Thursday, December 1, 2022
HomeKannada Articleಮಹಾಕೂಟ : Heggaddesamachar

ಮಹಾಕೂಟ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

          ನಾವು  ಬಾದಾಮಿ, ಪಟ್ಟದಕಲ್ಲು ,ಐಹೊಳೆಯನ್ನು  ನೋಡಿ ಮುಗಿಸುವಾಗಲೇ  ಕತ್ತಲು  ಕವಿದಿತ್ತು.  ಬಾದಾಮಿಯಲ್ಲಿ  ತಂಗಿದ್ದು ಮರುದಿನ  ಬೆಳ್ಳ ಬೆಳಿಗ್ಗೆ ‌ನಮ್ಮ  ಪಯಣ ಬಾದಾಮಿಯ ಹತ್ತಿರವಿರುವ ಎರಡು ‌ಬೆಟ್ಟಗಳ ಇಳಿಜಾರಿನ  ತಪ್ಪಲಿನಲ್ಲಿನ  ಪುಟ್ಟ  ಹಳ್ಳಿ ಮಹಾಕೂಟದೆಡೆಗೆ  ಹೋಗುವುದೆಂದು  ಗೈಡ್ ‌ ಗೆ ಸಮಯ  ನಿರ್ಧರಿಸಿ  ಬಾದಾಮಿಯಿಂದ  ಗಾಡಿಯಲ್ಲಿ ಹೊರಟೆವು ದಾರಿ ಉದ್ದಕ್ಕೂ  ಹಸಿರಿನಿಂದ ಕಂಗೊಳಿಸುವ ದೊಡ್ಡ ದೊಡ್ಡ  ಮರಗಳ  ಸಾಲು  ತಂಗಾಳಿ ಬೀಸಿ  ಪ್ರವಾಸಿಗರನ್ನು  ಸ್ವಾಗತಿಸುತ್ತಿತ್ತು. ಒಟ್ಟಿನಲ್ಲಿ  ಈ ಊರು  ಹಸಿರು ನಂದನವನ ಅಂದರು ತಪ್ಪಾಗಲಾರದು.

       ಹಸಿರಾದ ವಾತಾವರಣದ  ಗುಡ್ಡಬೆಟ್ಟಗಳ  ಆಸುಪಾಸಿನಲ್ಲಿ ಶೈವರು  ಮತ್ತು ಶಾಕ್ತ ಸಂಪ್ರದಾಯದ ಪುರಾತನ ದಕ್ಷಿಣ ಕಾಶಿ ಬಿರುದಿನ  ಮಹಾಕೂಟ ತಲೆ ಎತ್ತಿ ನಿಂತಿದೆ.ಬಾದಾಮಿಯ ಸುತ್ತಾ ಮುತ್ತ  ಇರುವ ದೇವಾಲಯಗಳಲ್ಲಿ  ಮಹಾಕೂಟದಲ್ಲಿರುವ  ಶಿವ ದೇವಾಲಯವು  ತನ್ನ ಕಲಾತ್ಮಕತೆ  ಹಾಗೂ ವಾಸ್ತು ಶಿಲ್ಪದ ದೃಷ್ಟಿಯಿಂದ ವಿಶಿಷ್ಟವಾಗಿದೆ. ಪಟ್ಟದ ಕಲ್ಲು ಹಾಗೂ ಬಾದಾಮಿಯಿಂದ ಸಮಾನ ದೂರದಲ್ಲಿರುವ ಶಿವಲಿಂಗಗಳ ಸಮೂಹ ಹಾಗೂ ಆಲಯಗಳ ಸಮುಚ್ಚಯವಾಗಿರುವುದರಿಂದ ಇದಕ್ಕೆ ಮಹಾಕೂಟ ಎಂಬ  ಹೆಸರು  ಬಂದಿದೆ.  ಚಾಲುಕ್ಯ ಮನೆತನದ ಮಂಗಳೇಶರು  ತನ್ನ ವಿಜಯದ ನೆನಪಿಗಾಗಿ  ಇದನ್ನು ಸ್ಥಾಪಿಸಿದರು ಎನ್ನುತ್ತಾರೆ. ಕೋಟಿ ಲಿಂಗಗಳಲ್ಲಿ ಒಂದೇ ಒಂದು‌ ಲಿಂಗ ಕಡಿಮೆಯಾದ ಕಾರಣ ಈ‌ ಕ್ಷೇತ್ರ ಕಾಶಿಯಾಗುವ ಅವಕಾಶ ಕಳೆದುಕೊಂಡಿತು ಎಂದು‌‌ಹೇಳುತ್ತಾರೆ. ಹಲವಾರು ಲಿಂಗಗಳ ಕೂಟವಾದ ಕಾರಣ  ಮಹಾಕೂಟ ಎಂದು ‌ಹೆಸರು ಬಂತು.


         
           ಪುಷ್ಕರಣಿ =  ಇಲ್ಲಿ ಎಂತಹ ಬರಗಾಲದಲ್ಲು ಬತ್ತದ ಶಿವ ಹಾಗೂ ವಿಷ್ಣು ಎಂಬ ಎರಡು ಪ್ರತ್ಯೇಕ ಸೊಬಗನ್ನು ‌ನೀಡುವ ಪುಷ್ಕರಣಿಗಳಿವೆ. ಈ ಪುಷ್ಕರಣಿಗೆ  ಭೂಮಿಯ ಗರ್ಭ ದಿಂದ  ನೀರಿನ  ಬುಗ್ಗೆಗಳಿವೆ  ಎಂಬ  ನಂಬಿಕೆ ಇದೆ. ಪರ್ವತಗಳ ಮಡಿಲಿನಿಂದ ಹರಿದು ಬರುವ  ನೀರಿನಿಂದ ಪುಷ್ಕರಣಿ ಸದಾ ತುಂಬಿರುತ್ತದೆ. ವಿಷ್ಣುತೀರ್ಥ ದಲ್ಲಿ  ಸ್ನಾನ ಮಾಡಿದ ನಂತರ ಶಿವ  ಪುಷ್ಕರಣಿಯಲ್ಲಿ  ಸ್ನಾನ ಮಾಡಿದರೆ ‌ಪಾಪ  ಪರಿಹಾರವಾಗುತ್ತದೆ ಎಂಬ  ನಂಬಿಕೆ ಇದೆ.   ಶಿವ ಪುಷ್ಕರಣಿಯ ಮಧ್ಯದಲ್ಲಿ  ಚತುರ್ಮುಖ ಲಿಂಗ ಮತ್ತು ಅನೇಕ ದೇವರ ಮೂರ್ತಿಗಳಿವೆ. ಈಜು ಬಲ್ಲವರು  ಧೈರ್ಯ ವಾಗಿ  ಪುಷ್ಕರಣಿಯಲ್ಲಿ ‌ಇಳಿದು  ಸ್ನಾನ ‌ಮಾಡಿ ನೀರಿನಲ್ಲಿ ‌ಮುಳುಗಿದ್ದ  ಲಿಂಗ  ದರ್ಶನ ‌ಮಾಡುತ್ತಾರೆ.  ಶಿವ  ಪುಷ್ಕರಣಿಯಲ್ಲಿ  ಅಪರೂಪದ ಲಿಂಗವಿದ್ದು  ಇದನ್ನು  ನೋಡಲು  ಭಕ್ತರು  ದೂರದಿಂದ ಬರುತ್ತಾರೆ‌ . ಇಲ್ಲಿ ಶಿವ ಪಾರ್ವತಿ ಸ್ನಾನ ಮಾಡಿದ ಬಗ್ಗೆಯೊಂದು ಕಥೆ  ಇದೆ.

      ದಕ್ಷಿಣ ಭಾರತದ ಹಲವು ದೇವಾಲಯಗಳನ್ನು  ಹೋಲುವ ವಿಶೇಷ ವಾಸ್ತುಶಿಲ್ಪಕಲೆ ಇಲ್ಲಿದೆ. ದೇವಾಲಯದ ಹೊರ‌ಗೋಡೆಯ ಮೇಲೆ  ಚಾಳುಕ್ಯರ ಕಾಲದ  ಶಿಲ್ಪವನ್ನು ‌ಹೋಲುವ  ಅರ್ಧ ನಾರೀಶ್ವರ, ಪೃಥ್ವಿಯನ್ನು ರಕ್ಚಿಸುವ ವರಾಹ‌ ಹಾಗೂ ಅನೇಕ ಕಲಾಕೃತಿಗಳಿವೆ. ಅರ್ಧ ‌ಮಂಟಪ, ಮುಖ ಮಂಟಪ, ಗರ್ಭ ಗೃಹ, ವಿಮಾನ ಮತ್ತು ಕಳಶಗಳು  ದ್ರಾವಿಡ ಶೈಲಿ ಯಲ್ಲಿದೆ. ಪ್ರದಕ್ಷಿಣಾ ಪಥದಲ್ಲಿ  ಸೂಕ್ಷ್ಮ ಕೆತ್ತನೆಯ ಕೆಲಸ‌ಗಳು, ಮೈಥುನ  ಶಿಲ್ಪಗಳು  ಕಲಾ‌ ವೈಭವವನ್ನು  ಸಾರುತ್ತದೆ.  ಮಹಾಕೂಟೇಶ್ವರ  ದೇವಾಲಯ ಬಿಳಿ ಬಣ್ಣದಲ್ಲಿ  ಇದ್ದು  ದ್ರಾವಿಡ ಶೈಲಿಯಲ್ಲಿದೆ. ಅದರ ಎದುರಿನಲ್ಲಿರುವ‌ ಸಂಗಮೇಶ್ವರ ದೇವಾಲಯ ‌ನಾಗರ ಶೈಲಿಯಲ್ಲಿದೆ.  ದೇವಸ್ಥಾನದ  ಸುತ್ತಾ ಅಗಸ್ತ್ಯೆ ಶ್ವರ ,ವೀರ ಭದ್ರೇಶ್ವರ  ಮೊದಲಾದ  ಹಲವಾರು  ಸಣ್ಣ ದೇವಸ್ಥಾನವಿದೆ.  ಮಹಾಕೂಟ ಮತ್ತು ಮಲ್ಲಿಕಾರ್ಜುನ ದೇವಾಲಯಗಳು ಮುಖ್ಯ ವಾಗಿರುವವು. ಪ್ರವೇಶ ದ್ವಾರದ  ಇಕ್ಕೆಲಗಳಲ್ಲಿ ಶೈವ ಮಾದರಿಯ ದ್ವಾರ ಪಾಲಕರ ವಿಗ್ರಹಗಳ  ಕೆತ್ತನೆ ಭೈರವ ಮತ್ತು ಚಾಮುಂಡರನ್ನು ಹೋಲುತ್ತವೆ.ದೊಡ್ಡ ಗಂಟಾಹಾರ ತೊಟ್ಟಿರುವನಂದಿಯ ವಿಗ್ರಹ ಅತ್ಯಂತ ಆಕರ್ಷಕ ವಾಗಿದ್ದು. ಇಲ್ಲಿನ ಹೊಯಿಗೆ  ಕಲ್ಲಿನ ಕಂಬದಲ್ಲಿ ಮಹಾಕೂಟೇಶ್ವರ ದೇವರ ಸಂಪತ್ತು ‌ಮತ್ತು ವೈಭವವನ್ನು ಸಾರುವ ಶಾಸನವಿದೆ. ಚಾಣಕ್ಯ ದೊರೆ ವಿಜಯಾದಿ ತ್ಯನ ಪತ್ನಿ ವೀಣಾ ಪೊತಿ ಎಂಬಾಕೆ ದೇವಾಲಯಕ್ಕೆ ‌ಕೊಟ್ಟ ‌ಬಂಗಾರದ ಆಭರಣ, ಬೆಳ್ಳಿಯ ಕೊಡ‌ ಮತ್ತು ಭೂಮಿಯನ್ನು ದಾನ‌ಮಾಡಿದ ‌ಉಲ್ಲೇಖವಿದೆ.


      ಐತಿಹ್ಯ =  ಒಂದು ಪೌರಾಣಿಕ ಕಥೆಯ  ಪ್ರಕಾರ ಅಗಸ್ತ್ಯ ‌ಮಹಾ ಮುನಿಗಳು ಒಂದು ಕೋಟಿ ಲಿಂಗವನ್ನು ‌ಪ್ರತಿಷ್ಠಾಪನೆ ಮಾಡ ಬೇಕೆಂದು ತಮ್ಮ ಮನದಲ್ಲಿ‌ ನಿಶ್ಚಯಿಸಿ  ತಾವು ‌ಹೋದಲ್ಲೆಲ್ಲಾ  ಶಿವಲಿಂಗ ವನ್ನು  ಪ್ರತಿಸ್ಥಾಪಿಸಿದರು. ಮಹಾಕೂಟಕ್ಕೆ  ಬಂದ ಋಷಿ ಶಿವನನ್ನು ‌ಕುರಿತು ಘೋರ ‌ತಪಸ್ಸನ್ನು ಮಾಡಿ ಶಿವ ಭೂಮಿಯಿಂದ ಉದ್ಬವವಾಗಿ ನನಗೆ ದರ್ಶನ ನೀಡ ಬೇಕೆಂದು ಪ್ರಾರ್ಥಿಸಿದರ ಫಲವಾಗಿ ಶಿವ ಪ್ರತ್ಯಕ್ಷವಾದ ಸ್ಥಳ ‌ಮಹಾಕೂಟದಲ್ಲಿ. ಇಂದಿಗೂ ‌ಇಲ್ಲಿ  ಮಹಾಕೂಟೇಶ್ವರ ಶಿವದೇವ ಎಂಬ  ದೇವಾಲಯವಿದೆ.

ಬೆಂಗಳೂರಿನಿಂದ ಸುಮಾರು 500 ಕಿಮೀ  ಹಾಗೂ ಬಾದಾಮಿ ಯಿಂದ  5 ಕಿಮೀ ದೂರದಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments