Thursday, December 1, 2022
HomeKannada Articleನೈಸರ್ಗಿಕ ಬಂದರು  ಮಲ್ಪೆ ಬೀಚ್ : Heggaddesamachar

ನೈಸರ್ಗಿಕ ಬಂದರು  ಮಲ್ಪೆ ಬೀಚ್ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

         ಕಡಲ ಭೋರ್ಗರೆತ, ಸಾಗರದ ಅಲೆಗಳ ನರ್ತನ, ಸಮುದ್ರ ತೀರದ ‌ಮರಳ ರಾಶಿ, ಹೊಂಬಣ್ಣದ ಸೂರ್ಯಾಸ್ತ, ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣಸಿಗುವ‌ ಜಲರಾಶಿಯಿಂದ ಸುತ್ತುವರಿದು ಮೈಮನ ಅರಳಿಸಿ ಮನಸ್ಸಿಗೆ ಮುದ ನೀಡುವ Udupi ಸಮೀಪದ  ಮಲ್ಪೆ ಬೀಚ್ ಜನಪ್ರಿಯ ಪ್ರೇಕ್ಷಣೀಯ ವಿಹಾರ ತಾಣ. ಪ್ರವಾಸಿಗರನ್ನು ತನ್ನತ್ತ  ಸೆಳೆಯುವ ಒಂದು ದಿನದ  ಪ್ರವಾಸಕ್ಕೆ  ಹೇಳಿ  ಮಾಡಿಸಿದ  ಸ್ಥಳ. ಮನ ಬಂದಂತೆ ‌ಸಮುದ್ರದ ನೀರಿನನೊರೆಯಲ್ಲಿ ನಲಿದಾಡಿ , ಮರಳಿನ ಮಡಿಲಲ್ಲಿ ಹೊರಳಾಡಿ, ಸೀ-ವಾಕ್ ನಲ್ಲಿ  ಸಮಯ  ಕಳೆಯ ಬಯಸುವವರು  ಬನ್ನಿ ಮಲ್ಪೆ  ಬೀಚಿಗೆ. ಮಲ್ಪೆ ಬೀಚಿಗೆ ಬಂದು ಕೇವಲ ನೀರಾಡಿ ಹೋದರೆ ಆ ಪ್ರವಾಸ ಅಪೂರ್ಣ. ಇಲ್ಲಿ ‌ನೋಡ‌ಬಹುದಾದ ಅನೇಕ ಸ್ಥಳಗಳಿವೆ ಸೀ-ವಾಕ್, ಸೈಂಟ್ ಮೇರಿಸ್ ದ್ವೀಪ, ತೇಲುವ ಸೇತುವೆ, ಪುಡ್ ಕೋಟ್, ಬೋಟ್ ಹೌಸ್ ಇನ್ನೂ ಅನೇಕ ಪ್ರೇಕ್ಷಣೀಯ ಸ್ಥಳಗಳ ನೋಡಿ ಆನಂದಿಸಬಹುದು. ಸಮುದ್ರದೊಳಗೆ ಮುಳುಗಿ ಹೋದನೊ ಎಂಬಂತೆ ಭಾಸವಾಗುವ ಭಾಸ್ಕರನ ಅಸ್ತಂಗತದ ಕ್ಷಣದ ಸುಂದರ ಸೂರ್ಯಾಸ್ತದ ಮುಸಂಜೆ ವೀಕ್ಷಿಸುವ ಸುವರ್ಣ ಅವಕಾಶವ ಮರೆಯದಿರಿ.
            
ಹಲವು ವೈಶಿಷ್ಟ್ಯಗಳನ್ನು ತನ್ನ ‌ಮಡಿಲಲ್ಲಿ‌ ಬಿಗಿದಪ್ಪಿದ ನೈಸರ್ಗಿಕ ಬಂದರು ಮಲ್ಪೆ ಬೀಚ್ ಗೆ ಉಡುಪಿಗೆ ಬರುವ ಪ್ರವಾಸಿಗರು ತಪ್ಪದೆ ಹೋಗುತ್ತಾರೆ. ಅದರಲ್ಲೂ ಫೆಬ್ರವರಿಯಲ್ಲಿ ಇಲ್ಲಿ ನಡೆಯುವ ವಾರ್ಷಿಕ ‌ಮಲ್ಪೆ ಬೀಚ್ ಉತ್ಸವ ದೋಣಿರೇಸ್ ಗಳು ಮತ್ತು ಗಾಳಿಪಟ ಉತ್ಸವಕ್ಕೆ  ಜನ  ದಟ್ಟಣೆ ಸೇರುತ್ತದೆ.ಇದು  ಕೇವಲ ಪ್ರವಾಸಿಗರ  ಮೋಜು ಮಸ್ತಿಯ  ಕೇಂದ್ರವಲ್ಲ ಕರ್ನಾಟಕ ಕರಾವಳಿಯ ಪ್ರಮುಖ ಮತ್ಸ್ಯಕೈಗಾರಿಕಾ ತಾಣ ಮಲ್ಪೆ ಗಮನ ಸೆಳೆವ ಸಮುದ್ರ ‌ತೀರಾ. ಇಲ್ಲಿ 100 ರೂಪಾಯಿಗೆ  ಕುದುರೆ ಸವಾರಿ, 100 ರುಪಾಯಿಗೆ  ಒಂಟೆ  ಸವಾರಿಯು ‌ಇದೆ. ಮರಳು ರಾಶಿಯಲ್ಲಿ ಕುದುರೆ ‌ಹೆಜ್ಜೆ ‌ಇರಿಸುವಾಗ  ಅದರ ಮೇಲೆ ಕುಳಿತು ಸವಾರಿ ಮಾಡುವ  ಹೊಸ  ಅನುಭವ   ನಮ್ಮದಾಗಿಸಿ ಕೊಳ್ಳ ಬಹುದು.

ಮಲ್ಪೆ ಸೀ-ವಾಕ್ 
       ಮಲ್ಪೆ ಸೀವಾಕ್ ನ ಎರಡು ಬದಿಯಲ್ಲಿ  ಜಲರಾಶಿ. ಸಮುದ್ರದ ಅಲೆಗಳ ಹೊಡೆತದ ತೀವ್ರತೆ ತಡೆದು ಮೀನುಗಾರಿಕೆ ದೋಣಿಗಳು ಸುಗಮವಾಗಿ ಸಾಗಲು ಬಂಡೆಕಲ್ಲಿನ  ತಡೆಗೋಡೆಯ ‌ಮೇಲೆ ಸೀವಾಕ್  ನಿರ್ಮಿಸಲಾಗಿದೆ. ಸೀ ವಾಕ್ ವೇ ಪಾಯಿಂಟ್ 450 ಮೀ.ಉದ್ದ, 8 ಅಡಿ ಅಗಲವಿದ್ದು, 32 ದೀಪಗಳನ್ನು ಅಳವಡಿಸಲಾಗಿದೆ. ಹಾದಿ ಉದ್ದಗಲಕ್ಕೂ ಬೆಸ್ತ ದಂಪತಿಗಳ ಸಿಮೆಂಟ್ ಮೂರ್ತಿಗಳಿವೆ.

ಉದ್ಯಾನವನ

       ಮಲ್ಪೆ ಸೀವಾಕ್  ಸಮೀಪ ಖಾಲಿ ಜಾಗದಲ್ಲಿ  2 ಕೋಟಿ ವೆಚ್ಚದಲ್ಲಿ  ನಿರ್ಮಿಸಿದ ಉದ್ಯಾನವನವಿದೆ.  ಇಲ್ಲಿ  ವಿವಿಧ ರೀತಿಯ ಕಲಾಕೃತಿಗಳು, ಬಯಲುರಂಗ‌ಮಂದಿರ  ವಿಶಾಲವಾದ  ಥಿಯೇಟರ್ ‌ಉದ್ಯಾನವನ ಮಧ್ಯೆ ‌ನಿರ್ಮಿಸಲಾದ  ಬೃಹತ್ ಜಟಾಯು ಶಿಲ್ಪ  ಪ್ರವಾಸಿಗರನ್ನು  ಹೆಚ್ಚು ಆಕರ್ಷಿಸುತ್ತದೆ. ಕಲ್ಲಿನ ಬೆಂಚಿನಲ್ಲಿ ಕುಳಿತು  ಸಮುದ್ರದ  ಅಲೆಗಳು  ನಲಿಯುವುದನ್ನು  ನೋಡ‌ಬಹುದು. ಕರಾವಳಿಯ  ಕಲೆ ಸಂಸ್ಕೃತಿಯನ್ನು  ಬಿಂಬಿಸುವ ಅನೇಕ ಮೂರ್ತಿಗಳು, ದೋಣಿದಡಕ್ಕೆ ಎಳೆಯುವ  ಬೆಸ್ತರು, ದೊಡ್ಡ ದೊಡ್ಡಆಮೆ, ಕಾಪು ಲೈಟ್ ಹೌಸ್ ಕಲಾಕೃತಿ ಹಾಗೂ ವಿವಿಧ ಜಾತಿಯ ಹೂ‌ಗಿಡಗಳು  ಬೆಳೆದು ನಿಂತಿದೆ. ಬೀಚ್ ನ  ಪ್ರವೇಶ ದ್ವಾರದಲ್ಲಿ  ದೇಶದ  ಪಿತಾಮಹ ಮಹಾತ್ಮ ಗಾಂಧಿಯವರ  ಕುಳಿತ  ಮೂರ್ತಿ ಯಿದೆ.  ಬೀಚ್ ನ  ಉದ್ದಕ್ಕೂ  ಸಣ್ಣ ಸಣ್ಣ ಹುಲ್ಲು ಮಾಡಿನ ಅಡಿಯಲ್ಲಿ ಕುಳಿತು ಕೊಳ್ಳಲು ಮರದ  ಬೆಂಚ್ ಗಳು ಇವೆ.

ಸುರಕ್ಷತೆ 

       ಜಿಲ್ಲಾಡಳಿತದ ಕಡೆಯಿಂದ ಹೆಚ್ಚಿನೆಲ್ಲ ಸುರಕ್ಷತಾ ವ್ಯವಸ್ಥೆ ಇಲ್ಲಿದೆ. ಮಳೆಗಾಲದಲ್ಲಿ ಬೀಚ್ ಗೆ ಹೋಗಿ  ನೀರಿಗೆ ಇಳಿಯುವಾಗ ಬಹಳ ಎಚ್ಚರಿಕೆ ಅಗತ್ಯ ಕಡಲಿನ  ಅಬ್ಬರ  ತೀವ್ರ ಗೊಂಡಿರುವುದು  ಗಮನಿಸಿ ಕೊಳ್ಳ ಬೇಕು. ಮಲ್ಪೆ ಬೀಚ್ ನಲ್ಲಿ  ಪ್ರವಾಸಿಗರಿಗೆ   ಎಚ್ಚರಿಕೆ  ನೀಡುವ ಫಲಕವನ್ನು  ಅಳವಡಿಸಲಾಗಿದೆ. ಕೆಂಪು ಬಾವುಟ ಹಾರಿಸಲಾಗಿದೆ  ಬೀಚ್ ಅಭಿವೃದ್ದಿ  ಸಮಿತಿಯಿಂದ ಸುಮಾರು ಉದ್ದಕ್ಕೂ ತಡೆಗೋಡೆ  ಸುರಕ್ಷತೆಗಾಗಿ ಹಾಕಲಾಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಯಾವುದೆ ಅಪಾಯವನ್ನು ಲೆಕ್ಕಿಸದೆ ಪ್ರವಾಸಿ ಮಿತ್ರರ ( ರಕ್ಷಣಾ ತಂಡ) ಕಣ್ಣ್ ತಪ್ಪಿಸಿ ಸಮುದ್ರಕ್ಕೆ ಇಳಿದು ಅಪಾಯವನ್ನು ತಂದುಕೊಳ್ಳುತ್ತಾರೆ. ಹೋಮ್ ಗಾರ್ಡಗಳು ಎಚ್ಚರಿಸಿದ್ದರು ಗಮನಹರಿಸದೆ ನೀರಿನಲ್ಲಿ ಆಟವಾಡುತ್ತಾರೆ. ಮಕ್ಕಳು ಸಮುದ್ರ  ನೀರಿನಲ್ಲಿ ಆಟವಾಡುವಾಗ  ದೊಡ್ಡವರು ಜೊತೆಗಿರ ‌ಬೇಕು. ಕಡಲ ಉದ್ದ ಅಗಲಕ್ಕು ಜೀವ ರಕ್ಷಕ ತಂಡದವರು ರಕ್ಷಣೆಗೆ ಇರುತ್ತಾರೆ ಆದರು  ನಮ್ಮ  ಜವಾಬ್ದಾರಿ  ನಮಗೆ ಇರಲಿ. ಇಲ್ಲಿನ  ಜೀವರಕ್ಷಕ  ದಳದವರಲ್ಲಿ ‌ಮಾತಿಗೆ ತೊಡಗಿದಾಗ ಅವರ  ಅನುಭವಗಳನ್ನು  ನುಡಿದಂತೆ  ಕೆಲವೊಮ್ಮೆ ‌ಮಲ್ಪೆ  ಬೀಚ್ ನಲ್ಲಿ  ನೀರಿಗೆ ‌ಇಳಿದವರಿಗೆ   ಜೆಲ್ಲಿಫಿಶ್ ಗಳ  ಸಾಧಾರಣ  ವಿಷ ಉಳ್ಳ  ಮೀನು ದಾಳಿ ಮಾಡಿ ಆರೋಗ್ಯ ಹದಗೆಟ್ಟಿದ್ದು  ಇದೆಯಂತೆ.

ಪುಡ್ ಕೋಟ್

     ಪ್ರವಾಸಿಗರಿಗೆ  ಹೊಟ್ಟೆ ಪೂಜೆಗು  ಹೇಳಿ ಮಾಡಿಸಿದ  ಸ್ಥಳವಿದು.  ಉತ್ತರಭಾರತದ ದಕ್ಷಿಣ ಭಾರತದ ಆಹಾರಗಳೊಂದಿಗೆ ಸ್ಥಳೀಯ ಆಹಾರಗಳು ಶುಚಿ ರುಚಿಯಾದ ಪುಡ್ ಕೋಟ್ ಗಳಲ್ಲಿ ಬಗೆ ಬಗೆಯ ತಿಂಡಿ ಸವಿದು ಜೂಸ್  ಕುಡಿಯಬಹುದು. ಹಾಗು  ಮೀನು ಪ್ರಿಯರಿಗಂತು ರಸ ದೌತಣ  ದಾರಿ ಉದ್ದಕ್ಕೂ ಅನೇಕ ಸ್ಟಾಲ್ ಗಳಿದ್ದು ಆಗತಾನೆ  ತಯಾರಿಸಿ ಕೊಡುವ ವಿವಿಧ ಜಾತಿಯ ತಾಜ ಮೀನು ಸವಿಯುವವರ ದಂಡೆ ಇದೆ. ತಾಜ ‌ಮೀನುಗಳಿಗೆ  ಮಸಾಲೆ ಹಾಕಿ ಡಿಸ್ ಪ್ಲೇ ಯಲ್ಲಿ  ಇಟ್ಟಿರುತ್ತಾರೆ. ತಮಗೆ ಬೇಕಾದ  ಮೀನನ್ನು ಆಯ್ಕೆ ‌ಮಾಡಿ ಹೇಳಿದರೆ ನಿಮಗೆ ‌ಬೇಕಾದ ಶೈಲಿಯಲ್ಲಿ  ತವಫ್ರೈ, ರವಾ  ಪ್ರೈ, ಮಸಾಲ ಪ್ರೈ ಮಾಡಿ ಬಿಸಿ  ಬಿಸಿ  ಮೀನು ಸರಬರಾಜು ಆಗುತ್ತದೆ. ಮಲ್ಪೆ ‌ಬೀಚ್ ನೋಡಲು  ಬರುವ ಪ್ರವಾಸಿಗರಲ್ಲಿ  ಮಾಂಸಾಹಾರಿಗಳು ಇಲ್ಲಿನ ‌ಮೀನಿನ  ರುಚಿಯ ನೋಡದೆ   ಹೋಗಲು ಸಾಧ್ಯವಿಲ್ಲ.

ಬೋಟ್ ಹೌಸ್

       73 ಅಡಿ ಉದ್ದ 15 ಅಡಿಅಗಲದ ಕಬ್ಬಿಣದ ದೋಣಿ ಸಂಪೂರ್ಣ ಮರದಿಂದ ಮನೆಯನ್ನು  ಕಲಾತ್ಮಕವಾಗಿ ರಚಿಸಲಾಗಿದೆ. ನೀರಿನಲ್ಲಿ ತೇಲುತ್ತಾ ಸಾಗುವ ಅಲಂಕಾರಗೊಂಡ ಮನೆಯೊಳಗಿಂದ ಸೂರ್ಯೋದಯ, ಸೂರ್ಯಾಸ್ತವನ್ನು  ಕಣ್ಣುಂಬಿಸಿಕೊಳ್ಳ ಬಹುದು. ವಿಶಾಲ ಜಲರಾಶಿ ನೀರ ಮೇಲೆ ತೇಲುವ ಒಂದುತರದಲ್ಲಿ  ಉಯ್ಯಾಲೆಯಲ್ಲಿ ತೂಗಿದ  ಅನುಭವವು ಆಗುತ್ತದೆ. ಕಿಟಿಕಿ ತೆರೆದು ಜೋರಾಗಿ ಬೀಸುವ  ಗಾಳಿ ‌ಹಾಗೂ ದೂರದಲ್ಲಿ ಕಾಣುವ ತೆಂಗಿನ ಮರಗಳ ಕಾಣ ‌ಬಹುದು. ಬೋಟ್ ಸಾಗುವಾಗ ಅಲ್ಲಲ್ಲಿ ನದಿಗಳ ಮಧ್ಯ ಕುದ್ರಗಳಿದ್ದು  ನೋಡಲು ಆಕರ್ಷಕವಾಗಿದೆ. ನೀರಿನಲ್ಲಿ  ತೇಲುತ್ತಾ  ಪ್ರಯಾಣಿಸುವ ಅವಕಾಶ ಒಂದುತರಹದ  ಮೋಜು. ಕಣ್ಣು ಹಾಯಿಸಿದಷ್ಟು  ಉದ್ದಕ್ಕೂ ಸೆಳೆಯುವ ನೀಲ ಜಲರಾಶಿ .
 
      ಜಲ ಪ್ರವಾಸೋದ್ಯಮ ಅಭಿವೃದ್ಧಿ ಪ್ರವಾಸಿಗರಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಪ್ಯಾರಡೈಸಲ್ ಗೂನಲ್,ತಿರುಮಲ ಕ್ರೂಸನ್, ಪಾಂಚಜನ್ಯ, ಪ್ರಣಮ್ ಬೋಟ್ ಹೌಸ್,   ಮಲ್ಪೆ ಸಮೀಪದ ಕೋಡಿ‌ಬೆಂಗ್ರೆ ‌ಪ್ರದೇಶದಲ್ಲಿ ಮಳೆಗಾಲದ 3 ತಿಂಗಳು ಹೊರತು ಪಡಿಸಿ ಉಳಿದೆಲ್ಲ  ತಿಂಗಳು ಲಭ್ಯ. ಸ್ವರ್ಣ ನದಿ, ಸೀತಾನದಿ, ಎಣ್ಣಿ ಹೊಳೆ ಒಂದಾಗಿ  ಅರಬ್ಬಿ  ಸಮುದ್ರ ಸೇರುವ  ತ್ರಿವೇಣಿ  ಸಂಗಮವಿದೆ.  ಬೋಟ್ ಹೌಸ್‌‌ ಮಲ್ಪೆ ಸಮೀಪ ಕೋಡಿ‌ಬೆಂಗ್ರೆ  ಸ್ವರ್ಣ ನದಿಯ  ಹನ್ನೀರಲ್ಲಿ  ತೇಲುತ್ತಾ ಸಂಚರಿಸುವ  ತಿರುಮಲ ಕ್ರೂಸ್ ಕರಾವಳಿ  ಕರ್ನಾಟಕದ  ಅತಿ ದೊಡ್ಡ ಬೋಟ್ ಹೌಸ್‌120 ಅಡಿ ಉದ್ದ ಹಾಗೂ 20 ಅಡಿ ಅಗಲದ ‌ಬೋಟ್  ಹೌಸ್  12 ತಿಂಗಳು ಸಂಚರಿಸಲು  ಅನುಮತಿ ಇದೆ. ಸುಸಜ್ಜಿತ 5 ರೂಮ್ಮನ್ನು ಹೊಂದಿರುವ  ತಿರುವಲ ಸುಮಾರು 7   ಕಿ.ಮಿ ವ್ಯಾಪ್ತಿಯಲ್ಲಿ ಬೆಂಗ್ರಿ,ಅಳಿವೆ, ತ್ರವೇಣ ಸಂಗಮ ಹಾಗೂ  ಸೂರ್ಯಸ್ತದ  ಸೌಂದರ್ಯವನ್ನು  ಸವಿಯುತ್ತಾ ಸಾಗ ಬಹುದು. ಮದುವೆ, ಹುಟ್ಟು ಹಬ್ಬ  ಪಾರ್ಟಿ, ಸಣ್ಣಪುಟ್ಟ ಸಭಾ ಕಾರ್ಯ ಕ್ರಮಕ್ಕೆ ಅವಕಾಶವಿದೆ.


        30 ರಿಂದ 40  ಜನರಿರುವ  ಸಾಮರ್ಥ್ಯ ವಿರುವ  ಅತ್ಯಾಧುನಿಕ  ಶೈಲಿಯ ಬೋಟ್ ನಲ್ಲಿ  ಹವಾನಿಯಂತ್ರಿತ ಬೆಡ್ ರೂಮ್,  ಬಾತ್ ರೂಮ್, ಅಡುಗೆ ಕೋಣೆ, ಆಕರ್ಷಕ ಲಿವಿಂಗ್  ರೂಮ್, ಪಾರ್ಟಿಹೋಲ್ ಹಾಗೂ ಬಾಲ್ಕನಿ ‌ಇದೆ. ಅಡುಗೆ  ತಯಾರಕರು  ದೋಣಿ ‌ನಿಯಂತ್ರಕ  ಮತ್ತು  ಪ್ರವಾಸಿಗರ  ಸುರಕ್ಷತೆಗೆ  ತರಬೇತಿ  ಗೈಡ್ ಗಳು ಇರುತ್ತಾರೆ. ಬೋಟ್ ಹೌಸ್  ನಲ್ಲಿ  ತುಸು  ದುಬಾರಿ  ಎನಿಸಿದರು ಊಟದ  ವ್ಯವಸ್ಥೆ ಉತ್ತಮ ವಾಗಿದೆ. ಉಡುಪಿ ಶೈಲಿಯ  ಕೋಳಿ ಸುಕ್ಕ, ಕೋಳಿರಸ ರೊಟ್ಟಿ, ಹಾಗೂ ಸ್ಥಳೀಯ ಆಹಾರಗಳು  ಸಿಗುತ್ತದೆ. 


ಹೋಗುವ  ಮಾರ್ಗ=  ಉಡುಪಿ ಹೃದಯ ಬಾಗದಿಂದ  15  ಕಿಮೀ ದೂರದಲ್ಲಿರುವ ಈ ಬೋಟ್ ಹೌಸ್ ಇದ್ದಲ್ಲಿಗೆ  ಹೋಗುವುದಾದರೆ. ಉಡುಪಿ ಬಸ್ಸು ನಿಲ್ದಾಣ ದಿಂದ  ಕಲ್ಯಾಣ ಪುರ  ಕೆಮ್ಮಣ್ಣು ಹೂಡೆ ‌ಮಾರ್ಗವಾಗಿ  ಪಡುತೋನ್ಸೆಯನ್ನು  ತಲುಪ  ಬೇಕು.  ಅಥವಾ ಉಡುಪಿ ಯಿಂದ  ಮಲ್ಪೆ ವಢ ಭಾಂಡೇಶ್ವರ  ತೊಟ್ಟಂ ಹೂಡೆ ಮಾರ್ಗವಾಗಿಯು ‌ಬರಬಹುದು.  ಕುಂದಾಪುರ  ಕಡೆಯಿಂದ  ಬರುವವರು  ಹಂಗಾರ  ಕಟ್ಟೆ ಹೊಳೆದಾಟಿ  ಪಡುತೋಸ್ಸೆಗೆ  ಬರಬೇಕು.ಹೊಳೆದಾಟಲು ಇಲ್ಲಿ  ದೋಣಿ ವ್ಯವಸ್ಥೆ  ಇದೆ‌

      ಸೈಂಟ್ ಮೇರಿಸ್  ದ್ವೀಪ
      
    ಈ ದ್ವೀಪ ಬೇಟಿಕೊಡ ಬೇಕಾದರೆ  ಉಡುಪಿ ಜಿಲ್ಲೆಯಲ್ಲಿರುವ ಮಲ್ಪೆ ಬೀಚ್ ನಿಂದ  ಸುಮಾರು ಅರ್ಧ ಗಂಟೆ ಹಡಗಿನಲ್ಲಿ  ಪಯಣಿಸಿದರೆ  ಸುತ್ತಾ  ಮುತ್ತಾ ನೀಲಿ ಬಣ್ಣದ  ಸಾಗರದ‌ ನೀರು  ನೈಸರ್ಗಿಕ ಕಪ್ಪು ಬಂಡೆಗಪ್ಪಳಿಸುವುದನ್ನು  ನೋಡುವುದು  ಬಹು  ಸೋಗಸು  ಅನೇಕ ಜಾತಿಯ  ಮೀನುಗಳು  ಕಾಣಸಿಗುತ್ತದೆ.  ಜೀವಂತ ಶಂಖಹುಳುಗಳು  ಏಡಿ, ದೂರ ದೂರದ ಒರೆಗೆ  ಕಾಣಸಿಗುವ  ತೆಂಗಿನ ಮರಗಳು  ಹೇರಳವಾಗಿ ಇರುವುದರಿಂದ coconut Island ಎಂದು  ಈ ದ್ವೀಪವನ್ನು  ಕರೆಯುತ್ತಾರೆ. 

    ಸೈಂಟ್ ಮೇರೀಸ್ ಐಲ್ಯಾಂಡ್ ಗೆ  ವಾಸ್ಕೋ ಡ ಗಾಮ ಯುರೋಪಿನಿಂದ ಭಾರತದ  ಕಡೆಗೆ ಸಾಗರ  ಮಾರ್ಗ ದಲ್ಲಿ  ಪ್ರಯಾಣಿಸುವಾಗ ಇಲ್ಲಿ  ಬಂದಿದ್ದ ಎಂದು ಹೇಳಲಾಗುತ್ತದೆ. ಮಲ್ಪೆ ಯಿಂದ ಸೈಂಟ್ ‌ಮೆರಿಸ್ ಐಲ್ಯಾಂಡ್ ಗೆ  ದೋಣಿ ‌ಮತ್ತು  ಸಣ್ಣ ಬೋಟ್ ನಲ್ಲಿ  ಹೋಗ ಬಹುದು.ಸಾಧಾರಣ 30 ನಿಮಿಷಗಳ ದೋಣಿ ಪಯಣ ಆನಂದ ದಾಯಕ. ವಿಶಿಷ್ಟ ದ್ವೀಪಗಳಲ್ಲಿ ಸಂತ  ಮೇರಿ ದ್ವೀಪದಲ್ಲಿ  ಕಡಿದಾದ  ಕಲ್ಲುಗಳು, ಸ್ತಂಭಾಕಾರದ  ಅಗ್ನಿ ಶಿಲೆ ಬಂಡೆಗಳು ಭೂವೈಜ್ಞಾನಿಕ ವಿಸ್ಮಯಗಳ ಪಟ್ಟಿಯಲ್ಲಿ  ಸೇರಿದೆ.

       ಯೇಸುಕ್ರಿಸ್ತ ಶಿಲುಬೆಯನ್ನು ನೆಟ್ಟು  ತಾಯಿ ಮೇರಿಗಾಗಿ  ಅರ್ಪಿಸಿದ ಸ್ಥಳವಿದು  ಎನ್ನುತ್ತಾರೆ ಹಾಗಾಗಿ  ಇಲ್ಲಿನ  ಸೈಂಟ್ ಮೇರಿ ದ್ವೀಪಕ್ಕೆ  ಈ‌ ಹೆಸರು ಬಂತು ಎಂದು  ನಂಬಿದವರು ಹಬ್ಬಗಳ  ಆಚರಣೆಯನ್ನು  ಈ ದ್ವೀಪಕ್ಕೆ  ಬಂದು  ಆಚರಿಸುವ ಕ್ರೀಚ್ಚನ್  ಸಮೂಹ ವಿದೆ.  ಆದರೆ ಯಾವುದೆ  ಅಧಿಕೃತ  ಹೇಳಿಕೆ  ನೀಡಲು  ಮನಸ್ಸು ಮಾಡದೆ  ಭಕ್ತಿ ಯಿಂದ ,ಪ್ರೀತಿಯಿಂದ, ಪೂಜಾ ಭಾವದಿಂದ ‌ನಾವು  ಇಲ್ಲಿ ‌ಮೇರಿ ಹಬ್ಬವನ್ನು ಆಚರಿಸಲು ಬರುತ್ತವೆ ಎನ್ನುತ್ತಾರೆ.

ತೆಲುವ ಸೇತುವೆ

      ನೀರಿನ ‌ಮೇಲೆ ‌ನಡೆದಾಡಲು   ರಾಜ್ಯದಲ್ಲಿ   ಪ್ರಪ್ರಥಮ ವಾಗಿ   ತೇಲುವ  ಸೇತುವೆಯನ್ನು  ಮಲ್ಪೆ ಬೀಚ್ ನಲ್ಲಿ   ‌ನಿರ್ಮಿಸಲಾಗಿದೆ.100 ಮೀಟರ್ ಉದ್ದದ 3.5 ಮೀಟರ್ ಅಗಲವಿರುವ ಈ  ಸೇತುವೆಯಲ್ಲಿ ಒಮ್ಮೆ ಗೆ  100 ಜನರಿಗೆ  ಪ್ರವೇಶವಿದ್ದು  15  ನಿಮಿಷಗಳ ಕಾಲ ಸೇತುವೆ ಯಲ್ಲಿ ‌ಸುತ್ತಾಡ ‌ಬಹುದು. ಸಮುದ್ರದ ‌ಮೇಲೆ ‌ತೆಲಾಡಿದ  ಅನುಭವ ನೀಡುವ  ಈ ಸೇತುವೆ 80 ಲಕ್ಷ ವೆಚ್ಚದಲ್ಲಿ  ಕಟ್ಟಲಾಗಿದ್ದು ಬೆಳಿಗ್ಗೆ 9 ರಿಂದ 6 ಗಂಟೆ ವರೆಗೆ 100 ರೂಪಾಯಿ ಟಿಕೆಟ್ ಖರೀದಿ ಸಿದ ಪ್ರವಾಸಿಗರಿಗೆ   ಅವಕಾಶವಿತ್ತು.  ಆದರೆ ರಾಜ್ಯದ ಮೊದಲ  ತೇಲುವ  ಸೇತುವೆ  ಉದ್ಘಾಟನೆಯಾದ  3  ದಿನಕ್ಕೆ  ಕಿತ್ತು ಹೋಗಿ ಸಮುದ್ರ ಪಾಲಾಗಿದೆ.
    ನಾನು  ಉಡುಪಿ ಜಿಲ್ಲೆಯವಳಾಗಿದ್ದರು  ಈ ವರೆಗೆ  ಮಲ್ಪೆ ಬೀಚ್ ಗೆ  ಹೋಗಿರಲಿಲ್ಲ.  ಕೆಲ‌ದಿನಗಳ ‌ಹಿಂದೆ   ಉಡುಪಿಯಲ್ಲಿ ‌ಮಲ್ಪೆ  ಬೀಚ್ ಗೆ   ಹೋಗಲು ತಂಗಿ ‌ಹಾಗೂ  ಅವಳ ‌ಮಗಳೊಂದಿಗೆ   ಬಸ್  ಹತ್ತಿದಾಗ   ಬಸ್ಸಿನಲ್ಲಿದ್ದವರೆಲ್ಲಾ  ಬೀಚ್ ಗೆ  ಹೋಗುವುದರ  ಅರಿವಾಯಿತು  ಹೀಗೆ ‌ಪ್ರತಿ  15  ನಿಮಿಷಗಳ ಅಂತರದಲ್ಲಿ  ಇಲ್ಲಿನ ಬಸ್ ಮಲ್ಪೆ ಬೀಚ್ ಗೆ ‌ತುಂಬಿಕೊಂಡೆ  ಹೋಗುತ್ತದೆ.  ಹಾಗಾದರೆ  ಊಹಿಸಿ  ದಿನ ಒಂದರಲ್ಲಿ  ಅದೆಷ್ಟು  ಸಂಖ್ಯೆಯಲ್ಲಿ ಇಲ್ಲಿ ಜನಸಾಗರವೆ  ಸೇರುತ್ತದೆ ಎಂದು.
  
    ಒಮ್ಮೆ ಬಂದು ಕಡಲ ಕಿನಾರದಲ್ಲಿ  ಕುಳಿತು ಭೋರ್ಗರೆಯುವ ಸಾಗರ, ದಡದಲ್ಲಿ ಬಂದಪ್ಪಳಿಸುವ ಅಲೆಗಳೊಂದಿಗೆ ತೇಲಿ ಬರುವ ಉಪ್ಪು ನೀರಿನ ‌ನೋರೆ,ವಿಶಾಲ ಜಲರಾಶಿ, ನೀಲಾಆಗಸ ದೂರದಲ್ಲಿ ಹಾರಾಡುವ  ರಣಹದ್ದುಗಳು,ಕಡಲ‌ಬದಿಯಲ್ಲಿ‌‌ ದೂರಕ್ಕು ‌ಕಾಣುವ ‌ತೆಂಗಿನ ಮರಗಳ ‌ಸಾಲು  ಸಾಲುಗಳನ್ನು  ನೋಡಿದಿರೆಂದರೆ ಎಂತವರನ್ನು  ಇನ್ನೊಮ್ಮೆ ಮಗದೊಮ್ಮೆ ಇಲ್ಲಿಗೆ ಬರುವಂತೆ ‌ಪ್ರೇರೆಪಿಸುತ್ತದೆ ಇಲ್ಲಿನ ವಾತಾವರಣ.

  ಬೀಚ್ ನ ಅದಿ ಬದಿಯಲ್ಲಿ ಸಕಲ ಸೌಕರ್ಯದ ಪ್ಯಾರಡೈಸ್ ಬೀಚ್ ರೆಸಾರ್ಟ್, ಐಪಾರಾಮಿ ಸೌಕರ್ಯವಿರುವ ಹೋಟೆಲ್ ಗಳು ಇದ್ದು  ದೂರದಿಂದ ‌ಬಂದವರಿಗೆ ಇಲ್ಲಿ ಹಾಗೂ ಉಡುಪಿಯಲ್ಲಿ  ವಸತಿ ಸೌಕರ್ಯ ಚೆನ್ನಾಗಿದೆ.

ಮಂಗಳೂರಿಂದ  60  ಕಿಮೀ ಉಡುಪಿ ಯಿಂದ 6 ಕಿಮೀ  ದೂರದಲ್ಲಿರುವ ಮಲ್ಪೆ ಬೀಚ್ ಗೆ ಉಡುಪಿಯಿಂದ  ಬಸ್ಸು ಆಟೋ  ವ್ಯವಸ್ಥೆ ಚೆನ್ನಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments