…
ಮಂಗಳೂರು ನಿಂದ 12 ಕಿಮೀ ದೂರದಲ್ಲಿರುವ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಮಡಿಲಲ್ಲಿ ಪ್ರಾಕೃತಿಕ ಸೃಷ್ಟಿಯ ಸಹಜ ಸೊಬಗಿನೊಂದಿಗೆ ಅಪರೂಪದ ಪ್ರಾಣಿ, ಬಗೆಬಗೆಯ ಪಕ್ಷಿಸಂಕುಲ,ದೋಣಿ ವಿಹಾರಕೇಂದ್ರ, ಕ್ರೀಡಾ ಪ್ರಿಯರಿಗೆ ಗೋಲ್ಪ್ ಕೋರ್ಸ್, ಮತ್ಸಾಲಯ, ವಿಜ್ಞಾನ ಕೇಂದ್ರ, ಜೈವಿಕ ಉದ್ಯಾನವನ, ಗುತ್ತಿನ ಮನೆ, ಸಂಸ್ಕೃತಿಕ ನಗರಗಳಲ್ಲದೆ ದೇಶದಲ್ಲೆ ಪ್ರಥಮ ಕಾಳಿಂಗ ಸರ್ಪಗಳ ಸಂತಾನ ಅಭಿವೃದ್ಧಿ ಕೇಂದ್ರ ಇಲ್ಲಿದೆ. ಸಹಜ ಪ್ರಾಕೃತಿಕ ವಾತಾವರಣದಲ್ಲಿ ಆ ಎಲ್ಲವನ್ನು ನೋಡಿ ಆನಂದಿಸುವ ಸುವರ್ಣವಕಾಶವಿದೆ.
ಮೂಡಣದಲ್ಲಿ ಹಸಿರು ಹೊದ್ದು ಮೈದೆಳೆದ ಪಶ್ಚಿಮ ಘಟ್ಟ, ಪಡುವಣದಲ್ಲಿ ವಿಶಾಲವಾಗಿ ಹರಡಿ ಅಬ್ಬರಿಸುವ ಅರಬ್ಬಿಸಮುದ್ರ, ಅಪಾರ ಜೀವ ವೈವಿಧ್ಯ, ಪ್ರಾಕೃತಿಕ ಸೃಷ್ಟಿಯ ಸಹಜ ಸೊಬಗಿನೊಂದಿಗೆ ನೈಸರ್ಗಿಕ ಹಾಗೂ ಸಂಪದ್ಭರಿತವಾಗಿ ಕಂಗೊಳಿಸುವ ಪ್ರಕೃತಿಯ ರಮಣೀಯ ತಾಣ ಕಡಲ ತಡಿಯ ನಗರ ಮಂಗಳೂರಿನಿಂದ 12 ಕಿಮೀ ದೂರದಲ್ಲಿ 450 ಎಕರೆ ವಿಸ್ತಾರವಾದ ಸ್ಥಳದಲ್ಲಿ ಪ್ರವಾಸಿಗರ ಮನಸೂರೆಗೊಳ್ಳ ಲು ಪ್ರಕೃತಿಯೇ ಜೀವ ತಳೆದು ನಿಂತ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮ ಎಂಬ ಹೆಸರಿನ ಕಮಾನಿನಾಕಾರದ ಗೇಟಿನ ಒಳಹೊಕ್ಕುನಡೆದರೆ ಹೊಸದೊಂದು ಕೌತುಕಮಯ ಜೀವಜಗದ ಅಚ್ಚರಿಯ ಕಥನಕ್ಕೆ ಕಣ್ಣಾಗಿ ಪಿಲಿಕುಳ ನಿಸರ್ಗಧಾಮ ವನ್ಯಜೀವಿಗಳ ಅರಣ್ಯ ಪರ್ವ ತಂತಾನೆ ತೆರೆದುಕೊಳ್ಳುತ್ತದೆ.
ದಟ್ಟ ಕಾನನದ ಮಡಿಲಲ್ಲಿ ಅತ್ಯಂತ ಸಮೀಪ ದಿಂದ ಪರಿಚಿತ – ಅಪರಿಚಿತ ನಾನಾತರದ ಪಶು-ಪಕ್ಷಿಗಳನ್ನು ನೋಡಿ ವಿಸ್ಮಯ ಚಿಕಿತರಾಗಿ ತಮ್ಮದೇ ಆದ ಭಾವ ಸಾಮ್ರಾಜ್ಯದಲ್ಲಿ ತಲ್ಲೀನರಾಗ ಬಹುದಾದ ದಕ್ಷಿಣ ಕನ್ನಡದ ಸಸ್ಯ ಶ್ಯಾಮಲೆಯ ಬೀಡಿದು .
ಜೈವಿಕ ಉದ್ಯಾನ, ಸಸ್ಯ ಕಾಶಿ, ಜಂಗಲ್ ಲಾಡ್ಜ್ ಸ್ ಮತ್ತು ಆಯುರ್ವೇದಿಕ್ ಕೇಂದ್ರಮತ್ಸಾಲಯ , ವಿಜ್ಞಾನ ಕೇಂದ್ರ ಮಾನಸ ಅಮ್ಯೂಸ್ಮೆಂಟ್ ಮತ್ತು ವಾಟರ್ ಪಾರ್ಕ್, ಸಂಸ್ಕೃತಿ ಗ್ರಾಮ ಮತ್ತು ಕುಶಲ ಕರ್ಮಿಗಳ ಗ್ರಾಮ ದೋಣಿ ವಿಹಾರಕೇಂದ್ರ, ಗೋಲ್ಪ್ ಕೋರ್ಸ್, ವಿಶಾಲ ಉದ್ಯಾನವನವನ್ನು ಹೊಂದಿದ್ದ ಪಿಲಿಕುಳ ನಿಸರ್ಗಧಾಮವನ್ನು ವಿಶ್ವ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ರಕ್ಷಿತಾರಣ್ಯ ವಿಂದು ಪ್ರವಾಸಿಗರನ್ನು ಕೈಬೀಸಿ ಕರೆವಂತ ಪ್ರೇಕ್ಷಣೀಯ ಪ್ರವಾಸಿ ತಾಣವಾಗಿ ಸಾಕಾರಗೊಳ್ಳುತ್ತಿದೆ. ಸ್ವಚ್ಛಂದವಾಗಿ ವಿಹರಿಸುವ ಮೃಗಪಕ್ಷಿಗಳಿಂದ ಶೋಭಿತವಾದ ಅರಣ್ಯದ ವನರಾಶಿ ಹಬ್ಬಿನಿಂತಿದೆ.
https://www.youtube.com/watch?v=MDw9Yk2KoYg
ಜೈವಿಕ ಉದ್ಯಾನವನ:
ಸೃಷ್ಟಿ ಸೌಂದರ್ಯದೊಂದಿಗೆ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗ ಸೂಚಿಗಳ ಅನ್ವಯ ಪ್ರಾಣಿಗಳಿಗೆ ಅನುಕೂಲ ವಾಗುವಂತೆ ಮನ್ನಣೆ ಪಡೆದ ಬೃಹತ್ ಪ್ರಾಣಿ ಸಂಗ್ರಹಾಲಯವಿದೆ. ಹುಲಿ, ಸಿಂಹ, ಕರಡಿ, ಚಿರತೆ, ಹಾವೂ, ಮೊಸಳೆ ಕಾಡುಹಂದಿಗಳ ಹಿಂಡು, ಜಂಕೆಮರಿಗಳ ದಂಡು, ಅಳಿಲು, ಮುಂಗುಸಿ, ಮೊಲ, ಬಿಳಿ ಬಣ್ಣದ ಹೆಬ್ಬಾವು, ಕಾಡು ಕುರಿ, ಮೈತುಂಬಾ, ಮುಳ್ಳುಗಳನ್ನು ಹೊಂದಿರುವ ಮುಳ್ಳುಹಂದಿಗಳನ್ನು ನೋಡಿ, ಆನಂದಿಸ ಬಹುದು. ಅವುಗಳಲ್ಲಿ ಮುಖ್ಯ ವಾಗಿ ಭಾರತದಲ್ಲಿ ಕಾಣಸಿಗುವ ಸಂಘ ಜೀವಿ ಸಿಂಹ ಗಳು ಇಲ್ಲಿವೆ. ಗಂಡು ಸಿಂಹಗಳ ತಲೆಯ ಸುತ್ತಲಿನ ದಪ್ಪವಾದ ಕೂದಲು ಸಿಂಹದ ಗ್ರಾತ್ರ ಹೆಚ್ಚಿದಂತೆ ಕಾಣುತ್ತದೆ. ಈ ಸಿಂಹಗಳು ದಿನದ 20 ಗಂಟೆ ನಿದ್ರಿಸಬಲ್ಲವು ಅನ್ನುತ್ತಾರೆ ಇಲ್ಲಿನ ಕಾವಲುಗಾರರು.
ಈ ಪಿಲಿಕುಳ ನಿಸರ್ಗಧಾಮದ ದಟ್ಟ ಕಾನನದಲ್ಲಿ ಬಹಳ ಹಿಂದೆ ಹುಲಿಗಳು ಇಲ್ಲಿನ ಸ್ಥಳೀಯ ಭಾಷೆಯಾದ ತುಳುವಿನಲ್ಲಿ ಹುಲಿಗೆ ಪಿಲಿ ಎನ್ನುವುದರಿಂದ ಹುಲಿಯ ಕೊಳಯಾನೆ ಪಿಲಿಕುಳ ಎಂಬ ಪ್ರತೀಕ ಇದೆ. ಪಿಲಿಕುಳ ನಿಸರ್ಗಧಾಮದಲ್ಲಿ ನೇತ್ರಾವತಿ ಎಂಬ ಹೆಣ್ಣು ಹುಲಿ ಕುಮಾರ ಎಂಬ ಗಂಡು ಹುಲಿ ಇದ್ದು ಅಮರ್, ಅಕ್ಬರ್, ಅಂತೋನಿ ಮತ್ತು ನಿಶಾ ಎಂಬ ಹೆಸರಿನ ಹೆಣ್ಣು ಹುಲಿ ಮರಿ ಇವೆ. ಕೆಂಪು, ಮಿಶ್ರಿತ ಕಿತ್ತಳೆ ಹಳದಿನಸು ಗೆಂಪು ಈ ಹುಲಿಗಳ ದೇಹದ ಬಣ್ಣದ ಮೇಲೆ ನೇರವಾಗಿ ಇಳಿದ ಕಪ್ಪು ಪಟ್ಟೆಗಳಿವೆ.
ಹುಲಿ ಶಾಖ ಇಷ್ಟ ವಿಲ್ಲದ ಪ್ರಾಣಿ. ನೀರು, ನೆರಳು, ತೇವ ಇರುವ ಜಾಗವನ್ನು ತನ್ನ ವಾಸಕ್ಕೆ ಆರಿಸಿಕೊಳ್ಳುತ್ತದೆ. ಆದ್ದರಿಂದ ಈ ಕಾಡಿನ ನಡುವಿನ ಸ್ಥಳ ಇವುಗಳಿಗೆ ಹೇಳಿ ಮಾಡಿಸಿದಂತಿದೆ. ಕಣ್ಣು, ಚರ್ಮ, ಎಲುಬು, ಪಂಜಾ ಮತ್ತಿತರ ಅಂಗಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿಬೇಡಿಕೆ ಇದೆ. ಹುಲಿಯ ಎಲುಬು ಬಳಸಿ ಸಂಧಿವಾತ ನಿವಾರಣೆಗೆ , ಕಾಮೋತ್ತೇಜಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅಲಂಕಾರಿಕ ವಸ್ತುಗಳ ತಯಾರಿಕೆಗೂ ಹುಲಿ ಚರ್ಮ, ಉಗುರು ಬಳಸಲಾಗುವುದರಿಂದ ಇಲ್ಲಿನ ಹುಲಿಗಳಿಗೆ ಬೇಟಿಗಾರರಿಂದ ರಕ್ಷಣೆ ಒದಗಿಸುವ ಗುರುತರವಾದ ಹೊಣೆ ಈ ನಿಸರ್ಗ ಧಾಮಕ್ಕೆ ಇದೆ.
ಎಷ್ಟು ಹೊತ್ತು ಸುತ್ತಾಡಿದರೂ ದಣಿವಾಗದ ಬಹಳ ಸುಂದರ ಹಾಗೂ ಮುದ್ದಾದ ಪ್ರಾಣಿ ಜಿಂಕೆಯ ಪಾರ್ಕ್ ಇಲ್ಲಿದೆ. ಸೂಕ್ಷ್ಮ ಬುದ್ದಿಯ ಚುರುಕು ಪ್ರಾಣಿ. ಇವುಗಳ ಕಣ್ಣು ಹೊಳೆಯುತ್ತಿರುತ್ತದೆ. ಇವುಗಳು ಸ್ವತಂತ್ರವಾಗಿ ತಿರುಗಾಡುವುದನ್ನು ನೋಡುವುದೇ ಒಂದು ಹಿಗ್ಗು. ವನ ದೇವಿ ಪ್ರಕೃತಿ ದೇವಿಯ ಸೊಬಗಿನ ಉಡುಪು ತೊಟಂತೆ ಇರುವ ಈ ಧಾಮದಲ್ಲಿ ಭಾರತದ ಎಲ್ಲೆಡೆ ಕಾಣ ಸಿಗುವ ಕಾಡು ಹಂದಿಗಳು ಮತ್ತು ಕಾಡು ಬೆಟ್ಟ, ಪೊದೆ, ಮರಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕರಡಿಗಳು ಉದ್ದದ ಕಪ್ಪು ಕೂದಲು, ಉದ್ದಮೂತಿ ಮತ್ತು ಕೆಳತುಟಿ, ಎದೆಯಲ್ಲಿ ವೊಕಾರದ ಗುರುತನ್ನು ಹೊಂದಿದ್ದು. ಮನುಷ್ಯನ ವಾಸನೆಯನ್ಮು ಒಂದು ಕಿಲೋ ಮೀಟರ್ ದೂರದಿಂದಲೇ ಗ್ರಹಿಸ ಬಲ್ಲವು. ಇವುಗಳಿಗೆ ಈ ನಿಸರ್ಗ ಧಾಮದಲ್ಲಿ ಆಹಾರವಾಗಿ ತೆಂಗಿನ ಕಾಯಿಬೆಲ್ಲ, ಹಾಲು ಬೆರೆಸಿದ ಅನ್ನ, ಮೊಟ್ಟೆ, ವಿವಿಧ ಜಾತೀಯ ಹಣ್ಣು ಹಂಪಲುಗಳನ್ನು ನೀಡಲಾಗುತ್ತದೆ. ಪುರಾತನ ಜಾತಿಗೆ ಸೇರಿದ ಮಂಗಗಳಿದ್ದು ನೀರಿನಲ್ಲಿ ಅತೀ ವೇಗವಾಗಿ ಈಜ ಬಲ್ಲವು. ಮರದಿಂದ ಮರಕ್ಕೆ ನಗೆಯ ಬಲ್ಲ ಹನುಮಾನ್ ಲಂಗೂರಗ ಎನ್ನುವ ಬಿಳಿ ಮಂಗಗಳು ಮಕ್ಕಳಿಗೆ ಮುಖ್ಯ ಆಕರ್ಷಣೆಯಾಗಿವೆ.
ದೇಹವನ್ನು ಮರಳಿನಲ್ಲಿ ಹುದುಗಿಸಿಕೊಂಡು ತಲೆಯ ನ್ನು ಮಾತ್ರ ಹೊರ ಹಾಕುತ್ತಿರುವ ಸಿಹಿನೀರಿನ ಆಮೆರಾಶಿ ಇಲ್ಲಿದೆ. ಪಾಪ ಶೆಲ್ ಆಮೆ, ಕೆಂಪು ಕಿವಿಯ ಆಮೆ ಕಪ್ಪು ಬಣ್ಣದ ಆಮೆ, ನಕ್ಷತ್ರ ಆಮೆಗಳು ಆಧುನಿಕತೆಯ ವೇಗದ ಬದುಕಿನ ಜಂಜಾಟದಲ್ಲಿ ಇದ್ದವರಿಗೆ ಇವುಗಳ ಚಲನ ವಲನ ವೀಕ್ಷಿಸುವಾಗ ಮನಸ್ಸಿಗೆ ನೆಮ್ಮದಿ ಸಿಗಬಹುದು. ಇನ್ನು ಚಿರತೆಗಳ ಅಲೆದಾಟ ಹಾಗೂ ಬಹಳ ದೂರದವರೆಗೆ ಜಿಗಿಯ ಬಲ್ಲ ತೆಳು ದೇಹ ಹಾಗೂ ಚರ್ಮದ ಮೇಲೆ ಮನೋಹರವಾದ ಚುಕ್ಕೆಗಳನ್ನು ಹೊಂದಿದ ಚಿರತೆಗಳು ಅಪರೂಪದದಲ್ಲಿ ಕಾಣಸಿಗುವ ಪ್ರಾಣಿ.
ಬೊಗಳುವ ಕಾಡುಕುರಿಗಳು, ಕೆಂಚಳಿಲು, ಕಾಡು ಬೆಕ್ಕು, ಮುಂಗುಸಿ ,ಕಾಡು ಪಾಪ ಹಾರುವ ಅಳಿಲು, ಮರ ಬೆಕ್ಕು, ಪುನಗು ಬೆಕ್ಕು, ಚಿರತೆ, ಸುವರ್ಣ ವರ್ಣದ ನರಿ ಹಾಗೂ ತುಂಬಾ ಸೂಕ್ಷ್ಮ ದೃಷ್ಟಿ ಹೊಂದಿರುವ ದೂರದವರೆಗೂ ಇತರ ಪ್ರಾಣಿಗಳ ಚಲನ ವಲನಗಳನ್ನು ಕಾಣ ಬಲ್ಲ ಉಡಗಳ ಸಂಖ್ಯೆ ಮೀರಿ ವಾಸಿಸುತ್ತಿದೆ. ಇಂಡೋನೇಶ್ಯಾ ,ಕಾಂಬೋಡಿಯಾದಲ್ಲಿ ಕಾಣಸಿಗುವ ಅಳಿವಿನ ಅಂಚಿನಲ್ಲಿರುವ ಸಯಾಮೀಸ್ ಮೊಸಳೆಗಳು ಅವುಗಳಿಗಾಗಿ ನಿರ್ಮಿಸಿದ ಜಲಾಶಯದಲ್ಲಿ ಹೊರಳಾಡುತ್ತಿದ್ದು ನೀರಿನಿಂದ ಹೊರ ಬಂದು ಮೈಕಾಯಿಸಿ ಕೊಳ್ಳುವ ಮೊಸಳೆಗಳು ಕಾಣಸಿಗುತ್ತವೆ. ಕಾಡಿನ ನಡುವೆ ಸ್ವಚ್ಚಂದವಾಗಿ ವಿಹರಿಸುವ ಪ್ರಾಣಿಗಳಿಗೆ ಕೀಟಲೆ ಮಾಡಬೇಡಿ ಎಂದು ಅಲ್ಲಲ್ಲಿ ಬೋರ್ಡ್ ಗಳಿವೆ ಆದರೆ ಕೀಟಲೆ ಮಾಡುವವರಿಗೆ ಕೊರತೆ ಇಲ್ಲ.ಕುರುಚಲು ಕಾಡು, ಒಣಹುಲ್ಲುಗಾವಲು, ಮರುಭೂಮಿ ತರದ ಪ್ರದೇಶದಲ್ಲಿ ಕಂಡು ಬರುವ ಕಂದು ಬಣ್ಣದ ಕೃಷ್ಣಾಮೃಗಗಳು ಸುರುಳಿಯಾಕಾರದ ಕೊಂಬುಗಳ ಹೊಂದಿದ್ದು ಜಿಗಿಯುತ್ತಾ ಅತ್ತಿಂದಿತ್ತ ತಿರುಗುತ್ತಿರುವು ದನ್ನು ನೋಡುವುದೇ ಒಂದು ಕೌತುಕ.
ಏಕಾಂಗಿಯಾಗಿ ನಿಸರ್ಗ ಧಾಮದಲ್ಲಿ ಪ್ರವಾಸಿಗರು ತಿರುಗಾಡುವುದು ಸೂಕ್ತವಲ್ಲ. ಕೇಂದ್ರ ಮೃಗಾಲಯ ಪ್ರಾಧಿಕಾರದ ಆಶ್ರಯದಲ್ಲಿ ದೇಶದಲ್ಲಿ ಪ್ರಥಮ ಕಾಳಿಲಿಂಗ ಸರ್ಪಗಳ ಸಂತಾನೋತ್ಪತ್ತಿ ಕೇಂದ್ರ ಹೊಂದಿರುವ ಏಕೈಕ ಮೃಗಾಲಯವಿದು. ನಾಗಸರ್ಪಗಳು ರಾಶಿ ರಾಶಿ ಇಲ್ಲಿದೆ. ಕನ್ನಡಿ ಹಾವು, ಕಂದು, ಕಪ್ಪು ಬಣ್ಣದ ತೆಳು ದೇಹದ ಮೇಲೆ ತಲೆಯಿಂದ ಬಾಲದವರೆಗೆ ಎರಡುಹಳದಿ ಗೆರೆಗಳಿರುವ ಬಿಸಿಲುಹಾವು, ಮರಳುಹಾವು, ಕೇರೆ, ಟ್ರಿಂಕೆಟ್ ಹಾವು, ಕಪ್ಪು ಬಣ್ಣದ ಸರ್ಪ, ನೀರು ಹಾವು, ಬೆಕ್ಕುಕಣ್ಣಿನ ಹಾವು ನೋಡಲು ಅಸಹ್ಯವಾಗುವ ಬಿಳಿಹೆಬ್ಬಾವು, ಹಸಿರು ಹಾವು, ಕಾಳಿಂಗ ಸರ್ಪ, ಜಗತ್ತಿನ ಅತೀ ಉದ ಬೆಳೆಯುವ ಜಾತಿಗೆ ಸೇರಿದ ಹೆಬ್ಬಾವು ಇನ್ನು ಅದೇಷ್ಟೋ ಅಳಿವಿನಂಚಿನ ಹಾವುಗಳ ಸಂಕುಲಗಳ ಸಂರಕ್ಷಣಾ ಕೇಂದ್ರವಿದು
.
ಗುತ್ತಿನಮನೆ ಸಂಸ್ಕೃತಿ ಗ್ರಾಮ:
ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕರಾವಳಿ ಜನ ಜೀವನದ ಪ್ರಾತಿನಿಧಿಕಚಿತ್ರಣ ಗುತ್ತಿನ ಮನೆ ಸಂಸ್ಕೃತಿ ಗ್ರಾಮವನ್ನು ನಿರ್ಮಿಸಲಾಗಿದ್ದು ಅದರಲ್ಲಿ ಮರದ ಕಲೆಂಬಿ ಮನೆಯೊಳಗಿರುವ ಬೃಹದಾಕಾರದ ಮಂಚ ,ತೊಟ್ಟಿಲು ಪಡ್ಯ, ಆಭರಣ ಪೆಟ್ಟಿಗೆ, ಟ್ರಂಕ್ ಅಕ್ಕಿಮುಡಿ, ಭರಣಿ , ಪಲ್ಲಕ್ಕಿ, ಪಡಿಮಂಚ, ಉಗ್ರಾಣ, ದೈವಾರಾಧನೆಯ ಪರಿಕರಗಳು ಗುತ್ತಿನ ಮನೆಯ ಹೊರ ಚಾವಡಿಯ ಸುತ್ತಮುತ್ತ ನಂದಿಕೋಣ ಚಿಕ್ಕು, ಪಂಜುರ್ಲಿ, ಅರಸುದೈವಗಳ ಬೃಹದಾಕಾರದ ಪ್ರತಿಕೃತಿ ಇದೆ. ವಿಭಿನ್ನ ಭಂಗಿಯ ರಾಜವೇಷ, ಸ್ತ್ರೀ ವೇಷ, ಪುಂಡು ವೇಷ, ಬಣ್ಣದ ವೇಷಗಳ ಪ್ರತಿಕೃತಿ ಗುತ್ತಿನ ಮನೆಯ ಸೌಂದರ್ಯ ಹೆಚ್ಚಿಸಿದೆ. ದಕ್ಷಿಣ ಕನ್ನಡದ ಶ್ರೀಮಂತ ಕಲೆ,ಸಂಸ್ಕೃತಿಗಳು ನಶಿಸಿ ಹೋಗುತ್ತಿರುವುದನ್ನು ಗಮನಿಸಿ ಇಲ್ಲಿ ಕುಶಲ ಕರ್ಮಿಗಳ ಗ್ರಾಮ ಸ್ಥಾಪಿಸಿ ಅಳಿವಿನಂಚಿನ ಪಾರಂಪರಿಕ ಕಸುಬುಗಳಾದ ಕುಂಬಾರಿಕೆ, ಕಮ್ಮಾರಿಕೆ,ಎಣ್ಣೆ ಗಾಣ, ನೇಕಾರಿಕೆ, ಕಲ್ಲಿನ ಕೆತ್ತನೆ, ಮರದ ಕೆತ್ತನೆ, ಬೆತ್ತ ಮತ್ತು ಬಿದಿರಿನ ಕೆಲಸ ಹಾಗೂ ಕೃತಿಗಳನ್ನು ರಚಿಸಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಸಲಾಗಿದೆ.
ಪಕ್ಷಿ ಲೋಕ:
ಪ್ರಕೃತಿಯ ಸೊಬಗನ್ನು ವೀಕ್ಷಿಸುವುದರಲ್ಲಿ ಮೈ ಮರೆತ ನಮ್ಮನ್ನು ಬಡಿದೆಬ್ಬಿಸುವುದು ತಮ್ಮದೇ ಆದ ಧ್ವನಿಯಿಂದ ಕಲರವಿಸುವ ವಿವಿಧ ಬಣ್ಣದ ಪಕ್ಷಿಗಳು…. ಸೊಂಪಾಗಿ ಬೆಳೆದು ನಿಂತ ಮರ ಗಿಡಗಳ ನಡುವೆ ಹಾರಾಡುತ್ತಿರುವ ಇವುಗಳ ಸ್ವತಂತ್ರ ಬದುಕು ನೋಡುಗರಿಗೆ ಸಂತಸದ ಕೊಡುಗೆ. ಗರಿಬಿಚ್ಚುವ ನವಿಲು ಗಳ ನಾಟ್ಯ ವೈಭವ, ಭಾರತದ ರಾಷ್ಟ್ರೀಯ ಪಕ್ಷೀಯಾದ ನವಿಲುಗಳು ಇಲ್ಲಿ ಹೇರಳವಾಗಿವೆ. ತಲೆ ಮತ್ತು ಕತ್ತು ನೀಲಿ,ಬೆನ್ನು ಹಸಿರು, ಮುಖದ ಚರ್ಮ ಬಿಳಿಪು, ರೆಕ್ಕೆ ಕೆಂಪು ಮಿಶ್ರಿತಾ ನಸುಹಳದಿ, ಉದ್ದನೆಯ ಕಾಲು ತಲೆಯ ಮೇಲೆ ಗರಿಗಳು ತರಾಯಿಯಂತಿದ್ದ ಗಂಡು ನವಿಲಿಗೆ ಹಸಿರು ಬಣ್ಣದ ದೊಡ್ಡ ಗರಿಗಳು ಅದರಲ್ಲಿ ಕಣ್ಣಿನಂತೆ ಕಾಣುವ ಪ್ರಕಾಶಮಾನವಾದ ಚುಕ್ಕೆಗಳು, ಗಂಡು ನವಿಲಿನ ಸೊಬಗು ತುಂಬಿರುತ್ತದೆ. ಈ ಗರಿಗಳಲ್ಲಿ ಬಿಸಣಿಗೆಯಾಕಾರದಲ್ಲಿ ಗರಿಗಳನ್ನು ಹರಡಿ ಕುಣಿಯುವ ನವಿಲುಗಳು ಮನಮೋಹಕವಾಗಿರುತ್ತದೆ.
ಬಗೆ ಬಗೆಯ ಪಕ್ಷಿ ಸಂಕುಲಗಳ ವೀಕ್ಷಣೆಗೂ ಪಕ್ಷಿಗಳ ಛಾಯಾಗ್ರಹಣಕ್ಕೂ ಹೇಳಿ ಮಾಡಿಸಿದ ಕಾಡು ಮೇಡುಗಳ ತಾಣವಿದು. ಬಿಳಿ ಹಂಸ ಬಿಳಿ ಕೆಂಬರಲು, ಬೂದು ನೀರಕ್ಕಿ, ಸುರಳಿ ಕತ್ತಿನ ಬಾತು ಕೋಳಿ, ಹೊಟ್ಟೆಯ ಭಾಗ ಬಿಳಿಯಾಗಿದ್ದು, ಹಾರುವಾಗ ರಕ್ಕೆಗಳನ್ನು ವಿ ಆಕಾರದಲ್ಲಿ ಬಿಡಿಸಿ ಕೊಂಡಿರುವ ವಿಶೇಷ ವಾಗಿ ಉದ್ದವಾಗಿದ್ದು, ಮರಗಳನ್ನು ಏರಲು ಅನುಕೂಲ ವಾಗುವ ಮರಬಾತು, ಆಸ್ಟ್ರೇಲಿಯಾದ ಪಕ್ಷಿಗಳ ಸಮೂಹ ಚೀನಾ ಹಾಗೂ ಬರ್ಮಾ ದೇಶದ ಬಿದಿರಿನ ವನಗಳಲ್ಲಿ ಕಾಣಸಿಗುವ ಆಕರ್ಷಕ ಬಣ್ಣ ಬಣ್ಣದ ಪಕ್ಷಿ, ಬೆಳ್ಳಿ ಹಕ್ಕಿ, ಕಂದುಮೀನು, ಗೂಬೆ, ಮರಗೂಬೆ, ಕಾಡುಕೋಳಿ, ಅಲೆಕ್ಸಾಂಡ್ರಿನ್ ಗಿಳಿಗಳು, ಉದ್ದ ಬಾಲ ವುಳ್ಳ ದೊಡ್ಡ ಜಾತಿಯ ಗಿಳಿಗಳು. ನೋಡಲು ಒಂದಕ್ಕಿಂತ ಒಂದು ಸುಂದರವಾಗಿದ್ದು. ಒಟ್ಟಿನಲ್ಲಿ ಇಲ್ಲೊಂದು ಕೌತುಕಮಯ ಪಕ್ಷಿ ಪ್ರಪಂಚ ನೆಲೆನಿಂತಿದೆ. ವಿವಿಧ ಬಗೆಯ ಬಣ್ಣಗಳಿಂದ ಮಿಶ್ರಿತವಾದ ಒಂದೇ ದಿಕ್ಕಿನಲ್ಲಿ ಸುಮ್ಮನೆ ಸಾಗದೆ ವಿವಿಧ ಭಂಗಿಗಳಲ್ಲಿ ತಿರುಗುತ್ತಾ ಕಸರತ್ತು ಪ್ರದರ್ಶನಮಾಡುವಂತೆ ಸಾಹಸ ಪ್ರದರ್ಶಿಸುವ ಇಂಡಿಯನ್ ರೋಲರ್ ಎಂಬ ಹೆಸರಿನ ಹಕ್ಕಿಗಳ ಹಿಂಡು ಮಕ್ಕಳಿಗೆ ಕುತೂಹಲ ಮೂಡಿಸುವ ಪಕ್ಷಿ ಸಮೂಹ.
ಇಲ್ಲಿನ ಉಷ್ಟ್ರಪಕ್ಷಿಗಳಬದುಕು ಕೂಡ ಯೋಚಿಸುವಂತಹದ್ದೆ. ಪಕ್ಷಿ ಸಮೂಹದಲ್ಲಿ ಅತೀ ದೊಡ್ಡ ಗಾತ್ರದ ಮೊಟ್ಟೆಯಿಡುವ ಪಕ್ಷಿ. ಗಂಡು ಪಕ್ಷಿ ಕಪ್ಪಾಗಿಯು ಹೆಣ್ಣುಪಕ್ಷಿ ಬೂದು ಬಣ್ಣದಾಗಿದ್ದು, ಕಾಲಿನಿಂದ ಒದೆಯ ಬಲ್ಲದು. ವೇಗವಾಗಿ ಓಡಬಲ್ಲದು . ವೇಗವಾಗಿ ಓಡಬಲ್ಲದು. ಸುಮಾರು 40 ವರ್ಷ ಬದುಕುವ ಇವುಗಳ ಗರಿ ಪ್ರತಿ 8 ತಿಂಗಳಿಗೊಮ್ಮೆ ಕತ್ತರಿಸಲಾಗುವುದು.
ಬೆಟ್ಟಗುಡ್ಡಗಳು ಕಾಡು ಕಣಿವೆ ನಡುವೆ ಸುತ್ತು ಬಳಸಿದ ಕಿರುದಾರಿಗಳಲ್ಲಿ ಈ ನಿಸರ್ಗಧಾಮದಲ್ಲಿ ಚಲಿಸುತ್ತಾ ಹೋದಂತೆ ನಾನಾ ತರದ ಪಶು ಪಕ್ಷಿಗಳನ್ನು ನೋಡಿ ವಿಸ್ಮಯ ಚಕಿತರಾಗ ಬಹುದು. ಮಹತ್ವ ಪೂರ್ಣ ಪ್ರವಾಸಿತಾಣವಾಗಿ ಪ್ರವಾಸೋದ್ಯಮದ ಭೂಪಟದಲ್ಲಿ ಹೆಸರಾಗುವ ಅರ್ಹತೆ ಹೊಂದಿದ ಪ್ರವಾಸಿ ತಾಣವಿದು. ಆದರೆ ಆ ನಿರೀಕ್ಷೆಯ ಮಟ್ಟ ತಲುಪಿಲ್ಲ. ಈ ನಿಸರ್ಗ ಧಾಮದ ಸೊಬಗನ್ನು ವೀಕ್ಷಿಸಿ ಬರುವವರಿಗೆ ಯಾವುದೇ ತೊಂದರೆ ಇಲ್ಲ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮಾಹಿತಿ ಯ ದೊಡ್ಡ ಕೊರತೆ ಇದೆ. ಅನೇಕ ಸಿಬ್ಬಂದಿಗಳಿದ್ದಾರೆ. ಆದರೆ ಕೆಲವರು ಸರಿಯಾದ ತರಬೇತಿ ಹೊಂದಿದಂತಿಲ್ಲ.
ಪ್ರಾಣಿ- ಪಕ್ಷಿ ಗಳು, ಮರ-ಗಿಡಗಳ ಬಗ್ಗೆ ಏನೂ ಅರಿವಿಲ್ಲದವರಂತೆ ವರ್ತಿಸುತ್ತಾರೆ. ಉದಾಶಿನತೆಯು ಇರ ಬಹುದು. ಪ್ರವಾಸಿಗರಿಗೆ ಸರಿಯಾಗಿ ಮಾರ್ಗದರ್ಶನ ನಿಡುತ್ತಿಲ್ಲ. ಇಲ್ಲಿನ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದಲ್ಲಿ ಇನ್ನೂ ಹೆಚ್ಚಿನ ಜನಪ್ರಿಯ ಪ್ರವಾಸಿ ತಾಣವಾಗ ಬಹುದು.
ಹಚ್ಚ ಹಸಿರಿನ ವಿವಿಧ ಜಾತಿಯ ಮರಗಿಡಗಳಿಂದ ಕೂಡಿದ ದಟ್ಟ ಕಾನನದಲ್ಲಿ ತಿರುಗುತ್ತಿದ್ದರೆ ಒಂದಿಷ್ಟು ಆಯಾಸವೆನಿಸದು. ಪಶ್ಚಿಮ ಘಟ್ಟದ ಅಳಿವಿನಂಚಿನ ಗಿಡ ಮರಗಳ ಸಂರಕ್ಷಣೆ ಇಲ್ಲಿ ನಡೆಯುತ್ತಿದೆ. ವಿವಿಧ ಜಾತಿಯ ಸಸ್ಯಗಳು, 27 ಬಗೆಯ ಬಿದಿರಿನ ತಳಿಗಳು, ಹಲವು ಬಗೆಯ ಬೆತ್ತಗಳು, 350 ಜಾತಿಯ ಔಷಧೀಯ ಸಸ್ಯಗಳು 130 ಜಾತಿಯ ಹಲಸಿನ ವೃಕ್ಷ ಗಳು, ಜೀವ ವೈವಿಧ್ಯಾಸಕ್ತರ ಕುತೂಹಲ ಕೆರಳಿಸುವ ಹರ್ಬೇರಿಯಂ ಸಸ್ಯಕಾಶಿ ಇಲ್ಲಿ ನಳ ನಳಿಸುತ್ತಿದೆ.. ಆಲದ ಮರದ ಟೊಂಗೆಗಳಿಂದ ಜೋತು ಬಿದ್ದ ಬಿಳಲುಗಳು ಎತ್ತರದೆತ್ತರಕ್ಕೆ ಬೆಳೆದು ನಿಂತ ಬಗೆ ಬಗೆಯ ವೃಕ್ಷಗಳು ಪ್ರವಾಸಿಗರಿಗೆ ದಾರಿಯುದ್ದಕ್ಕೂ ನೆರಳಾಗಿ ನಿಂತ ನಿತ್ಯ ಹರಿದ್ವರ್ಣದ ದಟ್ಟ ಅರಣ್ಯದ ಮುಕ್ತ ವಾತಾವರಣದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಸುಂದರ ಅವಕಾಶ.
ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲಿ ವಿವಿಧ ಮಾದರಿಗಳ ಮೂಲಕ ವಿಜ್ಞಾನವನ್ನು ಕಲಿಯುವ ಅವಕಾಶವಿದೆ. ಪ್ರವಾಸಿಗರು ತಾವೇ ಮಾಡಿನೋಡಬಹುದಾದ ಪ್ರಾತ್ಯಕ್ಷಿಕೆಗಳು, ಜೀವ ವೈವಿಧ್ಯತೆ ಮಂಚೂಣಿಯಲ್ಲಿದೆ. ತಂತ್ರಜ್ಞಾನ ಮತ್ತು ಮನೋರಂಜನೆಗಾಗಿ ಆಕರ್ಷಕ ಮಾದರಿಗಳ ಪ್ರದರ್ಶನ ಗಳು ಗಮನ ಸೆಳೆಯುವಂತಿದೆ. ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜೀವವೈವಿಧ್ಯ ಮುಂಚೂಣಿ ತಂತ್ರಜ್ಞಾನ ಹಾಗೂ ಮನೋರಂಜನೆಗಾಗಿ ವಿಜ್ಞಾನ ಎಂಬ ಮೂರು ವಿಷಯ ಅಧಾರಿತ ಗ್ಯಾಲರಿಗಳಿವೆ.
ತಾರಾಲಯ ಮಕ್ಕಳ ಮುಖ್ಯ ಆಕರ್ಷಕ ಕೇಂದ್ರಸೂರ್ಯ,ಚಂದ್ರ ನವಗ್ರಹ ತಾರೆಗಳು, ನಕ್ಷತ್ರ ಪುಂಜ ಸೇರಿದಂತೆ ಇಡಿ ನಭೋಮಂಡಲದ ಹುಟ್ಟು ಬೆಳವಣಿಗೆ ಹಾಗೂ ಆಗುಹೋಗುಗಳ ವಿಸ್ಮಯಗಳನ್ನು ನೋಡಬಹುದು.
ಆಬಾಲವೃದ್ದರಾದಿಯಾಗಿ ಎಲ್ಲರನ್ನು ಆಕರ್ಷಿಸುವ ಮನೋರಂಜನಾ ಆಟಗಳ ತಾಣ ಇಲ್ಲಿದೆ. ಬೆಳಿಗ್ಗೆ 10 ರಿಂದ ಸಂಜೆ 5.30ರ ತನಕ ನಿರಂತರ ಉಲ್ಲಾಸ ಭರಿತವಾಗಿರುವಂತೆ ವಿವಿಧ ದೋಣಿ,ವಿಹಾರಕೇಂದ್ರವಿದೆ. ಯಾಂತ್ರಿಕೃತ ದೋಣಿ ಮತ್ತು ಪೆಡಲ್ ದೋಣಿಗಳು ಮನಸೂರೆ ಗೊಳ್ಳುವ ತಾಣವಿದು. ಮತ್ಸಾಲಯದಲ್ಲಿ ಅಪರೂಪದ ಮೀನು ತಳಿಗಳ ಸಂರಕ್ಷಣೆ ಹಾಗೂ ಸಂತಾನೋತ್ಪತ್ತಿ ಯೋಜನೆಗಳಿದ್ದು ಪ್ರವಾಸಿಗರಿಗೆ ಮುಕ್ತ ವಾಗಿದೆ.
ಬಹಳ ಹಿಂದೆ ಹುಲಿಗಳು ನೀರು ಕುಡಿಯುತ್ತಿದ್ದ ಕೊಳಗಳನ್ನು ನೈಸರ್ಗಿಕವಾಗಿ ಇರಿಸಲಾಗುದೆ. ವೈವಿಧ್ಯಮಯ ಜಲಕ್ರೀಡೆ ಮಾನಸ ಅಮ್ಯೂಸ್ಮೆಂಟ್ ಮತ್ತು ವಾಟರ್ ಪಾರ್ಕ್ ಗಳ ಸುತ್ತ ವಿಶಾಲ ಉದ್ಯಾನ ವನ ಕಣ್ಮನತಣಿಸುವ ಹಸಿರ ಹೂದೋಟ ಹಾಗೂ ಇಲ್ಲಿನ ವಾಟರ್ ಪಾರ್ಕ್ ಉತ್ತಮ ಆದಾಯ ತರುವ ಕೇಂದ್ರ. ಮಕ್ಕಳನ್ನು ಮುದಗೊಳಿಸುವ ಬಾತುಕೋಳಿಗಳು ಹೇರಳವಾಗಿವೆ.
ಕ್ರೀಡಾ ಪ್ರೀಯರಿಗೆ 9 ಗುಂಡಿಗಳ ಗೋಲ್ಪ್ಕೋರ್ಸ್ ಇದೆ. ಪ್ರಾಕೃತಿಕ ಸೌಂದರ್ಯ ವೀಕ್ಷಣೆಯೊಂದಿಗೆ ಜಂಗಲ್ ಲಾಡ್ಜ್ ಸ್ ಮತ್ತು ಆಯುರ್ವೇದ ಕೇಂದ್ರ, ಅತಿಥಿಗೃಹ ಮತ್ತು ಪ್ರವಾಸಿ ಕುಟೀರಗಳಿವೆ. ಅಳಿವಿನಂಚಿನ ಮತ್ಸ ಸಂತತಿಯ ಸಂರಕ್ಷಣೆ, ಮತ್ಸ ಸಂತತಿಗಳ ತಳಿ ವರ್ಧನ ಕೇಂದ್ರ ಕಣ್ಮನ ತಣಿಸುವ ಹೂದೋಟಗಳು ಇಲ್ಲಿನ ಕಂಡರಿತ ಅನುಭವಗಳನ್ನು ಆತ್ಮೀಯವಾಗಿರಿಸಿಕೊಂಡಿದೆ. ನಿಶ್ಯಬ್ದತೆ, ತಂಗಾಳಿ, ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಕಣ್ನೋಟ ಸಂಪಿಗೆಯ ಕಂಪು ಪಿಲಿಕುಳ ನಿಸರ್ಗಧಾಮದಲ್ಲಿ ವಾವ್ ಎನ್ನುವಷ್ಷು ಹಿತವಾಗಿದೆ.
ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಲವು ಗ್ಯಾಲರಿಗಳಿದ್ದು. ವಿಜ್ಞಾನ ಪಾರ್ಕ್ ಕೂಡ ಇದೆ. ಇಲ್ಲಿ ದೊಡ್ಡ ಪ್ರಮಾಣದ ಆಟಿಕೆಗಳ ಮೂಲಕ ವಿಜ್ಞಾನವನ್ನು ಕಲಿಯುವ ಅವಕಾಶವಿದೆ. ಬ್ರಹ್ಮಾಂಡದ ಕುರಿತಾದ ಕಲಿಕೆಯನ್ನು ಮತ್ತಷ್ಟು ಸರಳವಾಗಿಸುವ ಉದ್ದೇಶದಿಂದ ಆರಂಭವಾಗಿದ್ದು ಸ್ವಾಮಿ ವಿವೇಕಾನಂದ ಹೆಸರಿನ 3 ಡಿ ತಾರಾಲಯವಿದೆ. ಕುಳಿತಲ್ಲಿದ್ದಲೇ ಆಕಾಶಕ್ಕೆ ನೆಗೆದ ಅನುಭವದೊಂದಿಗೆ ನಭೋಮಂಡಲದಲ್ಲಿ ತೇಲಾಡಿದ ಅನುಭವ ಗ್ರಹಗಳ ಚಲನೆಯ ಕುರಿತಾದ ಮಾಹಿತಿ ಆಕಾಶದಲ್ಲಿ ಹಾರಾಡಿದ ಅನುಭವ.
ಕುಶಲ ಕರ್ಮಿಗಳ ಗ್ರಾಮವೂ ಇಲ್ಲಿನ ಇನ್ನೊಂದು ಆಕರ್ಷಣೆ ಅಳಿದು ಹೋಗುವ ಕೃಷಿಪರಂಪರೆಯ ಮೂಲ ಕಸುಬುಗಳು ಪ್ರಾತ್ಯಕ್ಷಿಕೆ ರೂಪದಲ್ಲಿ ಕಾಣಸಿಗುತ್ತದೆ. ಮಡಿಕೆಮಾಡುವ ಕುಂಬಾರರ ಕೊಟ್ಟಿಗೆ, ಅವಲಕ್ಕಿ ಗುದ್ದುವ ಒರಲು, ಒನಕೆ, ದಾರುಶಿಲ್ಪ, ಕುಶಲ ಕರ್ಮಿಗಳು, ಗಾಣಿಗ, ಆಚಾರ, ನೇಕಾರರು, ಕಮ್ಮಾರರಮನೆಗಳನ್ನು ನಿರ್ಮಿಸಲಾಗಿದೆ. ಪಿಲಿಕುಳ ನಿಸರ್ಗಧಾಮದಲ್ಲಿ ವಿವಿಧ ಪ್ರಬೇಧಗಳ 1200 ಕ್ಕೂ ಆಧಿಕ ಪ್ರಾಣಿ, ಪಕ್ಷಿ ಮತ್ತು ಸರಿಸೃಪಗಳಿವೆ . ಪ್ರವಾಸೋದ್ಯಮದ ಬಹುಮುಖ್ಯ ಕೇಂದ್ರವಾಗಿ ದಿನೆ ದಿನೇ ಪ್ರವಾಸಿಗರ ಸಂಖ್ಯೆಯು ಇಲ್ಲಿ ಹೆಚ್ಚುತ್ತಿದೆ.
- ಲತಾ ಸಂತೋಷ ಶೆಟ್ಟಿ ಮುದ್ದುಮನೆ.