Wednesday, June 29, 2022
HomeKannada Articleನಿಜಾಮರ ನಗರಿಯಲ್ಲೊಂದು ಸುರೇಂದ್ರ ಪುರಿ : heggaddesamachar

ನಿಜಾಮರ ನಗರಿಯಲ್ಲೊಂದು ಸುರೇಂದ್ರ ಪುರಿ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

 ಭಾರತೀಯ ಸಂಸ್ಕೃತಿಯ ವಿಶಿಷ್ಟಗಳು ಆಸಕ್ತರು ಹಾಗೂ ನಾಸ್ತಿಕರನ್ನು ಆಕರ್ಷಿಸುತ್ತಲೇ ಬಂದಿದೆ. ಇಲ್ಲಿನ  ಆಧ್ಯಾತ್ಮಿಕತೆ, ಕಲೆ, ಭೌಗೋಳಿಕತೆಗೆ‌  ಮನ ಸೋಲುತ್ತದೆ. ಇಂತಹದೇ ಒಂದು ಅನುಭವ‌ ನನಗೆ ನಿಜೌಮರನಗರಿ‌ ಹೈದರಾಬಾದಿನ ಸುರೇಂದ್ರ ಪುರಿಯಲ್ಲಿ ಆಯಿತು. ತನ್ನೆಲ್ಲಾ ಕಲಾ ಸೌಂದರ್ಯದಿಂದ ಗಮನ ಸೆಳೆವ  ಸುರೇಂದ್ರಪುರಿಯು ಹೊಸ ಚೈತನ್ಯವನ್ನು, ಧನ್ಯಾತಾಭಾವವನ್ನು ಮೂಡಿಸಿದಂತಹ ಅನುಭವವಾಯಿತು. ನಾನೆಂದೂ ಊಹಿಸಿರಲಿಲ್ಲ ಭಾರತದ ಹೆಚ್ಚಿನೆಲ್ಲಾ ಹಿಂದೂ ದೇವಾಲಯಗಳ ಪ್ರತಿರೂಪ ಒಂದೇ ಸ್ಥಳದಲ್ಲಿ ನೋಡಸಿಗಬಹುದೆಂದು.  ಅದೂ ಸುಬ್ರಹ್ಮಣ್ಯ ಧರ್ಮಸ್ಥಳ, ಕೊಲ್ಲೂರು, ಶೃಂಗೇರಿ, ಉಡುಪಿ, ಶ್ರೀ ಕೃಷ್ಣ ದೇವಾಲಯ ಇನ್ನೂ ಅನೇಕ ‌ಕರ್ನಾಟಕದ  ದೇಗುಲಗಳ ಪ್ರತಿರೂಪ ನಿಜಾಮರ ನಗರಿಯಲ್ಲಿ  ನೋಡಿ ಅಚ್ಚರಿಮೂಡಿತು.

      ಸುಂದರ ಭಾರತ ದೇಶದ ಪ್ರತಿಯೊಂದು ರಾಜ್ಯದಲ್ಲೂ ಒಂದಲ್ಲ‌ ಒಂದು ಅದ್ಬುತ ಪರಂಪರೆಯ ನೋಟವಿರುತ್ತದೆ. ವೈವಿಧ್ಯಮಯ ನಮ್ಮ ದೇಶದ ಹೆಚ್ಚಿನೆಲ್ಲಾ ಪ್ರಮುಖ ದೇವಸ್ಥಾನಗಳು ವಾಸ್ತು ಶಿಲ್ಪಗಳ ಕಲಾ ಸಂಗಮ, ಆಧ್ಯಾತ್ಮಿಕತೆ  ಹಾಗೂ ಆಧುನಿಕತೆಗಳ ವಿಶಿಷ್ಟ ಸಂಗಮ ಇಲ್ಲಿದೆ. ಇತಿಹಾಸದ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ರೂಪಿಸಿದ ಊರಿದು. ಕೆಲವರು ಪೌರಾಣಿಕ ಜಾಗೃತಿ ಕೇಂದ್ರ, ಭಾರತೀಯ ದೇವಾಲಯಗಳ‌ ಕಲಾ ನೈಪುಣ್ಯತೆಯ ಅರಿವು ಮೂಡಿಸುವ ಕೇಂದ್ರವೆಂದರೆ ಮತ್ತೆ ಕೆಲವರು ದೇವಾಲಯಗಳ ಪ್ರಾತ್ಯಕ್ಷಿಕೆ ಎನ್ನುತ್ತಾರೆ. ಒಟ್ಟಿನಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯವ ಭೂಮಿಯ ಮೇಲ್ಲೊಂದು ದೇವಲೋಕ ಇದ್ದ ಹಾಗೆ ಈ ಸುರೇಂದ್ರ ಪುರಿ ಮಸ್ತಕದಲ್ಲಿ‌ ಸದಾ ಉಳಿಯುವಂತಹ ಕಲಾಸಂಗಮದ ಅಪರೂಪದ ‌ವೈಭವವೊಂದು ಇಲ್ಲಿ  ಮೈದೆಳೆದು ನಿಂತಿದೆ. 

       ಶ್ರಿ ಕುಂದ ಸತ್ಯ ನಾರಾಯಣರ  ದಿವಂಗತ ಪುತ್ರ ಸುರೇಂದ್ರರ  ನೆನಪಿಗಾಗಿ  ಹೈದರಾಬಾದ್ ಜಂಕ್ಷನ್ ನಿಂದ  55 ಕಿ.ಮೀ ದೂರದಲ್ಲಿ‌ ವಿಶಾಲವಾದ ಬಯಲು‌ ಪ್ರದೇಶದಲ್ಲಿ  ಸುರೇಂದ್ರ ಪುರಿ ಎಂಬ ಪೌರಾಣಿಕ ಜಾಗೃತಿ ‌ಕೇಂದ್ರವನ್ನು‌ ನಿರ್ಮಿಸಿದ್ದಾರೆ. ದೇವಾಲಯಗಳು ಗುಹಾಲಯಗಳ ಅಪರೂಪದ ವಾಸ್ತು ಶಿಲ್ಪ, ಸೂಕ್ಷ್ಮ ಕುಸುರಿ, ಕೆತ್ತನೆಯ ದೇವಾಲಯಗಳನ್ನು‌ ನೋಡುತ್ತಾ ನಿಂತರೆ ಮೈಮನವೆಲ್ಲ ರೋಮಾಂಚನಗೊಳ್ಳುತ್ತದೆ.

       ಇಲ್ಲಿ ರೂಪುಗೊಂಡ ‌ಕಲಾ‌ನಿಪುಣತೆಯನ್ನು ನೋಡಲು ಎರಡು ‌ಕಣ್ಣು ಸಾಲದು. ಇಂದ್ರಲೋಕ, ಸ್ವರ್ಗಲೋಕ, ಬ್ರಹ್ಮ ಲೋಕ, ವಿಷ್ಣು ಲೋಕ, ಕೈಲಾಸ, ಕ್ಷೀರ ಸಾಗರ‌ಮಂಥನ, ಕಾಳಿಂಗನ‌ ಮೇಲೆ ಕೃಷ್ಣನ ನರ್ತನ ಕೃಷ್ಣನ ಎಲ್ಲಾ ಬಾಲಲೀಲೆಗಳು ಪ್ರವಾಸಿಗರನ್ನು ಹೊಸ ಪ್ರಪಂಚಕ್ಕೆ ಕೊಂಡುಹೋಗುತ್ತದೆ. ಸುರೇಂದ್ರ ಪುರಿಯ ಒಡಲೊಳಗೆ ಅದೆಷ್ಟೋ ಅರಸು ಮನೆತನಗಳ, ಮತ – ಪಂಥಗಳ ಕಲಾವೈಭವಗಳು ಮೈದೆಳೆದು ಭಾರತದ ಸಾಂಸ್ಕೃತಿಕ ಲೋಕದ ಶ್ರೀ ಮಂತಿಕೆಯನ್ನು ಪ್ರದರ್ಶಿಸುತ್ತದೆ. ರಾಮಾಯಣ, ಮಹಾಭಾರತದ ದೃಶ್ಯ ಗಳನ್ನು ಜೀವಂತವಾಗಿರಿಸುವ ಅಪೂರ್ವ ‌ಕಲಾಹಂದರ ಹಾಗೂ  ಚರಿತ್ರೆಯ ವೈಭವದ ಪ್ರಾತ್ಯಕ್ಷಗಳಾದ  ರಥಕ್ಕೆ  ಕುದುರೆಗಳನ್ನು  ಕಟ್ಟಿದ್ದು ಸಾಲುಪತಾಕೆಗಳು, ಧ್ವಜಗಳ ದೃಶ್ಯ ‌ವೈಭವದ  ವರ್ಣಮೇಳಗಳನ್ನು‌  ನೋಡಬಹುದು.
  

          ಸುರೇಂದ್ರಪುರಿ ಪೌರಾಣಿಕ ಜಾಗೃತಿ ‌ಕೇಂದ್ರವನ್ನು ಸ್ಥಳೀಯರು  ಕುಂದ ಸತ್ಯ ನಾರಾಯಣ ‌ಕಲಾಧಾಮ್ ಎಂದು ಕೂಡ ಕರೆಯುತ್ತಾರೆ. ಭಕ್ತರಿಗೆ ಭಕ್ತಿಯ ಕೇಂದ್ರ, ಕುತೂಹಲಿಗಳಿಗೆ ಭಾರತದ ‌ಹೆಚ್ಚಿನೆಲ್ಲಾ  ದೇವಾಲಯಗಳನ್ನು ಒಂದೇ ಸೂರಿನಲ್ಲಿ‌  ನೋಡಿ ಕಣ್ಣುಂಬಿ ಕೊಳ್ಳ ಬಹುದು. ಶಿಲ್ಪಕಲೆ ಚಾರಿತ್ರಿಕ ವೈಭವವನ್ನು  ಸಾರಿ ಹೇಳುವಂತಿರುವ  ನಟರಾಜನ ಕೆತ್ತನೆ, ಹಿಂದೂ ದೇವ ದೇವಿಯರ ವಿಗ್ರಹದ ಕೆತ್ತನೆಯ  ಸೊಬಗು ಇಲ್ಲಿನ ಒಂದೊಂದು ‌ಕಲಾಕುಸುರಿಗಳು ಶಿಲ್ಪ ಕಲಾ‌ನೈಪುಣ್ಯತೆಯನ್ನು ಸಾರುತ್ತದೆ. ಏಕಶಿಲೆಯಲ್ಲಿ ನಿರ್ಮಿಸಲ್ಪಟ್ಟಿರುವ  ಕೃಷ್ಣನ  ಮೂರ್ತಿ ಸೌಂದರ್ಯದ ಜೀವಂತಿಕೆ ಪಡಿ ಮೂಡಿಸಿದಂತಿದೆ. ಹಿಮಾಲಯ ಶಿಖರದ ‌ನಿರ್ಮಾಣವನ್ನು ಕೃತಕವಾಗಿ ರಚಿಸುವ ಮೂಲಕ, ಸುಂದರ ‌ವಿನ್ಯಾಸದ ಬೆಳ್ಳಿ ಬೆಟ್ಟವನ್ನು ರಚಿಸಲಾಗಿದೆ.  ನಾಗನ ಹೆಡೆಯ ಮೇಲೆ ಆಳೆತ್ತರದ ಶಿವಲಿಂಗ, ಬೇರೆ ಬೇರೆ ದೇವಾಲಯಗಳನ್ನು ನೋಡುತ್ತಾ ಮುಂದೆಸಾಗಿದರೆ  ವಿಶಾಲವಾದ ಬೃಹತ್ ಬಂಡೆ, ಅದರ ಬುಡದಲ್ಲೊಂದು ಸಣ್ಣ ಜಲಪಾತ, ಹೆಬ್ಬಂಡೆಯ  ನೆತ್ತಿಯ  ಮೇಲೆ ‌ಸಿಂಗರಿಸಿಟ್ಟಂತೆ  ಕಾಣುವಗಂಗೆ. ಒಂದಕ್ಕಿಂತ ಒಂದು ಸುಂದರವಾದ ವಿಗ್ರಹಗಳ ಮುಖ ಮುದ್ರೆ, ಕಲಾಕೃತಿಗಳ ವೈಖರಿಯ ವಿಶಿಷ್ಟ ಶಿಲ್ಪಗಳಿಂದ  ಸುರೇಂದ್ರ ಪುರಿ‌ಕಂಗೊಳಿಸುತ್ತಿದೆ. 

     “ಬಾಗಿಲೊಳು ಕೈ‌ಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವಿ ಗುಡಿಯು ಕಲೆಯ ಬಲೆಯು” ಎಂಬ ಕುವೆಂಪು ಅವರ ಕವಿತೆ  ಸುರೇಂದ್ರ ಪುರಿಯೊಳಗೆ ಸುತ್ತಾಡುವಾಗ  ನೆನಪಾಗುವುದು  ಖಂಡಿತಾ.  ದಶಾವತಾರ  ಕೆತ್ತನೆಯಿರುವ  ಶಿಲಾಮೂರ್ತಿ, ಮಯೂರ ವಾಹನವಾಗಿ ಕುಳಿತು ಸುಬ್ರಮಣ್ಯ ಸ್ವಾಮಿ ‌ಮನೋಹರ ವಾಗಿರುವ ಲಕ್ಷ್ಮೀ ನಾರಾಯಣ ‌ಮೂರ್ತಿ, ಸುಂದರ ಗೋಪುರದಂತೆ‌ ಭಾಸವಾಗುವ  ಶಿಲಾಮಯ ಧ್ವಜಸ್ತಭಗಳು, ಶಿವನ‌ ಮಹಾಭಕ್ತ ಹತ್ತು ತಲೆಗಳನ್ನು ಹೊಂದಿರುವ ಸಂಗೀತಪ್ರಿಯ ರಾವಣ ರುದ್ರವೀಣೆಯನ್ನು ನುಡಿಸುವ ಭಂಗಿಯಲ್ಲಿ ಕಾಣಸಿಗುತ್ತಾನೆ. ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ದ್ವಾರದಲ್ಲಿರುವ  ರಾವಣನನ್ನು ಇಲ್ಲಿ ಕಾಣಬಹುದು. ಸುರೇಂದ್ರಪುರಿಯಲ್ಲಿ‌ ನಿರ್ಮಿಸಿದ ಪ್ರತಿಯೊಂದು ದೇವಾಲಯಗಳು, ಮೂರ್ತಿಗಳು ಶಿಲ್ಪಕಲಾ ಕೆತ್ತನೆಗಳು, ಮೂಲತಃ ಯಾವ ರಾಜ್ಯದ್ದು ಎನ್ನುವ ವಿವರಣೆಯೊಂದಿಗೆ ಇಲ್ಲಿದೆ. ಶಿವತಾಂಡವದ ಅಳೆತ್ತರದ ಮೂರ್ತಿ, ಅಲಂಕೃತಗೊಂಡ‌ ಬಸವ ,ಎಂತೆಂಥವೋ ಪುತ್ಥಳಿಗಳು ಆಕರ್ಷಕ ಅಮೃತ ಶಿಲೆಗಳು ಒಂದೊಂದರದೂ ಒಂದೊಂದು ಭಂಗಿ, ಇಲ್ಲೊಂದು ಅತೀ ಸುಂದರವಾದ ಪದ್ಮಾಸನದಲ್ಲಿ ಕುಳಿತ ಭಂಗಿಯಲ್ಲಿ ಬೃಹತ್ ಬುದ್ಧನ ವಿಗ್ರಹವಿದೆ. 

         ಒಂದಕ್ಕಿಂತ ಒಂದು ಚಂದದ ದೇವಾಲಯಗಳ ಸಾಲು ಇದ್ದು. ಎಲ್ಲವೂ ಭಿನ್ನ ‌ವಿಭಿನ್ನ  ಶೈಲಿ ಒಟ್ಟು ಚಲುವಿಗೆ ಇವೂ ಪೂರಕವಾಗಿದೆ. ಅಸಂಖ್ಯ ದೇವಾನು‌ ದೇವತೆಗಳ ಆಲಯ ಅದೂ ಅದರ ಮೂಲ ದೇವಸ್ಥಾನ ದ ಪ್ರತಿರೂಪವೇ ಆಗಿದೆ.  ಸುರೇಂದ್ರ ‌ಪುರಿ ಪ್ರವೇಶ ದ್ವಾರದಲ್ಲಿ ಕೃತಕ ಆನೆದಂತದ ಸುಂದರ ಸ್ವಾಗತ ಕಮಾನಿನ  ಕಲಾಪ್ರತಿಭೆಗೆ  ಯಾರಾದರೂ ‌ಮೂಕರಾಗಲೇಬೇಕು. ಪ್ರವೇಶ ದ್ವಾರದ ಒಳಹೊಕ್ಕರೆ ಮೊದಲಿಗೆ ಸಿಗುವುದು ಸುಬ್ರಹ್ಮಣ್ಯ ಸನ್ನಿಧಿ , ವಿವಿಧ ಗಾತ್ರದ ನಾಗಬನಗಳು ಸಹಜವಾಗಿಯೇ ಕಾಣುವ ಹುತ್ತಗಳು,‌ ದೇವಸ್ಥಾನದ ‌ಮೂಲ ಸ್ವರೂಪಕ್ಕೆ ಧಕ್ಕಯಾಗದಂತೆ ಅಧಿಕೃತ ಸಂರಕ್ಷಣಾ ‌ಕೈಪಿಡಿಗಳಲ್ಲಿ‌ ನಮೂದಿಸಿದ ನಿಯಮಾವಳಿ‌ ವಿಧಾನವನ್ನು ಅನುಸರಿಸಿ ಅದೇ ಶೈಲಿಯಲ್ಲಿ ಕಲ್ಲಿನ ಗೋಪುರಗಳ ಮಂದಿರದಲ್ಲಿ ವಿಷ್ಣುವಿನ ಅವತಾರದ ಕೆತ್ತನೆ ‌ಮರದ ಕೆತ್ತನೆಯ ಕಂಬಗಳು, ಅಷ್ಟಕೋನದ ಮಂಟಪ ‌ವಿರೂಪಾಕ್ಷ‌  ದೇವಾಲಯ , ಮಲ್ಲಿ ಕಾರ್ಜುನ ಹೀಗೆ ನೂರಾರು ಸುಪ್ರಸಿದ್ಧ ‌ದೇವಾಲಯದ ಕಲಾಸೌಂದರ್ಯವನ್ನು ಪ್ರವಾಸಿಗರ ಕಣ್ಮನ ಸೆಳೆಯುವ ರೀತಿಯಲ್ಲಿ ‌ನಿರ್ಮಿಸಲಾಗಿದೆ. ಇಲ್ಲಿನ ದೇವಾಲಯಗಳ‌ ಗೋಪುರದ ವಿನ್ಯಾಸ, ಪುರಾತನ ಸಂಪ್ರದಾಯಿಕ ರಚನೆಗಳನ್ನು ಪುನರ್ ರಚಿಸಿದ ಕಲಾವೈಭವವನ್ನು ‌ನೋಡಿ‌ ಮೆಲುಕುಹಾಕುತ್ತಿರ ಬಹುದಾದ ಬೆರಗಿನ ತಾಣ ಹೈದರಾಬಾದ್ ನ ಸುರೇಂದ್ರ ಪುರಿ.

         

  ‌     ಸೌಂದರ್ಯ  ಮತ್ತು ಶಾಂತಿಯ‌ ಮೇರು ದೇವತೆ ಕಾಂಚಿಯಕಾಮಾಕ್ಷಿ ಮೂರ್ತಿಯ ಜೀವಂತಿಕೆಯ  ಕಲಾ ಆಸ್ವಾದಕರ‌ ಮನಸೂರೆಗೊಳ್ಳದಿರದು.  ಕಲೆಯೆ ಮೈದೆಳೆದು ನಿಂತಿರುವಂತೆ ಭಾಸವಾಗುವ ಗಾಢ ಕೆಂಪು ವರ್ಣದ ಸ್ಯಾಂಡ್ ಸ್ಟೋನ್ ‌ಶಿಲೆ‌ ಹಾಗೂ ಶ್ವೇತ ಅಮೃತ ಶಿಲೆಯೇ  ಕುಸುರಿ ಸಂಪೂರ್ಣ ‌ಕಟ್ಟಡಕ್ಕೆ ಹೊಸ‌  ಮೆರಗು ನೀಡಿ ಶೋಭೆ ತಂದಿದೆ‌
  
          ಇಡಿ ಸುರೇಂದ್ರಪುರಿ‌ ಕುಶಲ‌ ಕಲಾವಿದರ‌ ಕಲಾ ನೈಪುಣ್ಯತೆಯಿಂದ ಚಿತ್ತಾಕರ್ಷಕವಾಗಿ ಮೂಡಿಬಂದಿದೆ.  ಉಬ್ಬು ಶಿಲ್ಪಗಳು ಪ್ರವಾಸಿಗರನ್ನು ಮೊದಲ‌ ನೋಟಕ್ಕೆ‌ಸೆಳೆದರೂ ದೇವರ ‌ಮೂರ್ತಿ ಎದುರಾಗುತ್ತಿದ್ದಂತೆ  ತಮಗರಿವಿಲ್ಲದೆ ಕೈಮುಗಿದು  ತಲೆ ಬಾಗುವವರೇ  ಹೆಚ್ಚು. ಪಂಚಹೆಡೆಯ ಆದಿಶೇಷ, ಶ್ರೀ ಕ್ಷೇತ್ರ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇವಾಲಯದ ಪ್ರತಿರೂಪ ತನ್ನ ಭಾರಿ ಗಾತ್ರದಿಂದ ಭಕ್ತಾದಿಗಳಲ್ಲಿ  ಭಕ್ತಿಯೊಂದಿಗೆ  ವಿನಮೃಭಾವವನ್ನು ಮೂಡಿಸುವ ಅಭಯ ಪ್ರದಾಯಕ  ಹನುಮಂತನ  ಎತ್ತರದ ಮೂರ್ತಿ ಇಲ್ಲಿನ ಇನ್ನೊಂದು ಆಕರ್ಷಕ.  ಪಂಚ ಮುಖಿ ಹನುಮನ‌ ವಿಗ್ರಹವೇದಿಕೆ ಸಹಿತ 60 ಅಡಿ ಎತ್ತರದಲ್ಲಿದೆ. ಇದಕ್ಕೆ ‌ಹಯಗ್ರೀವ ,‌ಸಿಂಹ, ವಾನರ, ವರಾಹ ಮತ್ತು ಗರುಡನ ಮುರ್ತಿಗಳಿವೆ.  ಮನುಷ್ಯರ ನಡುವಿನ  ಸಾಮರಸ್ಯದ ಜೀವನಕ್ಕಾಗಿ ಶಾಂತಿ ಬೋಧಿಸಿದ  ಬುದ್ದನ ಮೂರ್ತಿ ‌ಹಾಗೂ‌ ಬೃಹದಾಕಾರದ  ನಂದಿಯು  ಮೈನವಿರೇಳಿಸುತ್ತದೆ.

       ಚಕ್ರವ್ಯೂಹದ  ಕಥಾಭಾಗವನ್ನು ಒಂದು ಎಕ್ರೆ‌ಜಾಗದಲ್ಲಿ ನಿರ್ಮಿಸಿ  ಕೌರವರು ರೂಪಿಸಿದ‌ ಚಕ್ರವ್ಯೂಹದ ‌ಒಳಗೆ ಪ್ರವೇಶಿಸಿದ ಅಭಿಮನ್ಯು ‌ಚಕ್ರವ್ಯೂಹದಿಂದ ಹೊರ‌ಬರಲಾಗದೆ. ಬಲಿಯಾದ ಅಪರೂಪದ ‌ದೃಶ್ಯದ ಪರಿಪೂರ್ಣತೆ ಯಾರ‌ ಗಮನವನ್ನಾದರೂ  ಸೆಳೆಯುವಂತದ್ದು.  ಚಾಲುಕ್ಯರ ಕಲಾ ಶ್ರೀ ಮಂತಿಕೆಯನ್ನು ಧಾರ್ಮಿಕ ಸೌಹಾರ್ದವನ್ನು ಎತ್ತಿ‌ ತೋರಿಸುವ ಐಹೊಳೆ, ಪಟ್ಟದಕಲ್ಲು,  ಇನ್ನೂ ಅನೇಕ ಕಲ್ಲಿನ ಸ್ಮಾರಕಗಳನ್ನು ಇಲ್ಲಿ ಮೂಡಿಸಲಾಗಿದೆ.  ಸೀತೆ, ಮಂಥರೆ, ಕೈಕೇಯಿ, ಶೂರ್ಪನಖಿ, ಮಂಡೋದರಿ‌ ಕಥಾ ಮಾಲಿಕೆಯ ಪೂರ್ಣ ಗಾತ್ರದ ಪ್ರತಿಭೆಗಳನ್ನು  ನಿರ್ಮಿಸಿಲಾಗಿದೆ. ಕಲಾತ್ಮಕತೆಯನ್ನು ವ್ಯಾಪಕವಾಗಿ ಬಳಸಿ ರಾಮಾಯಣ, ಮಹಾಭಾರತ ಮತ್ತು ಭಾಗವತದಂತಹ ಪ್ರಮುಖ ಹಿಂದೂ ಮಹಾಕಾವ್ಯಗಳ ಕಥೆಗಳನ್ನು ಚಿತ್ರಸುವ ಶಿಲ್ಪಗಳು ಮತ್ತು ವರ್ಣಚಿತ್ರ ಗಳಿವೆ. ಒಂದು ‌ಲೇಖನದಲ್ಲಿ ಬರೆದು ಮುಗಿಸಲಾರದಷ್ಟು  ಹೇರಳ ಹಿಂದೂ ದೇವದೇವತೆಗಳನ್ನು ಇಲ್ಲಿ‌ ನಿರ್ಮಿಸಲಾಗಿದೆ. 

       ಬಾಹುಬಲಿಯ ಎತ್ತರದ ಮೂರ್ತಿ, ದೇವಾಲಯದ ಕಂಬ, ತೊಲೆ, ಜಂತಿಛಾವಣಿ ಹೀಗೆ ಎಲ್ಲೂ ಜಾಗ ಬಿಡದೆ ಬಿಡಿಸಿದ ಚಿತ್ತಾರಗಳು ಬೇಲೂರಿನ ಚನ್ನಕೇಶವ ದೇವಾಲಯವನ್ನು ವಿಸ್ತಾರವಾದ ಸ್ಥಳದಲ್ಲಿ‌ ನಿರ್ಮಿಸಲಾಗಿದೆ. ಹೊಯ್ಸಳರ ವಾಸ್ತುಶಿಲ್ಪ ಸಿರಿಯ ಕಣ್ಣೆದುರು‌ ಮೈದೆಳೆದು ನಿಂತಂತೆ‌ ಬೇಲೂರಿನ ವಿಶಿಷ್ಟ ಶಿಲ್ಪ ಕಲಾಕೃತಿಗಳಾದ ಶಿಲಾಬಾಲಿಕೆಯರನ್ನು ಕೆತ್ತಲಾಗಿದೆ. ಅರ್ಧ ಗೊಲಾಕಾರದ ಛಾವಣಿಯಲ್ಲಿ ಸಮುದ್ರ ಮಂಥನದ ದೃಶ್ಯವನ್ನು ಕಣ್ತುಂಬಿ ಕೊಳ್ಳುವುದೇ  ರಮ್ಯಾದ್ಬುತ. ಅಷ್ಟೇ ಅಲ್ಲದೆ ನರ್ತಿಸುವ ಗಣೇಶ. ತಮಿಳುನಾಡಿನ ಸಾಂಪ್ರದಾಯಿಕ ಕಲೆಯಾದ ಭರತ ನಾಟ್ಯದ 108 ಕರಣಗಳನ್ನು ಶಿಲೆಗಳಲ್ಲಿ ಕೆತ್ತಲಾಗಿದೆ‌.

   ದೇವಾದಿ ದೇವತೆಗಳ ಪುರಾಣ ಸನ್ನಿವೇಶಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. ಆದರೆ ಇಲ್ಲಿ‌ ನಿರ್ಮಾಣಗೊಂಡ‌ ಮೂರ್ತಿ ದೇವಸ್ಥಾನಗಳಿಗೆ ಯಾವುದೇ ಧಾರ್ಮಿಕ ವೈಶಿಷ್ಟ್ಯಗಳಿಲ್ಲ ಪೂಜೆ ಪುರಸ್ಕಾರ ಗಳು ನಡೆಯುವುದಿಲ್ಲ ಅರ್ಚಕರು ಅಥವಾ ಪುರೋಹಿತ ಶಾಹಿ ವ್ಯವಸ್ಥೆ ಇಲ್ಲದಿದ್ದದರೂ, ಬಂದ ಪ್ರವಾಸಿಗರು ಕಾಣಿಕೆ ಹುಂಡಿಯ, ಹುಡುಕಾಟದಲ್ಲಿರುವುದನ್ನು‌ ಕಂಡೆ. ಕೈ ಮುಗಿದು ತಮ್ಮ ಭಕ್ತಿಯ ಸೂಸುವಷ್ಟು‌ ನೈಜತೆಯನ್ನು ಈ  ದೇವಾಲಯಗಳು ಅಲ್ಲಿನ ಶಿಲಾಮೂರ್ತಿಗಳಲ್ಲಿ ಜೀವಂತಿಕೆ ತಳತಳಿಸುತ್ತಿದೆ.

     ‌ ಭಾರತದ ವಿವಿಧ ದೇವಾಲಯಗಳನ್ನು ಒಂದೆಡೆ ‌ನೋಡ ಸಿಕ್ಕರೆ ಎಂತಹ ಅರಸಿಕರಲ್ಲೂ ಕಲಾ ರಸಿಕತೆಯ ಅಲೆಗಳು ಏಳುತ್ತದೆ.  ಇಲ್ಲಿಗೆ‌ ಬೇಟಿ‌ನೀಡುವವರಿ ಗೊಂದು ಹೊಸ ಅನುಭವ, ಆಹ್ಲಾದಕರ ‌ಪರಿಸರ  ಹಾಗೂ ಆಕರ್ಷಕ ‌ಕೇಂದ್ರ‌ ಹೈದರಾಬಾದ್‌ ನಲ್ಲಿನ  ಸುರೇಂದ್ರಪುರಿ.  ಹೈದರಾಬಾದ್ ಗೆ  ಹೋದಲ್ಲಿ  ಸುರೇಂದ್ರಪುರಿಯನ್ನು  ತಪ್ಪದೆ  ವೀಕ್ಷಿಸಲು ಮರೆಯ‌ಬೇಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments