ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ಶ್ರೀಕ್ಷೇತ್ರ ಕೊಲ್ಲೂರಿನ ಮೂಲಸ್ಥಾನ ಎಂದೆ ಪ್ರಸಿದ್ಧಿ ಪಡೆದ ಕರ್ನಾಟಕ ಸರಕಾರದಿಂದ ಪಾರಂಪರಿಕ ನೈಸರ್ಗಿಕ ತಾಣವೆಂಬ ಮಾನ್ಯತೆ ಪಡೆದ ಕೊಡಚಾದ್ರಿ ಬೆಟ್ಟದ ಸಾಲುಗಳು ಶಿವಮೊಗ್ಗ ಹಾಗೂ ಹೊಸನಗರದ ವರೆಗೆ ಹಬ್ಬಿಕೊಂಡಿದ್ದು ಧಾರ್ಮಿಕವಾಗಿಯು ಮನ್ನಣೆ ಗಳಿಸಿದೆ. ಪ್ರಕೃತಿ ಪ್ರಿಯರಿಗೆ ಹಾಗೂ ಚಾರಣಕ್ಕೆ ಹೇಳಿ ಮಾಡಿಸಿದ ಹಸಿರು ಹೊದ್ದಗಿರಿ ಶ್ರೇಣಿ. ಸ್ವರ್ಗವೇ ಧರೆಗಿಳಿದ ಅನುಭವ ನೀಡುವ ನಿರ್ಸಗ ರಮಣಿಯ ಜೀವ ವೈವಿಧ್ಯತೆಯ ತಾಣವಿದು. ಹಲವು ಬಗೆಯ ಅಳಿವಿನಂಚಿನಲ್ಲಿರುವ ಜೀವರಾಶಿ ಮತ್ತು ಔಷಧೀಯ ಸಸ್ಯ ಸಂಪತ್ತುಗಳಿಗೆ ಆಶ್ರಯತಾಣವಾದ ಕೊಡಚಾದ್ರಿಗೆ ಪ್ರವಾಸ ಎಂದರೆ ಯಾರಿಗೆ ತಾನೆ ಇಷ್ಟ ಇರೊದಿಲ್ಲ ಅದರ ಗಮ್ಮತ್ತೆ ಬೇರೆ.
ಗೆಳತಿ ಶಶಿಕಲಾ ದೂರವಾಣಿ ಕರೆ ಮಾಡಿ ನೀನು ಊರಿಗೆ ಬಂದಿದ್ದಿಯಲ್ಲಾ ನಾಡಿದು ನಾವು ಶಿಕ್ಷಕಿಯರ ಚಿಕ್ಕ ಸಮೂಹ ಕೊಡಚಾದ್ರಿಗೆ ಚಾರಣಹೋಗುತ್ತಿದ್ದೇವೆ ಬರುತ್ತಿಯಾ ಎಂದು ಕೇಳುತ್ತಲೇ ತಟ್ಟಕ್ಕನೆ ಆಯಿತು ಎಂದಿದ್ದೆ. ನನ್ನ ಹಲವು ವರ್ಷಗಳ ಹಿಂದಿನ ಕನಸು ಕೈಗೂಡಿದ್ದು ಈಗ. ಕೊಡಚಾದ್ರಿ ಏರುವುದುದೆಂದು ತೀರ್ಮಾನಿಸಿ ಎಲ್ಲರೂ ಬೆಳಿಗ್ಗೆ 6 ಗಂಟೆಗೆ ಗುಡ್ಡ ವೇರಲು ಸಜ್ಜಾಗಿದ್ದೆವು. ಚಾರಣ ಪ್ರಿಯರ ಕೈ ಬೀಸಿ ಕರೆಯುವ ತಾಣವಿದು. ಚಾರಣ ಆರಂಭಿಸುತ್ತಲೇ ಮೊದಲು ನಮ್ಮನ್ನು ಹರ್ಷ ಚಿತ್ತರನ್ನಾಗಿಸಿದ್ದು ಸೂರ್ಯೋದಯದ ಸೊಬಗು. ಪರ್ವತದ ಮರೆಯಲ್ಲಿ ಮರಗಳ ನಡುವಿನಲ್ಲಿ ಮೆಲ್ಲನೆ ಮೇಲೇಳುವ ಹೊಂಬಣ್ಣದ ರವಿ. ಚಾರಣಕ್ಕೆ ಶುಲ್ಕ ಪಾವತಿಸಿ, ಅನುಮತಿ ಪಡೆದು. ಬೆಳಿಗ್ಗೆಯಿಂದ ಸಂಜೆ ತನಕ ನಡೆಯುತ್ತಾ ಬೆಟ್ಟ ಹತ್ತುತ್ತಲೇ ದಟ್ಟ ಕಾನನದ ನಡುವೆ ಸಾಗುವ ಕಿರುದಾರಿಯಲ್ಲಿ ಅವರವರಿಗೆ ರುಚಿಸಿದ್ದನ್ನು ನೋಡುತ್ತಾ ಸಾಗಿದೆವು.
ಚಾರಣ
ಚಾರಣಕ್ಕೆ ಆಪ್ತವೆನಿಸುವ ತಾಣ ಅಪರೂಪದ ಸೂಕ್ಷ್ಮ ಜೀವವೈವಿಧ್ಯಗಳ ನೆಲೆ ಬೀಡು ಕೊಡಚಾದ್ರಿಯ ಚಾರಣಕ್ಕೆ ನಾವು ನಿಟ್ಟೂರು ಹಳ್ಳಿಗೆ ತೆರಳಿ ಅಲ್ಲಿಂದ ಚಾರಣ ಕೈಗೊಂಡೆವು. ಕೊಡಚಾದ್ರಿ ಬೆಟ್ಟ ಹತ್ತುತ್ತಾ ಹೋದಂತೆ ಸಸ್ಯ ಶಾಮಲೆ ಭೂಮಿ ಗಿಟ್ಟ ಹಸಿರು ರಂಗೋಲಿಯಂತೆ ಕಂಗೊಳಿಸುವ, ಒಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆಂಬ ಆಶೆ ಹುಟ್ಟಿಸುವ ಮೈಚಾಚಿಕೊಂಡ ಬೆಟ್ಟದ ಸರಣಿ ಪ್ರಕೃತಿ ಸೌಂದರ್ಯದ ಕಲಶ ಕೊಡಚಾದ್ರಿ. ಬೆಟ್ಟ ಹತ್ತುವ ಸಾಹಸ ಬೇಕಿತ್ತಾ ಎಂದು ಒಮ್ಮೆ ಎಣಿಸಿದ್ದು ಇದೆ. ಆದರೆ ಈ ಸುಂದರ ಚಾರಣ ಪ್ರದೇಶ ನೋಡಲೇ ಬೇಕೆಂಬ ತವಕದಲ್ಲಿ ಬೆಟ್ಟ ಹತ್ತಿದ ಖುಷಿಯಲ್ಲಿ ಹಸಿವಿನ ಪರಿವೇ ಇಲ್ಲದೆ ಗುಡ್ಡ ಹತ್ತಿನಿಂತರೆ ಹಸಿರು ಚಾದರ ಮೈಹೊದ್ದುನಿಂತ ಬೆಟ್ಟಗಳ ಸರಣಿಯ ವಿಹಂಗಮ ನೋಟ ನೋಡುವ ಕಂಗಳಿಗೆ ತೃಪ್ತಿಯ ರಸದೌತಣ. ಕೈಯಲ್ಲಿದ್ದ ಮೊಬೈಲ್ ನೆಟ್ಟವರ್ಕ ಇಲ್ಲದೆ ತಣ್ಣಗೆ ಮಲಗಿತ್ತು. ನಡೆದಷ್ಟು ಸವೆಯದ ಪರ್ವತವಿದು. ಪ್ರಕೃತಿ ಪ್ರೀಯರು ಒಮ್ಮೆಯಾದರೂ ನೋಡಲೇ ಬೇಕಾದ ಪ್ರದೇಶ.
ಒಂದೆಡೆ ಕಡಿದಾದ ಬಂಡೆಕಲ್ಲುಗಳು ಇನ್ನೋಂದೆಡೆ ಆಳವಾದ ಪ್ರಪಾತ, ನಡುವೆ ಕಿರುದಾರಿ ಕಾಲನೆಡಿಗೆಯಲ್ಲಿ ಬೆಟ್ಟ, ಗುಡ್ಡ, ಹಳ್ಳ ಏರಿಳಿಯುವುದು ಅಷ್ಟು ಸುಲಭವಲ್ಲ. ಇಲ್ಲಿನ ಶಿಖರಗಳ ಕಡಿದಾದ ಇಳಿಜಾರುಗಳಲ್ಲಿ ನಡೆವಾಗ ಎಚ್ಚರವಹಿಸಲೇ ಬೇಕು. ಅಪಾಯಕಾರಿ ವಿಷ ಜಂತುಗಳು, ಹಾವು ಹಾಗೂ ವನ್ಯವೃಗಳಿಂದ ಸದಾ ಎಚ್ಚರಿಕೆ ಅಗತ್ಯ. ಇಲ್ಲಿನ ಸೂಚನಾ ಫಲಕವನ್ನು ಕಡೆಗಣಿಸುವಂತಿಲ್ಲ. ಬಹುವರ್ಣದ ಕಾಡುಕೋಳಿಗಳು, ಚಿತ್ರ ವಿಚಿತ್ರ ಗೂಡುಗಳಲ್ಲಿ ಒಳಹೊರಗೆ ಹಾರಡುವ ಹಕ್ಕಿಗಳ ವಿಲಿಪಿಲಿ ಹಾರಾಟ. ಹಚ್ಚ ಹಸಿರಿನ ಬೆಟ್ಟದ ಮಡಿಲಲ್ಲಿ ಬಂಡೆಗಲ್ಲುಗಳ ಬದಿಯಲ್ಲಿ ತಲೆ ಎತ್ತಿನಿಂತ ಕಾಡು ಅಣಬೆಗಳು ಕಾಣಸಿಗುತ್ತದೆ. ಕೊಡಚಾದ್ರಿ ಮಡಿಲಲ್ಲಿ ಕಾಲಿರಿಸುತ್ತಲೇ ಗಾಬರಿ, ಆಶ್ಚರ್ಯ, ಆನಂದಗಳೆಲ್ಲಾ ಒಟ್ಟಿಗೆ ಆಗುತ್ತದೆ. ಈ ಚಾರಣದ ಒಡಲು ಕೊಡಚಾದ್ರಿಯ ವಿವರಿಸಲು ಹತ್ತಾರು ಸಂಪುಟಗಳೆ ಬೇಕಾಗಬಹುದು. ಇಲ್ಲಿನ ಸಮಗ್ರ ಚೆಲುವನ್ನು ಕಾಣಬೇಕೆಂದರೆ ದಿನವಿಡಿಯಾದರೂ ಈ ಕಾನನದೊಳಗೆ ಸುತ್ತಾಡಿ ನೆನಪುಗಳನ್ನು ಗಾಢಗೊಳಿಸಿಕೊಳ್ಳಬಹುದು. ಇಲ್ಲಿ ಸಮಯ ಸರಿದದ್ದೆ ಗೊತ್ತಾಗುವುದಿಲ್ಲ. ಮುಕಾಂಬಿಕ ಅಭಯ ಅರಣ್ಯವಾಪ್ತಿಯಲ್ಲಿ ಬರುವ ಸರ್ವಜ್ಞ ಪೀಠದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ ಚಿತ್ರ ಮೂಲ ಎಂಬ ಗುಹೆ ಇದೆ. ಇಲ್ಲಿನ ದಾರಿ ದುರ್ಗಮವಾಗಿದ್ದು ಎತ್ತರವಾದ ಪರ್ವತದ ಸಾಲುಗಳಿಂದ ಮುಂದೊತ್ತಿ ನಿಲ್ಲುವ ಬಂಡೆಯಲ್ಲಿ ತೋರಿಬರುವ ಒಂದು ಬಿರುಕು ಇದು. ಕೋಕಮಹರ್ಷಿ, ಶ್ರೀ ಶಂಕರಾಚಾರ್ಯರು ಇದೆ ಸ್ಥಳ ದಲ್ಲಿ ತಪಸ್ಸನಾಚರಿಸಿದರು ಎಂಬ ನಂಬಿಕೆ ಇದೆ. ಸಂಜೀವಿನಿ ಪರ್ವತ ಮುರಿದು ಬಿದ್ದ ಸ್ಥಳವಾದ್ದರಿಂದ ಇಲ್ಲಿ 64 ತೀರ್ಥಗಳು 64 ಸಿದ್ದಿ ಪದಾರ್ಥಗಳು ಇದೆ ಎನ್ನುತ್ತಾರೆ. ಇದು ಸೌಪರ್ಣಿಕಾ ನದಿಯ ಉಗಮ ಸ್ಥಾನ.
ಕೊಡಚಾದ್ರಿಯಲ್ಲಿ ಚಾರಣ ಮಾಡುತ್ತಿರುವಾಗ ನನಗೆ ನೆನಪಾದದ್ದು ಕೋಟ ಶಿವರಾಮ ಕಾರಂತರ ಒಂದು ಮಾತು. ನಾನಾಗ ಹೈಸ್ಕೂಲ್ ನಲ್ಲಿದ್ದೆ. ” ಮಕ್ಕಳೆ ಇನ್ನೂ ಸ್ವಲ್ಪ ದೊಡ್ಡದಾದ ಮೇಲೆ ಕೊಡಚಾದ್ರಿಗೊಮ್ಮೆಚಾರಣಕ್ಕೆ ಹೋಗಿ ಬನ್ನಿ ಅದು ಚಂದದ ತಾಣ” ಎಂದಿದ್ದರು. ಕೊಡಚಾದ್ರಿಯ ಬೆಟ್ಟದ ತುದಿಯಲ್ಲಿ ನಿಂತರೆ ನಾಲ್ಕು ದಿಕ್ಕಿನಲ್ಲಿ ಸುಂದರವಾಗಿ ಅಲೆ ಅಲೆಯಂತೆ ಹರಡಿರುವ ಸಸ್ಯ ಶಾಮಲೆಯ ರಮ್ಯತಾಣದ ಮುಂದಿನ ದಿಗಂತದಲ್ಲಿ ನೀಲಿ ಆಕಾಶ ಹಾಗೂ ಹಸಿರು ಕಣಿವೆಗಳ ಸಮಾಗಮದ ದರ್ಶನವಾಗುತ್ತದೆ. ಪ್ರಾಕೃತಿಕ ಸಿರಿ ಬಟ್ಟಲ ಅವರ್ಣನೀಯ ಅನುಭವ ತೋರಿಸುವ ಔಷಧೀಯ ಸಸ್ಯಗಳ ರಾಶಿ, ಜೀವವೈವಿಧ್ಯಗಳ ತಾಣ , ಮುಗಿಲು ಚುಂಬಿಸುವ ಸಸ್ಯಕಾಶಿ ಸಮಸ್ತ ಸೌಂದರ್ಯವನ್ನು ಭಂಡಾರವನ್ನಾಗಿ ಮಡಿಲಲ್ಲಿ ತುಂಬಿ ಕೊಂಡಿರುವ ಕೊಡಚಾದ್ರಿ ಏರಿನಿಂತಾಗ ಪ್ರಪಾತದ ನೋಟದ ಅದ್ಬುತ ವನ್ನು ಅಲ್ಲಿ ನೋಡಿಯೇ ಅನುಭವಿಸಬೇಕೆ ವಿನಃ ಶಬ್ದ ಗಳಿಂದ ಹಿಡಿದಿಡಲಾಗದು. ಗುಡ್ಡವೇರಿ ದಣಿದ ವೈಮನವನ್ನು ಹಗುರಾಗಿಸಿ ತನ್ನದೇ ಲೋಕಕ್ಕೆ ಕೊಂಡೊಯ್ಯವ ಸುಯ್ಯನೆಬಿಸುತ್ತಾ ಮೈಮನಕ್ಕೆ ಕಚಗುಳಿಯಿಡುವ ಸ್ವಚ್ಛಂದ ತಂಗಾಳಿ. ಆದರೆ ಈ ಎಲ್ಲಾ ಅನುಭವಕ್ಕೆ ಒಂದಿಷ್ಟು ಚಾರಣ ಮತ್ತೊಂದಿಷ್ಟು ಶಾರೀರಿಕ ಆರೋಗ್ಯವೂ ಬೇಕು.
ಭಾರತದ ಶಕ್ತಿಪೀಠಗಳಲ್ಲಿ ಒಂದು ಕರ್ನಾಟಕದ ಸಪ್ತಮುಕ್ತಿ ಸ್ಥಳಗಳ ಪೈಕಿ ಒಂದಾದ ಶ್ರೀ ಕ್ಷೇತ್ರ ಕೊಲ್ಲೂರಿನ ಮೂಲ ಸ್ಥಾನ ಎಂದೆ ಪ್ರಸಿದ್ದಿ ಪಡೆದಿರುವ ಕೊಡಚಾದ್ರಿ ಸೂಕ್ಷ್ಮ ಜೀವವೈವಿಧ್ಯಗಳ ನೆಲೆಬೀಡು. ವಿಶ್ವಪಾರಂಪರಿಕ ತಾಣ ಹಾಗೂ ಆಧ್ಯಾತ್ಮಿಕ ಕೇಂದ್ರವೂ ಹೌದು. ಮಲೆನಾಡಿನ ಸ್ವರ್ಗ. ದೃಷ್ಟಿ ಹರಿಸಿದಷ್ಟು ದೂರ ನಿಸರ್ಗ ಸೌಂದರ್ಯದಿಂದ ರಾರಾಜಿಸುವ ಔಷಧೀಯ ಗುಣವುಳ್ಳ ಗಿಡ ಮರಗಳ ಭಂಡಾರ, ಸಸ್ಯ ಶ್ಯಾಮಲೆ ಭೂಮಿಗಿಟ್ಟ ಹಸಿರು ರಂಗೋಲಿಯಂತೆ ಕಂಗೊಳಿಸುವ ಕೊಡಚಾದ್ರಿಯ ಸರ್ವಜ್ಞ ಪೀಠ , ಶಂಕರಾಚಾರ್ಯರ ತಪೋಭೂಮಿ ಒಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆಂಬ ಆಶೆ ಹುಟ್ಟಿಸುವ ತಂಪು ತಾಣ. ಪ್ರಕೃತಿ ಸೌಂದರ್ಯದ ಕಲಶ ನೋಡುವ ಕಂಗಳಿಗೆ ತೃಪ್ತಿಯ ರಸದೌತಣ ನೀಡುವ ಕೊಡಚಾದ್ರಿಗೆ ಚಾರಣ ಹೋದಾಗ ಅಗತ್ಯ ವಾಗಿ ಮಾಹಿತಿ ಹೊಂದಿರುವ ಗೈಡ್ ಗಳು ಜೊತೆಗೆ ಇರಬೇಕು.
ಕಾಡು ಮೇಡು ಸುತ್ತಿ ಹಸಿರು ವನರಾಶಿಗಳ ಮಧ್ಯೆ ಹೆಜ್ಜೆ ಹಾಕುತ್ತಾ ಪ್ರಕೃತಿಯ ಮಡಿಲಲ್ಲಿ ಅದರ ಸೊಬಗನ್ನು ಅನುಭವಿಸಲು ಚಾರಣಕ್ಕೆ ಹೋದವರು ಜಾಗ್ರತಾರಾಗಿರ ಬೇಕು. ಪರಿಸರ ಅಧ್ಯಯನದ ಪ್ರಯೋಗಾಲಯ, ಜೀವ ವೈವಿಧ್ಯಮಯ ತಾಣ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಹಚ್ಚ ಹಸಿರಿನಿಂದ ಕೂಡಿದ ಗಿರಿಕಂದಕಗಳು. ಒಮ್ಮೆ ಇಂತಹ ಕಾಡು ಪ್ರದೇಶದಲ್ಲಿ ಚಾರಣ ಮಾಡಿದರೆ. “ಮಾನವ ಜನ್ಮ ಡೊಡ್ಡದು. ಅದು ಹಾನಿ ಮಾಡಿಕೊಳ್ಳಲು ಬೇಡಿ” ಎನ್ನುವ ಪದದ ನೆನಪಾಗಿ ಎಂಥ ವಿಷಮ ಸ್ಥಿತಿಯಲ್ಲೂ ಬದುಕಲು ಪ್ರೇರಣೆ ದೊರೆಯುತ್ತದೆ.
ಕೊಡಚಾದ್ರಿಯ ಪ್ರಕೃತಿಯ ಸೌಂದರ್ಯ ವರ್ಣಿಸಲು ನನ್ನ ಜ್ಞಾನ ಅತೀ ಅಲ್ಪ ನನ್ನಲ್ಲಿನ ಅನುಭವದ ಶಬ್ದ ಅತೀ ವಿರಳ ಎನಿಸಿತು. ಅರಳಿದ ಕಾಡು ಹೂಗಳೊಂದಿಗೆ ತೂಗಾಡುವ ಲತೆಗಳ ಸೊಬಗಿನ ಪರಿ ಕಣ್ಣಿಗೆ ಹಬ್ಬ. ಕೊಡಚಾದ್ರಿ ಒಳಹೊಕ್ಕು ನಡೆದರೆ ಹೊಸತೊಂದು ವನರಾಶಿ,ಕಾನನ ತನ್ನ ಚೆಲುವಿನ್ನೊಂದಿಗೆ ಸ್ವಾಗತಿಸುತ್ತದೆ. ಈ ಅರಣ್ಯ ಗರ್ಭದಲ್ಲಿ ಅನೇಕಾನೇಕ ವನ್ಯಜೀವಿ, ಪಕ್ಷಿಗಳ ದಂಡು, ಹೂವಿನ ಮಕರಂದ ಹೀರುವ ಜೇನೋಣಗಳು, ಎಂದೂ ಬತ್ತದ ಔಷಧೀಯ ಗುಣದ ನೀರಿನ ಝರಿಗಳ ಸಿಹಿನೀರು ಸವಿದು ಸೃಷ್ಟಿ ಸೌಂದರ್ಯ ನೋಡಬೇಕೆನ್ನುವವರಿಗೆ ಇಲ್ಲಿ ಬೇಕಾದಷ್ಟು ಪ್ರಾಕೃತಿಕ ಸೃಷ್ಟಿಯ ಸಹಜಸೊಬಗಿದೆ ನೋಡುವ ಕಂಗಳಿಗೆ ತೃಪ್ತಿಯ ರಸದೌತಣ, ತರುಲತೆಗಳಲ್ಲಿ ನಳನಳಿಸುವ ಸೊಬಗ ನೋಡುತ್ತಲಿದ್ದರೆ ಗುಡ್ಡ ಏರುವಾಗ ಆದ ಕಾಲು ನೋವು, ದಣಿವು ಎಲ್ಲಾ ಮಾಯವಾಗುತ್ತದೆ.
ಕೊಡಚಾದ್ರಿಯ ಜನ್ಮ ರಹಸ್ಯ ಪುರಾಣ ಹಿನ್ನೆಲೆಯಂತೆ ರಾಮಾಯಣದ ಯುದ್ಧ ಕಾಲದಲ್ಲಿ ಇಂದ್ರಜಿತುವಿನ ಬಾಣಕ್ಕೆ ಲಕ್ಷ್ಮಣ ಧರೆಗೆ ಉರುಳಿದಾಗ ಹನುವಂತ ಸಂಜೀವಿನಿಯನ್ನು ತರಲು ಕೈಲಾಸ ಪರ್ವತದಲ್ಲಿ ಹುಡುಕಾಟನಡೆಸಿ ಸಂಜೀವಿನಿ ಯಾವುದೆಂದು ಗುರುತಿಸಲು ಕಷ್ಟವಾಗಿ ಇಡಿ ಬೆಟ್ಟ ಹೊತ್ತುತಂದು ಲಕ್ಷ್ಮಣನ ಜೀವ ಉಳಿಸಿದ ಆಮೇಲೆ ಹನುಮಬೆಟ್ಟವನ್ನು ಪುನಃ ಅದರ ಮೂಲ ಜಾಗಕ್ಕೆ ಎಸೆದಾಗ ಮೂರು ತುಂಡಾಗಿ ಸಂಜೀವಿನಿ ಪರ್ವತದ ತುದಿಯ ಭಾಗಬಿದ್ದ ಸ್ಥಳವೇ ಕೊಡಚಾದ್ರಿ ಎನ್ನುತ್ತಾರೆ.
ಖ್ಯಾತ ಸಾಹಿತಿ ಜೋಗಿ ತನ್ನ ಜೋಗಿ ಕಾಲಂನಲ್ಲಿ” ದೇಹ ಭಾರ ಇಳಿಸಿಕೊಳ್ಳುವುದಕ್ಕೆ ಪ್ರಕೃತಿ ಕೇಂದ್ರಗಳಿವೆ ಆದರೆ ಮನಸ್ಸು ಹಗುರ ಮಾಡಿಕೊಳ್ಳುವುದಕ್ಕೆ ಪ್ರಕೃತಿಯೇ ಬೇಕು. ಅಂತ ಬರೆದಿದ್ದರು. ನಿಜವಾಗಿಯು ದಿನ ನಿತ್ಯದ ಎಲ್ಲಾ ಜಂಜಾಟಗಳಿಂದ ದೂರವಾಗಿ ಕಾಡಿನಮಧ್ಯದಲ್ಲಿ ನಡೆದಾಡಿದ ಕೆಲ ಗಂಟೆಗಳ ಅನುಭವ ಮನಸು ಶಾಂತಗೊಂಡು ಉಲ್ಲಾಸಮಯವಾಗುತ್ತದೆ. ಕೊಡಚಾದ್ರಿ ಮಡಿಲಿಗೊಮ್ಮೆ ಹೋಗಿ ಬನ್ನಿ. ನಮ್ಮ ನಾಡನ್ನು ವನಸಿರಿಯ ನಾಡು ವೈವಿಧ್ಯಮಯ ಸಸ್ಯ ಸಂಕುಲಗಳ ಬೀಡು ಎಂದು ಬಣ್ಣಿಸಿದ್ದು ನಿಜ ಅರ್ಥದಲ್ಲಿಯೇ.