Thursday, December 1, 2022
HomeKannada Articleಚಲುವ ಭಾರ್ಗವ ಕ್ಷೇತ್ರವಿದು - Heggaddesamachar

ಚಲುವ ಭಾರ್ಗವ ಕ್ಷೇತ್ರವಿದು – Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

           ಬನ್ನಿ ನಮ್ಮ ಚಲುವ ಭಾರ್ಗವ ಕ್ಷೇತ್ರದ ಕಿರು ನೋಟ ನೋಡಿ ಬರೋಣ.ಸಮುದ್ರದ ಅಲೆಗಳ ನರ್ತನ ,ಕಡಲ ತೀರದ ‌ಮರಳ ರಾಶಿ, ಹೊಂಬಣ್ಣದ ಸೂರ್ಯಾಸ್ತ, ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣಸಿಗುವ‌ ಜಲರಾಶಿ,  ಹಸಿರುಡುಗೆ ಪಸೆದುಟ್ಟ ಪ್ರಕೃತಿ . ಇಲ್ಲಿನ ಜನರ ಸಹನ ಶೀಲತೆ, ಔದಾರ್ಯವೆಂಬ  ವಿಶೇಷಗುಣ ಅಷ್ಟೇ ಅಲ್ಲದೇ ನೈಸರ್ಗಿಕ ಸೌಂದರ್ಯ. ವೃಕ್ಷ ಸಂಪತ್ತಿನಿಂದ   ರಾರಾಜಿಸುತ್ತಿರುವ ವಿಶಾಲ  ಅರಣ್ಯ, ತುಂಬಿ ತುಳುಕಿ ‌ಹರಿವ ನದಿಗಳು ಗಗನ ಚುಂಬಿ ಬೆಟ್ಟ ಗುಡ್ಡಗಳ ಪ್ರಕೃತಿ ಆಗರವು  ಮಾತ್ರವಲ್ಲದೆ  ಪ್ರಾಚೀನ ಸಂಸ್ಕೃತಿಯ ತವರೂರು  ನಮ್ಮ  ಉಡುಪಿ ಎಂಬ ಭಾರ್ಗವ  ಕ್ಷೇತ್ರ.
             
         ಉಡುಪಿ ಎಂದಾಕ್ಷಣ  ನೆನಪಾಗುವುದು ದೇವಾಲಯಗಳ  ಬೀಡು  ಅದರಲ್ಲೂ  ಮಧ್ವಾಚಾರ್ಯರು  ಸ್ಥಾಪಿಸಿದ   ಶ್ರೀ ಕೃಷ್ಣಮಠ   ಅದರ  ಸುತ್ತಾ ನೆಲೆ‌ನಿಂತ  ಫಲಿಮಾರು, ಅದಮಾರು, ಸೋದೆ, ಕೃಷ್ಣಪುರ, ಪುತ್ತಿಗೆ, ಶಿರೂರು, ಕಾಣಿಯೂರು,ಪೇಜಾವರ ಎಂಬ  ಅಷ್ಟ ಮಠಗಳ ಬೀಡಿದೆ .ಉಡುಪಿಯೆಂಬುದು   ತುಳು ಶಬ್ಬ “ಒಡಿಪು” ಎಂಬುದರಿಂದ ಬಂದಿದೆ ಹಾಗೂ ಇನ್ನೊಂದು ನಂಬಿಕೆಯಂತೆ ಉಡುಪಿಯ ಹೆಸರು ಸಂಸ್ಕೃತ ಶಬ್ದ “ಉಡುಪಿ” ನಕ್ಷತ್ರ ಹಾಗೂ” ಪ” ಒಡೆಯಗಳಿಂದ  ಬಂದಿರುವುದು ಎನ್ನುತ್ತಾರೆ ಸ್ಥಳೀಯ ವಿದ್ವಾಂಸರು .ಉಡುಪಿ ಅಂದರೆ ‌ನಕ್ಷತ್ರಗಳಿಗೆ  ಒಡೆಯ ಅಧಿಪತಿಯಾದವನು  ತಪಸ್ಸು  ಮಾಡಿ ಶಿವ ಪ್ರತ್ಯಕ್ಷನಾದ ತಾಣ  ಚಂದ್ರನಿಂದ  ಈ  ನಗರಕ್ಕೆ  ಉಡುಪಿ  ಎಂದು  ಹೆಸರು ಬಂತು ಎನ್ನುತ್ತಾರೆ .ಇದಕ್ಕೆ ಸಾಕ್ಷಿ ಎಂಬಂತೆ    ಚಂದ್ರಮೌಳೀಶ್ವರ  ಪುರಾಣ ದೇವಾಲಯವಿದೆ. ಉಡುಪಿಯಲ್ಲಿ  ಶ್ರೀ ಕೃಷ್ಣನ ಮೂರ್ತಿಯನ್ನು  ಮದ್ವಚಾರ್ಯರು  ಪ್ರತಿಷ್ಠಾಪಿಸಿದ್ದು  ಪುರಂದರದಾಸರು,ಕನಕದಾಸರು   ಶ್ರೀ ಕೃಷ್ಣನ  ಮಹಿಮೆಯನ್ನು  ಹಾಡಿಹೊಗಳಿದ್ದು  ಇಲ್ಲೆ.


      
         ಕೃಷ್ಣ ಮೂರ್ತಿ    
            ಉಡುಪಿ ಶ್ರೀ ಕೃಷ್ಣನ ಮೂರ್ತಿ ಕುರಿತು  ಸ್ಕಂದ ಪುರಾಣದಲ್ಲಿ  ಹೇಳುವಂತೆ ದ್ವಾರಕೆಯಲ್ಲಿದ್ದ ಕೃಷ್ಣನ ತಾಯಿ  ದೇವಕಿ  ಕೃಷ್ಣನ  ಬಾಲಲೀಲೆಗಳನ್ನು  ನೋಡಬೇಕೆಂಬ  ಇಚ್ಚೆಯಾಗಿ  ತೋರಿಸಲು  ಹೇಳುವಳು.  ಕೃಷ್ಣ ಚಿಕ್ಕ ‌ಮಗುವಾಗಿ  ದೇವಕಿ ಬಳಿ  ಬಂದಾಗ ಅವಳು ಮೊಸರು ‌ಕಡೆಯುತ್ತಿದ್ದಳು .  ಬಾಲಕೃಷ್ಣ ತೊಡೆಯೆರಿ  ಬಾಲಲೀಲೆಗಳನ್ನು  ತೋರಿಸಿದ .ಬೆಣ್ಣೆತಿಂದು ಆಡಿ ಓಡಿದ  ಅಮ್ಮನ  ಕೈಯಲ್ಲಿದ್ದ  ಕಡಗೋಲು,  ಹಗ್ಗ ಕಸಿದು  ಕೊಂಡ. ಆಗ ಅಲ್ಲಿಗೆ ಆಗಮಿಸಿದ   ರುಕ್ಮಿಣಿ ಕೃಷ್ಣನ  ಬಾಲಲೀಲೆ ಕಂಡಳು.  ಆ ಬಾಲರೂಪದ  ಕೃಷ್ಣನ  ನಿರಂತರ ಪೂಜಿಸಲು  ನನಗು  ಮೂರ್ತಿಬೇಕು ಎಂದಳು. ಕೃಷ್ಣ ಅವತಾರ  ಸಮಾಪ್ತಿಯಾದ ಬಳಿಕ ಅರ್ಜುನ  ದ್ವಾರಕಾಪಟ್ಟಣದ  ಈ  ಪ್ರತಿಮೆಯನ್ನು  ರುಕ್ಮಿಣಿವನದಲ್ಲಿ  ಸ್ಥಾಪಿಸಿದ  ಕಾಲಾನುಕ್ರಮೇಣ ಅದು  ಭೂಗತವಾಗುತ್ತದೆ.
   
    ಮಧ್ವರು  ರಕ್ಷಿಸಿದರೆನ್ನಲಾದ  ಕೃಷ್ಣನ  ಪಕ್ಕದಲ್ಲಿರುವ  ನಂದಾದೀಪ  ‌ನಿರಂತರವಾಗಿ ಉರಿಯುತ್ತಲೇ ಇದ್ದು. ಚೈತನ್ಯ ಮಹಾ  ಪ್ರಭುಗಳು   ಉಡುಪಿಗೆ ಬಂದಾಗ  ಈ  ನಂದಾದೀಪದಿಂದಲೆ  ಹಚ್ಚಿದ  ದೀಪವನ್ನು  ವೃಂದಾವನಕ್ಕೆ  ಕೊಂಡಯ್ದು ಅಲ್ಲೂ ನಂದಾದೀಪ ಹಚ್ಚಿದರೆಂಬ  ಐತಿಹ್ಯವಿದೆ‌.

       ಅದೇ  ಮೂರ್ತಿ ಕಲಿಯುಗದಲ್ಲಿ   ದ್ವಾರಕೆಯಿಂದ  ಹೊರಟು    ಉಡುಪಿ  ಹೊರವಲಯದ  ಮಲ್ಪೆಯ  ಕಡಲ  ತೀರಕ್ಕೆ ಬಂದು  ಹೋಗುತ್ತಿರುವ ಹಡಗು ಬಿರುಗಾಳಿಗೆ  ಸಿಕ್ಕಿ    ಸಮತೋಲನ ತಪ್ಪಿ  ಮುಳುಗಿ  ಹೋಗುವುದಿತ್ತು  ಹಡಗು  ಮುಳುಗುವಾಗ  ಕಡಲತೀರದಲ್ಲಿ ಇದ್ದ ಮಧ್ವಾಚಾರ್ಯರು  ತಮ್ಮ ಯೋಗ ಬಲದಿಂದ  ಹಡಗನ್ನು ರಕ್ಷಿಸುತ್ತಾರೆ .ಹಡಗಿನ  ಮಾಲಕರು    ಗೋಪಿ ಚಂದನದ   ಎರಡು ಗಡ್ಡೆಗಳನ್ನು‌  ಆಚಾರ್ಯರಿಗೆ  ನೀಡುತ್ತಾರೆ. ಒಂದನ್ನು ಒಡೆದು  ನೋಡಿದಾಗ  ಬಲರಾಮನ  ಕಲ್ಲಿನ ಮೂರ್ತಿಯೂ  ಇನ್ನೊಂದರಲ್ಲಿ  ಸಾಲಿಗ್ರಾಮದ  ಶಿಲೆಯ  ಕೃಷ್ಣನಮೂರ್ತಿ ಇತ್ತು. 


       
            ಅನಂತೇಶ್ವರ = ಉಡುಪಿ ಶ್ರೀ ಕೃಷ್ಣಮಠದ ಸಮೀಪದಲ್ಲಿರುವ ಅನಂತೇಶ್ವರ ದೇವಾಲಯದಲ್ಲಿ ಹಳೆಯಕಾಲದ ವಾಸ್ತುಕಲೆಯ ಭವ್ಯತೆ ಎದ್ದು ಕಾಣುವ ಎರಡು ಅಂತಸ್ತಿನ ದೊಡ್ಡ ಗರ್ಭಗೃಹ, ಮಗ್ಗುಲಲ್ಲೆ  ಮುಖ ಮಂಟಪ. ಪಕ್ಕದಲ್ಲಿ  ಮಧ್ವಚಾರ್ಯರು  ತಮ್ಮ ಶಿಷ್ಯರಿಗೆ ಪಾಠಹೇಳಿ ಕೊಡುತ್ತಿದ್ದ  ಸನ್ನಿಧಾನ. ಮಧ್ವರು ದೇವಾಲಯದ ಒಳ ಆವರಣದಲ್ಲಿ ಅದೃಶ್ಯ ವಾದ ಸ್ಥಳವಿದೆ.


          ಉಡುಪಿಯ ಸ್ಥಳ ಪುರಾಣದಂತೆ  ಪರಶುರಾಮ   ತಾವು‌  ನಿರ್ಮಿಸಿದ  ಕ್ಷೇತ್ರರಕ್ಷಣೆಗೆ  ರಾಮಭೋಜನೆಂಬ ರಾಜನನ್ನು  ನೇಮಿಸಿದರು. ರಾಜ ಯಾಗ ಮಾಡಲು ನಿರ್ಧರಿಸಿ  ನೇಗಿಲಿನಿಂದ  ಜಾಗಶುದ್ದ ಮಾಡುವಾಗ ಸರ್ಪ ವೊಂದು ವೃತಪಟ್ಟಿತು.ಅದರ  ಪರಿಹಾರಾರ್ಥವಾಗಿ ರಜತ ಪೀಠ  ನಿರ್ಮಿಸಲಾಯಿತು. ಅದೆ  ಕ್ಷೇತ್ರ ಅಬಂತಾಸನ ಅಥವಾ ಅನಂತೇಶ್ವರ   ರಜತ ಪೀಠ ಪುರದ‌ ಆಧಿ ದೈವ . ಶ್ರೀ ಅನಂತೇಶ್ವರನನ್ನು  ಲಿಂಗರೂಪದಲ್ಲಿ  ಶಿವನೊಡನೆ ಇದ್ದು ಪೂಜೆಗೊಳ್ಳುತ್ತಿರುವ  ಪರಶುರಾಮನೆಂದು ನಂಬುತ್ತಾರೆ. ಅಷ್ಟೇ ಅಲ್ಲದೇ ಅನಂತೇಶ್ವರ  ದೇವಾಲಯ  ಉಡುಪಿಯ ಅತ್ಯಂತ  ಪ್ರಾಚೀನ ದೇವಸ್ಥಾನ. ಇಲ್ಲಿ ಪೂಜೆ ಗೊಳ್ಳುತ್ತಿರುವ ಮುಖ್ಯ ದೇವತೆ ಅನಂತೇಶ್ವರನ  ರೂಪದಲ್ಲಿರುವ  ಶ್ರೀ ನಾರಾಯಣ.ಇಲ್ಲಿನ ಅನಂತೇಶ್ವರನೆಂದರೆ  ಶೇಷ ಶಯನನಾದ ನಾರಾಯಣ. 
          
      ಇನ್ನೊಂದು ನಂಬಿಕೆಯಂತೆ ಭಗವಂತ  ಪರಶುರಾಮ ನಾಗಿ  ಅವತಾರ ಮಾಡಿದಾಗ  ತನ್ನ  ಅವತಾರ  ಲೀಲೆಯ  ಭಾಗವಾಗಿ  ರುದ್ರ ದೇವರಲ್ಲಿ ಧನುರ್ವಿದ್ಯಾ  ಶಿಕ್ಷಣ ಪಡೆಯುತ್ತಾನೆ. ಜಗತ್ತಿನ ಗುರುಶಿಷ್ಯರ  ಭಾಂದ್ಯವ್ಯವನ್ನು   ಲೀಲಾಜಾಲವಾಗಿ  ತೋರಿಸಿಕೊಡಲು  ಲಿಂಗ ರೂಪದಲ್ಲಿ  ಸನ್ನಿಹಿತನಾಗಿದ್ದಾನೆ‌. ಅಂತೆಯೆ  ಈತ ನಂಬಿ ಬಂದ  ಭಕ್ತರಿಗೆ  ಶೀಘ್ರ ವರ ಕೊಡುವ ದೇವರು  ಎಂದು ನಂಬಿಕೆ ಇದೆ. 


   ಇಲ್ಲಿ  ಪರಶುರಾಮನೆ  ಲಿಂಗರೂಪಿಯಾಗಿ  ನಿಂತಿರುವ  ಅನಂತೇಶ್ವರ . ಭಾರ್ಗವ  ರಾಮ ಅಂದರೆ  ಪರಶುರಾಮ  21 ಬಾರಿ ಭೂಮಿ ಪ್ರದಕ್ಷಿಣೆ  ಮಾಡಿದ  ನಂತರ ಒಂದು ಯಾಗಮಾಡಿ ಬ್ರಾಹ್ಮಣರಿಗೆ  ತನ್ನೇಲ್ಲ  ಸಂಪತ್ತನ್ನು ಧಾನ ಮಾಡುತ್ತಾನೆ. ಧಾನ  ಮಾಡಿದ ಸ್ಥಳದಲ್ಲಿ  ನಿಲ್ಲಲು ಭಯಸದೆ  ವರುಣನಿಂದ  ಪಶ್ಚಿಮ ಕರಾವಳಿಯ  ಗೋಕರ್ಣದಿಂದ  ಕುಮಾರ  ಕ್ಷೇತ್ರದವರೆಗೆ  ಸ್ವಲ್ಪ ಸ್ಥಳವನ್ನು  ಪಡೆಯುತ್ತಾನೆ  ಅದೆ  ಭಾರ್ಗವ ಕ್ಷೇತ್ರ ಅಂದರೆ ಉಡುಪಿ ಪರಶುರಾಮ ಕ್ಷೇತ್ರದ ಏಳು  ಮುಕ್ತಿ ಪ್ರದಕ್ಷೇತ್ರಗಳಲ್ಲಿ  ಈ ಭಾರ್ಗವ ಕ್ಷೇತ್ರಕ್ಕೆಗೆ  ಅಗ್ರಸ್ಥಾನ.


   
      ಚಂದ್ರಮೌಳೀಶ್ವರ =   ಅನಂತೇಶ್ವರ ದೇವಸ್ಥಾನ  ಎದುರಿಗಿರುವ  ಸರೋವರದಲ್ಲಿ  ಚಂದ್ರನು  ಶಿವನ  ಕುರಿತು  ತಪಸ್ಸು  ಮಾಡಿ ಅಲ್ಲಿ ಶಿವ  ಪ್ರತ್ಯಕ್ಷನಾಗಿ  ಚಂದ್ರ ಮೌಳೀಶ್ವರನೆನಿಸಿದ.

    ‌ಮಕರ ಸಂಕ್ರಾಂತಿ =  ಮಕರ ಸಂಕ್ರಾಂತಿಯಂದು ಉಡುಪಿಯಲ್ಲಿ  ಬ್ರಹ್ಮರಥ ಉತ್ಸವ ಆರಂಭವಾಗುವುದು. ಅಂದು  ಬ್ರಹ್ಮರಥದಲ್ಲಿ ಶ್ರೀ ಕೃಷ್ಣ ದೇವರು, ಗರುಡ ರಥದಲ್ಲಿ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ  ದೇವರು, ಸಣ್ಣ ರಥದಲ್ಲಿ  ಮುಖ್ಯಪ್ರಾಣ ದೇವರ  ಉತ್ಸವ  ಮೂರ್ತಿಗಳು ವಿರಾಜಮಾನರಾಗಿರುತ್ತಾರೆ. ಈ ರಥಾರೂಢ ದೇವರ ವಿಗ್ರಹವನ್ನು   ನೋಡಿದರೆ  ಪುಣ್ಯಪ್ರಾಪ್ತಿ  ಎನ್ನುತ್ತಾರೆ‌ ಉಡುಪಿಯ ಆಸುಪಾಸಿನ  ಮನೆಗಳಲ್ಲಿ  ಮಕರ  ಸಂಕ್ರಾಂತಿಯಂದು  ರಥದ ರಂಗೋಲಿ ಬಿಡಿಸುತ್ತಾರೆ.  ಇಲ್ಲಿ  ಶ್ರೀ ಕೃಷ್ಣ ಜನ್ಮಾಷ್ಟಮಿ, ಲಕ್ಷದೀಪೋತ್ಸವ  ವಿಜಂಭ್ರಣೆಯಿಂದ  ನಡೆಯುತ್ತದೆ.

      ಕನಕನ  ಕಿಂಡಿ =  ಉಡುಪಿ ಅಂದ ಮೇಲೆ  ಕನಕರ ಬಗ್ಗೆ  ಎರಡು  ಸಾಲಾದರು  ಬರೆದಿಲ್ಲ  ಅಂದರೆ  ಅದು  ಅಪೂರ್ಣ  . ಧಾರ್ಮಿಕ  ಹಾಗೂ  ಆದ್ಯಾತ್ಮಿಕ ‌ನೆಲೆಯಲ್ಲಿ  ಬೆಳೆದವರು  ಕನಕದಾಸರು.  ಕನಕದಾಸರಿಗೆ  ಶ್ರೀ  ಕೃಷ್ಣ ದರ್ಶನ ಕೊಟ್ಟ  ಕಿಂಡಿ ಅದನ್ನು ಕನಕನ  ಕಿಂಡಿ ಎಂದು  ಕರೆಯುವುದು  ವಾಡಿಕೆ. ಅಷ್ಟೇ ಅಲ್ಲದೆ  ಶ್ರೀ ವಾದಿರಾಜರು  ಕನಕರನ್ನು  ತನ್ನ  ಅಂತರಂಗದ  ಆತ್ಮೀಯ ಗೆಳೆಯ  ಎಂದು  ಕೊಂಡಾಡಿದವರು.  ಉಡುಪಿ ದೇವಸ್ಥಾನಕ್ಕೆ  ಬಂದವರು  ಮೊದಲು  ಚಂದ್ರೇಶ್ವರ ದೇವರ ದರ್ಶನ ಮಾಡಿ, ಅನಂತರ ಅನಂತೇಶ್ವರನನ್ನು  ನೋಡದ ನಂತರ ಕನಕನ  ಕಿಂಡಿಯಲ್ಲಿ  ಕೃಷ್ಣನನ್ನು ಕಣ್ತುಂಬಿಕೊಂಡು   ಶ್ರೀ ಕೃಷ್ಣ ಮಠಕ್ಕೆ ಹೋಗಿ ಅಲ್ಲಿ  ಶ್ರೀ ಕೃಷ್ಣನ  ಸಂದರ್ಶನ  ಮಾಡಲಾಗುತ್ತದೆ. ಹಿಂದುಳಿದ ಜನಾಂಗದವರಾದ  ಕನಕನಿಗೆ  ಇತರ ಜನರಿಗಿಂತ   ಬೇರೆಯೆ  ಸ್ಥಳದಲ್ಲಿ  ಪೂಜಿಸಲು  ಅವಕಾಶ ನೀಡಲಾಗಿತ್ತು. ಕನಕನ  ಅನುಪಮ  ಭಕ್ತಿಗೆ  ಒಲಿದ  ಶ್ರೀ ಕೃಷ್ಣ ಕನಕದಾಸ  ಎಲ್ಲಿ  ನಿಂತು  ದೇವರ ದರ್ಶನಕ್ಕಾಗಿ ಕಾಯುತ್ತಿದ್ದಾನೊ ಆ ದಿಕ್ಕಿಗೆ  ಮುಖವನ್ನು ತಿರುಗಿಸಿ ಕನಕನಿಗೆ  ದರ್ಶನ ಭಾಗ್ಯಕೋಡುತ್ತಾನೆ. ಕನಕದಾಸರು  ತಮ್ಮ  ಕುಟೀರದಲ್ಲಿ  ಶ್ರೀ ದೇವರಿಗೆ ನಿತ್ಯ‌ನೈವೇದ್ಯಕ್ಕಾಗಿ  ಅಂಬಲಿ ಹಾಗೂ ರೊಟ್ಟಿಯನ್ನು  ಅರ್ಪಿಸುತ್ತಿದ್ದರಂತೆ.
      
       ಶ್ರೀ ಕೃಷ್ಣನಿಗೆ  ಅಹೋರಾತ್ರಿ  ಕರ್ಣಾನಂದಕರ ನಾದೋಪಾಸನೆಯನ್ನು  ಪರ್ಯಾಯ ದೀಕ್ಷಿತ ಯತಿಗಳಾದ  ವಿದ್ಯಾಧೀಶ ತೀರ್ಥ ಶ್ರೀಗಳ ಕ್ಲಿಷ್ಟ ಸಂಕಲ್ಪ ಗಳಲ್ಲಿ  ಎರಡು  ವರ್ಷಗಳ ಅಖಂಡ ಭಜನಾ ಸೇವೆಯು ಕನಕ  ಗೋಪುರದ ಬಳಿ‌  ಪ್ರತ್ಯೇಕ ವೇದಿಕೆಯಲ್ಲಿ ನಿರಂತರ ಎರಡು ವರ್ಷಗಳ ಕಾಲ ಅಹೋರಾತ್ರಿ ನಡೆದಿದೆ.

     ಮಧ್ವ ಸರೋವರ =  ಇಲ್ಲಿ  ಸಂಭ್ರಮದ  ತೆಪ್ಪೆಉತ್ಸವ ನಡೆಯುತ್ತದೆ.  ಮಧ್ವ ಮಂಟಪವು  ಸೇರಿದಂತೆ  ಸರೋವರದ ನಾಲ್ಕೂ ಸುತ್ತು ಸಹಸ್ರ ಸಹಸ್ರ  ಹಣತೆಗಳ  ದೀಪಮಾಲಕೆಯಿಂದ  ಝಗಮಗಿಸುವ ಅಲಂಕೃತ  ದೋಣಿಗಳ  ನೆರವಿನಲ್ಲಿ  ರಚಿಸಿದ  ತೆಪ್ಪದಲ್ಲಿ   ಕೃಷ್ಣ ನ  ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಮಂಟಪದ  ಸುತ್ತ  ಸರೋವರದಲ್ಲಿ  ‌ಪ್ರದಕ್ಷಿಣೆ  ಬರುತ್ತಾರೆ.  ಮಧ್ವರಿಗೆ ಹಡಗಿನ  ಮಾಲಕ ನೀಡಿದ  ಗಡ್ಡೆಯನ್ನು  ತೊಳೆದದ್ದು  ಇದೆ  ಸರೋವರದಲ್ಲಿ ಅಂತೆ.ಇದನ್ನು  ವಿರಜಸ  ತೀರ್ಥ ಎನ್ನುತ್ತಾರೆ. ಈ  ಮಧ್ವ ಸರೋವರದಲ್ಲಿ  ಪ್ರತಿ ಹತ್ತು ವರ್ಷಕ್ಕೊಮ್ಮೆ  ಗಂಗೆ ಹರಿದು  ಬರುತ್ತಾಳೆ ಎಂಬ ನಂಬಿಕೆ ಇದೆ.

     ಪರ್ಯಾಯ =  ಉಡುಪಿಯ ಎರಡು  ವರ್ಷಗಳಿಗೊಮ್ಮೆ  ಯತಿಗಳಿಂದ   ಯತಿಗಳಿಗೆ  ಬದಲಾಗುವ ಕೃಷ್ಣನ  ಪೂಜೆಗಾಗಿ  ಪರ್ಯಾಯ  ಮಹೋತ್ಸವ  ನಡೆಯುತ್ತದೆ. ಪರ್ಯಾಯಕ್ಕೆ  ಹದಿಮೂರು ತಿಂಗಳಿರುವಾಗ  ನವಗ್ರಹ  ಪ್ರಾರ್ಥನೆಯೊಂದಿಗೆ ಬಾಳೆ ‌ಮುಹೂರ್ತ  ನಡೆದು. ಶ್ರೀ ಕೃಷ್ಣ ನ  ಪೂಜೆಗೆ ‌ಬೇಕಾಗುವ  ತುಳಸಿ‌ ಬೆಳೆಯುವ  ಸಿದ್ದತೆಯ  ಮೊದಲ‌ಹಂತ. ಪರ್ಯಾಯಕ್ಕೆ  11  ತಿಂಗಳು  ಇರುವಾಗ ನಡೆಯುವುದು  ಅಕ್ಕಿ  ಮುಹೂರ್ತ. ಅಕ್ಕಿಯ‌ ಮುಡಿಗೆ  ಪಟ್ಟೆ ಉಡಿಸಿ ಶೃಂಗರಿಸಿ ಚಿನ್ನದ ಪಲ್ಲಕ್ಕಿಯಲ್ಲಿಟ್ಟು  ಭಾವಿ ಪರ್ಯಾಯ  ಯತಿಗಳ  ಮಠದಿಂದ  ಮೆರವಣಿಗೆ  ಸಾಗುತ್ತದೆ. 


       ಕಟ್ಟಿಗೆ  ಮುಹೂರ್ತ ಇದು  ಅಕ್ಕಿ  ಬೇಯಿಸಲು  ಉರುವಲು  . ಕಟ್ಟಿಗೆಯನ್ನು  ರಥದ  ಆಕಾರದಲ್ಲಿ  ಪೇರಿಸಿಟ್ಟು  ನಿರ್ಮಿಸಿದ  ರಮ್ಯವಾದ  ಕಟ್ಟಿಗೆ  ರಥದ  ಸೊಬಗನ್ನು  ಯಾತ್ರಿಕರು ಕಣ್ಣು ತುಂಬಿಸಿ ಕೊಳ್ಳಲು ಬರುತ್ತಾರೆ.  ಕಟ್ಟಿಗೆ ರಥ  22 ಅಡಿ ಅಗಲ ವ್ಯಾಸವಿದ್ದು 25 ಅಡಿ ಎತ್ತರ  ಧ್ವಜಸ್ತಂಭದ  ಮೇಲಿನ  ಪಿರಮಿಡ್  ಗೋಪುರದ  ಐದು  ಅಡಿ ಎತ್ತರವು  ಸೇರಿ ಒಟ್ಟು ಸುಮಾರು 30 ಅಡಿ  ಇರುತ್ತದೆ. ಪರ್ಯಾಯಕ್ಕೆ  ಎರಡು  ತಿಂಗಳು ಇರುವಾಗ   ಭತ್ತ ಮುಹೂರ್ತ ಸಿಗುತ್ತದೆ. 

ದೇವಾಲಯಗಳ  ನಗರಿ ಖ್ಯಾತಿಯ  ಉಡುಪಿಯಲ್ಲಿ ಅನೇಕಾನೇಕ ಪ್ರಮುಖ ದೇವಾಲಯ ಇದೆ.ಉಡುಪಿಯ ನಾಲ್ಕು ದಿಕ್ಕುಗಳಲ್ಲಿ  ತಂಗೋಡು, ಮಾಂಗೋಡು, ಅರಿತೋಡು, ಮತ್ತು ಮುಚ್ಚಿಲಕೋಡು ಎಂಬ ಸುಬ್ರಹ್ಮಣ್ಯ ದೇವಾಲಯ ವಿದೆ.ಅಷ್ಟೇ ಅಲ್ಲದೆ ‌ನಾಲ್ಕು ದಿಕ್ಕುಗಳಲ್ಲಿ  ಕಡಿಯಾಳಿ, ಕನ್ನರ್ಪಾಡಿ,ಬೈಲೂರು ಪುತ್ತೂರು ದುರ್ಗಾಲಯಗಳಿವೆ.

ವೇದಾಚಲ


      ಈಗಿನ ಮಣಿಪಾಲದ ಗುಡ್ಡಕ್ಕೆ ವೇದಪರ್ವತ ಅಥವಾ ವೇದಾಚಲ ಎಂದು ಬಹಳ‌ ಹಿಂದಿನಿಂದಲೂ ಕರೆಯುತ್ತಾರೆ.
      
ಮಲ್ಪೆ

      ಉಡುಪಿಗೆ  ಬರುವ  ಪ್ರವಾಸಿಗರು  ತಪ್ಪದೆ  ಮಲ್ಪೆ  ಬೀಚ್‌ ಗೆ ಹೋಗುತ್ತಾರೆ. ಅದರಲ್ಲೂ   ಇಲ್ಲಿ ನಡೆಯುವ  ವಾರ್ಷಿಕ ‌ಮಲ್ಪೆ  ಬೀಚ್  ಉತ್ಸವ ದೋಣಿರೇಸ್ ಗಳು  ಮತ್ತು ಗಾಳಿಪಟ  ಉತ್ಸವಕ್ಕೆ  ಜನ ದಟ್ಡಣೆ  ಸೇರುತ್ತದೆ. ಕರ್ನಾಟಕ ಕರಾವಳಿಯ  ಪ್ರಮುಖ ಮತ್ಸ್ಯಕೈಗಾರಿಕಾ  ತಾಣವಾದ   ಮಲ್ಪೆ ಸಮುದ್ರ ತೀರ ಇದು  ನೈಸರ್ಗಿಕ ಬಂದರು.
      
 ಬೋಟ್ ಹೌಸ್
         73 ಅಡಿ ಉದ್ದ 15 ಅಡಿ ಅಗಲದ ಕಬ್ಬಿಣದ ದೋಣಿ ಸಂಪೂರ್ಣ ಮರದಿಂದ ಮನೆಯನ್ನು ಕಲಾತ್ಮಕವಾಗಿ ರಚಿಸಲಾಗಿದೆ.  ನೀರಿನಲ್ಲಿ ತೇಲುತ್ತಾ ಸಾಗುವ ಅಲಂಕಾರಗೊಂಡ ಮನೆಯೊಳಗಿಂದ ಸೂರ್ಯೋದಯ, ಸೂರ್ಯಾಸ್ತವನ್ನು  ಕಣ್ಣುಂಬಿಸಿಕೊಳ್ಳ ಬಹುದು.
         
ಮಲ್ಪೆ ಸೀ-ವಾಕ್ 
      
         ಮಲ್ಪೆ ಸೀವಾಕ್ ನ ಎರಡು ಬದಿಯಲ್ಲಿ  ಜಲರಾಶಿ. ಸಮುದ್ರದ ಅಲೆಗಳ ಹೊಡೆತದ ತೀವ್ರತೆ  ತಡೆದು ಮೀನುಗಾರಿಕೆ ದೋಣಿಗಳು  ಸುಗಮವಾಗಿ ಸಾಗಲು ಬಂಡೆಕಲ್ಲಿನ  ತಡೆಗೋಡೆಯ ‌ಮೇಲೆ ಸೀವಾಕ್  ನಿರ್ಮಿಸಲಾಗಿದೆ. ಸೀ ವಾಕ್  ವೇ ಪಾಯಿಂಟ್ 450 ಮೀ.ಉದ್ದ, 8 ಅಡಿ ಅಗಲವಿದ್ದು, 32 ದೀಪಗಳನ್ನು  ಅಳವಡಿಸಲಾಗಿದೆ. ಹಾದಿ ಉದ್ದಗಲಕ್ಕೂ ಬೆಸ್ತ ದಂಪತಿಗಳ ಸಿಮೆಂಟ್ ಮೂರ್ತಿಗಳಿವೆ.

ಉದ್ಯಾನವನ

       ಮಲ್ಪೆ ಸೀವಾಕ್  ಸಮೀಪ ಖಾಲಿಜಾಗದಲ್ಲಿ  2 ಕೋಟಿ ವೆಚ್ಚದಲ್ಲಿ ಉದ್ಯಾನ ವನವಿದೆ.  ಇಲ್ಲಿ  ವಿವಿಧ ರೀತಿಯ ಕಲಾಕೃತಿಗಳು, ಬಯಲುರಂಗ‌ಮಂದಿರ  ವಿಶಾಲವಾದ  ಥಿಯೇಟರ್ ‌ಉದ್ಯಾನವನ ಮಧ್ಯೆ ‌ನಿರ್ಮಿಸಲಾದ  ಬೃಹತ್ ಜಟಾಯು ಶಿಲ್ಪ  ಪ್ರವಾಸಿಗರನ್ನು  ಹೆಚ್ಚು ಆಕರ್ಷಿಸುತ್ತದೆ. ಕಲ್ಲಿನ ಬೆಂಚಿನಲ್ಲಿ ಕುಳಿತು  ಸಮುದ್ರದ  ಅಲೆಗಳು  ನಲಿಯುವುದನ್ನು  ನೋಡ‌ಬಹುದು.  ಕರಾವಳಿಯ  ಕಲೆ ಸಂಸ್ಕೃತಿಯನ್ನು  ಬಿಂಬಿಸುವ ಅನೇಕ ಮೂರ್ತಿಗಳು  , ದೋಣಿದಡಕ್ಕೆ ಎಳೆಯುವ ಆಮೆ, ಕಾಪು ಲೈಟ್ ಹೌಸ್ ಕಲಾಕೃತಿ ಹಾಗೂ ವಿವಿಧ ಜಾತಿಯ ಹೂ‌ಗಿಡಗಳು.ಶುಚಿ ರುಚಿಯಾದ ಪುಡ್ ಕೋಟ್ ಗಳ ತಿಂಡಿಸವಿಯ ಬಹುದು.

     ಸೈಂಟ್ ಮೇರಿಸ್  ದ್ವೀಪ= ಈ ದ್ವೀಪ ಬೇಟಿಕೊಡ ಬೇಕಾದರೆ  ಉಡುಪಿ ಜಿಲ್ಲೆಯಲ್ಲಿರುವ ಮಲ್ಪೆ ಬೀಚ್ ನಿಂದ  ಸುಮಾರು ಅರ್ಧ ಗಂಟೆ ಹಡಗಿನಲ್ಲಿ  ಪಯಣಿಸಿದರೆ  ಸುತ್ತಾ  ಮುತ್ತಾ ನೀಲಿ ಬಣ್ಣದ  ಸಾಗರದ‌ನೀರು  ನೈಸರ್ಗಿಕ ಕಪ್ಪು ಬಂಡೆಗಪ್ಪಳಿಸುವುದನ್ನು  ನೋಡುವುದು  ಬಹು  ಸೋಗಸು  ಅನೇಕ ಜಾತಿಯ  ಮೀನುಗಳು  ಕಾಣಸಿಗುತ್ತದೆ.  ಜೀವಂತ ಶಂಖಹುಳುಗಳು  ಏಡಿ, ದೂರ ದೂರದ ಒರೆಗೆ  ಕಾಣಸಿಗುವ  ತೆಂಗಿನ ಮರಗಳು.

   ಉಡುಪಿಯಲ್ಲಿ ಇನ್ನೂ ನೋಡ ಬಹುದಾದ ನೋಡ ‌ಬೇಕಾದ ಅನೇಕ ಸ್ಥಳಗಳಿವೆ   ಮಣಿಪಾಲ್ ಆಸ್ಪತ್ರೆಯ ಅನಾಟಮಿಮಣಿ , ಪಾಲ ಗುಡ್ಡೆ ,ಮಟ್ಟುಗುಳ್ಳ, ಉಡುಪಿ ಸೀರೆ,ಇಲ್ಲಿನ  ಹೋಟೆಲ್‌ನ ಸುಚಿ ರುಚಿ,ಹುಲಿಕುಣಿತ ಒಂದೇ ಎರಡೆ.ಅನೇಕ ಆಚರಣೆಯ  ತವರು ಉಡುಪಿ ‌ಭೂತಕೋಲ, ಆಟಿಕಳಜೆ, ಕರಂಗೋಲು, ಪಾಣಾರಾಟ , ನಾಗಾರಾಧನೆ, ಯಕ್ಷಗಾನ, ನಾಟಕ, ಭರತನಾಟ್ಯ, ನಾಗಾರಾಧನೆ  ಇಲ್ಲಿ ನಿತ್ಯ ನೂತನ.
ಮಂಗಳೂರಿನಿಂದ 60 ಕಿಮೀ ದೂರದಲ್ಲಿರುವ ಉಡುಪಿಗೆ ಎಲ್ಲಾ ಕಡೆಗಳಿಂದ ಬೇಕಾದಷ್ಟು ‌ಬಸ್ಸಿನ  ವ್ಯವಸ್ಥೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments