ಈ ಚಿತ್ರವನ್ನ ನಿರ್ಮಾಣ ಮಾಡಿದ್ದು ನಿರ್ದೇಶನ ಮಾಡಿದ್ದು ವೈದ್ಯರುಗಳೇ ಆಗಿದ್ದರಿಂದ ಇದು ವೈದ್ಯಕೀಯ ವಿದ್ಯಾರ್ಥಿ ಜೀವನದ ಲವ್ ಸ್ಟೋರಿ ಚಿತ್ರ ಎನ್ನುವುದನ್ನ ನಾನಿಲ್ಲಿ ಮೊದಲೇ ನಿಮಗೆ ಹೇಳುವುದು ಸಮಂಜಸ…
ತನ್ನ ಪ್ರೇಮಿಯನ್ನ ಆನೆಯಷ್ಟು, ಆನೆಯ ಮೇಲಿನ ಅಂಬಾರಿಯಷ್ಟು, ಅಂಬಾರಿಯಲ್ಲಿನ ದೇವಿಯಷ್ಟು ಪ್ರೀತಿಸುವ ಯಾವ್ಯಾವ ಪ್ರೇಮಿಗಳಿದ್ದಿರೋ ಅವರೆಲ್ಲ ಹೋಗಿ ಈ ಸಿನಿಮಾ ನೋಡಿ ಬನ್ನಿ ಕಾರಣ ಇದೊಂದು ಫೀಲ್ ಗುಡ್ ಸಿನಿಮಾ.
ಲವ್ಲಿ ಸ್ಟಾರ್ ಪ್ರೇಮ್ ನಟನೆಯ ೨೫ನೇ ಚಿತ್ರವಾಗಿದ್ದಕ್ಕೋ ಏನೋ ಹೈಲಿ ಎಕ್ಸಪೆಕ್ಟೆಡ್ ಆಂಡ್ ಮೋಸ್ಟ್ ಅವೈಟೆಡ್ ಸಿನಿಮಾಗಳ ಸಾಲಿನಲ್ಲಿ ಈ ಚಿತ್ರ ನಿಂತಿದ್ದು ಅನೇಕರಿಗೆ ತುದಿಗಾಲಲ್ಲಿ ನಿಂತು ಚಿತ್ರ ನೋಡುವ ಕುತೂಹಲಕ್ಕೆ ತಳ್ಳಿತ್ತು ಏಂದರೂ ತಪ್ಪಿಲ್ಲ.
ಮೊದಲಿಗೆ ಈ ಚಿತ್ರ ಲವ್ಲಿಯಾಗಿ, ಅದ್ದೂರಿಯಾಗಿ ಮೂಡಿ ಬರಲು ಕಾರಣವಾದ ಕೆದಂಬಾಡಿ ಕ್ರಿಯೇಷನ್ಸ್ಗೆ ಧನ್ಯವಾದ ಹೇಳಬೇಕು. ಚಿತ್ರದ ಪ್ರತಿ ಸೀನ್ ಕೂಡ ಬ್ಯೂಟಿಫುಲ್ ಆಂಡ್ ಬ್ಯೂಟಿಫುಲ್… ಕ್ಯಾಮರಾ ಕೈಚಳಕವಂತೂ ಮಾತಾಡುವ ಹಾಗೆ ಇಲ್ಲ.
ಕಥೆ ಸ್ವಲ್ಪ ಸ್ಲೋ ಅನಿಸೋದೊಂದು ಬಿಟ್ಟರೆ, ಕೆಲವೊಂದು ಸನ್ನಿವೇಶಗಳು ನೊಡುಗನನ್ನ ಭಾವುಕತೆಗೆ ತಳ್ಳಿ, ಅಂತಿಮತೆಯಲ್ಲಿ ಹೀಗೊಂದು ಪ್ರೀತಿ ಬದುಕಬಾರದಿತ್ತಾ ಎನಿಸುವ ಲೆವೆಲ್‌ಗೆ ತಳ್ಳುತ್ತೆ. ಸುಮಾರು ೩೦ ವರ್ಷಕ್ಕಿಂತ ಮೇಲ್ಪಟ್ಟ ಪವಿತ್ರ ಪ್ರೇಮ ಕಂಡ ಮನುಸುಗಳಿಗೆ ನಮ್ ಲವ್ ಸ್ಟೋರಿಯೂ ಹೀಗೆ ಇತ್ತು ಅನಿಸಬಹುದು.
ಸುಮಾರು ೨೦೦೦-೨೦೦೨ನೇ ಇಸವಿಯ ಪ್ಯೂರ್ ಲವ್ ಹೇಗಿರುತ್ತೆ. ಒಬ್ಬ ಹುಡುಗ ತಾನು ಇಷ್ಟ ಪಟ್ಟ ಹುಡುಗಿಯನ್ನ ಎಷ್ಟು ಪವಿತ್ರವಾಗಿ ಪ್ರೀತಿಸಬಲ್ಲ, ಪ್ರೀತಿ ಎನ್ನುವುದರ ಪಾವಿತ್ರö್ಯತೆ ಎಂತದ್ದು, ಪ್ರೀತಿ ಏನೆಲ್ಲಾ ಮಾಡಬಲ್ಲದು, ಪ್ರೀತಿ ಸಿಗದಿದ್ದರೂ ಅದನ್ನ ನಾವೇಗೆ ಜಯಿಸಬೇಕು ಇತ್ಯಾದಿಗಳೆಲ್ಲವನ್ನ ನೀಟ್ ಆಂಡ್ ಕ್ಲೀನ್ ಆಗಿ ಸ್ವಲ್ಪ ಜಾಸ್ತಿ ಸಮಯವನ್ನೇ ತೆಗೆದುಕೊಂಡು ತೆರೆ ಮೇಲೆ ಕಾಣಿಸಿದ್ದಾರೆ ನಿರ್ದೇಶಕ ನರರೋಗ ತಜ್ಞ ಡಾ. ರಾಘವೇಂದ್ರ.
ನೋಡಿ ಮನುಷ್ಯ ಇದ್ದಾಗಿಂದ ಪ್ರೇಮ ಅನ್ನೋದಿದೆ… ನೂರಾರು ಸಲ ಅದರ ಬಗ್ಗೆ ಹೇಳಿದರೂ, ಮಾತಾಡಿದರೂ ಅದರ ತಾಜಾ ತನ ಕುಂದಿಲ್ಲ. ಅದೇ ಪ್ರೇಮಂ ಪೂಜ್ಯಂ ಸಿನಿಮಾದ ಒಟ್ಟು ಸಾರ. ಒಂದು ಪರಿಪೂರ್ಣವಾದ ಪವಿತ್ರ ಪ್ರೇಮದ ಕಥೆಯೇ ಈ ಚಿತ್ರದ ಅಂತರಾಳ ಅಷ್ಟೆ. ಎಲ್ಲೋ ಒಂದು ಕಡೆ ಚಿತ್ರಕ್ಕೆ 12 ಹಾಡುಗಳಿರುವುದು ಜಾಸ್ತಿಯಾಯ್ತೇನೋ ಅನಿಸುತ್ತೆ. ಕಥೆಗೆ ಸ್ಫೀಡ್ ಜಾಸ್ತಿ ಇದ್ದಿದ್ರೆ ಇನ್ನೂ ಚೆನ್ನಾಗಿರುತಿತ್ತೇನೋ ಅಂತಾನೂ ಅನಿಸುತ್ತೆ… ಆದರೆ ಈ ಸಿನಿಮಾದಲ್ಲಿ ಕೆಲಸ ಮಾಡಿರೋರೆಲ್ಲ ಹೊಸಬರೇ ಆದರೂ ಅವರ ಕೆಲಸ ಹೊಸತು ಅನಿಸಲ್ಲ. ಮೈಸೂರು, ಮೂಡಿಗೆರೆಯಲ್ಲಿ ಶೂಟ್ ಮಾಡಿರೋ ವಿಶ್ಯುವಲ್ಸ್ ಅಂತೂ ಇಡೀ ಚಿತ್ರಕ್ಕೆ ದೃಶ್ಯಕಾವ್ಯ ಅನಿಸುತ್ತೆ.
ಪ್ರೇಮ್ 7 ಶೇಡ್‌ಗಳಲ್ಲಿ ಹ್ಯಾಂಡ್ ಸಮ್ ಆಗಿದ್ದಾರೆ. ಹೀರೋಯಿನ್ ಕೂಡ ದಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಪವಿತ್ರ ಪ್ರೀತಿಯ ಹೊಸ ಖಾಯಿಲೆಯ ಬಗ್ಗೆಯೂ ಚಿತ್ರದಲ್ಲಿ ಮಾಹಿತಿಯಿದೆ. ಆಫ್ಟರ್ ಲಾಂಗ್ ಟೈಮ್ ಮಾಸ್ಟರ್ ಆನಂದ್ ಮತ್ತೊಮ್ಮೆ ಫುಲ್ ಟೈಮ್ ಕಾಮಿಡಿಯನ್ ಆಗಿ ಸ್ಕ್ರೀನ್ ಮೇಲೆ ಬಂದಿದ್ದು ನಗುವಿನ ಕಚಗುಳಿಗೆ ಕಾರಣವಾಗಿದೆ.
ಒಟ್ಟಾರೆಯಾಗಿ ಹೇಳೋದಾದ್ರೆ ಆದರ್ಶ ಪ್ರೇಮಿಗಳಿಗೆ ಈ ಸಿನಿಮಾ ಖಂಡಿತಾ ಇಷ್ಟವಾಗುತ್ತೆ. ಹೊಡೆ ಬಡಿ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವುದು ಕಷ್ಟವಿದೆ. ಸಂಗೀತಕ್ಕೆ ಇನ್ನಷ್ಟೂ ಒತ್ತಿರಬೇಕಿತ್ತು. ಮೊದಲಾರ್ಧ ಸಾಗುವ ಹಾಗೆ ದ್ವಿತಿಯಾರ್ಧ ಇನ್ನೂ ಕೊಂಚ ಬಿಗಿಯಾಗಬೇಕಿತ್ತು. ಆದರೂ ತಾಳ್ಮೆಯಿಟ್ಟು ನೋಡಿದರೆ ಬಂಧನ ಸಿನಿಮಾದ ಎಂಡಿoಗ್ ಸಿಗುತ್ತೆ ಅದು ಇಡೀ ಚಿತ್ರದ ಲ್ಯಾಗ್‌ಗಳಿಗೆ ತೇಪೆ ಹಾಕುತ್ತೆ. ವಾವ್ ಅನಿಸುತ್ತೆ. ಯುವ ಪ್ರೇಮಿಗಳೇ ಚಿತ್ರ ನೊಡಿ ಬನ್ನಿ. ನಿಮ್ಮ ಪ್ರೇಮ ಪವಿತ್ರವಾಗಿದೆಯಾ ತಿಳಿದುಬನ್ನಿ…
- ಸಂದೀಪ್ ಶೆಟ್ಟಿ ಹೆಗ್ಗದ್ದೆ