– ಸಂದೀಪ್ ಶೆಟ್ಟಿ ಹೆಗ್ಗದ್ದೆ
‘ಮಡ್ಡಿ’ ಇದು ಭಾರತದ ಮೊದಲ ಮಡ್ ರೇಸ್ ಸಿನಿಮಾ. ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಆದರೆ ನಿನ್ನೆ ನೋಡೋಕೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ನೋಡಿದೆ. ಕಾರಣ ಮೂಲತಃ ಮಲಯಾಳಂ ಸೊಗಡಿನ ಸಿನಿಮಾ ಇದಾದರೂ ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆಯನ್ನೂ ಮಾಡಲಾಗಿತ್ತು, ಅದರಂತೆ ಕನ್ನಡಿಗ ರವಿ ಬಸ್ರೂರ್‌ರವರ ಹಿನ್ನೆಲೆ ಸಂಗೀತವೂ ಇತ್ತು… ಥೀಯೇಟರ್ ನಿಂದ ಹೊರಗೆ ಬರುವಾಗ ಮೈ ಜುಮ್ ಎನಿಸಿತು.
ನಿರ್ದೇಶಕನಾದವನು ಸಿನಿಮಾ ನಿರ್ದೇಶಿಸುವ ಮುನ್ನ ಆತನ ಸಿನಿಮಾವನ್ನ ಮೊದಲು ತಾನು ಕುಳಿತುಕೊಳ್ಳುವ ಟೇಬಲ್ ಮೇಲೆ ನೋಡಬೇಕು ಎನ್ನುವ ಮಾತೊಂದಿದೆ. ಆದರೆ ಇಂತಹ ಸಿನಿಮಾಗಳನ್ನ ನಿರ್ದೇಶಿಸುವಾಗ ಆತ ಅದಕ್ಕೂ ಮಿಗಿಲಾಗಿ ಯೋಚಿಸಿ, ನಿರ್ಣಯಿಸಿ ರಿಸ್ಕ್ ಗೆ ರೆಡಿಯಾಗಬೇಕು ಯಾಕಂದ್ರೆ ಇದೊಂದು ಚಾಲೆಂಜಿoಗ್ ಸ್ಕ್ರಿಪ್ಟ್ವುಳ್ಳ ಸಿನಿಮಾ.

ಚಿತ್ರದಲ್ಲಿ ಮೈ ಜುಮ್ ಎನಿಸುವ ಮಡ್ ರೇಸಿಂಗ್ ಇದೆ. ಡೂಪ್ ಬಳಸದ ಮಡ್ ರೇಸ್ ದೃಶ್ಯಗಳಿವೆ. ಸಾಮಾನ್ಯವಾಗಿ ಇಂತಹ ಸಿನಿಮಾಗಳಲ್ಲಿ ಗ್ರಾಫಿಕ್ಸ್ಗಳು ತುಂಬಿರುತ್ತವೆ ಇಲ್ಲಿ ಅದರ ಗಂಧ ಗಾಳಿಯೇ ಇಲ್ಲ. ಒಂದೆರಡು ಗಂಟೆ ರೇಸ್ ಪ್ರಿಯರಾಗಿ ಅದರಲ್ಲು ಮಡ್ ರೇಸ್ ಪ್ರಿಯರಾಗಿ ನೋಡೋಕೆ ಈ ಸಿನಿಮಾ ಹೇಳಿ ಮಾಡಿಸಿದಂತಿದೆ.
ದಟ್ಟ ಕಾಡಿನ ಒಳಗಿನ ಚಿತ್ರೀಕರಣಗಳು, ರೇಸ್ ಒಳಗೆ ನಡೆಯುವ ವೈಶಮ್ಯಗಳು, ಹೊಡೆದಾಟ, ಬಡಿದಾಟ, ಅರಚಾಟ, ಒಂದೊoದು ಸೀನ್‌ಗಳಲ್ಲಿ ಸ್ಟನ್ ಮಾಡೋ ಅತ್ಯದ್ಭುತ ಕ್ಯಾಮರಾ ಕೈ ಚಳಕ ಇವೆಲ್ಲ ಮಡ್‌ನಲ್ಲಿ ಮೊಗೆದಷ್ಟು ಸಿಗುತ್ತವೆ.
ಒಂದಿಷ್ಟು ಫ್ಯಾಮಿಲಿ ಸೆಂಟಿಮೆoಟ್‌ಗಳಿವೆ, ಭಾವನಾತ್ಮಕ ಅಂಶಗಳಿವೆ, ಅಡ್ವೆಂಚರಸ್ ತಿರುವುಗಳೂ ಇವೆ. ಸಿಂಕ್ ಸೌಂಡ್ ಟೆಕ್ನಾಲಜಿಯನ್ನೂ ಇಲ್ಲಿ ಚಿತ್ರ ಬಳಸಿಕೊಂಡಿದೆ. ಒಂಥರಾ ರಾ, ಒಂಥರಾ ಆ್ಯಕ್ಷನ್ ಇಡೀ ಸಿನಿಮಾ ಪೂರ್ತಿ ಮಜಾ ಕೊಡುತ್ತೆ. ಚಿತ್ರ ಮುಗಿದರೂ, ಕೊನೆಯಲ್ಲಿ ಪಾರ್ಟ್ ಒನ್ ಇದು, ಪಾರ್ಟ್ ಟೂಗೆ ಕಾಯಿರಿ ಎಂದು ಹೇಳುವ ಸೋಜಿಗವಿದೆ.
‘ರಸಂ’ಗೆ ಸರಿಯಾದ ಉಪ್ಪು, ಕಾರ, ಹುಳಿ ಇವೆಲ್ಲ ಬಿದ್ದರೆ ಮಾತ್ರಾ ಹೇಗೆ ತುಂಬಾ ಟೇಸ್ಟಿಯಾಗಿ ಸವಿಯಬಹುದೋ ಹಾಗೆ ಈ ಸಿನಿಮಾಗೆ ನಿರ್ದೇಶಕನ ಕೆಲಸದ ಜೊತೆ, ಡಿ.ಓ.ಪಿ, ಎಡಿಟರ್ ಮತ್ತು ಸೌಂಡಿoಗ್ ಕೂಡ ಮಹತ್ವದ ಕೆಲಸ ಮಾಡಿದೆ ಎಂದು ಹೇಳಬಹುದು.
ನನಗಂತೂ ಚಿತ್ರ ಇಷ್ಟವಾಯ್ತು. ಜೀಪ್ ರೇಸ್ ಇಷ್ಟ ಪಡುವವರಿಗೆ, ಕಥೆಯಲ್ಲಿ ಬೇರೇನೋ ಹುಡುಕದೆ ಸಿನಿಮಾ ನೋಡುವವರಿಗೆ, ಒಂದೆರಡು ಗಂಟೆಯ ಒಳ್ಳೆಯ ಮನೋರಂಜನೆ ಕೊಡಬಹುದು ಮಡ್ಡಿ. ತುಂಬಾ ಎಳೆದಿಲ್ಲ, ರೇಸ್ ಗೆ ಇಳಿದಾಗ ಆಗುವ ತಾಪತ್ರಯಗಳನ್ನ ತೋರಿಸುವುದೇನೂ ಬಿಟ್ಟಿಲ್ಲ. ಹಾ ಕೊನೆಯಲ್ಲಿ ಒಂದು ಮಾತು ಕನ್ನಡದ ಡಬ್, ಸ್ಫಷ್ಟತೆಯಿಂದ, ಪಕ್ವತೆಯಿಂದ ಕೂಡಿದೆ ಆದ್ದರಿಂದ ಎಲ್ಲೂ ಅಭಾಸಗಳು ಕಂಡುಬರುವುದಿಲ್ಲ…