶರಣಾಗುತ್ತಾನೆ.

    ಮಾಂದಲಪಟ್ಟಿ

ಮಾಂದಲಪಟ್ಟಿ ಪುಷ್ಪ ಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಇರುವುದರಿಂದ ಅರಣ್ಯ ಇಲಾಖೆಯ ನಿರೀಕ್ಷೆಯಲ್ಲಿ ಬರುತ್ತದೆ. ಕೊಡಗಿನ ಪ್ರಮುಖ  ಪ್ರೇಕ್ಷಣೀಯ ತಾಣಗಳಲ್ಲಿ  ಒಂದಾಗಿರುವ  ಮಾಂದಲಪಟ್ಟಿಗೆ  ಪ್ರಾಕೃತಿಕ ದುರಂತದ ‌ನಂತರ ಇತ್ತೀಚಿನ  ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು‌ ಬೇಟಿ ನೀಡುತ್ತಾರೆ. ಆದರೆ ಈ ಪ್ರದೇಶದ ಲ್ಲಿ  ನಡೆಯುವ  ಮೊಜು ಮಸ್ತಿ ಅನೈತಿಕ ‌ಚಟುವಟಿಕೆ ತಾಣವಾಗಿ  ಬದಲಾಗುತ್ತಿದೆ.  ಅನೇಕ ಕಾನೂನು ಬಾಹಿರ  ಕೆಲಸಗಳು  ನಡೆಯುತ್ತಿದೆ. ಎಲ್ಲೆಂದರಲ್ಲಿ ಮಧ್ಯದ ಬಾಟಲಿಗಳು, ಸಿಕ್ಕ ಸಿಕ್ಕಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಗಳು, ಮಾದಕ ವ್ಯಸನಿಗಳ  ಅಲೆದಾಟ, ಹದ್ದುಮಿರಿದ  ಯುವ ಜೋಡಿಗಳ ಚಲ್ಲಾಟಗಳಿಂದಾಗಿ  ಕುಟುಂಬದದೊಂದಿಗೆ  ವಿಹಾರಕ್ಕೆ ‌ಬರುವವರಿಗೆ  ಮುಜುಗರ ತರುತ್ತದೆ‌. ಅಪರೂಪದ ಶೋಲಾ ಅರಣ್ಯದ ಮಹತ್ವದ ಅರಿವಿಲ್ಲದೆ ಹುಲ್ಲುಗಾವಲು  ಹಾನಿ ಗೊಳಿಸುತ್ತಾ  ಬೈಕ್ ರೈಡ್, ಜೀಪ್ ಸಾಹಸ ಪ್ರದರ್ಶನ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

     ಅಬ್ಬಿಪಾಲ್ಸ್ 

         ತೋಟದ ಮಧ್ಯೆ ಅಬ್ಬಿಪಾಲ್ಸ್ ಎನ್ನುವ ಜಲಪಾತವಿದೆ.  ಬೆಟ್ಟದಿಂದ  ಇಳಿಯುವ  ನೀರಿನ ಧಾರೆಗಳು ಒಂದಾಗಿ ಎತ್ತರದಿಂದ ಧಸಲ್ಲನೆ ಬಂಡೆಗಳ‌  ಮೇಲೆ ಬಿದ್ದು ಅಬ್ಬರುಸುವ  ಪರಿ ತೂಗೂ  ಸೇತುವೆ ಯಲ್ಲಿ  ಸಾಗುತ್ತಾ ಹೋದರೆ  ಭೋರ್ಗರೆಯುತ್ತಾ ಧುಮುಕುವ  ಜಲಪಾತ ನೋಡುವುದು ರೋಚಕ ಅನುಭವ.  ಇರಪ್ಪು  ಜಲಪಾತ ಕೂಡ ‌ಬಿಡದೆ ನೋಡ‌ಬೇಕಾದ  ಸ್ಥಳ.

    ಕೊಡವರ ಹಬ್ಬ

ಕೊಡವರ‌ ಹಬ್ಬ ಹರಿದಿನಗಳಲ್ಲಿ ಮಾಂಸಹಾರಕ್ಕೆ  ಹೆಚ್ಚಿನ ಪ್ರಾಶಸ್ತ್ಯ. ಆದರೆ ಕಾವೇರಿ ಸಂಕ್ರಮಣದಂದು ಮಾಂಸಹಾರ ನಿಷಿದ್ಧ. ಕೊಡವರ ಹಬ್ಬಗಳಲ್ಲಿ ಕೈಲ್ ಪೋಲ್ಡ್ ನೆಮ್ಮೆ, ಕಾವೇರಿ ಸಂಕ್ರಮಣ, ಹುತ್ತರಿ ಹಬ್ಬ ಪ್ರಮುಖ ಹಬ್ಬಗಳು. ಪ್ರಕೃತಿ ‌ಮಾತೆಯ ಲಾಸ್ಯಮಯ ನರ್ತನದ ರಂಗಸ್ಥಳದವಾದ ಕೊಡಗಿನಲ್ಲಿ ಪ್ರವಾಸಿಗರು ಸದಾ ತುಂಬಿರುತ್ತಾರೆ. ಕೊಡಗಿಗೆ ಮಿನಿ‌ ವಿಮಾನ‌ ನಿಲ್ದಾಣ ತೆರೆಯುವ ಯೋಜನೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಜಾರಿಗೊಂಡಿದೆಯಾದರೂ ಇನ್ನೂ ಈ ಯೋಜನೆ ಬಾಕಿ ಇದೆ. 
             
      ಮಡಿಕೇರಿಯಲ್ಲಿ ಶಕ್ತಿ ದೇವತೆಗಳ ಕರಗ‌ ಮಹೋತ್ಸವವು‌ ನಡೆಯುತ್ತದೆ. ಕೊಡಗಿನ  ಕೇಂದ್ರ ಸ್ಥಾನ ‌ಮಡಿಕೇರಿಯಲ್ಲಿ‌ ಜರಗುವ  ಜನೋತ್ಸವ  ದಸರಾ ವಿಭಿನ್ನತೆಯಿಂದ ಗಮನ ಸೆಳೆದಿದೆ. ಇಲ್ಲಿನ ದಸರಾ ಆಚರಣೆ ಹತ್ತು ಹಲವು ವಿಶೇಷತೆಗಳಿವೆ. ನವರಾತ್ರಿ ಉತ್ಸವದ  ವೇಳೆ ಮಡಿಕೇರಿ ನಗರ ಪ್ರದಕ್ಷಿಣೆ ಈ ದೇವರ ಕರಗದಲ್ಲಿ ಸುತ್ತುವರಿದಾಗ  ಮನೆ ಬಾಗಿಲಿಗೆ  ಮಾರಿಯಮ್ಮ‌ದೇವರ  ಕರಗ  ಬರುವುದರಿಂದ ‌ ಸುತ್ತ ‌ಮುತ್ತಾ ಸ್ವಚ್ಚವಾಗಿಟ್ಟು ಸಾಂಕ್ರಾಮಿಕ ರೋಗ  ನಿಯಂತ್ರಣಕ್ಕೆ ಬಂತು ಎಂದು ಹಿರಿಯರು  ಹೇಳುತ್ತಾರೆ. 

     ‌‌   ಮಂಜಿನ ನಗರಿ ಖ್ಯಾತಿಯ  ಮಡಿಕೇರಿಯಲ್ಲಿ  190 ವರ್ಷಗಳ ಹಿಂದೆ ಜನತೆ ಸಂಕ್ರಮಿಕ  ಕಾಯಿಲೆಯಿಂದ ಜೀವ ಕಳೆದು ಕೊಳ್ಳಲಾರಂಬಿಸಿದಾಗ  ಆಳ್ವಿಕೆ ನಡೆಸುತ್ತಿದ್ದ ರಾಜರು, ರೋಗ‌ನಿಯಂತ್ರಣಕ್ಕೆ‌ ಧಾರ್ಮಿಕ  ಕೈಂಕರ್ಯ‌ಕೈ ಗೊಳಲು  ನಿರ್ದರಿಸುತ್ತಾರೆ.ಪಂಡಿತರ  ಸಲಹೆಯಂತೆ ನಾಲ್ಕು ಮಾರಿಯಮ್ಮ ದೇವಾಲಯವನ್ನು ಮಡಿಕೇರಿಯಲ್ಲಿ ಸ್ಥಾಪಿಸಲಾಗಿದೆ.

      ಉದ್ಯಮ  ಕ್ಷೇತ್ರದಲ್ಲಿ ಕೊಡಗು ಮುಂದಿದೆ . ಕಾಫಿ ಕಫ್ ಆಫ್ ಇಂಡಿಯಾ ಎಂದು ಕರೆಸಿ ಕೊಳ್ಳುವ ಕೊಡಗು  ಕಾಫಿ ಉದ್ಯಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ‌  ಗುರುತಿಸಿ ಕೊಂಡಿದೆ. ಇಲ್ಲಿನ ವಿರಾಜ‌ಪೇಟೆ, ಏಷ್ಯಾದಲ್ಲೇ  ಅತಿ ಹೆಚ್ಚು ‌ಜೇನು ತುಪ್ಪವನ್ನು‌  ಉತ್ಪಾದಿಸುವ  ಪ್ರದೇಶ.

        ಪ್ರಕೃತಿ ದತ್ತವಾದ ಸಸ್ಯ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದ‌  ಕೊಡಗಿನ ನೆಲ, ಜಲ, ಪ್ರಕೃತಿಯ‌ ಬಗೆಗೆ ಪ್ರತ್ಯೇಕ ಅನುಭವ ಪಡೆದುಕೊಳ್ಳುತ್ತಾ‌ ಅಲ್ಲಿನ  ಸೊಬಗನ್ನು ಕಣ್ತುಂಬಿಕೊಳ್ಳುತ್ತಾ‌  ಇಲ್ಲಿನ ನಿರ್ಮಲ ಪ್ರಶಾಂತ ವಾತಾವರಣದಲ್ಲಿ ತಿರುಗಾಡುತ್ತಿದ್ದರೆ ಉತ್ಸಾಹ ಚಿಗುರೊಡೆಯುತ್ತದೆ. ಅಂತೂ‌ ಮನಸ್ಸಿಲ್ಲದ ಮನಸ್ಸಿನಿಂದ‌  ಕೊಡಗಿನಿಂದ ಹೊರಡಲೇ‌ ಬೇಕಾಯಿತು  ಮರಳಿ ಕೊಡಗನ್ನು  ಸಂದರ್ಶಿಸುವ  ಬಯಕೆಯೊಂದಿಗೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments