ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ಚಳಿ……ಚಳಿ…ಓಹೋ ಹೇಮಂತ ಋತುವಿನ ಆಗಮನ ಕಾರ್ತಿಕ ಮುಗಿಯುತ್ತಲೇ ಮಂಜು ಮುಸುಕಿದ ಪ್ರಕೃತಿ ಚಳಿಯ ಜತೆಗೂಡಿ ಬೀಸುವ ಗಾಳಿಯು ಹೇಮಂತನ ಆಗಮನದ ಸೂಚನೆ ನೀಡುತ್ತದೆ. ಮಾರ್ಗಶಿರ ಮತ್ತು ಪುಷ್ಯಮಾಸದ ನಂತರ ಬರುವ ಶಿಶಿರಮಾಘ ಮತ್ತು ಫಾಲ್ಗುಣಮಾಸವು ಹೊದ್ದು ಮಲಗಲು ಬಹು ಸುಖದ ಕಾಲ. ಚುಮು ಚುಮು ಚಳಿಗೆ ಮುಸುಕು ಹೊದ್ದು ಮಲಗಿದರೆ ಕಾಣುವ ಕನಸುಗಳಿಗೆ ಬೆಲೆ ಇಲ್ಲ ಎನ್ನುತ್ತಾರೆ. ಚಳಿಗಾಲದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹೆಚ್ಚಾಗಿ ಬಿಸುವ ಗಾಳಿಯೊಂದಿಗಿನ ಚುಮು ಚುಮು ಚಳಿ ಪ್ರಕೃತಿ ಸೌಂದರ್ಯದ ನರ್ತನ ಅನ್ನಬಹುದು. ಥರಗುಟ್ಟುವಂತಹ ಚಳಿಯ ಆತಂಕದ ಹೊಡೆತವನ್ನು ಎದುರಿಸಬೇಕಾದ ಪರಿಸ್ಥಿತಿ. ಚಳಿ ತನ್ನ ಪ್ರತಾಪ ತೋರಿಸುತ್ತಾ ಕೆಲವೆಡೆ ಮೈಕೊರೆಯುವ ಚಳಿಯಿಂದಾಗಿ ಸೂರ್ಯೋದಯ ಕಾಣದಂತಾಗುತ್ತದೆ. ಹಗಲು ಹೊತ್ತಿನಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಗಿದ್ದು ಋತುಗಳ ಬದಲಾವಣೆ ನಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂಪೂರ್ಣ ಆವರಿಸುತ್ತದೆ ಸಾಮಾನ್ಯವಾಗಿ ನಮೆಂಬರ್‌ನಿಂದ ಫೆಬ್ರುವರಿವರೆಗೆ ಚಳಿಗಾಲವಿರುತ್ತದೆ.
ಈ ಬಾರಿ ವಾಡಿಕೆಗೂ ಮುನ್ನವೆ ಚಳಿ ಶುರುವಾಗಿ ಚಳಿ ತುಸು ಹೆಚ್ಚು ನಡುಕ ತರಲಿದೆ ಎಂದು ಭಾರತೀಯ ಹವಾಮಾನ ಇಖಾಖೆ ಹೇಳಿದೆ. ಈ ಚಳಿ ಹೆಚ್ಚಾಗಲು ತಾಪಮಾನ ಬದಲಾವಣೆ ಕಾರಣವಲ್ಲ ಬದಲಾಗಿ ವಾತಾವರಣ ಅನಿಯಮಿತ ಸ್ಥಿತಿಯಿಂದ ಉಂಟಾಗಲಿದೆ. ಜಾಗತಿಕ ಹವಾಮಾನ ಪರಿಸ್ಥಿತಿಗಳು ಭಾರತೀಯ ಮುಂಗಾರಿನ ಮೇಲೆ ಪ್ರಭಾವ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದು. ಇತೀಚಿನ ದಿನಗಳಲ್ಲಿ ದೇಶದ್ಯಾಂತ ಸತತ ಮಳೆ ಆಗುತ್ತಿರುವುದರಿಂದ ತಣ್ಣನೆ ಗಾಳಿ ಬೀಸಲು ಕಾರಣವಾಗಿ ಮೋಡ ಕವಿದ ವಾತಾವರಣವೂ ಹೆಚ್ಚು ಕಂಡುಬರಲಿದೆ. ವಾಯು ಭಾರ ಕುಸಿತದಿಂದ ಕೆಲವು ಪ್ರಮುಖ ನಗರಗಳಲ್ಲಿ ತುಂತುರು ಮಳೆ ಬೀಸುವ ಶಿತಗಾಳಿಯಿಂದ ಜನರು ನಡುಗುವಂತಹ ವಾತಾವರಣ ಕಂಡು ಬಂದಿದೆ. ಜಿಟಿ ಜಿಟಿ ಮಳೆ ಜತೆಗೆ ಮೈಕೊರೆವ ಚಳಿ ಜನರನ್ನು ನಡುಗುವಂತೆ ಮಾಡಿದೆ. ಮಳೆಯ ಜತೆಗೆ ತೇವಾಂಶಭರಿತ ಮೋಡಗಳಿಂದಾಗಿ ತಣ್ಣನೆ ಗಾಳಿ ಬೀಸುವುದರಿಂದ ವಾತಾವರಣದಲ್ಲಿ ಭಾರಿ ಏರುಪೇರಾಗಿದೆ.
ಉತ್ತರ ಭಾರತದಲ್ಲಿ ಬಾರಿ ಚಳಿ 3 ಡಿಗ್ರಿಗೆ ಇಳಯಲಿದೆ ಉಷ್ಣಾಂಶ. ಮುಂಗಾರು ಮಳೆ ಕೊನೆಗೊಳುವುದು ವಿಳಂಬವಾಗುತ್ತಿರುವುದರಿಂದ ದೇಶದ ಹಲವು ಭಾಗಗಳಲ್ಲಿ ಹವಾಮಾನ ಪರಿಸ್ಥಿತಿ ಯಿಂದ ಉತ್ತರ ರಾಜ್ಯಗಳಲ್ಲಿ ವಿಶೇಷವಾಗಿ ಜನವರಿ ಮತ್ತು ಫೆಬ್ರುವರಿಯಲ್ಲಿ ಮೈ ಕೊರೆವ ಚಳಿಯಾಗಲಿದೆ. ಎಂದು ಹವಾಮಾನ ಇಲಾಖೆಯ ಮೂಲ ಆಧಾರದ ದಂತೆ ಬ್ಲೂಮ್ ಬರ್ಗ ವರದಿಯಲ್ಲಿ ತಿಳಿಸಿದೆ. ದೀರ್ಘ ಮುಂಗಾರು ನಂತರ ದೇಶದಲ್ಲಿ ವಿಪರೀತ ಚಳಿ ಆಗಲಿದೆ. ಹಾಗೂ ಹವಾಮಾನ ಇಲಾಖೆ ಪ್ರಕಾರ ಮುಂಗಾರು ಹೆಚ್ಚು ಸಮಯ ಇರುವುದರಿಂದ ವಾತಾವರಣ ತಂಪಾಗಿ ಭೂಮಿ ತೇವಾಂಶದಿಂದ ಕೂಡಿರುತ್ತದೆ. ಪರಿಣಾಮ ಚಳಿಹೆಚ್ಚಾಗುತ್ತದೆ.
ಚಳಿಗಾಲದಲ್ಲಿ ಬೆಳಿಗ್ಗೆ ವಾಯುವಿಹಾರಕ್ಕೆ ಹೋದರೆ ಹಸಿರು ಹುಲ್ಲಿನ ಮೇಲೆಲ್ಲ ಮಿಂಚುವ ಮುತ್ತಿನ ಇಬ್ಬನಿ. ರಸ್ತೆ ಮೇಲೆ ನೀರು ಚೆಲ್ಲಿದ್ದಾರೊ ಮಳೆ ಬಂದು ಹೋಯಿತೊ ಎಂಬಂತೆ ಗೋಚರಿಸುವ ಪ್ರಕೃತಿ ಯಲ್ಲಿ ಅಲ್ಲಲ್ಲಿ ಹಬ್ಬಿರುವ ಕಾವಳ ನನಗಂತೂ ಬಹುಪ್ರಿಯ ಹಳ್ಳಿ ಜನ ಕಾವಳ ದರಿದ್ರ ಸಂಕೇತ ಎನ್ನುತ್ತಾರೆ. ಹೊಲಗದ್ದೆ, ಗಿಡಮರಗಳ ಫಲ ಪುಷ್ಪಗಳ ಬೆಳವಣಿಗೆಗೆ ಕಾವಳಮಾರಕ ಅನ್ನುತ್ತಾರೆ.
ಪ್ರವಾಸ ಪ್ರಿಯರಿಗೆ ಚಳಿಗಾಲ ಹೇಳಿ ಮಾಡಿಸಿದ ಅನುಕೂಲ ಸಮಯ. ಎಷ್ಟೇ ಚರ್ಮ ಹಾಗೂ ಅದರ ಸುರಕ್ಷತೆಗಾಗಿ ಎಣ್ಣೆ, ಲೋಶನ್, ಕ್ರೀಮ್ ಹಚ್ಚಿದರು. ಚರ್ಮ ಒಣಗುವುದು. ಬಿರುಕುಗಳು ಬೀಡುವುದು ಹೆಚ್ಚು ಚಳಿಗಾಲದಲ್ಲಿ ಬಿಸಿಲು ಕಾಯಲು ಕೂಡ ಜನರು ಇಷ್ಟ ಪಡುತ್ತಾರೆ. ಹಬೆಯಾಡುವ ಬಿಸಿ ಬಿಸಿ ಚಾ ,ಕಾಫಿ ಯೊಂದಿಗೆ ಕುರುಕಲು ತಿಂಡಿ ಬಜ್ಜಿಯ, ಬೊಂಡ. ಸವಿ ಯುವುದರ ಮಜಾವೇ ಬೇರೆ. ಬೀಸುವ ತಂಗಾಳಿಯಿಂದ ಆಗುವ ಚಳಿ ತಪ್ಪಿಸಿಕೊಳ್ಳಲು ಸ್ವೆಟರ್ ಕಂಬಳಿ, ಮಪ್ಲರ್ ಜಾಕೆಟ್, ಟೋಪಿ ಮೊರೆ ಹೋಗಿ ಅದರೊಳಗೆ ಬಂಧಿಸಲ್ಪಟ್ಟ ಬೆಚ್ಚಗಿನ ಅನೂಭೂತಿ ಪಡೆಯುತ್ತಾರೆ. ಈಗ ಯಾರ ಮನೆಯಲ್ಲಿ ಸೌದಿ ಒಲೆ ಇಲ್ಲ ನಮ್ಮ ಬಾಲ್ಯದಲ್ಲಿ ಒಲೆ ಎದುರು ಕುಳಿತು ಚಳಿಕಾಯಿಸುವ ಮಕ್ಕಳನ್ನು ಎಚ್ಚರಿಸಲು ಒಲೆಯಲ್ಲಿ ಉರಿಯುತ್ತಿರುವ ಸೌದೆಯನ್ನು ಎತ್ತ ಬೇಕ್ಕಿತ್ತು.
ಚಳಿ….ಈ ಶಬ್ದ ಎತ್ತಿದ ಕೂಡಲೇ ಒಬ್ಬೊರದ್ದು ಒಂದೊಂದು ಯೋಚನೆಗಳಿರುತ್ತದೆ. ಕೆಲವರು ಚಳಿ ಅಂದಾಕ್ಷಣ ರೊಮ್ಯಾಂಟಿಕ್ ಆಗಿ, ಇನ್ನೂ ಕೆಲವರು ದೇಹ ಆರೋಗ್ಯದ ಬಗ್ಗೆ ಚಳಿಗಾಲದಲ್ಲಿ ರೋಗ ಕಾಟವೂ ಹೆಚ್ಚು, ಅಸ್ತಮಾ ಮತ್ತು ಉಸಿರಾಟದ ತೊಂದರೆಗಳು ಚಳಿಗಾಲದಲ್ಲಿ ಹೆಚ್ಚಿರುತ್ತದೆ. ವಾತಾವರಣದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಚರ್ಮದ ನೀರು ಆರಿ ಒಣಗುತ್ತದೆ. ಹೀಗಾಗಿ ಕಾಲು ಒಡೆಯುವುದು. ಚರ್ಮ ಬಿರುಕುಬಿಡುವುದು. ಚರ್ಮ ಒರಟಾಗುವುದು. ನೆಗಡಿ ಸೀತಗಳ ಹಾವಳಿಯು ಹೆಚ್ಚು.
ಮಹಾ ಚಳಿಯಿಂದ ರಕ್ಷಿಸಲು ವಿಠ್ಠಲನಿಗೆ ಪಂಡರ ಪುರದ ವಿಠಲ ದೇವಾಲಯ ಮಂಡಳಿ ವಿಶೇಷ ಪೋಷಾಕು ತೊಡಿಸುತ್ತಾರೆ. ರಾತ್ರಿ ಶೇಶಾರತಿ ಮುಗಿದ ನಂತರ ವಿಠ್ಠಲರಾಯ ನಿದ್ದೆ ಜಾರುವ ಮುನ್ನ ಎಲ್ಲಾ ಪೋಷಾಕುಗಳನ್ನು ತೆಗೆದು ಮೈಯನ್ನು ಬಿಸಿನೀರಿನಲ್ಲಿ ಒರಸಿ ತಲೆಗೆ ಮುಂಡಾಸು ಸುತ್ತಿ ವಿಶೇಷ ನೂಲಿನಿಂದ ಸಿದ್ದ ಪಡಿಸಿದ ಟೋಪಿ ಹಾಕಲಾಗುತ್ತದೆ. ತಲೆಯಿಂದ ಕಾಲಿನವರೆಗೆ ಕಾಶ್ಮೀರ ಪದ್ದತಿ ಕರಕುಶಲದ ಬಿಳಿ ಶಾಲು ಹೊದಿಸಿ ಅದರ ಮೇಲೆ ತುಳಸಿ ಹಾರ ಹಾಕಿ ವಿಠ್ಠಲ ನಿದ್ರೆಗೆ ಹಾಸಿಗೆ ಸಿದ್ದ ಪಡಿಸಲಾಗುತ್ತದೆ. ಬೆಳಗಿನಜಾವ ಕಾಕಡಾರತಿ ವೇಳೆ ಹಾರ ಶಾಲು ತೆಗೆದು ಪೂಜೆ ನಂತರ ಪೋಷಾಕು ತೆರವುಗೊಳಿಸಲಾಗುವುದು ಇದು ಚಳಿಗಾಲದಲ್ಲಿ ಮಾತ್ರ. ಒಟ್ಟಿನಲ್ಲಿ ಚಳಿ ಸಾಮಾನ್ಯ ಮನುಷ್ಯರಿಂದ ಹಿಡಿದು ದೇವಸ್ಥಾನದ ವರೆಗೂ ತನ್ನ ಚಳಕ ತೋರಿಸುತ್ತದೆ.
ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರು ಜನತೆ ಸಮಾಧಾನ ಪಟ್ಟುಕೊಳ್ಳಲು ಹವಾಮಾನ ಆಸ್ಪದ ನೀಡುತ್ತಿಲ್ಲ. ಒಂದೆಡೆ ಡಿಸೆಂಬರ್ ತಿಂಗಳು ಬಂದರು ಮಳೆಗಾಲ ಮುಗಿಯುತ್ತಿಲ್ಲ. ಇನ್ನೊಂದೆಡೆ ಮೈ ಕೊರೆವ ಚಳಿ ನಡುಕ ಹುಟ್ಟಿಸುತ್ತಿದ್ದು ಮಕ್ಕಳಿಂದ ವೃದ್ದರವರೆಗೆ ಉಸಿರಾಟದ ತೊಂದರೆ ಸೇರಿ ಶೀತ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಒಟ್ಟಿನಲ್ಲಿ…
ಚಳಿ ಬಂದಾಗ ಎಷ್ಟು ಚಳಿ ಎಂದರು.
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲು ಎಂದರು
ಮಳೆ ಬಿತ್ತು ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ
ಅವರ ನುಡಿ ಈ ಪರಿಯ ಚಳಿಗಾಲದಲ್ಲಿ ಮತ್ತೆ ನೆನಪಾಯಿತು.