– ಸಂದೀಪ್ ಶೆಟ್ಟಿ ಹೆಗ್ಗದ್ದೆ
‘ಗಿಲ್ಕಿ’ ನಾ ಕಂಡ ಈ ವರ್ಷದ ಬೆಸ್ಟ್ ಸಿನಿಮಾ ಎನಿಸುತ್ತಿದೆ. ಕಾರಣ ಈ ಸಿನಿಮಾ ಹೆಣೆದ ಬಗೆ, ಕಥಾ ರೂಪ, ಸ್ಕ್ರೀನ್ ಪ್ರಸಂಟೇಷನ್, ಆಕ್ಟರ್ಸ್ ಗಳ ಫರ್ಫಾಮೆನ್ಸ್, ಹಿನ್ನಲೆ ಸಂಗೀತ, ಇವುಗಳೆಲ್ಲವುದರ ತಳುಕು ‘ದಿ ಬೆಸ್ಟ್ ಆರ್ಟ್ ಸಿನಿಮಾ’ಗಳ ಸಾಲಿಗೆ ಸೇರುವ ಎಲ್ಲಾ ಬಹುಬಗೆಯ ಇಂಚು-ಮಿಂಚುಗಳ ಸಂಮ್ಮಿಲನ ಇದರಲ್ಲಿದೆ.
ನಮ್ಮಲ್ಲಿ ಇಂದು ಕಮರ್ಷಿಯಲ್ ಚಿತ್ರಗಳ ಹಾವಳಿಯಿಂದಾಗಿ ಕಥೆಗೆ ಒತ್ತಿರದ, ನೈಜ ರೂಪಕಗಳಿಲ್ಲದ, ಸಿದ್ಧಾಂತಗಳೇ ಕಾಣದ, ನಟನೆಯಲ್ಲಿ ಪರಿಪಕ್ವತೆ ಸಾಭೀತುಪಡಿಸದ ಕೇವಲ ದುಡ್ಡಿನ ಹಿಂದಿನ ವ್ಯಾಪಾರೀಕರಣದ ಸಿನಿಮಾಗಳ ಮಧ್ಯೆಯಲ್ಲಿ ಇಂತಹ ಸಿನಿಮಾಗಳು ಬಂದಾಗ ಅದೆನೋ ಹೊಸ ಭರವಸೆಯನ್ನ ಮೂಡಿಸುತ್ತವೆ. ಸಿನಿಮಾ ನಿರ್ಮಾಪಕರಿಗೆ, ನಿರ್ದೇಶಕರಿಗೆ ಶಹಬ್ಬಾಸ್ ಹೇಳಬೇಕೆನಿಸುತ್ತದೆ.
ಒಂದೇ ಮಾತಲ್ಲಿ ಹೇಳಬೇಕೆಂದರೆ ಚಿತ್ರ ಅಲ್ಟಿಮೇಟ್. ಮೊದಲಾರ್ಧ, ಧ್ವಿತಿಯಾರ್ಧ ಎರಡೂ ಕೂಡ ನಿಮ್ಮನ್ನ ಕಟ್ಟಿ ಹಾಕುತ್ತದೆ. ಸೆಲೆಬ್ರಲ್ ಫಾಲ್ಸಿ ಎನ್ನುವ ಸಿಂಡ್ರೋಮ್‍ನ ಇರಾದೆ ಈ ಚಿತ್ರದಲ್ಲಿ ಪರಿಚಯವಾದ್ರೂ, ಅದರಾಚೆಗಿನ ನೋವು-ನಲಿವು-ಪ್ರೀತಿ-ಕಾಮಾಂಧತೆಯ ನಶ್ವರ ಲೋಕದ ಅನಾವರಣದ ನಡುವೆ, ತತ್ವತೆಯನ್ನ ಸಾರಿ ಒಂದಿಷ್ಟು ಮೌನ, ಒಂದಿಷ್ಟು ಯೋಚನೆಗೆ ನಮ್ಮನ್ನು ತಳ್ಳಿ ಮೂಖರನ್ನಾಗಿಸುತ್ತೆ.
ಚಿತ್ರದ ಪ್ರಮುಖ ಹೈಲೆಟ್, ನಾಯಕ-ನಾಯಕಿ ಮತ್ತೊಬ್ಬ ಕರುಡ ಶಿಖಾಮಣಿಯೇ ಆದರೂ ಈ ಮೂವರೂ ಕೂಡ ಸ್ಕ್ರೀನ್ ತಿಂದು ಹಾಕಿದ್ದಾರೆ ಎನ್ನುವ ಲೆವೆಲ್ ಗೆ ಅಭಿನಯ ತೋರಿರುವುದು, ಅಭಿನಯಕ್ಕೆ ನಟನಾ ಶಾಲೆಗಳ ಅನುಭವಗಳೂ ಧಾರೆ ಎರೆದಿರಬಹುದೆನ್ನುವುದು ನನ್ನ ಅನಿಸಿಕೆ.
ಬೇಕಾದಂತೆ ಗುಡುಗುಡಿಸುವ ಸಂಗೀತ, ಒಂದೊಂದು ವಿಚಾರವನ್ನೂ, ಎಣಿಸಿ, ಅನುಭವಿಸಿ, ಮೀನಿಂಗ್ ಫುಲ್ ಆಗಿ ಸೆರೆ ಹಿಡಿದ ಡಿ.ಓ.ಪಿ, ಬದುಕ ಸಿದ್ಧಾಂತಗಳನ್ನ ಪೋಣಿಸಿ ಸತ್ಯದ ಫಿಲಾಸಫಿಯ ನಡುವೆ ಹೊಸ ಆಯಾಮದಲ್ಲಿ ಚಿತ್ರ ಕತೆ ಕಟ್ಟಿ, ತನ್ನ ಕಲ್ಪನೆಯನ್ನ ತೆರೆ ಮೇಲೆ ಅಚ್ಚುಕಟ್ಟಾಗಿ ಪೋಷಿಸಿದ ನಿರ್ದೇಶಕ ಮತ್ತವರ ತಂಡಕ್ಕೆ ಶಹಬ್ಬಾಸ್ ಹೇಳಲೇಬೇಕು.
ಇಲ್ಲಿ ನಟ ತಾರಕ್ ಪೊನ್ನಪ್ಪ, ನಟಿ ಚೈತ್ರಾ ಆಚಾರ್ ಅಥವಾ ನಿರ್ದೇಶಕ ವೈಕೆ ಈ ಮೂವರಲ್ಲಿ ಒಬ್ಬರಿಗೆ ಈ ವರ್ಷದ ಬೆಸ್ಟ್ ಆ್ಯಕ್ಟರ್, ಆ್ಯಕ್ಟ್ರೆಸ್ ಅಥವಾ ದಿ ಬೆಸ್ಟ್ ನಿರ್ದೇಶಕ ಈ ಅವಾರ್ಡ್ ಬರೋದು ಪಕ್ಕಾ…
ಅಚ್ಚುಕಟ್ಟಾಗಿರುವ ಈ ಸಿನಿಮಾ ಬಗ್ಗೆ ಜಾಸ್ತಿ ಹೇಳಲಾರೆ, ಕಥೆಯನ್ನೂ ಬಿಟ್ಟು ಕೊಡಲಾರೆ ಆದರೆ ಇಂತಹ ಸಿನಿಮಾವನ್ನ ಒಮ್ಮೆ ನೋಡಿ ಎನ್ನಬಲ್ಲೆ… ನಾವು ಕಾಣದ ಬದುಕಲ್ಲೂ, ಕಾಣಬೇಕಾದ ಬದುಕಿರುತ್ತೆ. ಅಂತಹ ಬದುಕಿನೊಳಗೆ ಜೀವಿಸಿ ಬರೋಕೆ ಇಂತಹ ಚಿತ್ರಗಳ ಸಹಕಾರಿಯಾಗುತ್ತೆ.
ಕೊನೆಯಲ್ಲಿ ಒಂದು ಮನವಿ ನಿರ್ಮಾಪಕರೆ, ನಿರ್ದೇಶಕರೆ ದಯವಿಟ್ಟು ಈ ಸಿನಿಮಾ ಕತೆಯನ್ನ ಪುಸ್ತಕ ರೂಪಕ್ಕೆ ತಂದು ಓದುಗರ ಮಡಿಲಿಗಿಡಿ, ಯಾಕೆಂದರೆ ಚಿತ್ರ ನೋಡಿದಾಗ ನನಗೊಂದು ಕಾದಂಬರಿ ಕಥೆಯ ಪುಳಕ ಇಲ್ಲಿದೆ ಅನಿಸಿತು…
ಪುಸ್ತಕ ರೂಪಕ್ಕೆ ಈ ಕಥೆ ಬಂದರೆ ಅನೇಕರ ಅಕ್ಷರ ಪ್ರೀತಿಯಲ್ಲಿ ನಿಮ್ಮ ಸಿನಿಮಾಮಿಂದೇಳಬಹುದು…